ಭಾನುವಾರದ ವಿಶೇಷ:ಕಪ್ಪು ಕಪ್ಪುಅನ್ನೋದಲ್ಲ, ನಮ್ಮ ಮನಸ್ಸೇ ತಪ್ಪು. ಯುವ ಜನತೆಯ ಮನಸ್ಸಿಗೆ ಅಂಟಿದೆ ಸೌಂದರ್ಯ ಎಂಬ ಗೀಳುರೋಗ - ವಿಶ್ವನಾಥ್ ಜಿ ಹೆಚ್ - Kannada global

Breaking

Saturday, July 4, 2026

ಭಾನುವಾರದ ವಿಶೇಷ:ಕಪ್ಪು ಕಪ್ಪುಅನ್ನೋದಲ್ಲ, ನಮ್ಮ ಮನಸ್ಸೇ ತಪ್ಪು. ಯುವ ಜನತೆಯ ಮನಸ್ಸಿಗೆ ಅಂಟಿದೆ ಸೌಂದರ್ಯ ಎಂಬ ಗೀಳುರೋಗ - ವಿಶ್ವನಾಥ್ ಜಿ ಹೆಚ್

ಎರಡು ವರ್ಷದ ಹಿಂದಿನ ಸಂಗತಿ. ಹಾಸ್ಟೆಲ್ ನಲ್ಲಿದ್ದ ನನ್ನ ಗೆಳೆಯರೊಂದಿಗೆ ಕೇಟರಿಂಗ್ ಕೆಲಸಕ್ಕೆ ಹೋಗುತ್ತಿದ್ದ ಸಂದರ್ಭ. ಹಾಸ್ಟೆಲ್ ನಲ್ಲಿರುವ ಕೆಲವು ವಿದ್ಯಾರ್ಥಿಗಳಿಗೆ ಕೇಟರಿಂಗ್ ಕೆಲಸವೇ ಒಂದು ಆಧಾರ ಸ್ಥಂಭ. ತಮ್ಮ ವಿದ್ಯಾಭ್ಯಾಸದ ಚಿಕ್ಕ ಪುಟ್ಟ ಖರ್ಚಿಗೆ ಪೋಷಕರ ಬಳಿ ಎದೆ ಎತ್ತರಕ್ಕೆ ಬೆಳೆದ ಮಕ್ಕಳು ಹಣ ಕೇಳಲು ಮುಜುಗರ, ಕೇಳಿದರು ಮನೆಯವರ ಬಳಿಯಾದರು ಇರಬೇಕಲ್ಲ. ದುಡಿದು ಓದುವ ವಿದ್ಯಾರ್ಥಿಗಳಿಗೆ ಕ್ಯಾಟರಿಂಗ್ ಕೆಲಸವೇ ಒಂದು ಅದ್ಭುತ ಅವಕಾಶ.

