ಕೆಲವು ಅವಕಾಶಗಳು ನಮ್ಮ ಮುಂದೆ ಬಂದಾಗ ಅವುಗಳ ಬೆಲೆ ತಕ್ಷಣ ಅರ್ಥವಾಗುವುದಿಲ್ಲ. ಮೊದಲು ಬೇಡವೆನಿಸಿದ ಅದೇ ಅವಕಾಶ, ನಂತರ ನಮ್ಮ ನೆನಪುಗಳಲ್ಲೇ ಅತ್ಯಂತ ಸುಂದರವಾದ ಅಧ್ಯಾಯವಾಗಿ ಉಳಿಯಬಹುದು.
ಅಂಥದ್ದೇ ಒಂದು ಅವಕಾಶ ನನ್ನ ಪಾಲಿಗೆ ನೀನಾಸಂ ಶಿಬಿರವಾಗಿತ್ತು. ಎಂದಿನಂತೆ ತರಗತಿಯಲ್ಲಿ ಇದ್ದಾಗ ಪ್ರಾಂಶುಪಾಲರಾದ ಡಾ. ಅವಿನಾಶ್ ಸರ್ ನನಗೆ ಕರೆ ಮಾಡಿದರು. ನೀನಾಸಂನಲ್ಲಿ ನಡೆಯಲಿರುವ ಶಿಬಿರದ ಬಗ್ಗೆ ಅವರು ತಿಳಿಸಿದಾಗ, ಮೊದಲಿಗೆ ಹೋಗಲು ನನಗೆ ಅಷ್ಟೊಂದು ಮನಸ್ಸಿರಲಿಲ್ಲ. ಆದರೆ ಶಿಬಿರದ ಕುರಿತು ಸರ್ ನೀಡಿದ ಮಾಹಿತಿಯನ್ನು ಕೇಳುತ್ತಾ ಹೋದಂತೆ, ನನ್ನಲ್ಲೂ ನಿಧಾನವಾಗಿ ಆಸಕ್ತಿ ಮೂಡತೊಡಗಿತು.
ಗೊಂದಲ ಮತ್ತು ನೀನಾಸಂ ಪಯಣದ ಆರಂಭ
ಆದರೆ ಈ ಅವಕಾಶದ ಜೊತೆಗೆ ಒಂದು ಸಣ್ಣ ಗೊಂದಲವೂ ಎದುರಾಗಿತ್ತು. ಅದೇ ದಿನಗಳಲ್ಲಿ ನನ್ನ ಆಂತರಿಕ ಪರೀಕ್ಷೆಗಳೂ ನಿಗದಿಯಾಗಿದ್ದವು. ಶಿಬಿರಕ್ಕೆ ಹೋಗುವುದೋ, ಪರೀಕ್ಷೆಗಳಿಗೆ ಆದ್ಯತೆ ನೀಡುವುದೋ ಎಂಬ ಯೋಚನೆ ಮನಸ್ಸಿನಲ್ಲಿ ಕಾಡುತ್ತಿತ್ತು. ಕೊನೆಗೆ ಎರಡನ್ನೂ ಹೊಂದಿಸಿಕೊಂಡು ಹೋಗಲು ನಿರ್ಧರಿಸಿದೆ. ಸೆಪ್ಟೆಂಬರ್ 30ರಂದು ಮಧ್ಯಾಹ್ನ 2 ಗಂಟೆಯವರೆಗೆ ಆಂತರಿಕ ಪರೀಕ್ಷೆ ಬರೆದು, ಪರೀಕ್ಷೆ ಮುಗಿದ ನಂತರ 4 ಗಂಟೆಗೆ ಸಾಗರ ಬಸ್ ಹತ್ತಿದೆ. ಪರೀಕ್ಷೆಯ ಒತ್ತಡದಿಂದ ಶಿಬಿರದ ಕುತೂಹಲದ ಕಡೆಗೆ... ಅಲ್ಲಿಂದ ನನ್ನ ನೀನಾಸಂ ಪಯಣ ಆರಂಭವಾಯಿತು.
ಅಲ್ಲಿಗೆ ತಲುಪಿದ ನಂತರ, ಮೊದಲು ಕುವೆಂಪು ವಿಶ್ವವಿದ್ಯಾಲಯದ ವತಿಯಿಂದ ಬಂದಿದ್ದ ಇತರ ವಿದ್ಯಾರ್ಥಿಗಳ ಪರಿಚಯವಾಯಿತು. ಪರಿಚಯವಿಲ್ಲದ ಮುಖಗಳ ನಡುವೆ ಆರಂಭವಾದ ಆ ದಿನಗಳು, ನಿಧಾನವಾಗಿ ಪರಿಚಯ ಮತ್ತು ಆತ್ಮೀಯತೆಯ ಕಡೆಗೆ ಸಾಗತೊಡಗಿದವು. ವಿಶೇಷವೆಂದರೆ, ಮೊದಲ ದಿನವೇ ನಾವೆಲ್ಲರೂ ತುಂಬಾ ಆತ್ಮೀಯರಾಗಿಬಿಟ್ಟೆವು. ಪರಿಚಯಕ್ಕೆ ಹೆಚ್ಚು ಸಮಯವೇ ಬೇಕಾಗಲಿಲ್ಲ... ಮೊದಲ ದಿನದ ಮಾತುಕತೆಗಳೇ ನಮ್ಮ ನಡುವಿನ ಅಂತರವನ್ನು ಕಡಿಮೆ ಮಾಡಿ, ಶಿಬಿರದ ಮುಂದಿನ ದಿನಗಳನ್ನು ಇನ್ನಷ್ಟು ಆಪ್ತವಾಗಿಸಿದವು.
ನಾಟಕಗಳ ಚರ್ಚೆ ಮತ್ತು ಸಾಂಸ್ಕೃತಿಕ ಅನುಭವ
ಪ್ರತಿದಿನ ಬೆಳಗ್ಗೆ ಹಿಂದಿನ ರಾತ್ರಿ ನಡೆದ ನಾಟಕದ ಕುರಿತು ಚರ್ಚೆ ನಡೆಯುತ್ತಿತ್ತು. ನಾಟಕದಲ್ಲಿ ಕಂಡ ವಿಚಾರಗಳು, ಪಾತ್ರಗಳು ಮತ್ತು ಅದರ ಆಶಯಗಳ ಬಗ್ಗೆ ಎಲ್ಲರೂ ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದರು. ಒಬ್ಬೊಬ್ಬರ ದೃಷ್ಟಿಕೋನ ವಿಭಿನ್ನವಾಗಿದ್ದರೂ, ಆ ಚರ್ಚೆಗಳ ಮೂಲಕ ನಾಟಕವನ್ನು ಮತ್ತಷ್ಟು ಆಳವಾಗಿ ಅರ್ಥಮಾಡಿಕೊಳ್ಳುವ ಅವಕಾಶ ಸಿಗುತ್ತಿತ್ತು.
‘ಸೀತಾ ಬನಾಬಸ್’ ನಾಟಕದ ಅನುಭವ:
ನಾಟಕಗಳ ಪೈಕಿ ನನಗೆ ವಿಶೇಷವಾಗಿ ಇಷ್ಟವಾದದ್ದು ‘ಸೀತಾ ಬನಾಬಸ್’. ಮುಂಬೈನಿಂದ ಬಂದ ತಂಡವೊಂದು ಹಿಂದಿಯಲ್ಲಿ ಈ ನಾಟಕವನ್ನು ಪ್ರದರ್ಶಿಸಿತು. ಹಿಂದಿ ನನಗೆ ಸ್ವಲ್ಪ ಅರ್ಥವಾಗುವುದರಿಂದ, ಪ್ರತಿಯೊಂದು ಮಾತೂ ಸಂಪೂರ್ಣವಾಗಿ ಅರ್ಥವಾಗದಿದ್ದರೂ ಕಥೆಯ ಹಿನ್ನೆಲೆ ಮೊದಲೇ ತಿಳಿದಿದ್ದರಿಂದ ನಾಟಕವನ್ನು ಅನುಸರಿಸಲು ಸಾಧ್ಯವಾಯಿತು. ಅವರ ಅಭಿನಯದ ತೀವ್ರತೆ ಮತ್ತು ಭಾವನಾತ್ಮಕತೆ ಭಾಷೆಯ ಮಿತಿಯನ್ನೇ ಮರೆಸುವಂತಿತ್ತು. ಸಂಭಾಷಣೆಗಿಂತ ಅವರ ಅಭಿನಯವೇ ಹೆಚ್ಚು ಮಾತನಾಡಿದಂತೆ ಅನಿಸಿತು. ನಿಧಾನವಾಗಿ ನಾನೂ ಆ ಕಥೆಯೊಳಗೆ ಸಂಪೂರ್ಣವಾಗಿ ಇಳಿದುಹೋಗಿದ್ದೆ.
