ಚಿಕ್ಕಮಗಳೂರಿನ ಆಜಾದ್ ಪಾರ್ಕ್ ವೃತ್ತದಲ್ಲಿ ನಿಂತು, ಮೈಕ್ ಹಿಡಿದು "ನೀಟ್ ಪರೀಕ್ಷೆಗೂ ಮುಲ್ಲಾಗಳಿಗೂ ಏನು ಸಂಬಂಧ? ಅವರ ಎದೆ ಸೀಳಿದರೆ ಮೂರು ಅಕ್ಷರವೂ ಇಲ್ಲ" ಎಂದು ಘರ್ಜಿಸಿದ ಮಹಾನ್ ಜ್ಞಾನಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿಯವರೇ, ನಿಮ್ಮ ಈ ಅದ್ಭುತ ಅಜ್ಞಾನ ಹಾಗೂ ದ್ವೇಷದ ಭಾಷಣಕ್ಕೆ ನಾವೆಲ್ಲರೂ ಮೂಕವಿಸ್ಮಿತರಾಗಿದ್ದೇವೆ! ಜಂತರ್ ಮಂತರ್‌ನಲ್ಲಿ ನಿಂತು ಪ್ರತಿಭಟಿಸುತ್ತಿದ್ದ ಆ ಎಳೆಯ ಮನಸ್ಸುಗಳು ಮೊದಲು ಭಾರತದ ಭವಿಷ್ಯದ ಆಶಾಕಿರಣಗಳು. ಆ ನಂತರವಷ್ಟೇ ಅವರು ಹಿಂದೂ, ಮುಸ್ಲಿಂ, ಕ್ರೈಸ್ತ ಅಥವಾ ಸಿಖ್ ಧರ್ಮದವರು. ನ್ಯಾಯಕ್ಕಾಗಿ ಬೀದಿಗಿಳಿದು ಕಣ್ಣೀರು ಹಾಕುತ್ತಿದ್ದ ಆ ಕರುಣಾಜನಕ ವಿದ್ಯಾರ್ಥಿಗಳ ಆಕ್ರಂದನದಲ್ಲಿ ನಿಮಗೆ ಕೇವಲ 'ಮುಲ್ಲಾಗಳು' ಕಂಡರು ಎಂದರೆ, ನಿಮ್ಮ ಕಣ್ಣುಗಳಿಗೆ ಬಿದ್ದಿರುವ ಕೋಮುವಾದದ ಪೊರೆ ಎಷ್ಟು ದಪ್ಪಗಿದೆ ಎಂಬುದು ಜಗಜ್ಜಾಹೀರಾಗಿದೆ.
ಆ ಹೋರಾಟದಲ್ಲಿ ಕೆಲವೊಂದು ಸಾಧು ಸಂತರು ಸಹ ಪಾಲ್ಗೊಂಡಿದ್ದರು. ಅವರಿಗೂ ನಿಮ್ಮದು ಅದೇ ಪ್ರಶ್ನೆಯೇ? ಸಾಧುಗೂ ನೀಟ್‌ಗೆ ಏನು ಸಂಬಂಧ ಅಂತಾ? ಕಣ್ಣಿಗೆ ದ್ವೇಷದ ಕನ್ನಡಕ ತೊಟ್ಟವರಿಗೆ ಜಗತ್ತೆಲ್ಲಾ ಹಳದಿಯಾಗಿಯೇ ಕಾಣುತ್ತದೆ ಎನ್ನುವುದಕ್ಕೆ ನೀವೇ ಜ್ವಲಂತ ಉದಾಹರಣೆ.