ಒಮ್ಮೆ ನನ್ನ ಗೆಳೆಯರು ಕ್ಯಾಟರಿಂಗ್ ಕೆಲಸಕ್ಕೆ ಹೋಗಿದ್ದ ಸಂದರ್ಭ, ಹಾಸ್ಟೆಲ್ ನಲ್ಲಿ ನನ್ನ ಜೊತೆ ಇದ್ದ ಒಬ್ಬ ಗೆಳೆಯನನ್ನು ಕೇಳಿದೆ, "ಮಗ ನನಗೂ ಹೇಳಿದ್ದರೇ ನಾನು ಹೋಗುತ್ತಿದ್ದೆ ಕಣೋ ಕೇಟರಿಂಗ್ ಕೆಲಸಕ್ಕೆ" ಎಂದು, ಇಲ್ಲ "ವಿಶ್ವ ಅಲ್ಲಿ ಅಡಿಗೆ ಬಡಿಸಲು ಬಿಳಿ ಬಣ್ಣದವರೆ ಬೇಕಂತೆ ಎಂದಿದ್ದು ಉಂಟು" ಅಬ್ಬಾ ನನಗೆ ಆಶ್ಚರ್ಯ, 20ನೇ ಶತಮಾನದಲ್ಲೂ ಬಣ್ಣದ ರೋಗ ಮನುಷ್ಯನನ್ನು ಬಿಟ್ಟಿಲ್ಲವೇ. ಆದರೆ ಎಲ್ಲಾ ಕೇಟರಿಂಗ್ ಸಂಸ್ಥೆಗಳು ಈಗಲ್ಲ. ಕೆಲವು ಕೇಟರಿಂಗ್ ಸಂಸ್ಥೆಗಳು ವಿದ್ಯಾರ್ಥಿಗಳ ಬಣ್ಣಕ್ಕೆ ಪ್ರಾಮುಖ್ಯತೆ ಕೊಡದೇ ಆತ್ಮೀಯತೆಯಿಂದ ನೆಡೆಸಿಕೊಂಡಿದ್ದನ್ನು, ವಿದ್ಯಾರ್ಥಿಗಳ ಕಷ್ಟಕ್ಕೆ ಆರ್ಥಿಕವಾಗಿ ನೆರವಾಗಿದ್ದನ್ನು ಕಂಡಿದ್ದೇನೆ. ಆದರೆ ಕೆಲವು ಸಂಸ್ಥೆಗಳು ಮಾತ್ರ ಲಾಭ ಮಾಡುವುದೇ ಪರಮ उद्देश्यವೆಂದು ನಂಬಿ ಬಣ್ಣವನ್ನು ಬಯಸೋದು ನೋಡಿ ಆಶ್ಚರ್ಯ ಎನಿಸಿದ್ದು ಸುಳ್ಳಲ್ಲ. ಹಾಗಂತ ನಾನಿಲ್ಲಿ ಕೇಟರಿಂಗ್ ಸಂಸ್ಥೆಯನ್ನು ಖಂಡಿತ ದೋಷಿಸುತ್ತಿಲ್ಲ. ನನಗೂ ಗೌರವವಿದೆ, ಪ್ರೀತಿ ಇದೆ ಊಟ ಬಡಿಸುವ ಕೆಲಸದ ಮೇಲೆ. ಆದರೆ ಮನುಷ್ಯನನ್ನು ಬಣ್ಣದ ಆಧಾರದ ಮೇಲೆ ಅಳೆಯುವ ಸಂಧರ್ಭ ಹೇಳುತ್ತಿರುವುದು ಅಷ್ಟೇ.

ಇತ್ತೀಚಿನ ದಿನಗಳಲ್ಲಿ ಸೌಂದರ್ಯದ ಗೀಳುರೋಗದ ಜಾಲಕ್ಕೆ ಸಿಲುಕಿರುವುದು ನಮ್ಮ ಯುವಜನತೆಯೇ. ಜಾಹಿರಾತುಗಳ ಅಬ್ಬರದ ಪ್ರಚಾರಕ್ಕೆ ಮನಸೋತ ಯುವಜನತೆ ತನ್ನತನವನ್ನು ಕಳೆದುಕೊಂಡೆದೆ, ಸ್ವಾಭಿಮಾನವನ್ನು ಬದಿಗೊತ್ತಿದೆ. ಬಿಳಿಯಾಗಿರುವುದೇ ಬದುಕಿನ ಆದ್ಯ ಕರ್ತವ್ಯ ಎಂದು ಬಣ್ಣಕ್ಕೆ ದಾಸ್ಯವಾಗಿದೆ. ಸೌಂದರ್ಯದ ಹಿಂದೆ ಬಿದ್ದು ಮೌಡ್ಯತೆಗೆ ಒಳಗಾಗಿದೆ. ಇನು ಕೆಲವು ರಂತೂ ತಾವು ಕಪ್ಪಾಗಿರುವುದೇ ಅಪರಾಧ ಎಂಬ ಭಾವನೆ ಹೊಂದಿದಂತಿದೆ, ಬಿಳಿಯಾಗಲು ಸ್ಪರ್ಧೆಗೆ ಇಳಿದಂತಿದೆ, ಕಪ್ಪು ಬಣ್ಣವೇ ಕನಿಷ್ಠ, ಬಿಳಿಯ ಶ್ರೇಷ್ಠ ಎಂದು ತಿಳಿದಂತಿದೆ. ಹಾಗಂತ ನಾನು ಬಿಳಿ ಬಣ್ಣದ ವೈರಿ ಖಂಡಿತ ಅಲ್ಲ. ಬದುಕು ಕಟ್ಟಲು ಬೇಕಾಗಿರುವುದು ಭರವಸೆಯೇ ಹೊರತು ಬಣ್ಣವಲ್ಲ ಎಂದು ಹೇಳುತ್ತಿರುವುದು ಅಷ್ಟೇ.

