ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಉಚಿತ ಮತ್ತು ಉತ್ತಮ ಗುಣಮಟ್ಟದ ವೈದ್ಯಕೀಯ ಸೌಲಭ್ಯ: ಸಿಮ್ಸ್ ನಿರ್ದೇಶಕ ಡಾ.ವಿರೂಪಾಕ್ಷಪ್ಪ - Kannada global

Breaking

Wednesday, October 15, 2025

ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಉಚಿತ ಮತ್ತು ಉತ್ತಮ ಗುಣಮಟ್ಟದ ವೈದ್ಯಕೀಯ ಸೌಲಭ್ಯ: ಸಿಮ್ಸ್ ನಿರ್ದೇಶಕ ಡಾ.ವಿರೂಪಾಕ್ಷಪ್ಪ

ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಉಚಿತ ಮತ್ತು ಉತ್ತಮ ಗುಣಮಟ್ಟದ ವೈದ್ಯಕೀಯ ಸೌಲಭ್ಯ: ಸಿಮ್ಸ್ ನಿರ್ದೇಶಕ ಡಾ.ವಿರೂಪಾಕ್ಷಪ್ಪ


ಶಿವಮೊಗ್ಗ:ಬಡವರು ಹಾಗೂ ಮಧ್ಯಮ ವರ್ಗದವರ ಹಿತದೃಷ್ಟಿಯಿಂದ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಉಚಿತವಾಗಿ ಮತ್ತು ಉತ್ತಮ ಗುಣಮಟ್ಟದ ವೈದ್ಯಕೀಯ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಇದರಿಂದ ಶಿವಮೊಗ್ಗ ಜಿಲ್ಲೆಯಷ್ಟೇ ಅಲ್ಲದೆ ಸುತ್ತಮುತ್ತಲಿನ ಜಿಲ್ಲೆಗಳಾದ ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ಹಾವೇರಿ ಹಾಗೂ ಉತ್ತರ ಕನ್ನಡದ ಜನರಿಗೂ ಅನುಕೂಲವಾಗುತ್ತಿದೆ ಎಂದು ಸಿಮ್ಸ್ (SIMS) ನಿರ್ದೇಶಕ ಡಾ.ವಿರೂಪಾಕ್ಷಪ್ಪ ತಿಳಿಸಿದರು.

ಮಂಗಳವಾರ ಮೆಗ್ಗಾನ್ ಆಸ್ಪತ್ರೆಯ ಕಾನ್ಫರೆನ್ಸ್ ಹಾಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯು 1200 ಹಾಸಿಗೆಯ ಸಾಮರ್ಥ್ಯವನ್ನು ಹೊಂದಿದೆ. ಪ್ರತಿ ದಿನ ಆಸ್ಪತ್ರೆಯಲ್ಲಿ ಶೇ.90 ರಷ್ಟು ಹೊರರೋಗಿಗಳು ದಾಖಲಾಗುತ್ತಿದ್ದಾರೆ. ರೋಗಿಗಳ ಅನುಕೂಲಕ್ಕಾಗಿ ದಿನದ 24 ಗಂಟೆಯೂ ಹೊರರೋಗಿ (ಓ.ಪಿ.ಡಿ) ವಿಭಾಗವು ತೆರೆದಿರುತ್ತದೆ ಎಂದು ತಿಳಿಸಿದರು.

