ದಾಖಲೆ ಮಟ್ಟಕ್ಕೆ ಏರಿದ ಅಡಿಕೆ ಬೆಲೆ: ಕ್ವಿಂಟಲ್‌ಗೆ ₹99,999ರ ಗಡಿ ದಾಟಿದ ಸರಕು ಅಡಿಕೆ! - Kannada global

Breaking

Add

ಶುಕ್ರವಾರ, ಅಕ್ಟೋಬರ್ 17, 2025

ದಾಖಲೆ ಮಟ್ಟಕ್ಕೆ ಏರಿದ ಅಡಿಕೆ ಬೆಲೆ: ಕ್ವಿಂಟಲ್‌ಗೆ ₹99,999ರ ಗಡಿ ದಾಟಿದ ಸರಕು ಅಡಿಕೆ!

ದಾಖಲೆ ಮಟ್ಟಕ್ಕೆ ಏರಿದ ಅಡಿಕೆ ಬೆಲೆ: ಕ್ವಿಂಟಲ್‌ಗೆ ₹99,999ರ ಗಡಿ ದಾಟಿದ ಸರಕು ಅಡಿಕೆ!

ಶಿವಮೊಗ್ಗ:ಈ ವರ್ಷ ಅಡಿಕೆ ಬೆಲೆಯು ದಾಖಲೆ ಮಟ್ಟಕ್ಕೆ ಏರಿಕೆಯಾಗಿದ್ದು, ರೈತರಲ್ಲಿ ಸಂತಸ ಮನೆ ಮಾಡಿದೆ. ಸ್ಥಳೀಯ ಎಪಿಎಂಸಿ ಮಾರುಕಟ್ಟೆಯಲ್ಲಿ ಗುರುವಾರ ಸರಕು (ಹಸ) ಅಡಿಕೆ ಬೆಲೆಯು ಕ್ವಿಂಟಲ್‌ಗೆ ₹99,999ರ ಗಡಿ ತಲುಪಿ ಹೊಸ ದಾಖಲೆ ಸೃಷ್ಟಿಸಿದೆ. ಇದಕ್ಕೂ ಮೊದಲು ಮೇ 13ರಂದು ಸರಕು ಅಡಿಕೆಯು ಕ್ವಿಂಟಲ್‌ಗೆ ₹98,896ಕ್ಕೆ ಮಾರಾಟವಾಗಿ ದಾಖಲೆ ನಿರ್ಮಿಸಿತ್ತು.

ಇತರೆ ಅಡಿಕೆಗಳಾದ ಬೆಟ್ಟೆ ಅಡಿಕೆಯು ಕ್ವಿಂಟಲ್‌ಗೆ ₹77,770 ಹಾಗೂ ರಾಶಿ ಅಡಿಕೆಯು ಕ್ವಿಂಟಲ್‌ಗೆ ₹66,899ಕ್ಕೆ ಮಾರಾಟವಾಗಿವೆ.ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಹೆಚ್ಚಳದ ಪರಿಣಾಮವಾಗಿ, ವ್ಯಾಪಾರಿಗಳು (ಕೇಣಿದಾರರು) ನೇರವಾಗಿ ಬೆಳೆಗಾರರ ಮನೆ ಬಾಗಿಲಿಗೆ ಬಂದು ಹಸಿ ಅಡಿಕೆ ಖರೀದಿಯಲ್ಲಿ ತೊಡಗಿದ್ದಾರೆ. ಹಸಿ ಅಡಿಕೆ ಬೆಲೆಯು ವಿವಿಧ ಮಾರುಕಟ್ಟೆಗಳಲ್ಲಿ ಗಮನಾರ್ಹ ಹೆಚ್ಚಳ ಕಂಡಿದೆ. ಭದ್ರಾವತಿ ತಾಲ್ಲೂಕಿನ ಹೊಳೆಹೊನ್ನೂರಿನಲ್ಲಿ ಕ್ವಿಂಟಲ್‌ಗೆ ₹7,500, ಚಿತ್ರದುರ್ಗ ಜಿಲ್ಲೆಯ ಭೀಮಸಮುದ್ರ ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ ₹8,500 ಹಾಗೂ ದಾವಣಗೆರೆಯಲ್ಲಿ ಕ್ವಿಂಟಲ್‌ಗೆ ₹8,300ಕ್ಕೆ ಮಾರಾಟವಾಗಿದೆ.

ಅಡಿಕೆ ಬೆಲೆ ಗಗನಕ್ಕೇರಲು ಬೇಡಿಕೆ ಹೆಚ್ಚಳ ಮತ್ತು ಇಳುವರಿ ಕುಂಠಿತ ಮುಖ್ಯ ಕಾರಣ ಎಂದು ವಿಶ್ಲೇಷಿಸಲಾಗಿದೆ.

ಶಿವಮೊಗ್ಗದ ಮಲೆನಾಡು ಅಡಿಕೆ ಮಾರಾಟ ಸಹಕಾರ ಸಂಘದ (ಮ್ಯಾಮ್ಕೋಸ್‌) ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ್ ಬರುವಾ ಅವರ ಪ್ರಕಾರ, "ದೀಪಾವಳಿ ಹಬ್ಬದ ಸಂದರ್ಭದಲ್ಲಿ ಗುಟ್ಕಾ ಮತ್ತು ಪಾನ್ ಮಸಾಲ ಕಂಪನಿಗಳು ತಮ್ಮ ಉತ್ಪಾದನೆಯನ್ನು ಹೆಚ್ಚಿಸುತ್ತವೆ. ಇದರಿಂದ ಮಾರುಕಟ್ಟೆಯಲ್ಲಿ ಅಡಿಕೆಗೆ ಬೇಡಿಕೆ ಹೆಚ್ಚಾಗಿದೆ. ಆದರೆ, ಈ ಬಾರಿ ಬೆಳೆಗಾರರ ಬಳಿ ಹಳೆಯ ಅಡಿಕೆ ದಾಸ್ತಾನು ಇಲ್ಲ."

ಇದಲ್ಲದೆ, ವಿಪರೀತ ಮಳೆಯಿಂದಾಗಿ ಬಯಲು ಸೀಮೆಯಲ್ಲಿ ಶೇ 30ರಷ್ಟು ಹಾಗೂ ಮಲೆನಾಡಿನಲ್ಲಿ ಶೇ 50ರಷ್ಟು ಅಡಿಕೆ ಇಳುವರಿ ಕಡಿಮೆಯಾಗಿದೆ. ಮಾರುಕಟ್ಟೆಯಲ್ಲಿ ಬೇಡಿಕೆಗೆ ತಕ್ಕಷ್ಟು ಅಡಿಕೆ ಸಿಗದ ಕಾರಣ ಸಹಜವಾಗಿ ಬೆಲೆ ಹೆಚ್ಚಳವಾಗಿದೆ ಎಂದು ಅವರು ತಿಳಿಸಿದ್ದಾರೆ.

ನಮ್ಮ WhatsApp ಗ್ರೂಪ್ ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Advertisement

ಜಾಹೀರಾತು ಹಾಗೂ ಸುದ್ದಿ ನೀಡಲು ಸಂಪರ್ಕಿಸಿ

📞 9110857339 ಗೆ ಕರೆ ಮಾಡಿ 💬 WhatsApp ಗ್ರೂಪ್ ಸೇರಿ 🎥 YouTube ಚಂದಾದಾರರಾಗಿ

ಕನ್ನಡ ಗ್ಲೋಬಲ್ ನ್ಯೂಸ್