ನಮ್ಮ ಯುವಜನತೆ ಭವ್ಯ ಭವಿಷ್ಯವನ್ನು ಕಟ್ಟಬೇಕಾದ ವಯಸ್ಸಿನಲ್ಲಿ ಲಾಭಕ್ಕೆ ಬಾಯಿ ತೆರೆದ ಕೆಲವು ಕಂಪನಿಗಳ ಜಾಲಕ್ಕೆ ಒಳಗಾಗುತ್ತಾರೆ. ಭವಿಷ್ಯ ಕಟ್ಟುವ ವಯಸ್ಸಿನಲ್ಲಿ ಇಲ್ಲಸಲ್ಲದ ಸೌಂದರ್ಯದ ಮೋಹಕ್ಕೆ ಒಳಗಾಗಿ ಅನನ್ಯ ಅವಕಾಶವನ್ನು ಕಳೆದುಕೊಳ್ಳುತ್ತಾರೆ. ಅವಕಾಶ ಕೈ ತಪ್ಪಿದ ಮೇಲೆ ಪರದಾಡುತ್ತಾರೆ. ಅವಕಾಶಕ್ಕಾಗಿ ಹಂಬಲಿಸುತ್ತಾರೆ. ಅವಕಾಶ ಇಲ್ಲ ಎನಿಸಿದಾಗ ಸಾವಿನ ಕೈಗೆ ಬದುಕು ಕೊಟ್ಟು ಬದುಕು ಮುಗಿಸುತ್ತಾರೆ. ಒಮ್ಮೆ ಯೋಚಿಸಿ ಬಣ್ಣವೇ ಬದುಕಿನ ಪರಮ ಧೇಯವೆಂದು ಹೇಳಿದವರಾದರು ಯಾರು ಎಂಬುದನ್ನು ಯೋಚಿಸಬೇಕಲ್ಲವೇ, ಬಣ್ಣ, ಸೌಂದರ್ಯ ಇಲ್ಲದಿದ್ದರೆ ನಾವು ಬದುಕಲು ಸಾಧ್ಯವಿಲ್ಲವೇ, ಖಂಡಿತ ಇದೆ, ನಮ್ಮೊಳಗಿನ ಜಾಗೃತಿಯನ್ನು ನಾವು ಕಾಪಾಡಿಕೊಳ್ಳಬೇಕಷ್ಟೇ.

English ನಲ್ಲಿ ಒಂದು ಮಾತಿದೆ, "Beauty lies in the eyes of the beholder" ಅಂದರೆ ಸೌಂದರ್ಯ ವಸ್ತು, ವ್ಯಕ್ತಿ, ಸ್ಥಳದಲ್ಲಿಲ್ಲ, ಅದು ನೋಡುವವರ ಕಣ್ಣಲ್ಲಿ ಅಡಗಿದೆ. ಎಷ್ಟು ಅರ್ಥಪೂರ್ಣ ಸಾಲುಗಳಿವು ಬಹುಶಃ "ದೃಷ್ಟಿಯಂತೆ ಸೃಷ್ಟಿ" ಎಂಬ ಮಾತಿನ ಅರ್ಥವೂ ಇದೇ ಇರಬಹುದು.

