ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ಡಿಸಿ ಕಚೇರಿ ಎದುರು ರೈತಸಂಘದ ಪ್ರತಿಭಟನೆ
ಶಿವಮೊಗ್ಗ:ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜಂಟಿಯಾಗಿ ₹8 ಸಾವಿರ ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಹೊರಟಿರುವ 2000 ಮೆಗಾವಾಟ್ ವಿದ್ಯುತ್ ಉತ್ಪಾದನೆಯ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ವಿರೋಧ ವ್ಯಕ್ತಪಡಿಸಿ ರೈತಸಂಘ ಹಾಗೂ ಹಸಿರುಸೇನೆ ವತಿಯಿಂದ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಯಿತು.
ಯೋಜನೆಗೆಂದು 350 ಎಕರೆ ಜಾಗವನ್ನು ಗುರುತಿಸಲಾಗಿದ್ದು, ಈ ರೀತಿಯ ಬೃಹತ್ ಯೋಜನೆಗಳನ್ನು ಮಾಡುವಾಗ ಸರ್ಕಾರವು ಸ್ಥಳೀಯರು ಹಾಗೂ ಪರಿಸರವಾದಿಗಳೊಂದಿಗೆ ಸಮಾಲೋಚನಾ ಸಭೆ ನಡೆಸಬೇಕಿತ್ತು. ಆದರೆ, ಸರ್ಕಾರ ಇದುವರೆಗೂ ಯೋಜನೆಯ ವಿಸ್ತೃತ ಯೋಜನಾ ವರದಿ (ಡಿಪಿಆರ್)ಯನ್ನು ಸಾರ್ವಜನಿಕರ ಮುಂದೆ ಇಡುವ ಕೆಲಸ ಮಾಡಿಲ್ಲ. ಸ್ಥಳೀಯರಿಗೆ ಸೂಕ್ತ ಮಾಹಿತಿ ನೀಡುವುದು ಸರ್ಕಾರದ ಹಕ್ಕು, ಆದರೆ ಅದನ್ನು ನಿರ್ಲಕ್ಷಿಸಲಾಗಿದೆ ಎಂದು ಪ್ರತಿಭಟನಕಾರರು ದೂರಿದರು.
ಈಗಾಗಲೇ ಹಲವು ಯೋಜನೆಗಳಿಂದ ಭೂಮಿ ಕಳೆದುಕೊಂಡ ಸಂತ್ರಸ್ತರೇ ಹೆಚ್ಚಾಗಿರುವ ಈ ಪ್ರದೇಶದಲ್ಲಿ, ಮತ್ತೆ ಭೂಮಿ ಕಳೆದುಕೊಳ್ಳುವ ಭೀತಿ ಎದುರಾಗಿದೆ. ತಮ್ಮ ಭೂಮಿ ಉಳಿಸಿಕೊಳ್ಳಲು ಹಲವು ವರ್ಷಗಳಿಂದ ಹೋರಾಡುತ್ತಿರುವ ಈ ಕುಟುಂಬಗಳು ಈ ಹೊಸ ಯೋಜನೆಯಿಂದಾಗಿ ಮತ್ತೆ ಬೀದಿಗೆ ಬಿದ್ದು, ಅವರ ಜೀವನ ಅತಂತ್ರವಾಗಲಿದೆ ಎಂದು ರೈತ ಮುಖಂಡರು ಆತಂಕ ವ್ಯಕ್ತಪಡಿಸಿದರು.
ಸರ್ಕಾರ ಈ 'ಅವೈಜ್ಞಾನಿಕ ಕಾಮಗಾರಿ'ಯನ್ನು ಕೂಡಲೇ ಕೈಬಿಡಬೇಕು. ಬದಲಿಗೆ ವೈಜ್ಞಾನಿಕ ಮಾರ್ಗಗಳನ್ನು ಅನುಸರಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು. ದಟ್ಟ ಅರಣ್ಯ ಪ್ರದೇಶದಲ್ಲಿ ಈ ಯೋಜನೆಯ ಅನುಷ್ಠಾನದಿಂದ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ನೂರಾರು ಹೆಕ್ಟೇರ್ ಅರಣ್ಯ ನಾಶವಾಗಿ ಭೂಮಿಯ ಸವಕಳಿ ಮತ್ತು ಕೊರತೆ ಉಂಟಾಗಿ ಅಪಾಯ ಹೆಚ್ಚಾಗಲಿದೆ. ಆದ್ದರಿಂದ, ಈ ಯೋಜನೆಯನ್ನು ತಕ್ಷಣ ಕೈಬಿಡಬೇಕು ಎಂದು ಅವರು ಸರ್ಕಾರಕ್ಕೆ ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡ ಕೆ.ಟಿ. ಗಂಗಾಧರ್, ಪ್ರಮುಖರಾದ ಈರಣ್ಣ ಪ್ಯಾಟಿ, ಹಾಲೇಶಪ್ಪ ಗೌಡ್ರು, ಯಶವಂತರಾವ್ ಘೋರ್ಪಡೆ, ವೀರೇಶ್ ಡಿ.ವಿ., ಪುಟ್ಟಣ್ಣಗೌಡ್ರು, ಗಿರೀಶಣ್ಣ, ಹಿರಣ್ಣಯ್ಯ, ಜಗದೀಶ್ ನಾಯಕ್, ಎಚ್.ಎಸ್. ಮಂಜುನಾಥೇಶ್ವರ ಸೇರಿದಂತೆ ಹಲವು ಸದಸ್ಯರು ಪಾಲ್ಗೊಂಡಿದ್ದರು.

No comments:
Post a Comment