ಸಾಗರ ನಗರಸಭೆಯಲ್ಲಿ ಕಮಿಷನ್ ದಂಧೆ ಹಾಗೂ ಭ್ರಷ್ಟಾಚಾರ ಮಿತಿಮೀರಿದೆ: ಮಾಜಿ ಸಚಿವ ಹರತಾಳು ಹಾಲಪ್ಪ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ - Kannada global

Breaking

Add

ಶನಿವಾರ, ಅಕ್ಟೋಬರ್ 3, 2026

ಸಾಗರ ನಗರಸಭೆಯಲ್ಲಿ ಕಮಿಷನ್ ದಂಧೆ ಹಾಗೂ ಭ್ರಷ್ಟಾಚಾರ ಮಿತಿಮೀರಿದೆ: ಮಾಜಿ ಸಚಿವ ಹರತಾಳು ಹಾಲಪ್ಪ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ

ಶಿವಮೊಗ್ಗ: ಸಾಗರ ನಗರಸಭೆಯ ಆಡಳಿತ ಸಂಪೂರ್ಣವಾಗಿ ಕುಸಿದಿದ್ದು, ಕಮಿಷನ್ ಮತ್ತು ದಲ್ಲಾಳಿಗಳ ಹಾವಳಿಯಿಲ್ಲದೆ ಸಾರ್ವಜನಿಕರ ಯಾವುದೇ ಕೆಲಸಗಳು ನಡೆಯುತ್ತಿಲ್ಲ ಎಂದು ಬಿಜೆಪಿ ಮುಖಂಡ ಕೆ.ಎಸ್. ಪ್ರಶಾಂತ್ ಗಂಭೀರ ಆರೋಪ ಮಾಡಿದ್ದಾರೆ.

ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರಸಭೆಯ ದುರಾಡಳಿತವನ್ನು ಖಂಡಿಸಿ ಮಾಜಿ ಸಚಿವ ಹರತಾಳು ಹಾಲಪ್ಪ ಅವರ ನೇತೃತ್ವದಲ್ಲಿ ನಗರಸಭೆ ಕಚೇರಿ ಮುಂಭಾಗ ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕಲ್ಪನೆಯಿಲ್ಲದ ನಾಯಕತ್ವದಿಂದ ಆಡಳಿತ ದುಸ್ಥಿತಿ

ಅಭಿವೃದ್ಧಿಯ ದೂರದೃಷ್ಟಿ ಮತ್ತು ಸ್ವಚ್ಛತೆಯ ಕಲ್ಪನೆ ಇರುವಾತ ಶಾಸಕರಾದರೆ ನಗರ ಹೇಗೆ ಪರಿವರ್ತನೆಯಾಗುತ್ತದೆ ಎಂಬುದನ್ನು ಹರತಾಳು ಹಾಲಪ್ಪ ಅವರು ತಮ್ಮ ಅಧಿಕಾರಾವಧಿಯಲ್ಲಿ ಮಾಡಿ ತೋರಿಸಿದ್ದರು. ಆದರೆ ಯಾವುದೇ ಕಲ್ಪನೆಯಿಲ್ಲದ ವ್ಯಕ್ತಿಯ ಕೈಗೆ ಆಡಳಿತ ಸಿಕ್ಕರೆ ಪರಿಸ್ಥಿತಿ ಏನಾಗುತ್ತದೆ ಎಂಬುದನ್ನು ಕಳೆದ ಮೂರೂವರೆ ವರ್ಷಗಳಲ್ಲಿ ಸಾಗರದ ಜನರು ಕಣ್ಣಾರೆ ಕಂಡು ಅನುಭವಿಸುತ್ತಿದ್ದಾರೆ. ನಗರದ ಅಭಿವೃದ್ಧಿಯ ಬಗ್ಗೆ ಸ್ಪಷ್ಟ ಕಲ್ಪನೆಯಿಲ್ಲದ ಕಾರಣ ಇಡೀ ಆಡಳಿತ ವ್ಯವಸ್ಥೆಯೇ ಹಳಿ ತಪ್ಪಿದೆ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಇ-ಸ್ವತ್ತಿಗೆ ದರ ನಿಗದಿ ಮಾಡಿ ಬೋರ್ಡ್ ಹಾಕಿ!

ನಗರಸಭೆಯಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು, ಮಧ್ಯವರ್ತಿಗಳಿಲ್ಲದೆ ಜನಸಾಮಾನ್ಯರ ಕಡತಗಳು ವಿಲೇವಾರಿಯಾಗುತ್ತಿಲ್ಲ. ನನ್ನದೇ ಸ್ವಂತ ಇ-ಸ್ವತ್ತು ಮಾಡಿಸಿಕೊಳ್ಳಲು ಕಳೆದ ಎಂಟು ತಿಂಗಳಿಂದ ನಗರಸಭೆಗೆ ಅಲೆಯುತ್ತಿದ್ದೇನೆ. ನಗರಸಭೆಯವರು ಶಾಸಕರ ಫೋಟೋ ಹಾಕಿಕೊಳ್ಳುವುದನ್ನು ಬಿಟ್ಟು, ಇ-ಸ್ವೃತಿಗೆ ಎಷ್ಟು ಹಣ ನೀಡಬೇಕು ಎಂಬ ದರಪಟ್ಟಿಯನ್ನು ಪ್ರವೇಶದ್ವಾರದಲ್ಲೇ ಹಾಕಿಬಿಡಲಿ. ಹಣವಿದ್ದವರು ಆ ಮೊತ್ತವನ್ನು ನೀಡಿ ಕೆಲಸ ಮಾಡಿಸಿಕೊಳ್ಳುತ್ತಾರೆ, ಇಲ್ಲದವರು ಸುಮ್ಮನೆ ಮನೆಗೆ ವಾಪಸ್ ಹೋಗುತ್ತಾರೆ. ಪ್ರತಿಯೊಂದು ಕಡತಕ್ಕೂ ಬ್ರೋಕರೇಜ್ ಇಲ್ಲದೆ ಕೆಲಸವೇ ಆಗದಂತಹ ಲಜ್ಜೆಗೇಟ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಡಳಿತ ವ್ಯವಸ್ಥೆಯನ್ನು ತರಾಟೆಗೆ ತೆಗೆದುಕೊಂಡರು.

'ಗುದ್ದಲಿ ಗೋಪಾಲ' ಈಗ 'ಟೇಪ್ ಕಟ್ ಗೋಪಾಲ'

ಹಿಂದೆ ಶಾಸಕರನ್ನು 'ಗುದ್ದಲಿ ಗೋಪಾಲ' ಎಂದು ಜನ ಕರೆಯುತ್ತಿದ್ದರು. ಆದರೆ ಈಗ ಗುದ್ದಲಿ ಪೂಜೆ ಮಾಡುವುದನ್ನು ಬಿಟ್ಟು, ಹಾಲಪ್ಪನವರ ಅವಧಿಯಲ್ಲಿ ಮಂಜುರಾಗಿ ಆರಂಭವಾಗಿದ್ದ ಕಾಮಗಾರಿಗಳ ಬಳಿ ಹೋಗಿ ಕೇವಲ ಟೇಪ್ ಕತ್ತರಿಸುವುದನ್ನೇ ಶಾಸಕರು ತಮ್ಮ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಕಳೆದ ಮೂರೂವರೆ ವರ್ಷಗಳಿಂದ ಕೇವಲ ಟೇಪ್ ಕಟ್ ಮಾಡುವ ಕೆಲಸವನ್ನಷ್ಟೇ ಅವರು ಮಾಡುತ್ತಿದ್ದಾರೆ ಹೊರತು ಸ್ವಂತ ಪರಿಶ್ರಮದಿಂದ ಹೊಸ ಯೋಜನೆಗಳನ್ನು ತರಲು ಸಾಧ್ಯವಾಗಿಲ್ಲ ಎಂದು ವ್ಯಂಗ್ಯವಾಡಿದರು.