ಕೆಲವು ದಿನಗಳ ಹಿಂದೆ ಯೂಟ್ಯೂಬ್ ನಲ್ಲಿ ಒಂದು ವಿಡಿಯೋ ನೋಡಿದೆ. ಬಣ್ಣದ ಬಗೆಗಿನ ಕೆಲವು ಸಂಶೋಧನೆಗಳನ್ನು ಅಲ್ಲಿ ಹೇಳಿದ್ದಾರೆ. ಬಿಳಿ ಬಣ್ಣಕ್ಕೆ ಯಾಕಿಷ್ಟು ಪ್ರಾಮುಖ್ಯತೆ ಎಂಬುದನ್ನು ವಿವರಿಸಿದ್ದಾರೆ. ಆ ವಿಡಿಯೋದಲ್ಲಿ ನೋಡಿದ ಕೆಲವು ಮಾಹಿತಿಗಳನ್ನು ಇಲ್ಲಿ ಹಂಚಿಕೊಳ್ಳಲು ಬಯಸುತ್ತೇನೆ. "2022 ರಲ್ಲಿ ನಡೆದ ಒಂದು ಸಮೀಕ್ಷೆ ಪ್ರಕಾರ ಭಾರತದಲ್ಲಿ 90% ಯುವತಿಯರು ಬಣ್ಣದ ಕಾರಣದಿಂದ ಮದುವೆಗೆ ರಿಜೆಕ್ಟ್ ಆಗಿದ್ದಾರೆ". ಇದನ್ನ ಕೇಳಿ ನನಗೆ ಆಶ್ಚರ್ಯ ಆಯ್ತು ಬಣ್ಣದ ಸಲುವಾಗಿ ಮನುಷ್ಯನನ್ನು ಹಳೆಯುವ ಜನರಿದ್ದಾರಲ್ಲ ಎಂದು. ಮತ್ತೊಂದು ಸಂಶೋಧನೆ ಹೇಳುತ್ತೆ, "2020ರಲ್ಲಿ ನಡೆದ ಒಂದು ಅಧ್ಯಯನದ ಪ್ರಕಾರ, ಎಂಟು ಬಿಲಿಯನ್ ಡಾಲರ್ ಮೌಲ್ಯದ ಪೌಡರ್, ಕ್ರೀಮ್ ಜಗತ್ತಿನಲ್ಲಿ ಮಾರಾಟವಾಗಿದೆ. 2026ರ ಹೊತ್ತಿಗೆ ಇದು, 11.8 ಮಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ. 2012ರಲ್ಲಿ ಒಂದೇ ವರ್ಷ ಭಾರತದಲ್ಲಿ 258 ಟನ್ ಸ್ಕಿನ್ ಲೈಟ್ನಿಂಗ್ ಕ್ರೀಮ್ ಮಾರಾಟವಾಗಿದೆ." ಎಂದು ಕೇಳಿದಾಗ ಹೌಹಾರಿದ್ದುಂಟು, ಜಗತ್ತಿನಲ್ಲಿ ಬಣ್ಣದ ಹಿಂದೆ ಓಡೋರು ಎಷ್ಟು ಜನರಿದ್ದಾರೆ ಎಂದು. ನಾನಿಲ್ಲಿ ಮೇಕಪ್ ಮಾಡಿಕೊಳ್ಳುವುದೇ ತಪ್ಪು ಎಂದು ಖಂಡಿತ ಹೇಳುತ್ತಿಲ್ಲ ಬದುಕಿನ ಭಾಗವಾಗಬೇಕಾಗಿರುವುದು, ಬದುಕಾಗಬಾರದು ಎಂದು ಜಾಗೃತಿ ಮೂಡಿಸುತ್ತಿರುವುದು ಅಷ್ಟೇ.

