ಮೆಗ್ಗಾನ್ ಆಸ್ಪತ್ರೆ ಅವ್ಯವಸ್ಥೆ ಖಂಡಿಸಿ ಕರವೇಯಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ
ಶಿವಮೊಗ್ಗ: ಜಿಲ್ಲೆಯ ಪ್ರತಿಷ್ಠಿತ ಮೆಗ್ಗಾನ್ ಆಸ್ಪತ್ರೆಯಲ್ಲಿನ ಅವ್ಯವಸ್ಥೆಗಳನ್ನು ಸರಿಪಡಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ (ಕರವೇ) ನಾರಾಯಣಗೌಡ ಬಣವು ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ನಡೆಸುತ್ತಿದೆ. ಬಡ ರೋಗಿಗಳಿಗೆ ದೇವರಾಗಿ ಕಾರ್ಯನಿರ್ವಹಿಸಬೇಕಿದ್ದ ಆಸ್ಪತ್ರೆಯು 'ಅವ್ಯವಸ್ಥೆಯ ಆಗರ'ವಾಗಿದೆ ಎಂದು ಕರವೇ ಆಕ್ರೋಶ ವ್ಯಕ್ತಪಡಿಸಿದೆ. ಶಿವಮೊಗ್ಗ ಹಾಗೂ ತಾಲ್ಲೂಕು ಘಟಕಗಳಿಂದ ಈ ಪ್ರತಿಭಟನೆ ನಡೆಯುತ್ತಿದೆ.
ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡ ಸಾಗರ ಕರವೇ (ಟಿ.ಎ. ನಾರಾಯಣಗೌಡ ಬಣ) ತಾಲ್ಲೂಕು ಅಧ್ಯಕ್ಷ ಮನೋಜ್ ಕುಗ್ವೆ ಅವರು ಆಸ್ಪತ್ರೆಯ ವೈಫಲ್ಯಗಳನ್ನು ಪಟ್ಟಿ ಮಾಡಿ ಕಿಡಿಕಾರಿದ್ದಾರೆ. ಖಾಯಂ ವೈದ್ಯರ ಬದಲಿಗೆ ಟ್ರೈನಿ ಡಾಕ್ಟರ್‌ಗಳು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಇದರಿಂದ ರೋಗಿಗಳು ಗುಣಮುಖರಾಗುವ ಬದಲು ಮತ್ತಷ್ಟು ಆರೋಗ್ಯ ಕ್ಷೀಣಿಸುತ್ತಿದೆ. ಸೂಕ್ತ ಕಾಲದಲ್ಲಿ ಚಿಕಿತ್ಸೆ ನೀಡದೆ ವೈದ್ಯರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ.ಮೆಗ್ಗಾನ್ ಆಸ್ಪತ್ರೆಯ ವೈದ್ಯರು ಕರ್ತವ್ಯದ ಅವಧಿಯಲ್ಲೇ ಖಾಸಗಿ ಕ್ಲಿನಿಕ್‌ಗಳಲ್ಲಿ ರೋಗಿಗಳನ್ನು ನೋಡುತ್ತಿದ್ದಾರೆ. ಅಲ್ಲದೆ, ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ಸೇರಿದಂತೆ ಇತರೆ ಪರೀಕ್ಷೆಗಳನ್ನು ನಡೆಸುವಂತೆ ಸೂಚಿಸದೆ, ಹೊರಗಡೆ ಬರೆದುಕೊಡುತ್ತಿದ್ದಾರೆ.
ಸಾಗರ, ಸೊರಬ, ಸಿದ್ದಾಪುರ ಮುಂತಾದ ದೂರದ ತಾಲ್ಲೂಕುಗಳಿಂದ ತುರ್ತು ಚಿಕಿತ್ಸೆಗಾಗಿ ಬರುವ ರೋಗಿಗಳಿಗೆ ಸರಿಯಾದ ಸಮಯಕ್ಕೆ ವೈದ್ಯರು ಚಿಕಿತ್ಸೆ ನೀಡುತ್ತಿಲ್ಲ. ಬದಲಿಗೆ ನರ್ಸ್‌ಗಳೇ ಚಿಕಿತ್ಸೆ ನೀಡುತ್ತಿದ್ದಾರೆ. ಖಾಯಂ ವೈದ್ಯರ ಬದಲಾಗಿ ಟ್ರೈನಿ ಡಾಕ್ಟರ್‌ಗಳು ಚಿಕಿತ್ಸೆ ನೀಡುತ್ತಿರುವ ಪರಿಣಾಮವಾಗಿ ಈವರೆಗೆ ಅನೇಕ ರೋಗಿಗಳು ಜೀವ ಕಳೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ರೋಗಿಗಳು ಮತ್ತು ಅವರ ಸಂಬಂಧಿಕರಿಗೆ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ರೋಗಿಗಳಿಗೆ ಸರಿಯಾದ ಬೆಡ್ ವ್ಯವಸ್ಥೆ ಇಲ್ಲ. ನಡೆದಾಡಲು ಕಷ್ಟವಾಗುವ ರೋಗಿಗಳಿಗೆ ಸರಿಯಾದ ವೀಲ್‌ಚೇರ್ ವ್ಯವಸ್ಥೆಯೂ ಇಲ್ಲ. ಆಸ್ಪತ್ರೆಯ ಬಾತ್ ರೂಂಗಳು ಗಬ್ಬು ನಾರುತ್ತಿದ್ದು, ಬಳಕೆಗೆ ಸಾಧ್ಯವಿಲ್ಲದಷ್ಟು ಕೆಟ್ಟ ಪರಿಸ್ಥಿತಿಯಲ್ಲಿದೆ.
ಮೆಗ್ಗಾನ್ ಆಸ್ಪತ್ರೆಯು ರೋಗಿಗಳ ಪಾಲಿಗೆ 'ನರಕ ಅನುಭವಿಸುವಂತ ಆಸ್ಪತ್ರೆ'ಯಾಗಿದೆ ಎಂದು ಮನೋಜ್ ಕುಗ್ವೆ ಟೀಕಿಸಿದ್ದಾರೆ. ಕೂಡಲೇ ಆಸ್ಪತ್ರೆಯಲ್ಲಿನ ಈ ಎಲ್ಲ ಅವ್ಯವಸ್ಥೆಗಳನ್ನು ಸರಿಪಡಿಸುವಂತೆ ಅವರು ಸರ್ಕಾರವನ್ನು ಒತ್ತಾಯಿಸಿದರು.ಕರವೇ ನಾರಾಯಣಗೌಡ ಬಣದ ಶಿವಮೊಗ್ಗ ಹಾಗೂ ತಾಲ್ಲೂಕು ಘಟಕಗಳಿಂದ ಈ ಎಲ್ಲಾ ಅವ್ಯವಸ್ಥೆಗಳನ್ನು ಖಂಡಿಸಿ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಮುಂದುವರಿಸಲಾಗಿದೆ.

No comments:
Post a Comment