ಸಾಗರ ಶ್ರೀಗಂಧ ಕಲಾ ಸಂಕೀರ್ಣದ ಶಿಲ್ಪಗುರುಕುಲಕ್ಕೆ 65.80 ಲಕ್ಷ ರೂ. ಮಂಜೂರು: ದುರಸ್ತಿ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ
ಬೆಂಗಳೂರು:ರಾಜ್ಯ ಸರ್ಕಾರವು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿರುವ ಪ್ರತಿಷ್ಠಿತ ಶ್ರೀಗಂಧದ ಕಲಾ ಸಂಕೀರ್ಣದ ಶಿಲ್ಪಗುರುಕುಲದ ದುರಸ್ತಿ ಮತ್ತು ನವೀಕರಣ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿ ಮಹತ್ವದ ಆದೇಶ ಹೊರಡಿಸಿದೆ. ಈ ಕಾಮಗಾರಿಗಳಿಗಾಗಿ ಒಟ್ಟು ₹ 65.80 ಲಕ್ಷ (ಅರವತ್ತೈದು ಲಕ್ಷದ ಎಂಭತ್ತು ಸಾವಿರ ರೂಪಾಯಿ) ಅನುದಾನವನ್ನು ಮಂಜೂರು ಮಾಡಲಾಗಿದೆ.
ಕಲಾ ಸಂಕೀರ್ಣದ ಶಿಕ್ಷಣ ಕೊಠಡಿಗಳು, ವಿದ್ಯಾರ್ಥಿ ಮತ್ತು ಅತಿಥಿ ವಸತಿ ಗೃಹಗಳು ಹಾಗೂ ಉಪಹಾರ ಗೃಹದ ಸುಧಾರಣೆಯೇ ಈ ಅನುದಾನದ ಮುಖ್ಯ ಉದ್ದೇಶವಾಗಿದೆ.
ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರು ಈ ಕುರಿತು ಕಾರ್ಯಾದೇಶವನ್ನು ಹೊರಡಿಸಿದ್ದಾರೆ. ಈ ಕಾಮಗಾರಿಯನ್ನು ನಿರ್ವಹಿಸುವ ಜವಾಬ್ದಾರಿಯನ್ನು ಶಿವಮೊಗ್ಗದ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕರಿಗೆ ವಹಿಸಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.ಗುರುಕುಲದ ಮೂಲಭೂತ ಸೌಕರ್ಯಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಈ ಕೆಳಗಿನಂತೆ ಅನುದಾನವನ್ನು ಬಿಡುಗಡೆ ಮಾಡಲಾಗಿದೆ:
ಕ್ಲಾಸ್ ರೂಮ್ ಮತ್ತು ರೂಮ್ ಪಾರ್ಟೀಷನ್ ದುರಸ್ತಿ: ₹ 34.80 ಲಕ್ಷ
ಉಪಹಾರ ಕೊಠಡಿಯ ದುರಸ್ತಿ: ₹ 8.60 ಲಕ್ಷ
ಗೆಸ್ಟ್ ಹಾಸ್ಟೆಲ್ ಬ್ಲಾಕ್-1 ದುರಸ್ತಿ: ₹ 7.80 ಲಕ್ಷ
ಗೆಸ್ಟ್ ಹಾಸ್ಟೆಲ್ ಬ್ಲಾಕ್-2 ದುರಸ್ತಿ: ₹ 7.80 ಲಕ್ಷ
ಗೆಸ್ಟ್ ಹಾಸ್ಟೆಲ್ ಬ್ಲಾಕ್-3 ದುರಸ್ತಿ: ₹ 6.80 ಲಕ್ಷ
ನಿಗಮದಿಂದ ಅನುಮೋದಿತವಾದ ಅಂದಾಜು ಪಟ್ಟಿಯಂತೆ ಕಾಮಗಾರಿಯನ್ನು ಕೈಗೊಳ್ಳಲು ನಿರ್ಮಿತಿ ಕೇಂದ್ರಕ್ಕೆ ಸ್ಪಷ್ಟ ಸೂಚನೆ ನೀಡಲಾಗಿದೆ. ಈ ಕಾರ್ಯಾದೇಶದ ಮೂಲಕ ಶ್ರೀಗಂಧದ ಕಲೆಯ ತರಬೇತಿ ಕೇಂದ್ರವಾದ ಶಿಲ್ಪಗುರುಕುಲದ ಕಲಿಕಾ ವಾತಾವರಣವು ಮತ್ತಷ್ಟು ಸುಧಾರಣೆಯಾಗುವ ನಿರೀಕ್ಷೆ ಇದೆ.
ನಮ್ಮ WhatsApp ಗ್ರೂಪ್ ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ

No comments:
Post a Comment