ಪುಸ್ತಕಗಳು ಬದುಕಿಗೆ ಶಿಕ್ಷಕರಿದ್ದಂತೆ, ಮನಸ್ಸಿಗೆ ಔಷಧಿಯಂತೆ. ಪ್ರತಿಯೊಂದು ಉತ್ತಮ ಪುಸ್ತಕವೂ ಬದುಕಿಗೆ ಭರವಸೆ ಮೂಡಿಸುವುದರ ಜೊತೆಗೆ, ವ್ಯಕ್ತಿತ್ವದ ವಿಕಸನಕ್ಕೆ ಸಹಾಯಕವಾಗುತ್ತದೆ.
ಪಾಶ್ಚಾತ್ಯ ಸಂಸ್ಕೃತಿಗೆ ಮನಸೋತು ಹುