ಕೌಟುಂಬಿಕ ದೌರ್ಜನ್ಯದಿಂದ ರೋಸಿಹೋಗಿದ್ದ ಗೃಹಿಣಿ ಆತ್ಮಹತ್ಯೆ: ಮೃತದೇಹ ಬಿಟ್ಟು ಪರಾರಿಯಾದ ಪತಿಯ ಮನೆಯವರು - Kannada global

Breaking

Saturday, November 1, 2025

ಕೌಟುಂಬಿಕ ದೌರ್ಜನ್ಯದಿಂದ ರೋಸಿಹೋಗಿದ್ದ ಗೃಹಿಣಿ ಆತ್ಮಹತ್ಯೆ: ಮೃತದೇಹ ಬಿಟ್ಟು ಪರಾರಿಯಾದ ಪತಿಯ ಮನೆಯವರು


ಕೌಟುಂಬಿಕ ದೌರ್ಜನ್ಯದಿಂದ ರೋಸಿಹೋಗಿದ್ದ ಗೃಹಿಣಿ ಆತ್ಮಹತ್ಯೆ: ಮೃತದೇಹ ಬಿಟ್ಟು ಪರಾರಿಯಾದ ಪತಿಯ ಮನೆಯವರು

ಶಿವಮೊಗ್ಗ: ಕೌಟುಂಬಿಕ ದೌರ್ಜನ್ಯ ಮತ್ತು ಕಿರುಕುಳಕ್ಕೆ ಬೇಸತ್ತು ಗೃಹಿಣಿಯೊಬ್ಬರು ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾದ ಮನ ಕಲಕುವ ಘಟನೆ ಶಿವಮೊಗ್ಗ ಜಿಲ್ಲೆಯ ಮಾವಿನಕೆರೆ ಎಂಬಲ್ಲಿ ಸಂಭವಿಸಿದೆ. ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಮೃತಪಟ್ಟಿದ್ದು, ಘಟನೆ ತಿಳಿದ ಕೂಡಲೇ ಪತಿಯ ಮನೆಯವರು ಮೃತದೇಹವನ್ನು ಆಸ್ಪತ್ರೆಯಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.

ಮೃತ ಗೃಹಿಣಿಯನ್ನು ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಸಮೀಪದ ಶಂಕರಳ್ಳಿಯ ನಿವಾಸಿ ಈಶ್ವರಪ್ಪ ಅವರ ಪುತ್ರಿ, 30 ವರ್ಷದ ಪೂಜಾ ಎಂದು ಗುರುತಿಸಲಾಗಿದೆ. ಮೂರು ವರ್ಷಗಳ ಹಿಂದೆ ಪೂಜಾ ಅವರು ಮಾವಿನಕೆರೆ ಶೆಟ್ಟಿಕೊಪ್ಪದ ಶರತ್ ಎಂಬವರೊಂದಿಗೆ ವಿವಾಹವಾಗಿದ್ದರು ಮತ್ತು ದಂಪತಿಗೆ ಮೂರು ವರ್ಷದ ಗಂಡು ಮಗು ಕೂಡ ಇದೆ.

ಮೂಲಗಳ ಪ್ರಕಾರ, ಮದುವೆಯಾದಾಗಿನಿಂದಲೂ ಪೂಜಾ ಅವರು ಪತಿ ಶರತ್, ಅತ್ತೆ, ಮಾವ ಹಾಗೂ ಪತಿಯ ಸಹೋದರಿಯಿಂದ ನಿತ್ಯ ಕಿರುಕುಳ ಅನುಭವಿಸುತ್ತಿದ್ದರು. ಪತಿಯ ಮನೆಯವರ ಈ ನಿರಂತರ ಕಿರುಕುಳದಿಂದ ಬೇಸತ್ತ ಪೂಜಾ ಅವರು ಒಮ್ಮೆ ತವರು ಮನೆಗೆ ತೆರಳಿ, ತನಗೆ ಆಗುತ್ತಿರುವ ಕಾಟದ ಬಗ್ಗೆ ಹೇಳಿಕೊಂಡಿದ್ದರು. ಪುತ್ರಿಯನ್ನು ಸಮಾಧಾನಪಡಿಸಿದ ತವರು ಮನೆಯವರು ಮತ್ತೆ ಪೂಜಾಳನ್ನು ಗಂಡನ ಮನೆಗೆ ಕಳುಹಿಸಿಕೊಟ್ಟಿದ್ದರು.

ಗಂಡನ ಮನೆಗೆ ಮರಳಿದ ನಂತರವೂ ಕಾಟ ಮುಂದುವರಿದ ಕಾರಣ, ಕಿರುಕುಳವನ್ನು ಸಹಿಸಲಾಗದೇ ಮನನೊಂದ ಪೂಜಾ ಅವರು ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆಯೇ ಆಕೆಯನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ ಪೂಜಾ ಮೃತಪಟ್ಟಿದ್ದಾರೆ.

ಪೂಜಾ ಮೃತಪಟ್ಟ ವಿಷಯ ತಿಳಿದ ಕೂಡಲೇ ಪತಿ ಶರತ್ ಮತ್ತು ಅವರ ಕುಟುಂಬಸ್ಥರು ಮೃತದೇಹ ಹಾಗೂ ಮೂರು ವರ್ಷದ ಪುಟ್ಟ ಕಂದಮ್ಮನನ್ನು ಆಸ್ಪತ್ರೆಯಲ್ಲಿಯೇ ಬಿಟ್ಟು ಕಾಲ್ಕಿತ್ತಿದ್ದಾರೆ. ಈ ಘಟನೆ ಆಸ್ಪತ್ರೆಯಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಈ ಸಂಬಂಧ ಎನ್. ಆರ್. ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮೃತ ಪೂಜಾ ಅವರ ಪತಿ ಶರತ್ ಮತ್ತು ಅವರ ಕುಟುಂಬಸ್ಥರ ವಿರುದ್ಧ ತನಿಖೆ ಆರಂಭಿಸಿದ್ದಾರೆ.

ನಮ್ಮ WhatsApp ಗ್ರೂಪ್ ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ

No comments:

Post a Comment

Advertisement

ಜಾಹೀರಾತು ಹಾಗೂ ಸುದ್ದಿ ನೀಡಲು ಸಂಪರ್ಕಿಸಿ

📞 9110857339 ಗೆ ಕರೆ ಮಾಡಿ 💬 WhatsApp ಗ್ರೂಪ್ ಸೇರಿ 🎥 YouTube ಚಂದಾದಾರರಾಗಿ

ಕನ್ನಡ ಗ್ಲೋಬಲ್ ನ್ಯೂಸ್