ಈ ಬಣ್ಣದ ಸೌಂದರ್ಯದ ಹಿಂದೆ ಓಡುವ ತರುಣರು ಒಮ್ಮೆ ಯೋಚಿಸಿದ್ದಾರೆಯೇ, ಬಿಳಿ ಬಣ್ಣಕ್ಕೆ ಯಾಕಿಷ್ಟು ಶ್ರೇಷ್ಠತೆಯೆಂದು. ಬಿಳಿಯೇ ಸುಂದರವೆಂದು ಹೇಳಿದವರು ಯಾರೆಂದು. ಕಪ್ಪು ಬಣ್ಣ ಬೇಕೆಂದು ಯಾರು ಯಾಕೆ ಬಯಸುವುದಿಲ್ಲವೆಂದು. ಇಂತಹ ಯೋಚನೆಗಳು ನಮಗೇಕೆ ಇನ್ನೂ ಬಂದಿಲ್ಲ. ಬಿಳಿ ಬಣ್ಣಕ್ಕೆ ಪ್ರಾಧ್ಯಾನತೆ ಬಂದಿದ್ದು ಜಗತ್ತಿನಾದ್ಯಂತ ವಸಾಹತುಗಳನ್ನು ಸ್ಥಾಪಿಸಿದ ಬಿಳಿ ಬಣ್ಣದ ಯುರೋಪಿಯನ್ನರ ಆಳ್ವಿಕೆಯಿಂದ...!! ಹೌದು 16 ರಿಂದ 19ನೇ ಶತಮಾನದವರೆಗೂ ನಡೆದ ದಾಳಿಗಳು, ಬ್ರಿಟಿಷರು, ಫ್ರೆಂಚರು, ಡಚ್ಚರು, ಪೋರ್ಚುಗೀಸರು, ಮತ್ತು ಯುರೋಪ್ ಖಂಡದ ಜನರು ಇಡೀ ಜಗತ್ತಿನ ಮೇಲೆ ದಾಳಿ ಮಾಡಿದರು. ಅವರು ತಮ್ಮ ಬಿಳಿ ಬಣ್ಣವೇ ಶ್ರೇಷ್ಠ ಎಂಬ ಭ್ರಮೆ ಬೀರಿದರು. ಕಪ್ಪು ಜನರನ್ನು ಶೋಷಿಸಿದರು. ಒಮ್ಮೆ ಯೋಚಿಸಿ ಆಫ್ರಿಕಾದ ಕಪ್ಪು ಜನರು ಏನಾದರೂ ಯುರೋಪಿಯನ್ನರ ರೀತಿ ದಾಳಿ ಮಾಡಿ ಎಲ್ಲವನ್ನು ವಶಕ್ಕೆ ತೆಗೆದುಕೊಂಡು ಆಳ್ವಿಕೆ ಮಾಡಿದ್ದರೆ, ಇನ್ನೆಷ್ಟು ಜನ ಕಪ್ಪು ಬಣ್ಣದ ಹಿಂದೆ ಓಡುತ್ತಿದ್ದರು. ಕಪ್ಪಾಗಲು ಎಷ್ಟೊಂದು ಹಾತೊರೆಯುತ್ತಿದ್ದರು, ಹಂಬಲಿಸುತ್ತಿದ್ದರು.