ಪ್ರಸ್ತುತ ಸೇವೆಯನ್ನು ಇನ್ನಷ್ಟು ಹೆಚ್ಚಿಸಲು ಸೂಪರ್ ಸ್ಪೆಷಾಲಿಟಿ ಸೇವೆಗಳನ್ನು ಆರಂಭಿಸಲಾಗುತ್ತಿದೆ. ಅದರಂತೆ, ಮೆಗ್ಗಾನ್ ಆಸ್ಪತ್ರೆಯಲ್ಲಿ ಪ್ಲಾಸ್ಟಿಕ್ ಸರ್ಜರಿ, ಕ್ಯಾನ್ಸರ್ ಸರ್ಜರಿ, ನ್ಯೂರೋ ಸರ್ಜರಿ, ಮಕ್ಕಳ ಶಸ್ತ್ರಚಿಕಿತ್ಸೆ, ಮೂತ್ರ ರೋಗ ಶಸ್ತ್ರಚಿಕಿತ್ಸೆ ಹಾಗೂ ಕಿಡ್ನಿ ಕಾಯಿಲೆಗಳಿಗೆ ಸಂಬಂಧಿಸಿದ ಚಿಕಿತ್ಸೆಗಳನ್ನು ನೀಡಲು ಯೋಜನೆ ರೂಪಿಸಲಾಗಿದ್ದು, ಈ ಸೇವೆಗಳು ಸೋಮವಾರ ಮತ್ತು ಗುರುವಾರ ಮಾತ್ರ ಲಭ್ಯವಾಗಲಿದೆ. ಅಲ್ಲದೆ, ನರರೋಗ ಶಸ್ತ್ರಚಿಕಿತ್ಸಾ ಸೇವೆ ಮಂಗಳವಾರ, ಗುರುವಾರ ಮತ್ತು ಶನಿವಾರದಂದು ಹೊರರೋಗಿಗಳ ಸೇವೆಗೆ ಲಭ್ಯವಿರುತ್ತದೆ. ಈ ಸೂಪರ್ ಸ್ಪೆಷಾಲಿಟಿ ಚಿಕಿತ್ಸೆಗಳಿಗೆ ಬಿ.ಪಿ.ಎಲ್. ಕಾರ್ಡುದಾರರಿಗೆ ಎ,ಬಿ,ಎ,ಆರ್,ಕೆ ಯೋಜನೆಯ ಅಡಿಯಲ್ಲಿ ಉಚಿತ ಸೌಲಭ್ಯವನ್ನು ನೀಡಲಾಗುತ್ತದೆ ಎಂದು ನಿರ್ದೇಶಕರು ಮಾಹಿತಿ ನೀಡಿದರು.

ಜನವರಿಯಿಂದ ಆಗಸ್ಟ್ ತಿಂಗಳವರೆಗೆ ಪ್ರತಿ ದಿನ ಹೊರರೋಗಿಗಳು ಮತ್ತು ಒಳರೋಗಿಗಳು ಸೇರಿ ಸುಮಾರು 4500 ಜನರು ಹಾಗೂ ಪ್ರತಿ ತಿಂಗಳು ಎಬಿಆರ್‌ಕೆ ಯೋಜನೆಯಲ್ಲಿ 3000 ರೋಗಿಗಳು ಉಚಿತ ಸೇವೆ ಪಡೆಯುತ್ತಿದ್ದಾರೆ. ಈ ಯೋಜನೆಯಡಿಯಲ್ಲಿ ಪ್ರತಿ ವರ್ಷ ರೋಗಿಗಳಿಗೆ ಸುಮಾರು 200 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗುತ್ತಿದೆ ಎಂದು ಡಾ. ವಿರೂಪಾಕ್ಷಪ್ಪ ಹೇಳಿದರು.

ಪ್ರತಿದಿನ 50-60 ಮೇಜರ್ ಸರ್ಜರಿ ಮತ್ತು 130-140 ಮೈನರ್ ಸರ್ಜರಿಗಳನ್ನು ಮಾಡಲಾಗುತ್ತಿದೆ. ಪ್ರತಿತಿಂಗಳು 240 ನವಜಾತ ಶಿಶುಗಳ ಮಕ್ಕಳು ಉಚಿತ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ಜೊತೆಗೆ, ಪ್ರತಿದಿನ 25 ರಿಂದ 30 ಎಂಆರ್‌ಐ, 125 ಸಿಟಿ ಸ್ಕ್ಯಾನಿಂಗ್, 370 ರಿಂದ 400 ಜನರಿಗೆ ಎಕ್ಸ್‌ರೇ ಹಾಗೂ 100 ಜನರಿಗೆ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಸೇವೆಗಳನ್ನು ನೀಡಲಾಗುತ್ತಿದೆ ಎಂದರು.

