ಸೋಮವಾರ, ಸೆಪ್ಟೆಂಬರ್ 14, 2026
ಪ್ರಚಾರದ ಆಸೆಗೆ ಬಿದ್ದು ಸಂಕಷ್ಟದಲ್ಲಿ ಸಿಲುಕಿದ ಸಂರಕ್ಷಕ: ಕಾಳಿಂಗ ಸರ್ಪ ವಿವಾದದ ಅಪ್ಡೇಟ್!
ಶಿವಮೊಗ್ಗ:ಕಾಳಿಂಗ ಸರ್ಪಗಳನ್ನು ವಾಣಿಜ್ಯ ಉದ್ದೇಶಗಳಿಗಾಗಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯತೆ ಪಡೆಯಲು ದುರುಪಯೋಗಪಡಿಸಿಕೊಂಡ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಮಹತ್ವದ ಕಾನೂನು ಕ್ರಮ ಕೈಗೊಂಡಿದೆ. ಸುಮಾರು ಒಂದು ವರ್ಷದ ಕೂಲಂಕುಷ ತನಿಖೆಯ ಬಳಿಕ, 'ಕಲಿಂಗ ಸೆಂಟರ್ ಫಾರ್ ರೇನ್ಫಾರೆಸ್ಟ್ ಎಕಾಲಜಿ' (KCRE) ಸಂಸ್ಥೆಯ ಪಿ. ಗೌರಿಶಂಕರ್ (50) ವಿರುದ್ಧ ಅರಣ್ಯ ಇಲಾಖೆ ಅಧಿಕಾರಿಗಳು ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದಾರೆ.
ನ್ಯಾಯಾಲಯದಲ್ಲಿ ಚಾರ್ಜ್ಶೀಟ್ ದಾಖಲು:
ತೀರ್ಥಹಳ್ಳಿಯ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್ಸಿ ನ್ಯಾಯಾಲಯಕ್ಕೆ ಆಗುಂಬೆ ವಲಯ ಅರಣ್ಯಾಧಿಕಾರಿಗಳು ಈ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದು, ವನ್ಯಜೀವಿ ಸಂರಕ್ಷಣಾ ಕಾಯ್ದೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತನಿಖೆಯ ಭಾಗವಾಗಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹೊಸೂರು, ಗುಡ್ಡೆಕೇರಿ ಪೋಸ್ಟ್ನಲ್ಲಿರುವ KCRE ಕೇಂದ್ರದ ಕಾಂಪೌಂಡ್ನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಶೋಧ ನಡೆಸಿ, ಹಾವುಗಳನ್ನು ಹಿಡಿಯಲು ಬಳಸುವ ವಿವಿಧ ಉಪಕರಣಗಳನ್ನು ವಶಪಡಿಸಿಕೊಂಡು ಸ್ಥಳ ಮಹಜರು ಕೂಡ ನಡೆಸಿದ್ದಾರೆ.
ವನ್ಯಜೀವಿ ಕಾಯ್ದೆ ಉಲ್ಲಂಘನೆ ಗಂಭೀರ ಆರೋಪ:
ಅನುಮತಿಯಿಲ್ಲದೆ ವನ್ಯಜೀವಿಗಳನ್ನು ಸೆರೆಹಿಡಿದು, ಆ ಸಂದರ್ಭದ ಫೋಟೋ ಹಾಗೂ ವೀಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿ ಪ್ರಚಾರ ಪಡೆಯಲಾಗಿದೆ ಎಂದು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ. ಇದು ವನ್ಯಜೀವಿ ಸಂರಕ್ಷಣೆ ಕಾಯ್ದೆಯ ಸೆಕ್ಷನ್ 2(1)(16), 9, 50, 51, 55 ಹಾಗೂ 57ರ ಸ್ಪಷ್ಟ ಉಲ್ಲಂಘನೆಯಾಗಿದ್ದು, ಇದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾಮಾಜಿಕ ಕಾರ್ಯಕರ್ತ ನಾಗರಾಜ್ ಕೋವೆ ಅವರು ನೀಡಿದ ದೂರು ಹಾಗೂ ಸಾಕ್ಷ್ಯಗಳೇ ಈ ತನಿಖೆಗೆ ಪ್ರಮುಖ ತಿರುವು ನೀಡಿದೆ.
ಆರೋಪಿಯ ಸ್ಪಷ್ಟನೆ ಏನು?
