ವಿಶೇಷ ಲೇಖನ:ಬೆಳಕಿನ ಹಾದಿಯಲ್ಲೊಂದು ನೆನಪಿನ ಪಯಣ: ಶಿಕ್ಷಕರ ದಿನಾಚರಣೆಯ ನೈಜ ಅರ್ಥ-ಲತಿಕಾ ಗಣಪತಿ - Kannada global

Breaking

Add

ಶನಿವಾರ, ಸೆಪ್ಟೆಂಬರ್ 5, 2026

ವಿಶೇಷ ಲೇಖನ:ಬೆಳಕಿನ ಹಾದಿಯಲ್ಲೊಂದು ನೆನಪಿನ ಪಯಣ: ಶಿಕ್ಷಕರ ದಿನಾಚರಣೆಯ ನೈಜ ಅರ್ಥ-ಲತಿಕಾ ಗಣಪತಿ

ಬದುಕನ್ನು ರೂಪಿಸುವಲ್ಲಿ ಗುರುವಿನ ಪಾತ್ರ ಮೊದಲಿನದ್ದು.

"ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ!

ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ!"

ಎಂತಹ ಸೊಗಸಾದ ಮಾತು! ಪ್ರತಿಯೊಬ್ಬರ ಬದುಕಿನಲ್ಲಿ ಗುರು ಸರ್ವದೇವತಾ ರೂಪದಲ್ಲಿ ಕಾಣಿಸಿಕೊಳ್ಳುತ್ತಾರೆ. "ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ" ಎನ್ನುವಂತೆ, ದೇವಮಾನವನಾಗಿ ಎಲ್ಲರ ಬಾಳಿನಲ್ಲೂ ವಿಜೃಂಭಿಸುವ ಗುರುವಿನ ಶ್ರೇಷ್ಠತೆಯನ್ನು ಪ್ರತಿಯೊಬ್ಬರೂ ಗೌರವಿಸಲೇಬೇಕು.

ನಮ್ಮ ಬಾಲ್ಯದ ದಿನಗಳಲ್ಲಿ ಶಿಕ್ಷಕರ ದಿನಾಚರಣೆಗೆ ತನ್ನದೇ ಆದ ವಿಶೇಷ ಮಹತ್ವವಿತ್ತು. ನಮ್ಮನ್ನು ತಿದ್ದಿ ತೀಡುವ ಶಕ್ತಿಗೆ 'ಗುರುಕಾಣಿಕೆ' ಅರ್ಪಿಸುವ ಅಪೂರ್ವ ಅವಕಾಶವನ್ನು ಅದು ಕಲ್ಪಿಸುತ್ತಿತ್ತು. ಆದರೆ ಈಗ...? ಈಗಲೂ ಗೌರವವೇನೋ ಇದೆ, ಆದರೆ ಅದು ಕೇವಲ ಸಾಮಾಜಿಕ ಜಾಲತಾಣಗಳ ಸಂದೇಶಗಳಲ್ಲಿ ರವಾನೆಯಾಗುತ್ತಿದೆ ಅಷ್ಟೇ! ನಮ್ಮದೇ ಬದುಕಿನ ಜಂಜಾಟಗಳಲ್ಲಿ ಮುಳುಗಿರುವ ನಮಗೆ ಈ ಆಚರಣೆಗಳ ಸಂಭ್ರಮವೇ ಸಾಕೆನಿಸಿಬಿಡುತ್ತದೆ.

