ಭಾನುವಾರದ ವಿಶೇಷ:ಸಾಧನೆಯ ಮೆಟ್ಟಿಲೇರಲು ಅಡಿಪಾಯವಾದ ನನ್ನ ಎನ್ ಎಸ್ ಎಸ್ - ಚಂದನ ಎನ್ - Kannada global

Breaking

Add

ಭಾನುವಾರ, ಸೆಪ್ಟೆಂಬರ್ 6, 2026

ಭಾನುವಾರದ ವಿಶೇಷ:ಸಾಧನೆಯ ಮೆಟ್ಟಿಲೇರಲು ಅಡಿಪಾಯವಾದ ನನ್ನ ಎನ್ ಎಸ್ ಎಸ್ - ಚಂದನ ಎನ್

ಸಹ್ಯಾದ್ರಿ ಕಾಲೇಜಿನಲ್ಲಿ ಓದಬೇಕೆಂಬ ಕನಸು ಹೊತ್ತವಳಿಗೆ ಮೊದಲ ಹಾದಿಯಾಗಿದ್ದು ಕನ್ನಡ ಸಾಹಿತ್ಯ ವೇದಿಕೆ. ಈ ವೇದಿಕೆ ಮೂಲಕ ಮೊದಲಿಗೆ ಅನವು ಮಾಡಿಕೊಟ್ಟ ಗುರುಗಳು ಡಾ. ಲವ ಜಿ.ಆರ್. ಸರ್. ಇವರು ಮೊದಲಿಗೆ ನನ್ನನ್ನು ಪರಿಚಯಿಸಿದ್ದು ನಾಟಕದ ವೇದಿಕೆಯ ಮುಖಾಂತರವಾಗಿಯೇ. ಇಲ್ಲಿಂದ ನನ್ನ ಪಯಣ ಆರಂಭ.

ಪಯಣ ಅನ್ನುವುದಕ್ಕಿಂತ, ಏನು ಅಂದರೆ ಏನು ಅಲ್ಲದವರಿಗೆ ಇವರೊಬ್ಬರು ಸಾಧನೆಯ ಹಾದಿ ತೋರುವಂತಾದರು. ಹೀಗೆ ಮೊದಲಿಗೆ ನನ್ನನ್ನು ನಾಟಕಗಳ ಮುಖಾಂತರ ಪರಿಚಯಿಸಿದರು. ಇದು ನಮ್ಮ ಮನೆಯವರಿಗೆ ಆಶ್ಚರ್ಯದ ಸಂಗತಿ. ಏಕೆಂದರೆ ನಾನು ಯಾವ ವೇದಿಕೆಯಲ್ಲೂ ಭಾಗವಹಿಸುತ್ತಿರಲಿಲ್ಲ. ನಮ್ಮ ಮೊದಲ ನಾಟಕ ‘ಜಂಗಮ’. ಇದನ್ನು 10 ಕ್ಕೂ ಹೆಚ್ಚು ಬಾರಿ ಪ್ರದರ್ಶಿಸಿದ್ದೇವೆ, ನಂತರದಲ್ಲಿ ‘ಗಾಂಧಿ: ಕನ್ನಡಕ’ ಮತ್ತು ‘ಮೋಡಣ್ಣನ ತಮ್ಮ’ ನಾಟಕಗಳಲ್ಲಿಯೂ ಪಾತ್ರವಹಿಸಿದ್ದೇನೆ. ನಾಟಕಗಳಿಂದ ಗುರುತಿಸಿಕೊಂಡ ನನಗೆ ಅವಕಾಶ ಇನ್ನೂ ಹೆಚ್ಚಾಗಿ ದೊರಕಿದ್ದು ಎನ್‌ಎಸ್‌ಎಸ್‌ನಿಂದ.

