ಶಿವಮೊಗ್ಗ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಂಗನ ಕಾಯಿಲೆ (KFD - Kyasanur Forest Disease) ಪ್ರಕರಣಗಳು ಪತ್ತೆಯಾಗುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಮನೆಮಾಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ತೀವ್ರ ಜಾಗೃತಿ ವಹಿಸುವಂತೆ ಜನತೆಗೆ ಸೂಚನೆ ನೀಡಿದ್ದು, ತುರ್ತು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಬಾಧಿತ ಪ್ರದೇಶಗಳು:
- ತೀರ್ಥಹಳ್ಳಿ ತಾಲೂಕು: ಅರಳಸುರುಳಿ, ಮೇಗರವಳ್ಳಿ, ಕಟ್ಟೆಗಾರು, ಹಾರೋಗುಳಿಗೆ, ಯೋಗಿಮಠ, ಮಾಳೂರು, ಬೆಟ್ಟಬಸವಾನಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿ.
- ಹೊಸನಗರ ತಾಲೂಕು: ಸೋನಲೆ, ಹುಂಚ, ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿ.
- ಸಾಗರ ತಾಲೂಕು: ತಾಳಗುಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ತಲವಾಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರೇಮನೆ, ಮಂಜಿನಕಾನು ಗ್ರಾಮಗಳು.
ಸಾರ್ವಜನಿಕರಿಗೆ ಪ್ರಮುಖ ಸೂಚನೆಗಳು:
- ಲಕ್ಷಣಗಳು ಕಂಡುಬಂದರೆ ತಕ್ಷಣ ಚಿಕಿತ್ಸೆ: ಜ್ವರ, ಮೈ-ಕೈ ನೋವು, ತಲೆನೋವು ಕಾಣಿಸಿಕೊಂಡ ತಕ್ಷಣ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು.
- ಮುನ್ನೆಚ್ಚರಿಕೆ ಕ್ರಮ: ತೋಟ ಅಥವಾ ಕಾಡಿಗೆ ಹೋಗುವ ಮುನ್ನ ಕಡ್ಡಾಯವಾಗಿ ಮೈಗೆ ಡಿಎಂಪಿ ತೈಲ (DMP Oil) ಹಚ್ಚಿಕೊಳ್ಳಬೇಕು.
- ಕಾಡಿನ ಪ್ರವೇಶ ನಿಷೇಧ: ಪ್ರಸ್ತುತ ಪರಿಸ್ಥಿತಿಯಲ್ಲಿ ಕಾಡಿಗೆ ಹೋಗುವುದನ್ನು ಮತ್ತು ಕಾಡಿನ ಒಣ ಎಲೆಗಳನ್ನು (ದರಗು) ಸಂಗ್ರಹಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು.
- ಮಂಗಗಳ ಸಾವು ಕಂಡುಬಂದರೆ: ಕಾಡಿನಲ್ಲಿ ಅಥವಾ ತೋಟಗಳಲ್ಲಿ ಅಸಹಜವಾಗಿ ಮಂಗಗಳು ಮೃತಪಟ್ಟಿರುವುದು ಕಂಡುಬಂದರೆ ತಕ್ಷಣವೇ ಪಶುಸಂಗೋಪನಾ ಇಲಾಖೆ, ಅರಣ್ಯ ಇಲಾಖೆ ಅಥವಾ ಪಂಚಾಯತ್ ರಾಜ್ ಇಲಾಖೆಗೆ ಮಾಹಿತಿ ನೀಡಬೇಕು.
ಖಾಸಗಿ ಆಸ್ಪತ್ರೆಗಳಿಗೆ ಎಚ್ಚರಿಕೆ:
ಜ್ವರದ ಲಕ್ಷಣವಿರುವ ರೋಗಿಗಳಿಗೆ ಕೇವಲ ನೋವು ನಿವಾರಕ ಮಾತ್ರೆ ಅಥವಾ ಇಂಜೆಕ್ಷನ್ ನೀಡಿ ಮನೆಗೆ ಕಳುಹಿಸಬಾರದು. ಕೂಡಲೇ ಅಂತಹ ರೋಗಿಗಳ ಮೊಬೈಲ್ ಸಂಖ್ಯೆಯೊಂದಿಗೆ ಸರ್ಕಾರಿ ಆಸ್ಪತ್ರೆಗೆ ಮಾಹಿತಿ ನೀಡಿ, ರಕ್ತ ಪರೀಕ್ಷೆಗೆ ಶಿಫಾರಸು ಮಾಡಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ.
ಉಚಿತ ಚಿಕಿತ್ಸೆ: ಮಂಗನ ಕಾಯಿಲೆಗೆ ಸಂಬಂಧಿಸಿದಂತೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಗೂ ಎಸ್‌ಎಸ್‌ಟಿ ಅಡಿಯಲ್ಲಿ ನೋಂದಾಯಿತ ಆಸ್ಪತ್ರೆಗಳಲ್ಲಿ ಎಪಿಎಲ್ ಮತ್ತು ಬಿಪಿಎಲ್ ಕಾರ್ಡ್‌ದಾರರಿಗೆ ಉಚಿತ ಚಿಕಿತ್ಸೆ ಲಭ್ಯವಿದೆ ಎಂದು ಇಲಾಖೆ ತಿಳಿಸಿದೆ.
ಸಂಪಾದಕೀಯ ನುಡಿ:
ಮಲೆನಾಡು ಭಾಗದಲ್ಲಿ ಪ್ರತಿವರ್ಷ ಕಾಣಿಸಿಕೊಳ್ಳುವ ಮಂಗನ ಕಾಯಿಲೆ ಈ ಬಾರಿಯೂ ಆತಂಕ ಸೃಷ್ಟಿಸಿದೆ. ಸಾರ್ವಜನಿಕರು ಭಯಭೀತರಾಗದೆ, ಆರೋಗ್ಯ ಇಲಾಖೆ ನೀಡಿರುವ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವುದು ಅತ್ಯಗತ್ಯ. ರೋಗದ ಲಕ್ಷಣಗಳು ಕಂಡುಬಂದಲ್ಲಿ ನಿರ್ಲಕ್ಷ್ಯ ಮಾಡದೆ ತಕ್ಷಣ ವೈದ್ಯಕೀಯ ನೆರವು ಪಡೆಯಿರಿ. ನಿಮ್ಮ ಜಾಗೃತಿಯೇ ಈ ಕಾಯಿಲೆ ಹರಡುವುದನ್ನು ತಡೆಯಲು ಇರುವ ಏಕೈಕ ದಾರಿ.
- ಸಂಪಾದಕರು, ಕನ್ನಡ ಗ್ಲೋಬಲ್ ನ್ಯೂಸ್

No comments:
Post a Comment