ಶಿಕ್ಷಕರ ದಿನಾಚರಣೆಯ ಇತಿಹಾಸ:

ಇದರ ಇತಿಹಾಸವನ್ನು ಅವಲೋಕಿಸುವುದಾದರೆ, 1888 ಸೆಪ್ಟೆಂಬರ್ 5 ರಂದು ಜನಿಸಿದ ದೇಶದ ಮೊದಲ ಉಪರಾಷ್ಟ್ರಪತಿ, ಮಾಜಿ ರಾಷ್ಟ್ರಪತಿ, ಮಹಾನ್ ವಿದ್ವಾಂಸ, ತಂತ್ರಜ್ಞ ಹಾಗೂ 'ಭಾರತರತ್ನ' ಪುರಸ್ಕೃತರಾದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ನೆನಪಿಗಾಗಿ ಈ ದಿನವನ್ನು ಭಾರತದಲ್ಲಿ ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತಿದೆ.

1962ರಲ್ಲಿ ಅವರು ಭಾರತದ ಎರಡನೇ ರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡಾಗ, ಅವರ ವಿದ್ಯಾರ್ಥಿಗಳು ಸೆಪ್ಟೆಂಬರ್ 5 ಅನ್ನು ವಿಶೇಷ ದಿನವಾಗಿ ಆಚರಿಸಲು ಅನುಮತಿ ಕೇಳಿದರು. ಆ ಸಮಯದಲ್ಲಿ ರಾಧಾಕೃಷ್ಣನ್ ಅವರು, "ನನ್ನ ಹುಟ್ಟುಹಬ್ಬವನ್ನು ಪ್ರತ್ಯೇಕವಾಗಿ ಆಚರಿಸುವ ಬದಲು, ಸಮಾಜಕ್ಕೆ ಶಿಕ್ಷಕರು ನೀಡುವ ಅಮೂಲ್ಯ ಕೊಡುಗೆಯನ್ನು ಗುರುತಿಸಲು ಈ ದಿನವನ್ನು 'ಶಿಕ್ಷಕರ ದಿನ'ವನ್ನಾಗಿ ಆಚರಿಸಿ" ಎಂದು ಸೂಚಿಸಿದರು. ಇದೇ ಈ ದಿನದ ಹಿನ್ನೆಲೆ.

ನೆನಪಿನ ಬಂಡಾರದಿಂದ ಕೆಲವು ಅನುಭವಗಳು:

ನನಗೆ ಇಂದಿಗೂ ನೆನಪಿದೆ, ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲಾ ದಿನಗಳಲ್ಲಿ ಈ ದಿನ ನಮಗೆಲ್ಲ ರಜಾ ಇರುತ್ತಿತ್ತು. ಮಜವೋ ಮಜಾ! ಆ ವಯಸ್ಸಿನಲ್ಲಿ ಈ ದಿನದ ನೈಜ ಮಹತ್ವ ನಮಗೆ ಅರಿವಿಗೆ ಬರುತ್ತಿರಲಿಲ್ಲ. ಆದರೆ ನಮ್ಮ ಹೈಸ್ಕೂಲ್ ಜೀವನ ಇದೆಯಲ್ಲ, ಅದು ಬದುಕಿಗೆ ಬೇಕಾದಷ್ಟು ಅನುಭವ, ಆಸರೆ ಮತ್ತು ಪ್ರೀತಿಯನ್ನು ನೀಡಿದ ಅದ್ಭುತ ಸಮಯ!

ಅಲ್ಲಿ ಪ್ರತಿ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನವನ್ನು ಬಹು ಪ್ರೀತಿಯಿಂದ ಆಚರಿಸುತ್ತಿದ್ದೆವು. ತಿಂಗಳುಗಳಿಂದಲೇ ತಯಾರಿ ನಡೆಸಿ, ಹಣ ಒಟ್ಟುಗೂಡಿಸಿ, ಶಿಕ್ಷಕರಿಗೆ 'ಸರ್ಪ್ರೈಸ್' ನೀಡುವುದು, ಆಟಗಳನ್ನು ಆಡಿಸುವುದು, ಕೇಕ್ ಕಟ್ ಮಾಡುವುದು... ಆ ಸಂಭ್ರಮವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ.