ಕ್ಷೇತ್ರದಲ್ಲಿಲ್ಲಾ ರಿಯಲ್ ಎಸ್ಟೇಟ್ ದಂಧೆ

ಶಾಸಕರಿಗೆ ಜನರ ಸಮಸ್ಯೆಗಳನ್ನು ಪರಿಹರಿಸುವುದಕ್ಕಿಂತ ಹೆಚ್ಚಾಗಿ ಭೂ ವ್ಯವಹಾರ ಮತ್ತು ರಿಯಲ್ ಎಸ್ಟೇಟ್ ದಂಧೆ ಮಾಡುವುದೇ ಮುಖ್ಯ ಕೆಲಸವಾಗಿದೆ. ಸಾಗರದಲ್ಲಿ ಸಣ್ಣಪುಟ್ಟ ಭೂ ವ್ಯವಹಾರ ಮಾಡುವವರೂ ಕೂಡ ಶಾಸಕರ ಅನುಮತಿ ಪಡೆಯದೆ ಒಂದು ಇಂಚು ಜಾಗ ಮಾರಾಟ ಮಾಡಲು ಅಥವಾ ಖರೀದಿಸಲು ಸಾಧ್ಯವಾಗದ ದುಸ್ಥಿತಿ ನಿರ್ಮಾಣವಾಗಿದೆ. ಸಾಗರದ ಇತಿಹಾಸದಲ್ಲೇ ಇಂತಹ ಕೆಟ್ಟ ವಾತಾವರಣ ಎಂದೂ ಇರಲಿಲ್ಲ ಎಂದು ಆಕ್ರೋಶ ಹೊರಹಾಕಿದರು.

ನೂರಾರು ಕೋಟಿ ರೂಪಾಯಿಗಳ ಅನುದಾನ ತಂದಿದ್ದೇವೆ ಎಂದು ಕಿವಿಗೆ ಹೂ ಇಡುವ ಮಾತುಗಳನ್ನಾಡುವ ಶಾಸಕರು, ಮೊದಲು ತಾವು ಹುಟ್ಟಿ ಬೆಳೆದ ಸ್ವಂತ ಊರಾದ ಬೇಳೂರಿನ ರಸ್ತೆಯನ್ನು ಸರಿಪಡಿಸಲಿ. ಸ್ವತಃ ತಾವೇ ಓಡಾಡುವ ತಮ್ಮೂರಿನ ರಸ್ತೆಯನ್ನೇ ಅಭಿವೃದ್ಧಿಪಡಿಸಲು ಯೋಗ್ಯತೆಯಿಲ್ಲದವರು ಇಡೀ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದ. ಮೊದಲು ಆ ರಸ್ತೆಯನ್ನು ಸರಿಪಡಿಸಿ ನಂತರ ಅಭಿವೃದ್ಧಿಯ ಬಗ್ಗೆ ಗಂಟಲು ಹರಿ್ದುಕೊಳ್ಳಲಿ ಎಂದು ಸವಾಲು ಹಾಕಿದರು.

ನಗರಸಭೆ ಆವರಣವೇ ಗಬ್ಬು: ಸಾಗರ ಸ್ವಚ್ಛತೆ ಎಲ್ಲಿಂದ ಸಾಧ್ಯ?