ಅದರಲ್ಲೂ ಲವ–ಕುಶರ ಪಾತ್ರಧಾರಿಗಳ ಅಭಿನಯ ನನ್ನ ಗಮನ ಸೆಳೆಯಿತು. ಪುಟಾಣಿ ಮಕ್ಕಳು ತಮ್ಮ ಪಾತ್ರಗಳಲ್ಲಿ ತೋರಿದ ಸಹಜತೆ ಮತ್ತು ಆತ್ಮವಿಶ್ವಾಸ ಮನಸ್ಸಿನಲ್ಲಿ ಉಳಿಯಿತು. ಅಶ್ವಮೇಧ ಯಾಗದ ಕುದುರೆಯ ಪಾತ್ರವನ್ನೂ ಅತ್ಯಂತ ನೈಜವಾಗಿ ಮೂಡಿಸಿದ್ದರು. ವೇದಿಕೆಯ ಮೇಲಿನ ಅವರ ಅಭಿನಯವನ್ನು ನೋಡುತ್ತಿದ್ದಾಗ, ಅದು ಕೇವಲ ನಾಟಕವಲ್ಲ; ನಮ್ಮ ಕಣ್ಣೆದುರೇ ಒಂದು ಕಥೆ ಜೀವಂತವಾಗುತ್ತಿರುವ ಅನುಭವವಾಗಿತ್ತು.
ವಿಚಾರ ಗೋಷ್ಠಿಗಳು ಮತ್ತು ವಿಶೇಷ ಕಾರ್ಯಕ್ರಮಗಳು
ಶಿಬಿರದಲ್ಲಿ ನಡೆದ ಸೆಷನ್ಗಳ ಕುರಿತು ಹೇಳುವುದಾದರೆ, ಕೆಲವು ಸೆಷನ್ಗಳು ಇಂಗ್ಲಿಷ್ನಲ್ಲಿ ನಡೆದರೆ, ಇನ್ನೂ ಕೆಲವು ಹಿಂದಿಯಲ್ಲಿ ನಡೆಯುತ್ತಿದ್ದವು. ಅಲ್ಲಮ ಪ್ರಭುವಿನ ವಚನ, ಕುಮಾರಸಂಭವ–ಗಿರಿಜಾ ಕಲ್ಯಾಣ, ಅನುವಾದವನ್ನು ಅರ್ಥೈಸಿಕೊಳ್ಳುವಿಕೆ, ಸಮಕಾಲೀನ ಕನ್ನಡ ಸಾಹಿತ್ಯ, ‘ನನ್ನ ನೆಚ್ಚಿನ ಪುಸ್ತಕ’ ಸೇರಿದಂತೆ ಇನ್ನೂ ಹಲವು ವಿಭಿನ್ನ ವಿಚಾರಗಳ ಕುರಿತು ಮಾತುಕತೆಗಳು ನಡೆದವು. ಪ್ರತಿಯೊಂದು ಸೆಷನ್ ಸಹ ತನ್ನದೇ ಆದ ಹೊಸ ಅನುಭವವನ್ನು ನೀಡುತ್ತಿತ್ತು. ಕೆಲವು ವಿಚಾರಗಳು ಸಂಪೂರ್ಣವಾಗಿ ಅರ್ಥವಾಗದಿದ್ದರೂ, ಅರ್ಥವಾದಷ್ಟನ್ನು ಗ್ರಹಿಸಿಕೊಳ್ಳುತ್ತಾ ಕೇಳುತ್ತಿದ್ದೆ. ಹೀಗೆ ಒಂದೊಂದು ಮಾತುಕತೆಯೂ ನನ್ನ ಯೋಚನೆಯ ವ್ಯಾಪ್ತಿಯನ್ನು ಸ್ವಲ್ಪ ಸ್ವಲ್ಪವಾಗಿ ವಿಸ್ತರಿಸುತ್ತಾ ಹೋಯಿತು.