ನನ್ನ 9ನೇ ತರಗತಿಯಲ್ಲಿ ಶಿಕ್ಷಕರ ದಿನಾಚರಣೆಯ ಸಂಭ್ರಮಕ್ಕೆ ನಾನು ಬರೆದ ನಿರೂಪಣೆ ಇಂದಿಗೂ ನೆನಪಿದೆ:

  • ಗುರು ಎಂದರೆ ಕೇವಲ ಭಕ್ತಿಯಲ್ಲ, ಕತ್ತಲೆಯಿಂದ ಬೆಳಕಿನತ್ತ ಕರೆದೊಯ್ಯುವ ಅದ್ಭುತ ಶಕ್ತಿ.

  • ಒಬ್ಬ ಕುಂಬಾರ ಯಾವ ರೀತಿ ಮಣ್ಣನ್ನು ಹದ ಮಾಡಿ ಸುಂದರ ಮಡಿಕೆಯನ್ನು ತಯಾರಿಸುತ್ತಾನೋ, ಅದೇ ರೀತಿ ಶಿಕ್ಷಕರು ಮಕ್ಕಳ ಪ್ರತಿ ಅಕ್ಷರವನ್ನು ತಿದ್ದಿ ತೀಡಿ ಉತ್ತಮ ವ್ಯಕ್ತಿಯನ್ನಾಗಿ ರೂಪಿಸುತ್ತಾರೆ.

  • ಒಬ್ಬ ಶಿಲ್ಪಿ ಕಲ್ಲನ್ನು ಕೆತ್ತಿ ಸುಂದರ ಶಿಲೆಯನ್ನಾಗಿ ಮಾಡುವಂತೆ, ಶಿಕ್ಷಕರು ಅಜ್ಞಾನಿಯಾದ ವಿದ್ಯಾರ್ಥಿಗೆ ಜ್ಞಾನವನ್ನು ಧಾರೆ ಎರೆದು ಉತ್ತಮ ಶಿಲ್ಪವನ್ನಾಗಿಸುತ್ತಾರೆ.

  • ತಮ್ಮ ಸ್ವಂತ ಮಕ್ಕಳಿಗಿಂತಲೂ ಹೆಚ್ಚಿನ ಸಮಯವನ್ನು ನಮಗಾಗಿ ಮೀಸಲಿಟ್ಟು, ಬದುಕಿನ ಪ್ರತಿ ಹಂತದಲ್ಲೂ ಜ್ಞಾನದ ಬೀಜಗಳನ್ನು ಬಿತ್ತುತ್ತಲೇ ಇರುತ್ತಾರೆ.

ಬದುಕಿನಲ್ಲಿ 'ಗುರಿ' ಮತ್ತು 'ಗುರು' ಇಲ್ಲದವನು ಖಂಡಿತವಾಗಿಯೂ ಹಾದಿ ತಪ್ಪುತ್ತಾನೆ.

ಅಂದು - ಇಂದು: ಬದಲಾದ ಕಾಲಘಟ್ಟ:

ಇದೆಲ್ಲವೂ 10 ವರ್ಷಗಳ ಹಿಂದಿನ ಕಥೆ. ಆದರೆ "ಈಗಿನ ಪರಿಸ್ಥಿತಿ ಏನು?" ಎಂದು ಯೋಚಿಸಿದಾಗ ಭಯವಾಗುತ್ತದೆ. ಇತ್ತೀಚಿನ ಸುದ್ದಿಗಳು ಗುರು-ಶಿಷ್ಯರ ಪವಿತ್ರ ಬಾಂಧವ್ಯಕ್ಕೆ ಬೇರೆಯದೇ ಅರ್ಥ ನೀಡುತ್ತಿವೆ.