ಕಪ್ಪು ಅನ್ನೋದು ನಾವು ಹುಟ್ಟಿನಿಂದಲೇ ಪಡೆದ ಶಿಕ್ಷೆ ಅಲ್ಲ, ಯಾವುದೋ ಜನ್ಮದ ಪಾಪದಫಲವಲ್ಲ, ಚರ್ಮದ ಮೇಲಿನ ಬಣ್ಣ ನಿರ್ಧಾರವಾಗುವುದು ಮನುಷ್ಯನ ಇಚ್ಛೆಯ ಮೇಲಲ್ಲ. ಮಾನವನ ಚರ್ಮದ ಮೇಲಿರೋ "ಮೆಲನೋಸೈಟ್ಸ್" (Melanocytes) ಎಂಬ ಜೀವಕೋಶದಿಂದ ಎಂಬುದು ವೈಜ್ಞಾನಿಕ ಅಧ್ಯಯನದಿಂದ ತಿಳಿದಿದೆ. ಇದನ್ನ ತಿಳಿಯಬೇಕಾಗಿರೋ ಯುವಜನತೆ ಮತ್ತದೇ ಬಣ್ಣಕ್ಕೆ ದಾಸ್ಯ ಆಗಿರೋದು ಕಂಡಾಗ ಎದೆಯಲ್ಲಿ ಸಂಕಟದ ಭಾವ ಉಂಟಾಗುತ್ತದೆ. ಯೂಟ್ಯೂಬ್ ನಲ್ಲಿ ಮೇಲಿನ ಮಾಹಿತಿಯನ್ನು ಕೊಟ್ಟ ವಿಡಿಯೋ ಕಣ್ಣು ತೆರೆಸಿತು.

ಬಣ್ಣದ ಕುರಿತು ಯೋಚಿಸುವಾಗಲೆಲ್ಲ ನಾನು ಚಿಕ್ಕವನಿದ್ದಾಗ ನನ್ನಮ್ಮ ಹೇಳಿದ ಒಂದು ಮಾತು ನೆನಪಾಗುತ್ತದೆ. "ಕಪ್ಪಾಗಿದ್ದವರು ದೇವರ ಸಮ ಅಂತೆ ಮಗಾ". "ಬಣ್ಣವನ್ನೇನೂ ತೊಳೆದು ಕುಡಿಯಲು ಆಗುತ್ತ ಮಗ". ಅಬ್ಬಾ ಹಳ್ಳಿಯಲ್ಲಿರೋ ಅನಕ್ಷರಸ್ತೆ ನನ್ನ ಅಮ್ಮನ ಮಾತಲ್ಲಿ ಎಷ್ಟು ಸತ್ಯ ಇದೆ. ಬದುಕಿಗೆ ಬಣ್ಣವೇ ಮುಖ್ಯವಲ್ಲ ಎಂಬ ಜ್ಞಾನವಿದೆ. ಬಣ್ಣ ಕೇವಲ ಚರ್ಮಕಷ್ಟೇ ನನ್ನ ಸಾಧನೆಗಲ್ಲ ಎಂಬ ಗುಟ್ಟಿದೆ. ಬಣ್ಣದಿಂದ ಬದುಕಲ್ಲ ಎಂಬ ಗಟ್ಟಿತನವಿದೆ.

"ಬದುಕಿಗೆ ಬೇಡದ ಯೋಚನೆಗಳಿಗೆ ನಾನು ಬೀಳುವ ಮೊದಲು ನನ್ನ ಮನಸ್ಸು ಜಾಗ್ರತವಾಗಲಿ, ಆ ಜಾಗೃತ ಪ್ರಜ್ಞೆಗೆ ನನ್ನ ಅಮ್ಮನ ಪ್ರೇರಣೆಯೇ ಜೊತೆಯಾಗಲಿ"....

"ಅಂದ ಬೇಕಾಗಿರುವುದು ಅಂತರಂಗಕ್ಕೆ ಹೊರತು, ಕಣ್ಣಿಗೆ ಅನಾವರಣವಾಗುವ ಅಂಗಗಳಿಗಲ್ಲ"..

*ನೇಮಿಚಂದ್ರ ಅವರ ಲೇಖನದಿಂದ ಸ್ಪೂರ್ತಿಗೊಂಡು ಬರೆದ ಲೇಖನವಿದು...

*ಕಪ್ಪು ಕಪ್ಪು ಅನ್ನೋದಲ್ಲ, ನಮ್ಮ ಮನಸ್ಸೇ ತಪ್ಪು. *ಅಂತರ್ಜಾಲದಲ್ಲಿ ಸಿಕ್ಕ ಸಾಲುಗಳಿವು...