ಮಧ್ಯಾಹ್ನದ ಊಟದ ನಂತರ 2.30ರಿಂದ 4ರವರೆಗೆ ವಿವಿಧ ವಿಶೇಷ ಕಾರ್ಯಕ್ರಮಗಳು ನಡೆಯುತ್ತಿದ್ದವು. ತಾಳ–ಮದ್ದಳೆ, ಕೇರಳದ ಚೆಂಡೆ ವಾದ್ಯ, ಶೂರ್ಪಣಖಿಯ ಏಕಪಾತ್ರಾಭಿನಯ ಹೀಗೆ ಹಲವು ಬಗೆಯ ಕಲಾ ಪ್ರದರ್ಶನಗಳು ನಡೆಯುತ್ತಿದ್ದವು. ಒಂದಕ್ಕಿಂತ ಒಂದು ವಿಭಿನ್ನವಾಗಿದ್ದ ಈ ಕಾರ್ಯಕ್ರಮಗಳು ಮಧ್ಯಾಹ್ನದ ಸಮಯವನ್ನೂ ಚೈತನ್ಯದಿಂದ ತುಂಬಿಸುತ್ತಿದ್ದವು. ಊಟದ ನಂತರ ಬರುವ ನಿದ್ದೆಗೂ ಇಲ್ಲಿ ಜಾಗವಿರಲಿಲ್ಲ ಎನ್ನಬಹುದು!
ಸ್ನೇಹ ಮತ್ತು ಹೊಸ ಲೋಕದ ಅನಾವರಣ
ಮೊದಲು ಹೇಳಿದ ಹಾಗೆ, ಕುವೆಂಪು ವಿಶ್ವವಿದ್ಯಾಲಯದಿಂದ ಬಂದಿದ್ದವರೆಲ್ಲಾ ತುಂಬಾ ಆತ್ಮೀಯರಾಗಿಬಿಟ್ಟಿದ್ದೆವು. ಊಟ ಮುಗಿದ ತಕ್ಷಣ ಎಲ್ಲರೂ ತಮ್ಮ ತಮ್ಮ ಕೊಠಡಿಗಳಿಗೆ ತೆರಳುತ್ತಿದ್ದರೆ, ನಾವು ಮಾತ್ರ ಒಟ್ಟಾಗಿ ನಡೆದುಕೊಂಡು ಹೋಗುತ್ತಾ ವಿವಿಧ ವಿಷಯಗಳ ಕುರಿತು ಚರ್ಚಿಸುತ್ತಾ, ಮಾತುಕತೆ ನಡೆಸುತ್ತಾ ಸಮಯ ಕಳೆಯುತ್ತಿದ್ದೆವು. ಅವರ ಮಾತುಗಳಲ್ಲಿ ಕಲೆ, ಸಾಹಿತ್ಯ ಮತ್ತು ರಂಗಭೂಮಿಯ ವಿಚಾರಗಳು ಸಹಜವಾಗಿ ಬರುತ್ತಿದ್ದವು.