ನಿಮ್ಮದೇ ತವರು ಜಿಲ್ಲೆಯ, ಬಾಳೆಹೊನ್ನೂರಿನ ಮಸೀದಿಕೆರೆಯಲ್ಲಿ ಇತ್ತೀಚೆಗೆ ರಮೇಶ್ ಎಂಬ ಅನಾಥ ಹಿಂದೂ ಯುವಕನ ಶವ ಪಾಳುಬಿದ್ದ ಮನೆಯಲ್ಲಿ ನಾಲ್ಕು ದಿನ ಕೊಳೆತು ನಾರುತ್ತಿದ್ದಾಗ, ದುರ್ವಾಸನೆಗೆ ಹೆದರಿ ಸ್ವಂತ ಸಂಬಂಧಿಕರೇ ಮೂಗು ಮುಚ್ಚಿ ಓಡಿದಾಗ, ಅದೇ ಶವವನ್ನು ಹೆಗಲಿಗೆ ಹೊತ್ತು ಹಿಂದೂ ಸಂಪ್ರದಾಯದಂತೆ ಅಂತ್ಯಸಂಸ್ಕಾರ ಮಾಡಿದರಲ್ಲ, ಆ ಮುಲ್ಲಾ ಯುವಕರ ಎದೆ ಸೀಳಿ ನೋಡಿದ್ದರೆ ನಿಮಗೆ 'ಮಾನವೀಯತೆ' ಹಾಗೂ 'ಕರುಣೆ' ಎಂಬ ಮೂರು ಅಕ್ಷರಗಳು ಖಂಡಿತಾ ಸಿಗುತ್ತಿತ್ತು. ಆದರೆ, ಹೆಣದ ಮೇಲೂ ರಾಜಕೀಯದ ಬೇಳೆ ಬೇಯಿಸಿಕೊಳ್ಳುವ ನಿಮ್ಮಂತಹ ಅಸೂಕ್ಷ್ಮ ಮನಸ್ಸುಗಳಿಗೆ ಆ ಮೂರು ಅಕ್ಷರದ ಪಾಠ ಎಲ್ಲಿಂದ ಅರ್ಥವಾಗಬೇಕು?
ಚಿಕ್ಕಮಗಳೂರು ಎಂದರೆ ಕಾಫಿ, ಕಾಫಿ ಎಂದರೆ ಚಿಕ್ಕಮಗಳೂರು. ಪ್ರಪಂಚದ ಯಾವುದೇ ಮೂಲೆಯಲ್ಲೂ ಸಿಗದ ಸ್ವಾದ ಈ ಮಣ್ಣಿನ ಕಾಫಿಗಿದೆ. ಇತಿಹಾಸದ ಪುಟಗಳನ್ನು ಸ್ವಲ್ಪ ತೆಗೆದು ನೋಡಿ ಈ ಮಣ್ಣಿಗೆ ಕಾಫಿ ಬೀಜ ಹೊತ್ತುತಂದು ಬೆಳೆಸಿದ ಸಂತ ಬಾಬಾ ಬುಡನ್ ಎಂಬ ಅರಬ್ಬಿ 'ಮುಲ್ಲಾ' ಎಂಬುದನ್ನು ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ಮರೆತಿರಬಹುದು.