ಹಾಲಪ್ಪನವರ ಅವಧಿಯಲ್ಲಿ ಸಾಗರ ನಗರದ ಪ್ರವೇಶದ್ವಾರದಲ್ಲೇ ಸುಂದರವಾದ ಕೆರೆ ಹಾಗೂ ಮುಂಭಾಗದಲ್ಲಿ ಸ್ವಾಗತಿಸುವ ರಾಷ್ಟ್ರಧ್ವಜವನ್ನು ನಿರ್ಮಿಸುವ ದೂರದೃಷ್ಟಿಯ ಕಲ್ಪನೆಯಿತ್ತು. ಆದರೆ ಇಂದು ನಗರಸಭೆಯ ಕಚೇರಿಯ ಆವರಣವನ್ನೇ ಸ್ವಚ್ಛವಾಗಿಟ್ಟುಕೊಳ್ಳಲು ಸಾಧ್ಯವಾಗದ ಸಿಬ್ಬಂದಿ ಮತ್ತು ಅಧಿಕಾರಿಗಳು ಇಡೀ ಸಾಗರ ನಗರವನ್ನು ಹೇಗೆ ಸ್ವಚ್ಛವಾಗಿಡಲು ಸಾಧ್ಯ ಎಂದು ಪ್ರಶ್ನಿಸಿದರು. ಪ್ರಸ್ತುತ ಶಾಸಕರ ಇಂತಹ ದುರಾಡಳಿತ, ಕಮಿಷನ್ ದಂಧೆ ಹಾಗೂ ಭ್ರಷ್ಟಾಚಾರಕ್ಕೆ ಮುಂಬರುವ ದಿನಗಳಲ್ಲಿ ಕ್ಷೇತ್ರದ ಪ್ರಜ್ಞಾವಂತ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಸಿದರು.

ಸಂಪಾದಕೀಯ ನುಡಿ:
ಸ್ಥಳೀಯ ಸಂಸ್ಥೆಗಳ ಆಡಳಿತವು ಜನಸಾಮಾನ್ಯರ ಮೂಲಭೂತ ಅವಶ್ಯಕತೆಗಳನ್ನು ಈಡೇರಿಸಲು ಮತ್ತು ಪಾರದರ್ಶಕತೆಯನ್ನು ಕಾಪಾಡಲು ಇರಬೇಕೇ ಹೊರತು, ಮಧ್ಯವರ್ತಿಗಳು ಹಾಗೂ ಕಮಿಷನ್ ದಂಧೆಗೆ ಅಡಿಯಾಳಾಗಬಾರದು. ಸಾಗರ ನಗರಸಭೆಯ ಕುರಿತು ಕೇಳಿಬರುತ್ತಿರುವ ಆರೋಪಗಳು ಮತ್ತು ಸಾರ್ವಜನಿಕರ ಅಳಲು ಆಡಳಿತ ವ್ಯವಸ್ಥೆಯ ವೈಫಲ್ಯವನ್ನು ಎತ್ತಿ ತೋರಿಸುತ್ತವೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ರಾಜಕೀಯ ಹಿತಾಸಕ್ತಿಗಳನ್ನು ಬದಿಗಿಟ್ಟು, ಕ್ಷೇತ್ರದ ಅಭಿವೃದ್ಧಿ ಹಾಗೂ ಪಾರದರ್ಶಕ ಆಡಳಿತಕ್ಕೆ ಆದ್ಯತೆ ನೀಡಬೇಕಿದೆ. ಪ್ರಜಾಪ್ರಭುತ್ವದಲ್ಲಿ ಜನರೇ ಅಂತಿಮ ನಿರ್ಣಾಯಕರಾಗಿದ್ದು, ಇಂತಹ ದುರಾಡಳಿತಗಳಿಗೆ ಚುನಾವಣೆಯ ಮೂಲಕ ಸೂಕ್ತ ಸಂದೇಶ ರವಚಿಸುವುದು ಪ್ರಜ್ಞಾವಂತ ಸಮಾಜದ ಕರ್ತವ್ಯವಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Advertisement

ಜಾಹೀರಾತು ಹಾಗೂ ಸುದ್ದಿ ನೀಡಲು ಸಂಪರ್ಕಿಸಿ

📞 9110857339 ಗೆ ಕರೆ ಮಾಡಿ 💬 WhatsApp ಗ್ರೂಪ್ ಸೇರಿ 🎥 YouTube ಚಂದಾದಾರರಾಗಿ

ಕನ್ನಡ ಗ್ಲೋಬಲ್ ನ್ಯೂಸ್