ಅವರಲ್ಲಿ ಎಲ್ಲರೂ ಕಲೆ ಮತ್ತು ಸಾಹಿತ್ಯದ ಹಿನ್ನೆಲೆಯಿಂದ ಬಂದವರು, ನಾನು ಮಾತ್ರ ಕಾಮರ್ಸ್ ಓದುತ್ತಿದ್ದವಳು. ಹಾಗಾಗಿ ಅವರೊಂದಿಗೆ ನಡೆಯುತ್ತಾ ಮಾತನಾಡುತ್ತಿದ್ದ ಪ್ರತಿಯೊಂದು ಕ್ಷಣವೂ ನನಗೆ ಹೊಸದೊಂದು ಲೋಕವನ್ನು ಪರಿಚಯಿಸುತ್ತಿತ್ತು. ಸಾಮಾನ್ಯವಾಗಿ ನಾನು ತುಂಬಾ ಕಡಿಮೆ ಮಾತನಾಡುವವಳು; ಹೊಸಬರೊಂದಿಗೆ ಹೇಗೆ ಮಾತನಾಡಬೇಕು, ಹೇಗೆ ಬೆರೆಯಬೇಕು ಎಂಬುದೇ ನನಗೆ ಸ್ವಲ್ಪ ಕಷ್ಟ. ಆದರೆ ಇಲ್ಲಿ ಮೊದಲ ದಿನದಿಂದಲೇ ಎಲ್ಲರೊಂದಿಗೆ ಇಷ್ಟು ಸುಲಭವಾಗಿ ಬೆರೆತು ಮಾತನಾಡಿದ್ದು ನನಗೇ ಒಂದು ಹೊಸ ಅನುಭವವಾಗಿತ್ತು. ಸಣ್ಣ ಸಣ್ಣ ಮಾತುಕತೆಗಳು ಮತ್ತು ಒಟ್ಟಾಗಿ ನಡೆದ ನಡಿಗೆಗಳು ಶಿಬಿರದ ಅತ್ಯಂತ ಆಪ್ತ ನೆನಪುಗಳಾಗಿ ಉಳಿದಿವೆ.
ನೀನಾಸಂನಲ್ಲಿ ಕಳೆದ ಆ ದಿನಗಳು ಮುಗಿದರೂ, ಅಲ್ಲಿ ತೆರೆದಿಟ್ಟ ಆ ಹೊಸ ಲೋಕದ ಬಾಗಿಲು ಮಾತ್ರ ನನ್ನೊಳಗೆ ಎಂದಿಗೂ ಮುಚ್ಚುವುದಿಲ್ಲ. ಈ ಮರೆಯಲಾಗದ ಪಯಣ ನನ್ನದಾಗಲು ಕಾರಣರಾದ:
ಪ್ರೊ. ಶರತ್ ಅನಂತಮೂರ್ತಿ (ಕುಲಪತಿಗಳು, ಕುವೆಂಪು ವಿಶ್ವವಿದ್ಯಾಲಯ)
ಡಾ. ಅವಿನಾಶ್ ಟಿ. (ಪ್ರಾಂಶುಪಾಲರು, ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು, ಶಿವಮೊಗ್ಗ)
ಈ ಶಿಬಿರಕ್ಕೆ ತೆರಳಲು ಪ್ರೋತ್ಸಾಹಿಸಿ, ಪ್ರತಿಯೊಂದು ಹಂತದಲ್ಲೂ ಸಹಕರಿಸಿದ ಎಲ್ಲಾ ಶಿಕ್ಷಕರು
ಪ್ರತಿಯೊಂದು ಹೆಜ್ಜೆಯಲ್ಲೂ ಬೆಂಬಲವಾಗಿ ನಿಂತ ನನ್ನ ತಂದೆ-ತಾಯಿ
ಅವರ ಪ್ರೋತ್ಸಾಹ ಮತ್ತು ಬೆಂಬಲದಿಂದ ದೊರೆತ ಈ ಅವಕಾಶ ನನಗೆ ಕಲೆ ಮತ್ತು ಸಾಹಿತ್ಯದ ಹೊಸ ಲೋಕವೊಂದನ್ನು ಪರಿಚಯಿಸುವುದರ ಜೊತೆಗೆ,
ನನ್ನನ್ನೇ ನಾನು ಹೊಸದಾಗಿ ಕಂಡುಕೊಳ್ಳುವ ಅವಕಾಶವನ್ನೂ ನೀಡಿತು. ನೀನಾಸಂನ ಆ ದಿನಗಳು ಮುಗಿದರೂ, ಅಲ್ಲಿ ಕಲಿತದ್ದು, ಕಂಡದ್ದು, ಕೇಳಿದ್ದು ಮತ್ತು ಜೊತೆಯಾದವರು... ಎಲ್ಲವೂ ನನ್ನ ನೆನಪಿನಲ್ಲಿ ಸದಾ ಜೀವಂತವಾಗಿರಲಿವೆ.
