ರಿಪ್ಪನ್‌ಪೇಟೆ:ಮಾನವೀಯತೆ ಮರೆತ ಹೆತ್ತವರು: ತೆಂಕೋಲ್ (ಬೀಳಕಿ) ಬಸ್ ನಿಲ್ದಾಣದಲ್ಲಿ ಚೀಲದೊಳಗೆ ಹೆಣ್ಣು ಮಗು ಪತ್ತೆ! - Kannada global

Breaking

Add

ಭಾನುವಾರ, ಜುಲೈ 5, 2026

ರಿಪ್ಪನ್‌ಪೇಟೆ:ಮಾನವೀಯತೆ ಮರೆತ ಹೆತ್ತವರು: ತೆಂಕೋಲ್ (ಬೀಳಕಿ) ಬಸ್ ನಿಲ್ದಾಣದಲ್ಲಿ ಚೀಲದೊಳಗೆ ಹೆಣ್ಣು ಮಗು ಪತ್ತೆ!

ರಿಪ್ಪನ್‌ಪೇಟೆ: ಹೆತ್ತ ಕರುಳನ್ನೇ ರಸ್ತೆಗೆ ತಳ್ವುವ ಕಠೋರ ಮನಸ್ಥಿತಿಯ ಘಟನೆಯೊಂದು ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಗವಟೂರು ಸಮೀಪದ ತೆಂಕೋಲ್ (ಬೀಳಕಿ) ಬಸ್ ನಿಲ್ದಾಣದಲ್ಲಿ  ಹೆಣ್ಣು ಮಗುವನ್ನು ಚೀಲದಲ್ಲಿ ಕಟ್ಟಿ, ಬಾಯಿಗೆ ಹಾಲಿನ ಬಾಟಲಿ (Feeding Bottle) ಇಟ್ಟು ಅಮಾನವೀಯವಾಗಿ ಬಿಟ್ಟು ಹೋಗಿರುವ ಘಟನೆ ನಡೆದಿದೆ.

ನಾಯಿ ಮರಿ ಅಂದುಕೊಂಡ ದಾರಿಹೋಕರು!

ರಸ್ತೆಯಲ್ಲಿ ಸಾಗುತ್ತಿದ್ದ ದಾರಿಹೋಕರೊಬ್ಬರಿಗೆ ಬಸ್ ನಿಲ್ದಾಣದ ಕಡೆಯಿಂದ ಮಗುವಿನ ಅಳುವಿನ ಧ್ವನಿ ಕೇಳಿಸಿದೆ. ಆರಂಭದಲ್ಲಿ ಕತ್ತಲಿನಲ್ಲಿ ಅದು ನಾಯಿ ಅಥವಾ ಬೆಕ್ಕಿನ ಮರಿ ಇರಬಹುದು ಎಂದು ಭಾವಿಸಿ ಹತ್ತಿರ ಹೋಗಿ ನೋಡಿದ್ದಾರೆ. ಚೀಲವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅದರೊಳಗೆ ಹೆಣ್ಣು ಮಗು ಇರುವುದು ಪತ್ತೆಯಾಗಿದೆ. ಮಗುವಿನ ಆಕ್ರಂದನವನ್ನು ಕಂಡು ಕರಗಿದ ದಾರಿಹೋಕರು, ಪಾಪ ಮಗು ಅಳುತ್ತಿದೆಯಲ್ಲಾ ಎಂಬ ಕರುಣೆಯಿಂದ ತಕ್ಷಣವೇ ಪೊಲೀಸರಿಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಧಾವಿಸಿದ ಪೊಲೀಸರು - ರಿಪ್ಪನ್‌ಪೇಟೆಯಲ್ಲಿ ಪ್ರಾಥಮಿಕ ಚಿಕಿತ್ಸೆ

ವಿಷಯ ತಿಳಿಯುತ್ತಿದ್ದಂತೆ ರಾತ್ರಿ ಸುಮಾರು 9:45 ರ ವೇಳೆಗೆ ರಿಪ್ಪನ್‌ಪೇಟೆ ಪೊಲೀಸರು ಹಾಗೂ ನರ್ಸ್ ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದಾರೆ. ಚೀಲದಲ್ಲಿದ್ದ ಹೆಣ್ಣು ಮಗುವನ್ನು ಸುರಕ್ಷಿತವಾಗಿ ತಮ್ಮ ವಶಕ್ಕೆ ಪಡೆದುಕೊಂಡ ಸಿಬ್ಬಂದಿ, ಆಂಬ್ಯುಲೆನ್ಸ್ ಮೂಲಕ ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಅಗತ್ಯ ಪ್ರಾಥಮಿಕ ಚಿಕಿತ್ಸೆಯನ್ನು ಕೊಡಿಸಿದ್ದಾರೆ.