ಎನ್ಎಸ್ಎಸ್ ಎಂಬುದು ಕೇವಲ ಕಾಟಾಚಾರಕ್ಕೆ ಆಗದೆ ಅದನ್ನು ಮನಃಪೂರ್ವಕವಾಗಿ ಸ್ವೀಕರಿಸಿ ಅದರಲ್ಲಿ ನಾನು ಒಬ್ಬ ಸ್ವಯಂ ಸೇವಕಿಯಾಗಿ ಮುನ್ನಡೆದೆ. ಮೊದಲು ನಾನು ಕಲಿತದ್ದು ಶಿಸ್ತು ಮತ್ತು ಸಮಯದ ಪಾಲನೆ. ಎನ್‌ಎಸ್‌ಎಸ್ ಅಂತ ಬಂದರೆ ಎಲ್ಲದಕ್ಕೂ ನಾನು ಸಿದ್ಧವಾಗಿದ್ದೇನೆ ಎಂದು ತಯಾರಾಗಬೇಕು. ಇದನ್ನು ನಾನು ಈಗಲೂ ರೂಢಿಸಿಕೊಂಡಿದ್ದೇನೆ ಎಂಬುದು ನನಗೆ ಖುಷಿ. ಏಕೆಂದರೆ ಇದುವರೆಗೂ ಯಾವುದಕ್ಕೂ ಇಲ್ಲಾ ಎನ್ನದೇ ಎನ್ಎಸ್ಎಸ್ ಕುರಿತಾದ ಸಭೆ, ಶ್ರಮದಾನ, ಶಿಬಿರಗಳಲ್ಲಿ ಹಬ್ಬದ ರೀತಿಯಲ್ಲಿಯೇ ಸಂಭ್ರಮದಿಂದ ಪಾಲ್ಗೊಂಡಿದ್ದೇನೆ.

ಮೊದಲ ವಾರ್ಷಿಕ ವಿಶೇಷ ಶಿಬಿರದಲ್ಲಿ ನಾವು ಕಲಿತಿದ್ದು, ನಾವು ಮುನ್ನಡೆಸುವ ಶಿಬಿರಗಳ ಜವಾಬ್ದಾರಿಯನ್ನು ಹೇಗೆ ನಡೆಸಬೇಕು ಎಂದು. ಮುಂದೆ ಬರುವ ಶಿಬಿರಗಳನ್ನು ಹಿರಿಯ ಸ್ವಯಂ ಸೇವಕರಂತೆ ನಾವೂ ನಡೆಸಬೇಕು ಎಂಬ ಹಂಬಲ ಹುಟ್ಟಿ, ನನ್ನ ಮೊದಲ ಶಿಬಿರವು ಸಾಕಷ್ಟು ನೆನಪುಗಳ ಒಟ್ಟಿಗೆ ಇಂದಿಗೂ ಜೀವಿಸುತ್ತಿದೆ. ಹಿರಿಯ ಸ್ವಯಂ ಸೇವಕರ ಜೊತೆಗೆ ಇದ್ದ ಭಾಂಧವ್ಯ ಸ್ಮರಣೀಯವಾದದ್ದು. ಹೀಗೆ ನಂತರದ ಶಿಬಿರಗಳಲ್ಲಿ ಇನ್ನೂ ಹೆಚ್ಚಾಗಿ ಗುರುತಿಸಿಕೊಳ್ಳಲು ಅವಕಾಶ ಸಿಕ್ಕಿತು.

ಎರಡು ಬಾರಿ ನನಗೆ ಅಂತರ್ ಕಾಲೇಜು ಶಿಬಿರದಲ್ಲಿ ಭಾಗವಹಿಸಲು ಅವಕಾಶ ದೊರಕಿತು. ನಂತರದ ಸಮಯದಲ್ಲಿ ಪ್ರತಿಯೊಂದು ಶ್ರಮದಾನಗಳಿಗೆ, ಎನ್ಎಸ್ಎಸ್ ವತಿಯಿಂದ ನಡೆದ ಉಪನ್ಯಾಸ ಕಾರ್ಯಕ್ರಮಗಳಿಗೆ ಬಿಡದೆ ಭಾಗಿಯಾಗಿದ್ದೇನೆ.

2 ನೇ ವಾರ್ಷಿಕ ವಿಶೇಷ ಶಿಬಿರದಲ್ಲಿ ತಂಡದ ನಾಯಕಿಯಾಗಿ ನಿರ್ವಹಿಸಿದ್ದು ಖುಷಿಯ ಸಂಗತಿ. ಹಂತ ಹಂತವಾಗಿ ಎನ್‌ಎಸ್‌ಎಸ್‌ನಲ್ಲಿ ಮುಂದುವರೆಯುತ್ತಿರುವುದು ಖುಷಿ ಕೊಡುತ್ತಿತ್ತು.