ಈ ಕುರಿತು ಪ್ರತಿಕ್ರಿಯಿಸಿರುವ ಗೌರಿಶಂಕರ್, ತಮ್ಮ ಕೃಷಿ ಜಮೀನು ಅಡವಿ ಇರುವ ಪ್ರದೇಶಕ್ಕೆ ಹೊಂದಿಕೊಂಡಿದ್ದು, ಕುಡಿಯುವ ನೀರು ಹಾಗೂ ಆಹಾರಕ್ಕಾಗಿ ಕಾಡುಪ್ರಾಣಿಗಳು ಜಮೀನಿಗೆ ಬರುವುದು ಸಹಜ ಎಂದಿದ್ದಾರೆ. ಅ ದಿನ ಕಾಳಿಂಗ ಸರ್ಪವೊಂದು ಜಮೀನಿಗೆ ಬಂದಿದ್ದರಿಂದ, ಕೆಲಸಗಾರರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ತಾವು ಹಾವನ್ನು ಸುರಕ್ಷಿತವಾಗಿ ಹಿಡಿದು ಮತ್ತೆ ಅಡವಿಗೆ ಬಿಟ್ಟಿದ್ದಾಗಿ ಹಾಗೂ ಕೆಲಸಗಾರರು ಇದನ್ನು ಫೋಟೋ ತೆಗೆದು ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಪರಿಸರ ಸೂಕ್ಷ್ಮ ವಲಯ (ESZ) ಉಲ್ಲಂಘನೆ ಗಂಭೀರ ಆರೋಪ:
ಈ ಪ್ರಕರಣದ ಜೊತೆಗೆ ಇಎಸ್ಝಡ್ (ESZ) ನಿಯಮಗಳ ಉಲ್ಲಂಘನೆ ಕುರಿತಂತೆಯೂ ತನಿಖೆ ನಡೆಸಬೇಕು ಎಂದು ದೂರುದಾರ ನಾಗರಾಜ್ ಕೋವೆ ಆಗ್ರಹಿಸಿದ್ದಾರೆ. 2025ರ ಸೆಪ್ಟೆಂಬರ್ನಲ್ಲಿ ಶಿವಮೊಗ್ಗ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ನೀಡಿದ್ದ ವರದಿಯಲ್ಲೂ KCRE ಸಂಸ್ಥೆಯು ಇಎಸ್ಝಡ್ ನಿಯಮಗಳನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿ ಉಲ್ಲೇಖವಾಗಿದೆ ಎಂದು ಅವರು ಆರೋಪಿಸಿದ್ದಾರೆ. ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ (DCF) ಹಾಗೂ ಕುದುರೆಮುಖ ರಾಷ್ಟ್ರೀಯ ಉದ್ಯಾನದ ಉಸ್ತುವಾರಿ DCF ಆಗಿರುವ ರುಧೇಶ್ ಪಿ. ಅವರು ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
Tags
# ಜಿಲ್ಲಾ ಸುದ್ದಿ
Share This
About Kannada Global
ಜಿಲ್ಲಾ ಸುದ್ದಿ
Tags
ಜಿಲ್ಲಾ ಸುದ್ದಿ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
Advertisement
ಜಾಹೀರಾತು ಹಾಗೂ ಸುದ್ದಿ ನೀಡಲು ಸಂಪರ್ಕಿಸಿ
📞 9110857339 ಗೆ ಕರೆ ಮಾಡಿ 💬 WhatsApp ಗ್ರೂಪ್ ಸೇರಿ 🎥 YouTube ಚಂದಾದಾರರಾಗಿಕನ್ನಡ ಗ್ಲೋಬಲ್ ನ್ಯೂಸ್
Author Details
"ಚರಣ್ - ಸಂಸ್ಥಾಪಕರು, ಕನ್ನಡ ಗ್ಲೋಬಲ್. ನಿಖರ ಸುದ್ದಿ, ನೇರ ಮಾತು ಹಾಗೂ ಸಮಾಜದ ಹಿತದೃಷ್ಟಿಯಿಂದ ಸುದ್ದಿಗಳ ವಿಶ್ಲೇಷಣೆ. ಸ್ಥಳೀಯ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಡಿಜಿಟಲ್ ಮಾಧ್ಯಮದ ಪಥದಲ್ಲಿ ನನ್ನ ಪಯಣ."
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