ರಿಪ್ಪನ್‌ಪೇಟೆ ಠಾಣೆಯಲ್ಲಿ ಪ್ರಕರಣ

ಈ ಅಮಾನವೀಯ ಘಟನೆ ಸದ್ಯ ರಿಪ್ಪನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಾಥಮಿಕ ತನಿಖೆ ಆರಂಭಿಸಿದ್ದಾರೆ. ಹೆಣ್ಣು ಮಗುವನ್ನು ಈ ರೀತಿ ನಿರ್ದಯವಾಗಿ ಬಿಟ್ಟು ಹೋದವರು ಯಾರು? ಇದರ ಹಿಂದೆ ಯಾರಿದ್ದಾರೆ? ಎಂಬ ಸಂಪೂರ್ಣ ಮಾಹಿತಿ ಪೊಲೀಸರ ತನಿಖೆಯ ನಂತರವಷ್ಟೇ ಹೊರಬರಬೇಕಿದೆ.

ಸಂಪಾದಕೀಯ ನುಡಿ :

ಹೆಣ್ಣು ಮಗು ಎಂಬ ಕಾರಣಕ್ಕೋ ಅಥವಾ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲೋ, ಕಣ್ಣು ಬಿಡದ ಹಸುಗೂಸನ್ನು ಚೀಲದಲ್ಲಿ ಕಟ್ಟಿ ಬಸ್ ನಿಲ್ದಾಣದಲ್ಲಿ ಎಸೆದು ಹೋಗಿರುವ ಈ ಘಟನೆ ಇಡೀ ಸಮಾಜ ತಲೆತಗ್ಗಿಸುವಂತಿದೆ. ಮಗುವಿನ ಅಳುವಿನ ಧ್ವನಿ ಕೇಳಿ ತಕ್ಷಣವೇ ಸ್ಪಂದಿಸಿ ಪೊಲೀಸರಿಗೆ ಕರೆ ಮಾಡಿದ ಆ ದಾರಿಹೋಕರ ಮಾನವೀಯತೆ ಹಾಗೂ ಸಕಾಲಕ್ಕೆ ಧಾವಿಸಿ ಮಗುವನ್ನು ರಕ್ಷಿಸಿದ ರಿಪ್ಪನ್‌ಪೇಟೆ ಪೊಲೀಸ್ ಮತ್ತು ಆರೋಗ್ಯ ಇಲಾಖೆಯ ಕಾರ್ಯ ನಿಜಕ್ಕೂ ಶ್ಲಾಘನೀಯ. ಅಮಾಯಕ ಹೆಣ್ಣು ಜೀವವನ್ನು ಈ ರೀತಿ ಸಾವಿನ ದವಡೆಗೆ ತಳ್ಳಿದ ಕ್ರೂರಿಗಳನ್ನು ಪೊಲೀಸರು ಶೀಘ್ರದಲ್ಲೇ ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಈ ಪುಟ್ಟ ಕಂದಮ್ಮನಿಗೆ ಸೂಕ್ತ ರಕ್ಷಣೆ ಮತ್ತು ಉಜ್ವಲ ಭವಿಷ್ಯ ಸಿಗುವಂತಾಗಲಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Advertisement

ಜಾಹೀರಾತು ಹಾಗೂ ಸುದ್ದಿ ನೀಡಲು ಸಂಪರ್ಕಿಸಿ

📞 9110857339 ಗೆ ಕರೆ ಮಾಡಿ 💬 WhatsApp ಗ್ರೂಪ್ ಸೇರಿ 🎥 YouTube ಚಂದಾದಾರರಾಗಿ

ಕನ್ನಡ ಗ್ಲೋಬಲ್ ನ್ಯೂಸ್