ನನಗೆ ವಿಶೇಷವಾಗಿ ದೊರೆತ ಮತ್ತೊಂದು ಶಿಬಿರವೆಂದರೆ, ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಭಾವೈಕ್ಯ ಶಿಬಿರ. ಈ ಶಿಬಿರದಲ್ಲಿ ಕಾಂಪಿಟೇಷನ್ ಗಳೇ ಹೆಚ್ಚಾಗಿ ಇದ್ದರಿಂದ ಯೋಗ ಮಾಡಲು ಅನವು ಮಾಡಿಕೊಡಲಾಯ್ತು ಹಾಗೂ ಸುಂದರ ವೇದಿಕೆಯನ್ನು ಕಲ್ಪಿಸಿಕೊಟ್ಟು ನನ್ನನ್ನು ನಾನು ಗುರುತಿಸಿಕೊಳ್ಳಲು ನೆರವಾಯಿತು.

3 ನೇ ವಾರ್ಷಿಕ ವಿಶೇಷ ಶಿಬಿರದಲ್ಲಿ ಎನ್‌ಎಸ್‌ಎಸ್ ಘಟಕಗಳ ಪ್ರತಿನಿಧಿಗಳಾಗಿದ್ದ ಗಿರೀಶ, ದೇವಿಕಾ, ಯೋಗೇಶ ಮತ್ತು ನಾನು ನಾಯಕತ್ವ ವಹಿಸಿದ್ದೆವು. ಇಡೀ ಶಿಬಿರವನ್ನು ನೋಡಿಕೊಳ್ಳುವ ಜವಾಬ್ದಾರಿ ನಮ್ಮದಾಗಿತ್ತು. ಇದೊಂದು ರೀತಿ ವಿಶೇಷವಾದ ಜವಾಬ್ದಾರಿ. ಇಲ್ಲಿಯ ಖುಷಿಯ ಸಂಗತಿ ಎಂದರೆ, ಏಳು ದಿನಗಳ ಶಿಬಿರವನ್ನು ಅಚ್ಚುಕಟ್ಟಾಗಿ ಮುಗಿಸಿ ಅಲ್ಲಿಂದ ಹೊರಡುವ ಸಂದರ್ಭದಲ್ಲಿ ಊರಿನ ಜನರ ಕಣ್ಣಂಚಿನಲ್ಲಿ ಇದ್ದ ಕಣ್ಣೀರೇ ಸಾಕ್ಷಿಯಾಗಿತ್ತು ನಮ್ಮ ಶಿಬಿರಕ್ಕೆ ನಮ್ಮನ್ನು ಬೀಳ್ಕೊಟ್ಟ ಬಗೆ ಅಚ್ಚಳಿಯದ ರೀತಿಯಲ್ಲಿದೆ. ಆ ಸುಂದರ ಕ್ಷಣಗಳೇ ಕಣ್ಣೆದುರು ಬರುತ್ತವೆ.

ಇಷ್ಟೆಲ್ಲಾ ಅಡಿಪಾಯ ಹಾಕಿಕೊಟ್ಟು ನನ್ನ ಬೆಳವಣಿಗೆಗೆ ಕಾರಣರಾದವರು ಡಾ. ಲವ ಸರ್. ಎನ್‌ಎಸ್‌ಎಸ್‌ನಲ್ಲಿ ನಮ್ಮ ಬೆಳವಣಿಗೆಯನ್ನು ನೋಡಿ ಆನಂದಿಸಿದವರು ನನ್ನ ಮೂರು ವರ್ಷದ ಎನ್‌ಎಸ್‌ಎಸ್ ನಲ್ಲಿ ಬೆಳೆಯುವಂತೆ ಅವಕಾಶ ಕಲ್ಪಿಸಿದ ಡಾ. ಪ್ರಕಾಶ್ ಬಿ.ಎನ್. ಸರ್, ಡಾ. ಮುದಕಪ್ಪ ಸರ್, ಡಾ. ಹಾಲಮ್ಮ ಮೇಡಂ, ಡಾ. ಮೋಹನ್ ಚಂದ್ರಗುಪ್ತಿ ಸರ್, ಡಾ. ಪ್ರೇಮ ಮೇಡಂ, ಡಾ. ಬಿ.ಎಂ. ಚಂದ್ರಶೇಖರ ಸರ್, ಶಫಿ ಉಲ್ಲಾ  ಸರ್, ಹರ್ಷ ಅಣ್ಣ ಹಾಗೂ ಹಿರಿಯ ಸ್ವಯಂ ಸೇವಕರು, ವಿಶೇಷವಾಗಿ ನನ್ನನ್ನು ಪ್ರೋತ್ಸಾಹಿಸಿದ ನನ್ನ ಕುಟುಂಬದವರು.