ಇನ್ನು 'ಮೂರು ಅಕ್ಷರ'ದ ಜ್ಞಾನದ ಬಗ್ಗೆ ಲಘುವಾಗಿ ಮಾತನಾಡಿದಿರಲ್ಲ? ಮಂಗಳೂರಿನ ಹರೆಕಳ ಹಾಜಬ್ಬ ಅನಕ್ಷರಸ್ತನಾದ ಮುಲ್ಲಾ ಆಗಿದ್ದರೂ ಅಕ್ಷರ ಸಂತ ಎಂಬ ಬಿರುದು ಪಡೆದರು, ಭಾರತದ ಕ್ಷಿಪಣಿ ತಂತ್ರಜ್ಞಾನದ ಪಿತಾಮಹ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ, ಪಕ್ಷಿಶಾಸ್ತ್ರವನ್ನು ಜಗತ್ತಿಗೆ ಪರಿಚಯಿಸಿದ ಸಲೀಂ ಅಲಿ, ಅಣುಜೀವಶಾಸ್ತ್ರಜ್ಞ ಒಬೈದ್ ಸಿದ್ದೀಕಿ, ಅಂಟಾರ್ಕ್ಟಿಕಾ ಸಂಶೋಧಕ ಸಯ್ಯದ್ ಜಹೂರ್ ಕಾಸಿಂ ಹಾಗೂ ದೇಶದ ಮೊದಲ ಶಿಕ್ಷಣ ಸಚಿವ ಮೌಲಾನಾ ಅಬುಲ್ ಕಲಾಂ ಆಜಾದ್ ಇವರ ಎದೆಯಲ್ಲೂ ಅಕ್ಷರ ಇರಲಿಲ್ಲವೇನ್ರೀ? ಇವರ ಸಾಧನೆಗಳನ್ನು ಅಳೆಯುವಷ್ಟು ನಿಮ್ಮ ಜ್ಞಾನದ ಪೆಟ್ಟಿಗೆ ನಿಜಕ್ಕೂ ದೊಡ್ಡದಿದೆಯೇ? ಹಿಜಾಬ್ ಹೆಸರಿನಲ್ಲಿ ಮುಗ್ಧ ಹೆಣ್ಣುಮಕ್ಕಳ ಶೈಕ್ಷಣಿಕ ಹಕ್ಕನ್ನೇ ಕಸಿದುಕೊಳ್ಳಲು ಯತ್ನಿಸಿದ ನಿಮ್ಮಂತಹ ನಾಯಕರಿಗೆ ಶಿಕ್ಷಣದ ಬಗ್ಗೆ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ಉಳಿದಿಲ್ಲ.
ನೀಟ್ ಹಗರಣದಲ್ಲಿ ಬಲಿಯಾದವರು, ಮೋಸ ಹೋದವರು ಕೇವಲ ಒಂದು ಧರ್ಮದವರಲ್ಲ. ಲಕ್ಷಾಂತರ ರೂಪಾಯಿ ಸುರಿದು ಹಗಲಿರುಳು ನಿದ್ದೆಗೆಟ್ಟು ಓದಿದ ಮಕ್ಕಳ ಶ್ರಮ ಪೇಪರ್ ಲೀಕ್ ಮಾಡಿದ ಭ್ರಷ್ಟರ ಪಾಲಾದಾಗ ಆಕ್ರೋಶಗೊಳ್ಳುವುದು ಸಹಜ. ಆ ಆಕ್ರೋಶಕ್ಕೆ ದನಿಯಾಗುವ ಬದಲು ಆ ಹೋರಾಟಕ್ಕೂ ಧರ್ಮದ ವಿಷದ ಇಂಜೆಕ್ಷನ್ ನೀಡಲು ಹೊರಟ ನಿಮ್ಮ ನಡೆಯನ್ನು ಯಾವ ಪದಗಳಿಂದ ವರ್ಣಿಸಬೇಕು?
ವಿದ್ಯಾರ್ಥಿಯ ಕಣ್ಣೀರಿನಲ್ಲೂ ಧರ್ಮ ಹುಡುಕುವ ನಿಮ್ಮ ವಿಕೃತ ಮಾನಸಿಕತೆಯೇ ಪ್ರಜಾಪ್ರಭುತ್ವದ ಅತಿದೊಡ್ಡ ಸೋಲು. ಇಂದು ವಿದ್ಯಾರ್ಥಿಯ ಸಮಸ್ಯೆಗೆ ಧರ್ಮದ ಬಣ್ಣ ಬಳಿಯುವ ನೀವು ನಾಳೆ ರೈತನ ಕಷ್ಟಕ್ಕೂ, ನಿರುದ್ಯೋಗಕ್ಕೂ, ಬೆಲೆ ಏರಿಕೆಗೂ ಧರ್ಮದ ಲೇಪನ ಹಚ್ಚುತ್ತೀರಿ. ಇದು ಸಮಸ್ಯೆಗಳಿಗೆ ಪರಿಹಾರವಲ್ಲ, ಸಮಾಜವನ್ನು ವಿಭಜಿಸುವ ನಿಮ್ಮ 'ಮೂರು ಕಾಸಿನ' ರಾಜಕೀಯ ತಂತ್ರ. ಸದಾ ಹರಕು ಬಾಯಿಯಿಂದಲೇ ಸಮಾಜದಲ್ಲಿ ದ್ವೇಷ ಬಿತ್ತಿ, ಅಶಾಂತಿ ಸೃಷ್ಟಿಸಿ, ಒಡೆದಾಳುವ ನೀತಿಯಿಂದಲೇ ರಾಜಕೀಯದ ಉಳಿವು ಕಂಡುಕೊಳ್ಳುವ ನಿಮ್ಮಂತಹವರು ಸಮಾಜಕ್ಕೆ ಕಳಂಕವೇ ಸರಿ.