ವಿಶ್ವನಾಥ ಜಿ ಹೆಚ್

ಯುವ ಬರಹಗಾರರು

ಸೊರಬ (ತಾ) ಶಿವಮೊಗ್ಗ (ಜಿ)


ಸಂಪಾದಕೀಯ ನುಡಿ: ಅಂತರಂಗದ ಸೌಂದರ್ಯಕ್ಕೆ ಬೇಕಿದೆ ಪ್ರಜ್ಞೆಯ ಮೆರುಗು

ಜಾಗತೀಕರಣ ಮತ್ತು ಮಾರುಕಟ್ಟೆಯ ಇಂದಿನ ಅಬ್ಬರದಲ್ಲಿ ಮನುಷ್ಯನ ಅಸ್ತಿತ್ವವನ್ನು ಕೇವಲ ಆತನ ಬಾಹ್ಯ ರೂಪ ಮತ್ತು ಚರ್ಮದ ಬಣ್ಣದ ಮೂಲಕ ಅಳೆಯುವ ಹೊಸದೊಂದು ಸಾಂಸ್ಕೃತಿಕ ಬಿಕ್ಕಟ್ಟು ಸೃಷ್ಟಿಯಾಗಿದೆ. ಬಿಳಿಯ ವರ್ಣವೇ ಶ್ರೇಷ್ಠ, ಅದೇ ಯಶಸ್ಸಿನ ಸೀಕ್ರೆಟ್ ಎಂಬಂತೆ ಬಿಂಬಿಸುವ ಕಾರ್ಪೊರೇಟ್ ಜಾಹೀರಾತುಗಳ ಜಾಲಕ್ಕೆ ಇಂದಿನ ಯುವ ಪೀಳಿಗೆ ಪ್ರಜ್ಞಾಪೂರ್ವಕವಾಗಿಯೇ ಬಲಿಯಾಗುತ್ತಿರುವುದು ಆತಂಕಕಾರಿ ಸಂಗತಿ. ಇಂತಹ ಹೊತ್ತಿನಲ್ಲಿ, ನಮ್ಮ ನಡುವಿನ ಯುವ ಲೇಖಕ ವಿಶ್ವನಾಥ್ ಜಿ.ಹೆಚ್. ಅವರು ಬರೆದಿರುವ "ಕಪ್ಪು ಕಪ್ಪು ಅನ್ನೋದಲ್ಲ, ನಮ್ಮ ಮನಸ್ಸೇ ತಪ್ಪು..." ಎಂಬ ಲೇಖನವು ಸಮಾಜದ ಕಣ್ಣು ತೆರೆಸುವಂತಿದೆ.

ವಸಾಹತುಶಾಹಿ ಆಳ್ವಿಕೆಯು ನಮ್ಮ ಮನಸ್ಸುಗಳಲ್ಲಿ ಬಿತ್ತಿಹೋದ 'ಬಿಳಿ ವರ್ಣದ ಶ್ರೇಷ್ಠತೆ'ಯ ಭ್ರಮೆಯಿಂದ ನಾವು ಇಂದಿಗೂ ಮುಕ್ತರಾಗಿಲ್ಲ ಎಂಬುದನ್ನು ಲೇಖಕರು ಕೇಟರಿಂಗ್ ಕೆಲಸದ ನೈಜ ಉದಾಹರಣೆಯೊಂದಿಗೆ ಅತ್ಯಂತ ಆಪ್ತವಾಗಿ ಕಟ್ಟಿಕೊಟ್ಟಿದ್ದಾರೆ. ಬದುಕನ್ನು ರೂಪಿಸಿಕೊಳ್ಳಬೇಕಾದ ವಯಸ್ಸಿನಲ್ಲಿ, ಕೇವಲ ಚರ್ಮದ ಬಣ್ಣದ ಕೀಳರಿಮೆಯಿಂದ ಯುವಜನತೆ ಖಿನ್ನತೆಗೆ ಜಾರುತ್ತಿರುವುದು ಮತ್ತು ಮದುವೆಯಂತಹ ಸಾಮಾಜಿಕ ಬಂಧಗಳಲ್ಲಿ ಬಣ್ಣವೇ ಪ್ರಮುಖ ಮಾನದಂಡವಾಗುತ್ತಿರುವುದು ಇಂದಿನ ನಾಗರಿಕ ಸಮಾಜ ತಲೆತಗ್ಗಿಸುವಂತಹ ವಿಷಯ.