ಎನ್‌ಎಸ್‌ಎಸ್ ಎಂಬುದು ನಾಮಕಾವಸ್ಥೆಯಲ್ಲದೆ, ಅದರಿಂದ ಸಿಗುವ ಅನುಭವ ಪಾಠಗಳೊಂದಿಗೆ ನಾವು ಸಾಗಬೇಕು. ಆಗ ಮಾತ್ರ ನಾವು ಕಲಿತ ಎನ್‌ಎಸ್‌ಎಸ್ ನಿಂದ ರೂಪಿಸಿಕೊಂಡದ್ದು ನಮ್ಮೊಟ್ಟಿಗೆ ಜೀವಿಸುತ್ತದೆ. ಹೀಗೆ ‘ನಾನು’ ಎಂಬುದನ್ನು ಬಿಟ್ಟು ‘ನಾವು’ ಎಂಬ ಮನೋಭಾವ ಬಂದಾಗಲೇ ಇಷ್ಟೆಲ್ಲಾ ಮೆಟ್ಟಿಲುಗಳನ್ನು ಏರುವುದಕ್ಕೆ ಸಾಧ್ಯವಾಗಿದೆ ಎಂಬುದು ಮುಖ್ಯ ಸಂಗತಿಯಾಗಿದೆ.


ಚಂದನ ಎನ್
MA, ವಿದ್ಯಾರ್ಥಿನಿ
ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ
ಶಿವಮೊಗ್ಗ

ಸಂಪಾದಕೀಯ ನುಡಿ: ಶ್ರಮ ಮತ್ತು ಶಿಸ್ತಿನಿಂದ ರೂಪಿತವಾದ ಯಶೋಗಾಥೆ

ಶಿಕ್ಷಣವೆಂದರೆ ಕೇವಲ ತರಗತಿಯ ನಾಲ್ಕು ಗೋಡೆಗಳ ಮಧ್ಯೆ ಪಡೆಯುವ ಅಂಕಗಳಷ್ಟೇ ಅಲ್ಲ; ಅದು ವ್ಯಕ್ತಿತ್ವ ವಿಕಸನದ ನಿರಂತರ ಪಯಣ ಎಂಬುದಕ್ಕೆ ಚಂದನ ಎನ್. ಅವರ 'ಮೆಟ್ಟಿಲು' ಲೇಖನ ಜೀವಂತ ಸಾಕ್ಷಿಯಾಗಿದೆ. ಸಾಹಿತ್ಯಿಕ ಚಟುವಟಿಕೆಗಳು ಹಾಗೂ ನಾಟಕ ರಂಗದ ಮೂಲಕ ಆರಂಭವಾದ ಇವರ ಸಾಂಸ್ಕೃತಿಕ ಪಯಣ, ಮುಂದೆ ಎನ್.ಎಸ್.ಎಸ್ (ರಾಷ್ಟ್ರೀಯ ಸೇವಾ ಯೋಜನೆ) ಸ್ವಯಂಸೇವಕಿಯಾಗಿ ರೂಪಾಂತರಗೊಂಡು ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡ ಬಗೆ ಅಭಿನಂದನೀಯ. 'ನಾನು' ಎಂಬ ಅಹಂ ಅನ್ನು ಬದಿಗೊತ್ತಿ 'ನಾವು' ಎಂಬ ಸಮುದಾಯಿಕ ಭಾವನೆಯನ್ನು ಮೈಗೂಡಿಸಿಕೊಂಡಾಗ ಮಾತ್ರ ಒಬ್ಬ ವ್ಯಕ್ತಿ ಸಮಾಜಕ್ಕೆ ಉಪಯುಕ್ತ ಪ್ರಜೆಯಾಗಬಲ್ಲ ಎಂಬುದನ್ನು ಈ ಲೇಖನ ಮನಮುಟ್ಟುವಂತೆ ತಿಳಿಸುತ್ತದೆ.