  • ಶಿಕ್ಷಕರಿಗಿಂತ ತಾನೇ ಹೆಚ್ಚು ತಿಳಿದಿದ್ದೇನೆ ಎಂದು ಅಹಂ ತೋರುವ ಅಹಂಕಾರಿಗಳು,

  • ಶಿಕ್ಷಕರು ಬೈದರೆಂದು ಸಮಾಜದ ಎದುರೇ ಕೈ ಎತ್ತುವ ಅಜ್ಞಾನಿಗಳು...

ಇವನ್ನೆಲ್ಲ ಕಂಡಾಗ ನಮ್ಮ ಬದುಕು ಯಾವ ಮೌಲ್ಯಗಳತ್ತ ಸಾಗುತ್ತಿದೆ ಎಂಬ ಅನುಮಾನ ಕಾಡುತ್ತದೆ.

ಮನೆಯೇ ಮೊದಲ ಪಾಠಶಾಲೆ:

"ಮನೆಯೇ ಮೊದಲ ಪಾಠಶಾಲೆ,

ಜನನಿ ತಾನೆ ಮೊದಲ ಗುರುವು!

ಜನನಿಯಿಂದ ಪಾಠ ಕಲಿತ ಜನರು ಧನ್ಯರು..."

ಎಷ್ಟು ಚಂದದ ಮಾತು! ನಮ್ಮ ಬಾಲ್ಯದಲ್ಲಿ ಈ ಮಾತು ಪ್ರತಿದಿನ ಕಿವಿ ತಾಕುತ್ತಿತ್ತು. ನಮಗೆ ಅಮ್ಮನೇ ಮೊದಲ ಗುರುವಾಗಿದ್ದಳು, ಬದುಕಿಗೆ ಬೇಕಾದ ನೈತಿಕ ಮೌಲ್ಯಗಳನ್ನು ಧಾರೆ ಎರೆಯುತ್ತಿದ್ದಳು. ಆದರೆ ಈಗ ಸಾಮಾಜಿಕ ಜಾಲತಾಣಗಳೇ (Social Media) ಗುರುವಾಗಿರುವುದರಿಂದ ಬದುಕು ಕಷ್ಟವೆನಿಸುತ್ತಿದೆ. ಸೋಶಿಯಲ್ ಮೀಡಿಯಾದ ಸಕಾರಾತ್ಮಕ ಪ್ರೇರಣೆ ಒಳ್ಳೆಯದೇ, ಆದರೆ ಅದರ ನಕಾರಾತ್ಮಕತೆ ನಮ್ಮ ಎದೆಯಾಳದಲ್ಲಿ ಕೆಟ್ಟದ್ದನ್ನೇ ಬಿತ್ತುತ್ತದೆ.

ಗುರುವನ್ನು ಗೌರವಿಸದ ಯಾವ ಜ್ಞಾನಿಯೂ ಮೌಲ್ಯಯುತ ಮನುಷ್ಯನಾಗಲಾರ; ಗುರುವನ್ನು ಸಂಭ್ರಮಿಸಿದ ಯಾವ ಅಜ್ಞಾನಿಯೂ ಕೆಟ್ಟ ನಿರ್ಧಾರ ತಗೆದುಕೊಳ್ಳಲಾರ. ಇದೇ ಸತ್ಯವಾದ ಮಾತು!

ಅದಕ್ಕಾಗಿ ಗುರುವನ್ನು ಗೌರವಿಸೋಣ...

ಸಮರ್ಪಣೆ:

ನನ್ನ ಬದುಕಿನ ಪ್ರತಿ ಹಂತದಲ್ಲೂ ಒಂದಲ್ಲ ಒಂದು ರೂಪದಲ್ಲಿ ನನ್ನನ್ನು ತಿದ್ದಿ-ತೀಡಿ, ನನ್ನಲ್ಲಿ ಅಕ್ಷರಗಳ ಬೀಜ ಬಿತ್ತಿ, ಬದುಕಿನ ಪ್ರಾಮುಖ್ಯತೆಯನ್ನು ತಿಳಿಸಿ, ಭಾವನೆಗಳನ್ನು ಬರಹವಾಗಿಸುವ ಕಲೆಯನ್ನು ಕಲಿಸಿದ ಪ್ರತಿಯೊಬ್ಬ ಗುರುವಿಗೂ ಈ ಲೇಖನ ಸಮರ್ಪಣೆ...