ಆಸ್ಪತ್ರೆಯಲ್ಲಿ ಈಗ ಪ್ಯಾರಾ ಮೆಡಿಕಲ್, ಪಿ.ಹೆಚ್.ಎಸ್., ನರ್ಸಿಂಗ್ ಕಾಲೇಜುಗಳು ನಡೆಯುತ್ತಿದ್ದು, 2000ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಜೊತೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಮಕ್ಕಳ ಆಸ್ಪತ್ರೆ, ವಸತಿ ಗೃಹ, ಯುಜಿ ಹಾಸ್ಟೆಲ್, ಬಾಯ್ಸ್ ಅಂಡ್ ಗರ್ಲ್ಸ್ ಹಾಸ್ಟೆಲ್, ಆಧುನಿಕ ಶವಾಗಾರ ಹಾಗೂ ವೈದ್ಯಕೀಯ ಅಧಿಕಾರಿಗಳಿಗಾಗಿ 237 ಕ್ವಾಟ್ರಸ್ ಮನೆಗಳನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಿಮ್ಸ್ ಮುಖ್ಯ ಅಧೀಕ್ಷಕ ಡಾ.ಸಿದ್ದಪ್ಪ, ಉಪ ಲೋಕಾಯುಕ್ತರು ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳೊಂದಿಗೆ ಸಮಾಲೋಚಿಸಿದ್ದರೂ, ಆಸ್ಪತ್ರೆಯ ಬಗ್ಗೆ ಯಾವುದೇ ಸಮಸ್ಯೆ ಕಂಡುಬಂದಿಲ್ಲ. ಯಾವುದೇ ಅಹಿತಕರ ಘಟನೆ ನಡೆಯದಂತೆ ಈಗಾಗಲೇ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೆರಿಗೆ ವಾರ್ಡ್‌ನಲ್ಲಿ ಪುರುಷ ಸಿಬ್ಬಂದಿಯನ್ನು ನಿರ್ಬಂಧಿಸಲಾಗಿದೆ ಮತ್ತು ಮಕ್ಕಳ ಕಳ್ಳತನ ತಡೆಯಲು ಸಿಸಿ ಟಿವಿಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು.

ರೋಗಿಗಳಿಗೆ ಮತ್ತು ಸಾರ್ವಜನಿಕರಿಗೆ ಸಮರ್ಪಕ ಕುಡಿಯುವ ನೀರು, ಹಾಸಿಗೆ ಹಾಗೂ ಶೌಚಾಲಯಗಳನ್ನು ದಿನಕ್ಕೆ ಕನಿಷ್ಠ ಎರಡು ಬಾರಿ ಸ್ವಚ್ಛವಾಗಿಸಲಾಗುತ್ತಿದೆ ಎಂದು ಅವರು ಮೂಲಭೂತ ಸೌಕರ್ಯಗಳ ಕುರಿತು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಿಮ್ಸ್ ಅಧೀಕ್ಷಕ ಡಾ. ತಿಮ್ಮಪ್ಪ, ಸಿಮ್ಸ್ ವಿಶೇಷ ಅಧಿಕಾರಿಯಾದ ಪರಮೇಶ್ವರಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕರಾದ ಸಿದ್ದನಗೌಡ ಪಾಟೀಲ್ ಹಾಗೂ ವೈದ್ಯಕೀಯ ಅಧಿಕಾರಿಗಳು ಉಪಸ್ಥಿತರಿದ್ದರು.

ನಮ್ಮ WhatsApp ಗ್ರೂಪ್ ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ


No comments:

Post a Comment

Advertisement

ಜಾಹೀರಾತು ಹಾಗೂ ಸುದ್ದಿ ನೀಡಲು ಸಂಪರ್ಕಿಸಿ

📞 9110857339 ಗೆ ಕರೆ ಮಾಡಿ 💬 WhatsApp ಗ್ರೂಪ್ ಸೇರಿ 🎥 YouTube ಚಂದಾದಾರರಾಗಿ

ಕನ್ನಡ ಗ್ಲೋಬಲ್ ನ್ಯೂಸ್