ವನಿತಾ ಗೌಡ
ದ್ವಿತೀಯ ಬಿ.ಕಾಂ
ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು, ಶಿವಮೊಗ್ಗ.
ಸಂಪಾದಕೀಯ ನುಡಿ (Editorial Note)
ರಂಗಭೂಮಿ ಮತ್ತು ಸಾಹಿತ್ಯದ ಜಗತ್ತು ಪ್ರತಿಯೊಬ್ಬ ವ್ಯಕ್ತಿಯ ಚಿಂತನೆ ಹಾಗೂ ಆಲೋಚನಾ ವ್ಯಾಪ್ತಿಯನ್ನು ವಿಸ್ತರಿಸುವ ಅದ್ಭುತ ಶಕ್ತಿಯನ್ನು ಹೊಂದಿದೆ.
ವಿದ್ಯಾರ್ಥಿ ಜೀವನದಲ್ಲಿ ಸಿಗುವ ಒಂದೊಂದು ಅಪರೂಪದ ಅವಕಾಶಗಳು ನಮ್ಮ ವ್ಯಕ್ತಿತ್ವವನ್ನು ಹೇಗೆ ರೂಪಿಸಬಲ್ಲವು ಎಂಬುದಕ್ಕೆ ಈ ಲೇಖನ ಅತ್ಯುತ್ತಮ ಉದಾಹರಣೆ. ನಿಯಮಿತ ತರಗತಿ ಹಾಗೂ ಪರೀಕ್ಷೆಗಳ ಒತ್ತಡದ ನಡುವೆಯೂ ರಂಗ ಶಿಬಿರದಲ್ಲಿ ಪಾಲ್ಗೊಂಡು, ಕಲೆ ಮತ್ತು ಸಾಹಿತ್ಯದ ಅನಾವರಣವನ್ನು ತಮ್ಮದೇ ದೃಷ್ಟಿಕೋನದಲ್ಲಿ ಕಟ್ಟಿಿಕೊಟ್ಟಿದ್ದಾರೆ ವಿದ್ಯಾರ್ಥಿನಿ ವನಿತಾ ಗೌಡ.
ಕೇವಲ ಪಠ್ಯ ಪುಸ್ತಕಗಳಿಗಷ್ಟೇ ಸೀಮಿತವಾಗದೆ, ಹೊಸ ಕಲಿಕೆಯತ್ತ ಹೆಜ್ಜೆ ಇಟ್ಟು, 'ನೀನಾಸಂ' ನೀಡಿದ ಸಂಸ್ಕೃತಿ ಮತ್ತು ಕಲಾತ್ಮಕ ಅನುಭವಗಳನ್ನು ಅತ್ಯಂತ ಸರಳ ಹಾಗೂ ಭಾವನಾತ್ಮಕ ಶೈಲಿಯಲ್ಲಿ ಲೇಖಕಿ ಇಲ್ಲಿ ಅಕ್ಷರರೂಪಕ್ಕಿಳಿಸಿದ್ದಾರೆ. ಕಲಾ ಕ್ಷೇತ್ರದಿಂದ ದೂರವಿದ್ದರೂ, ಕಲೆಯ ಸೌಂದರ್ಯವನ್ನು ಆಸ್ವಾದಿಸಿ ತಮ್ಮನ್ನು ತಾವು ಕಂಡುಕೊಂಡ ಆತ್ಮಕಥನ ಮಾದರಿಯ ಈ ಸುಂದರ ಲೇಖನ ಪ್ರತಿಯೊಬ್ಬ ವಿದ್ಯಾರ್ಥಿಗೂ ಪ್ರೇರಣಾದಾಯಿ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