– ಲತಿಕಾ ಗಣಪತಿ 
ಎಸ್‌ಡಿಎಂ ಸ್ನಾತಕೋತ್ತರ ಕೇಂದ್ರ
ಉಜಿರೆ, ಧರ್ಮಸ್ಥಳ 

ಸಂಪಾದಕೀಯ ನುಡಿ:

ಗುರು ಗೌರವ ಮತ್ತು ಕುಸಿಯುತ್ತಿರುವ ಮೌಲ್ಯಗಳು

ಶಿಕ್ಷಣ ಎಂದರೆ ಕೇವಲ ಅಕ್ಷರ ಕಲಿಯುವುದಷ್ಟೇ ಅಲ್ಲ, ಅದು ಮನುಷ್ಯನನ್ನು ಸಂಸ್ಕಾರವಂತನನ್ನಾಗಿ ರೂಪಿಸುವ ಪವಿತ್ರ ಪ್ರಕ್ರಿಯೆ. ಈ ದಾರಿಯಲ್ಲಿ ವಿದ್ಯಾರ್ಥಿಯ ಕೈಹಿಡಿದು ಮುನ್ನಡೆಸುವ ಗುರುವಿನ ಪಾತ್ರ ಅತ್ಯಂತ ಶ್ರೇಷ್ಠವಾದದ್ದು. "ಗುರು ಬ್ರಹ್ಮ ಗುರು ವಿಷ್ಣು" ಎಂಬ ಉಕ್ತಿ ಬರೀ ಶ್ಲೋಕವಲ್ಲ, ಅದು ಭಾರತೀಯ ಸಂಸ್ಕೃತಿ ಶಿಕ್ಷಕರಿಗೆ ನೀಡಿದ ಅತ್ಯುನ್ನತ ಗೌರವಕ್ಕೆ ಸಾಕ್ಷಿ. ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ನೆನಪಿನಲ್ಲಿ ಆಚರಿಸಲಾಗುವ ಶಿಕ್ಷಕರ ದಿನಾಚರಣೆಯು, ತಮ್ಮ ಸ್ವಂತ ಹಿತಾಸಕ್ತಿಯನ್ನು ಬದಿಗೊತ್ತಿ ಸಮಾಜಕ್ಕೆ ಜ್ಞಾನದ ಬೆಳಕು ನೀಡುವ ಶಿಕ್ಷಕರ ಅಮೂಲ್ಯ ಕೊಡುಗೆಯನ್ನು ಸ್ಮರಿಸುವ ಮತ್ತು ಅವರಿಗೆ ಕೃತಜ್ಞತೆ ಸಲ್ಲಿಸುವ ಪವಿತ್ರ ಸಂದರ್ಭವಾಗಿದೆ.