ಕಾಲ ಎಲ್ಲದಕ್ಕೂ ಕನ್ನಡಿ ಹಿಡಿಯುತ್ತದೆ. ಸಮಾಜವನ್ನು ಒಡೆಯುವ ಇಂತಹ ಹೇಳಿಕೆಗಳಿಗೆ ಕಾಲವೇ ತಕ್ಕ ಉತ್ತರ ಕೊಟ್ಟಿದೆ ಮುಂದೆಯೂ ಕೊಡಲಿದೆ. ಅಂದಹಾಗೆ ಸ್ವಾತಂತ್ರ್ಯ ಎಂದರೆ ಕೇವಲ ಬ್ರಿಟಿಷರಿಂದ ಮುಕ್ತವಾಗುವುದಲ್ಲ ನಿಮ್ಮಂತಹವರ ದ್ವೇಷಭರಿತ ಹಾಗೂ ಕೊಳೆತ ಮನಸ್ಥಿತಿಯಿಂದಲೂ ಸಮಾಜ ಮುಕ್ತವಾಗುವುದು!
🖋 ರಫಿ ರಿಪ್ಪನ್ ಪೇಟೆ
ಸಂಪಾದಕರು, ಪೋಸ್ಟ್ ಮ್ಯಾನ್ ನ್ಯೂಸ್
ರಿಪ್ಪನ್ ಪೇಟೆ, ಹೊಸನಗರ
⚠️ ಹಕ್ಕುತ್ಯಾಗ (Disclaimer)
ಈ ಮೇಲಿನ ಲೇಖನದಲ್ಲಿ ವ್ಯಕ್ತಪಡಿಸಲಾಗಿರುವ ವಿಚಾರಗಳು ಮತ್ತು ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರ (ರಫಿ ರಿಪ್ಪನ್ ಪೇಟೆ) ವೈಯಕ್ತಿಕ ಅಭಿಪ್ರಾಯಗಳಾಗಿರುತ್ತವೆ. ಇದಕ್ಕೂ ನಮ್ಮ ಮಾದ್ಯಮ ಸಂಸ್ಥೆಗೆ ಯಾವುದೇ ನೇರ ಸಂಬಂಧವಿರುವುದಿಲ್ಲ. ಸಾರ್ವಜನಿಕ ಹಿತಾಸಕ್ತಿ ಮತ್ತು ಮುಕ್ತ ವಿಚಾರ ವಿನಿಮಯದ ದೃಷ್ಟಿಯಿಂದ ಈ ಲೇಖನವನ್ನು ಪ್ರಕಟಿಸಲಾಗಿದೆ.