ಎನ್.ಎಸ್.ಎಸ್ ಎನ್ನುವುದು ಕೇವಲ ಪ್ರಮಾಣಪತ್ರಕ್ಕಾಗಿ ಮಾಡುವ ಕಾಟಾಚಾರದ ಚಟುವಟಿಕೆಯಲ್ಲ, ಬದಲಿಗೆ ಅದೊಂದು ಬದುಕಿನ ಅನುಭವಶಾಲೆಯಾಗಿದೆ. ಶ್ರಮದಾನ, ಶಿಸ್ತು, ಸಮಯ ಪಾಲನೆ ಹಾಗೂ ಗ್ರಾಮೀಣ ಶಿಬಿರಗಳ ಮೂಲಕ ಗ್ರಾಮಸ್ಥರೊಂದಿಗೆ ಬೆಸೆಯುವ ಭಾವನಾತ್ಮಕ ಬಾಂಧವ್ಯಗಳು ಇಂದಿನ ಯುವ ಪೀಳಿಗೆಗೆ ಅತ್ಯಗತ್ಯ. ಶಿಬಿರ ಮುಗಿಸಿ ಹೊರಡುವಾಗ ಊರಿನ ಜನರ ಕಣ್ಣಂಚಿನಲ್ಲಿ ಮೂಡುವ ಕಣ್ಣೀರೇ ಒಬ್ಬ ಸ್ವಯಂಸೇವಕಿಯ ನಿಜವಾದ ಸಾಧನೆಗೆ ಸಿಗುವ ಶ್ರೇಷ್ಠ ಗೌರವ. ನಾಯಕತ್ವದ ಜವಾಬ್ದಾರಿಯನ್ನು ಹೊತ್ತು, ರಾಷ್ಟ್ರೀಯ ಭಾವೈಕ್ಯ ಶಿಬಿರಗಳಲ್ಲಿ ಭಾಗವಹಿಸಿ ತನ್ನ ವ್ಯಕ್ತಿತ್ವವನ್ನು ಹಂತ ಹಂತವಾಗಿ ಬೆಳೆಸಿಕೊಂಡ ಬಗೆ ಇತರ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕ.

ವಿದ್ಯಾರ್ಥಿಯ ಬೆಳವಣಿಗೆಯ ಹಿಂದೆ ಸರಿಯಾದ ಮಾರ್ಗದರ್ಶನ ನೀಡುವ ಗುರುಗಳ ಮತ್ತು ಬೆಂಬಲಿಸುವ ಕುಟುಂಬದ ಪಾತ್ರ ಹಿರಿದಾದದ್ದು. ಸಹ್ಯಾದ್ರಿ ಕಾಲೇಜಿನ ಗುರು ವೃಂದದ ಪ್ರೋತ್ಸಾಹವನ್ನು ಕೃತಜ್ಞತೆಯಿಂದ ಸ್ಮರಿಸುತ್ತಾ, ತನ್ನ ಕನಸುಗಳ ಹಾದಿಯಲ್ಲಿ ಮುನ್ನಡೆದಿರುವ ಚಂದನ ಅವರ ಈ ಲೇಖನವು ಪ್ರತಿಯೊಬ್ಬ ವಿದ್ಯಾರ್ಥಿಗೂ ತಮ್ಮಲ್ಲಿರುವ ನಾಯಕತ್ವದ ಸಾಮರ್ಥ್ಯವನ್ನು ಗುರುತಿಸಿಕೊಳ್ಳಲು ಪ್ರೇರೇಪಿಸುತ್ತದೆ. ಸಮಾಜಮುಖಿ ಚಿಂತನೆ ಹಾಗೂ ಸೇವೆಯ ಹಾದಿಯಲ್ಲಿ ಮೆಟ್ಟಿಲುಗಳನ್ನು ಏರುತ್ತಿರುವ ಚಂದನ ಅವರಿಗೆ ಶುಭ ಹಾರೈಕೆಗಳು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Advertisement

ಜಾಹೀರಾತು ಹಾಗೂ ಸುದ್ದಿ ನೀಡಲು ಸಂಪರ್ಕಿಸಿ

📞 9110857339 ಗೆ ಕರೆ ಮಾಡಿ 💬 WhatsApp ಗ್ರೂಪ್ ಸೇರಿ 🎥 YouTube ಚಂದಾದಾರರಾಗಿ

ಕನ್ನಡ ಗ್ಲೋಬಲ್ ನ್ಯೂಸ್