ಆದರೆ, ಕಾಲ ಬದಲಾದಂತೆ ಗುರು-ಶಿಷ್ಯರ ನಡುವಿನ ಪವಿತ್ರ ಬಾಂಧವ್ಯದ ಸ್ವರೂಪವೂ ಬದಲಾಗುತ್ತಿರುವುದು ಕಳವಳಕಾರಿ ಸಂಗತಿ. ಹಿಂದೆ ಪ್ರೀತಿ, ಭಕ್ತಿ ಮತ್ತು ಶ್ರದ್ಧೆಯಿಂದ ಕೂಡಿದ್ದ ಈ ಸಂಬಂಧ, ಇಂದು ಕೇವಲ ಔಪಚಾರಿಕತಗೆ ಅಥವಾ ಸಾಮಾಜಿಕ ಜಾಲತಾಣಗಳ ಶುಭಾಶಯ ಸಂದೇಶಗಳಿಗೆ ಸೀಮಿತವಾಗುತ್ತಿದೆ. ಪ್ರಸ್ತುತ ಡಿಜಿಟಲ್ ಯುಗದಲ್ಲಿ ವಿದ್ಯಾರ್ಥಿಗಳು ಗೂಗಲ್ ಮತ್ತು ಸೋಶಿಯಲ್ ಮೀಡಿಯಾಗಳನ್ನೇ ತಮ್ಮ ಶ್ರೇಷ್ಠ ಗುರುವೆಂದು ಭಾವಿಸುವ ಭ್ರಮೆಗೆ ಒಳಗಾಗುತ್ತಿದ್ದಾರೆ. ಜಾಲತಾಣಗಳು ಮಾಹಿತಿ ನೀಡಬಲ್ಲವೇ ಹೊರತು, ಬದುಕಿಗೆ ಅಗತ್ಯವಾದ ನೈತಿಕ ಮೌಲ್ಯಗಳು, ವಿವೇಚನೆ ಮತ್ತು ಅನುಕಂಪವನ್ನು ಕಲಿಸಲು ಜೀವಂತ ಗುರುವಿನ ಸಾನ್ನಿಧ್ಯವೇ ಬೇಕು ಎಂಬುದನ್ನು ಇಂದಿನ ತಲೆಮಾರು ಮರೆಯುತ್ತಿದೆ.

ಇದಕ್ಕಿಂತಲೂ ಆತಂಕಕಾರಿ ಸಂಗತಿಯೆಂದರೆ, ಇತ್ತೀಚೆಗೆ ಶಾಲಾ-ಕಾಲೇಜುಗಳಲ್ಲಿ ಶಿಕ್ಷಕರ ಮೇಲೆಯೇ ವಿದ್ಯಾರ್ಥಿಗಳು ಅಹಂಕಾರ ಪ್ರದರ್ಶಿಸುವುದು, ಹಲ್ಲೆ ಮಾಡುವುದು ಹಾಗೂ ಗೌರವವಿಲ್ಲದೆ ನಡೆದುಕೊಳ್ಳುವ ಘಟನೆಗಳು ಹೆಚ್ಚುತ್ತಿರುವುದು. 'ಮನೆಯೇ ಮೊದಲ ಪಾಠಶಾಲೆ' ಎನ್ನುವಂತೆ, ಪೋಷಕರು ಬಾಲ್ಯದಿಂದಲೇ ಮಕ್ಕಳಿಗೆ ಗುರು ಹಿರಿಯರನ್ನು ಗೌರವಿಸುವ ಸಂಸ್ಕಾರವನ್ನು ಕಲ್ಪಿಸಿಕೊಡಬೇಕಿದೆ. ಶಿಕ್ಷಕರು ಮತ್ತು ಪೋಷಕರು ಕೈಜೋಡಿಸಿ ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬಿತ್ತಿದಾಗ ಮಾತ್ರ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ. ಗುರುವನ್ನು ಗೌರವಿಸುವ ಸಂಸ್ಕೃತಿ ಮರಳಿ ಬಂದಾಗ ಮಾತ್ರ ದೇಶದ ಭವಿಷ್ಯಕ್ಕೆ ನಿಜವಾದ ಅರ್ಥ ಸಿಗಲು ಸಾಧ್ಯ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Advertisement

ಜಾಹೀರಾತು ಹಾಗೂ ಸುದ್ದಿ ನೀಡಲು ಸಂಪರ್ಕಿಸಿ

📞 9110857339 ಗೆ ಕರೆ ಮಾಡಿ 💬 WhatsApp ಗ್ರೂಪ್ ಸೇರಿ 🎥 YouTube ಚಂದಾದಾರರಾಗಿ

ಕನ್ನಡ ಗ್ಲೋಬಲ್ ನ್ಯೂಸ್