ವಿಜ್ಞಾನದ ಪ್ರಕಾರ ಬಣ್ಣ ಕೇವಲ ಮೆಲನೋಸೈಟ್ಸ್ ಕಣಗಳ ಆಟವಷ್ಟೇ. ಹಳ್ಳಿಯ ಅನಕ್ಷರಸ್ಥ ತಾಯಿಯೊಬ್ಬಳ "ಬಣ್ಣವನ್ನೇನೂ ತೊಳೆದು ಕುಡಿಯಲು ಆಗುತ್ತಾ ಮಗ" ಎಂಬ ಆಡುಮಾತಿನ ಜ್ಞಾನ, ಇಂದು ಕೋಟಿ ಕೋಟಿ ವ್ಯವಹಾರ ನಡೆಸುವ ಬಹುರಾಷ್ಟ್ರೀಯ ಕಂಪನಿಗಳ ಸೌಂದರ್ಯದ ವ್ಯಾಖ್ಯಾನಕ್ಕಿಂತಲೂ ಹಿರಿದಾದುದು. ಅಂದ ಇರಬೇಕಾದ್ದು ಅಂತರಂಗದಲ್ಲೇ ಹೊರತು ಕಣ್ಣಿಗೆ ಕಾಣುವ ಚರ್ಮದಲ್ಲಲ್ಲ.

ಯುವ ಪೀಳಿಗೆ ತನ್ನತನ ಮತ್ತು ಸ್ವಾಭಿಮಾನವನ್ನು ಮರಳಿ ಪಡೆದು, ಬಣ್ಣದ ದಾಸ್ಯದಿಂದ ಹೊರಬರಲು ಇಂತಹ ವೈಚಾರಿಕ ಬರಹಗಳು ಇಂದಿನ ಅಗತ್ಯವಾಗಿವೆ. ವಿಶ್ವನಾಥ್ ಅವರ ಈ ಸಾಮಾಜಿಕ ಕಳಕಳಿಯ ಲೇಖನವನ್ನು ನಮ್ಮ ಓದುಗರ ಮುಂದಿಡಲು ಹೆಮ್ಮೆಯೆನಿಸುತ್ತದೆ. ಈ ಬರಹವು ಕೇವಲ ಓದುವುದಕ್ಕಷ್ಟೇ ಸೀಮಿತವಾಗದೆ, ನಮ್ಮ ದೃಷ್ಟಿಕೋನವನ್ನು ಬದಲಾಯಿಸುವತ್ತ ಪ್ರೇರೇಪಿಸಲಿ ಆಶಯ ನಮ್ಮದು.

– ಸಂಪಾದಕರು, ಕನ್ನಡ ಗ್ಲೋಬಲ್ ನ್ಯೂಸ್

No comments:

Post a Comment

Advertisement

ಜಾಹೀರಾತು ಹಾಗೂ ಸುದ್ದಿ ನೀಡಲು ಸಂಪರ್ಕಿಸಿ

📞 9110857339 ಗೆ ಕರೆ ಮಾಡಿ 💬 WhatsApp ಗ್ರೂಪ್ ಸೇರಿ 🎥 YouTube ಚಂದಾದಾರರಾಗಿ

ಕನ್ನಡ ಗ್ಲೋಬಲ್ ನ್ಯೂಸ್