ಸಂಪಾದಕೀಯ ನುಡಿ (Editorial Note)
'ವಿದ್ಯಾರ್ಥಿಗಳ ಭವಿಷ್ಯ ಮತ್ತು ಸಮಾಜದ ಶಾಂತಿ ರಾಜಕೀಯಕ್ಕಿಂತ ಮಿಗಿಲು'
ದೇಶದ ಭವಿಷ್ಯ ರೂಪಿಸುವ ಶಿಕ್ಷಣ ವ್ಯವಸ್ಥೆ ಮತ್ತು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಬಂಧಿಸಿದ 'ನೀಟ್' (NEET) ಪರೀಕ್ಷೆಯ ಅಕ್ರಮದ ವಿಷಯವು ಇಂದು ಅತ್ಯಂತ ಗಂಭೀರವಾದ ಚರ್ಚೆಯ ವಸ್ತುವಾಗಿದೆ. ನ್ಯಾಯಕ್ಕಾಗಿ ಮತ್ತು ಪಾರದರ್ಶಕತೆಗಾಗಿ ವಿದ್ಯಾರ್ಥಿಗಳು ಹಾಗೂ ಪೋಷಕರು ನಡೆಸುತ್ತಿರುವ ಹೋರಾಟ ಪ್ರಜಾಪ್ರಭುತ್ವದಲ್ಲಿ ಸಮಂಜಸವಾದದ್ದು.
ಇಂತಹ ಸೂಕ್ಷ್ಮ ಸಂದರ್ಭಗಳಲ್ಲಿ ಸಾರ್ವಜನಿಕ ರಂಗದಲ್ಲಿರುವ ನಾಯಕರು ಮತ್ತು ಜನಪ್ರತಿನಿಧಿಗಳು ನೀಡುವ ಹೇಳಿಕೆಗಳು ಕೇವಲ ಸಮಸ್ಯೆಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿರಬೇಕೇ ಹೊರತು, ಧರ್ಮ, ಜಾತಿ ಅಥವಾ ಸಮಾಜವನ್ನು ವಿಭಜಿಸುವ ದಿಕ್ಕಿನಲ್ಲಿರಬಾರದು. ಯಾವುದೇ ಸಮಸ್ಯೆಗೆ ಧರ್ಮದ ಬಣ್ಣ ಬಳಿಯುವುದರಿಂದ ಮೂಲ ಸಮಸ್ಯೆಯ ದಾರಿ ತಪ್ಪಿ, ವಿದ್ಯಾರ್ಥಿಗಳಿಗೆ ಸಿಗಬೇಕಾದ ನ್ಯಾಯ ವಿಳಂಬವಾಗುವ ಅಪಾಯವಿರುತ್ತದೆ.
ಅದೇ ಸಮಯದಲ್ಲಿ, ಸಾರ್ವಜನಿಕ ವೇದಿಕೆಗಳಲ್ಲಿ ನಡೆಯುವ ಟೀಕೆ-ಟಿಪ್ಪಣಿಗಳು ಘನತೆಯಿಂದ ಕೂಡಿರಬೇಕು ಹಾಗೂ ಸಮಾಜದಲ್ಲಿ ಸೌಹಾರ್ದತೆಯನ್ನು ಕಾಪಾಡುವಂತಿರಬೇಕು ಎಂಬುದು ನಮ್ಮ ಆಶಯ. ನಮ್ಮ ದೇಶದ ಶಕ್ತಿ ಇರುವುದೇ ವೈವಿಧ್ಯತೆ ಮತ್ತು ಮಾನವೀಯ ಮೌಲ್ಯಗಳಲ್ಲಿ. ರಾಜಕೀಯ ಲಾಭ-ನಷ್ಟಗಳಿಗಿಂತ ವಿದ್ಯಾರ್ಥಿಗಳ ಭವಿಷ್ಯ, ಶೈಕ್ಷಣಿಕ ವ್ಯವಸ್ಥೆಯ ಶುದ್ಧೀಕರಣ ಹಾಗೂ ಸಾಮಾಜಿಕ ಸೌಹಾರ್ದತೆಯೇ ಮುಖ್ಯವಾಗಬೇಕು. ಸಂಬಂಧಪಟ್ಟ ಸರ್ಕಾರಗಳು ಮತ್ತು ನಾಯಕರು ಈ ದಿಕ್ಕಿನಲ್ಲಿ ಜವಾಬ್ದಾರಿಯುತವಾಗಿ ಹೆಜ್ಜೆ ಇಡಬೇಕಿದೆ.

No comments:
Post a Comment