ರೈತನಿಗೆ ಹಾವು ಕಡಿತ: ಶಿವಮೊಗ್ಗಕ್ಕೆ ಕರೆದೊಯ್ಯಲು 108 ಸಿಬ್ಬಂದಿ ನಿರಾಕರಿಸಿದ ಆರೋಪ! - Kannada global

Breaking

Add

ಸೋಮವಾರ, ಅಕ್ಟೋಬರ್ 5, 2026

ರೈತನಿಗೆ ಹಾವು ಕಡಿತ: ಶಿವಮೊಗ್ಗಕ್ಕೆ ಕರೆದೊಯ್ಯಲು 108 ಸಿಬ್ಬಂದಿ ನಿರಾಕರಿಸಿದ ಆರೋಪ!

ಹೊಸನಗರ: ತಾಲೂಕಿನ ನಗರ ಸಮೀಪದ ಕರಿಮನೆಯ ಕಾಡಿಗೆರೆ ಗ್ರಾಮದಲ್ಲಿ ಜಮೀನಿನಲ್ಲಿ ಹುಲ್ಲು ಕೊಯ್ಯುವ ವೇಳೆ ನಾಗರಹಾವು ಕಡಿದು ರೈತರೊಬ್ಬರು ಅಸ್ವಸ್ಥಗೊಂಡಿದ್ದು, ತುರ್ತು ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕರೆದೊಯ್ಯುವ ವಿಚಾರದಲ್ಲಿ 108 ಆಂಬುಲೆನ್ಸ್ ಸಿಬ್ಬಂದಿ ನಿರಾಕರಿಸಿದ ಗಂಭೀರ ಆರೋಪ ಶನಿವಾರ ಕೇಳಿಬಂದಿದೆ.

ಕಾಡಿಗೆರೆ ಗ್ರಾಮದ ಉಮೇಶ್ ಎಂಬ ರೈತರಿಗೆ ಜಮೀನಿನಲ್ಲಿ ಹುಲ್ಲು ಕೊಯ್ಯುತ್ತಿದ್ದ ವೇಳೆ ನಾಗರಹಾವು ಕಚ್ಚಿದೆ ಎನ್ನಲಾಗಿದ್ದು, ತಕ್ಷಣ ಅವರನ್ನು ನಗರ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹೊಸನಗರ ಆಸ್ಪತ್ರೆಗೆ ತರಲಾಗಿದೆ. ಉಮೇಶ್ ಅವರಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಹಿನ್ನೆಲೆಯಲ್ಲಿ ಹೊಸನಗರದಿಂದ ಶಿವಮೊಗ್ಗಕ್ಕೆ ರೆಫರ್ ಮಾಡಲಾಗಿದ್ದು, ಅವರನ್ನು ಶಿವಮೊಗ್ಗಕ್ಕೆ ಕರೆದೊಯ್ಯಲು 108 ಆಂಬುಲೆನ್ಸ್ ಸಿಬ್ಬಂದಿ ಆರಂಭದಲ್ಲಿ ನಿರಾಕರಿಸಿದ್ದಾರೆ ಎನ್ನಲಾಗಿದೆ.

ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ರೆಫರ್ ಮಾಡಲಾದ ರೋಗಿಯನ್ನು ಕರೆದೊಯ್ಯುವ ಕುರಿತು 108 ಸೇವೆಯಲ್ಲಿರುವ ನಿಯಮದ ಕಾರಣದಿಂದ ತಾವು ಕರೆದೊಯ್ಯಲು ಸಾಧ್ಯವಿಲ್ಲ ಎಂದು ಸಿಬ್ಬಂದಿ ತಿಳಿಸಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ನಗರದಿಂದಲೇ ರೈತನೊಂದಿಗೆ ಬಂದ ಶಾಸಕ ಹರತಾಳು ಹಾಲಪ್ಪ ಅವರ ಆಪ್ತ ಸಹಾಯಕ ರಾಜೇಶ್ ಹಿರಿಮನೆ ಹಾಗೂ ನಗರ ನಿತಿನ್ ಸೇರಿದಂತೆ ಆಸ್ಪತ್ರೆ ಆವರಣದಲ್ಲಿದ್ದ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಂತರ ಸಾರ್ವಜನಿಕರ ಒತ್ತಾಯದ ಹಿನ್ನೆಲೆಯಲ್ಲಿ ಉಮೇಶ್ ಅವರನ್ನು 108 ಆಂಬುಲೆನ್ಸ್ ಮೂಲಕ ಶಿವಮೊಗ್ಗದ ಜಿಲ್ಲಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ಯಲಾಯಿತು ಎಂದು ತಿಳಿದುಬಂದಿದೆ. ಹಾವು ಕಡಿತದಂತಹ ತುರ್ತು ಪರಿಸ್ಥಿತಿಯಲ್ಲಿ ರೋಗಿಯನ್ನು ಸೂಕ್ತ ಸಮಯದಲ್ಲಿ ಹೆಚ್ಚಿನ ಚಿಕಿತ್ಸೆಗೆ ರವಾನಿಸುವ ವ್ಯವಸ್ಥೆ ಕುರಿತು ಸಾರ್ವಜನಿಕರಲ್ಲಿ ಹಲವು ಪ್ರಶ್ನೆಗಳು ಮೂಡಿದ್ದು, 108 ಸೇವೆಯ ನಿಯಮಗಳ ಬಗ್ಗೆ ಸ್ಪಷ್ಟತೆ ನೀಡಬೇಕೆಂಬ ಆಗ್ರಹವೂ ಕೇಳಿಬಂದಿದೆ.

ಸಂಪಾದಕೀಯ ನುಡಿ:
ತುರ್ತು ಸಂದರ್ಭಗಳಲ್ಲಿ ಜೀವ ರಕ್ಷಣೆಯೇ ಎಲ್ಲಕ್ಕಿಂತ ಮುಖ್ಯವಾಗಬೇಕು. ನಿಯಮಗಳು ಜನಸಾಮಾನ್ಯರ ಅನುಕೂಲಕ್ಕಾಗಿ ಇರಬೇಕೇ ವಿನಃ, ಜೀವನ್ಮರಣದ ಹೋರಾಟದಲ್ಲಿರುವ ರೋಗಿಗಳಿಗೆ ಅಡ್ಡಿಯುಂಟುಮಾಡುವಂತಿರಬಾರದು. 108 ಆಂಬುಲೆನ್ಸ್ ಸೇವೆಯಂತಹ ತುರ್ತು ಸೇವೆಗಳು ಇಂತಹ ಸಂದರ್ಭಗಳಲ್ಲಿ ಇನ್ನಷ್ಟು ಸಂವೇದನಾಶೀಲವಾಗಿ ಹಾಗೂ ಮಾನವೀಯತೆಯಿಂದ ಸ್ಪಂದಿಸುವುದು ಅತ್ಯಗತ್ಯ. ಆಡಳಿತ ಮಂಡಳಿಯು ಈ ಬಗ್ಗೆ ಸ್ಪಷ್ಟ ಮಾರ್ಗಸೂಚಿಗಳನ್ನು ರೂಪಿಸಿ, ಇಂತಹ ತೊಂದರೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂಬುದು ನಮ್ಮ ಆಶಯ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Advertisement

ಜಾಹೀರಾತು ಹಾಗೂ ಸುದ್ದಿ ನೀಡಲು ಸಂಪರ್ಕಿಸಿ

📞 9110857339 ಗೆ ಕರೆ ಮಾಡಿ 💬 WhatsApp ಗ್ರೂಪ್ ಸೇರಿ 🎥 YouTube ಚಂದಾದಾರರಾಗಿ

ಕನ್ನಡ ಗ್ಲೋಬಲ್ ನ್ಯೂಸ್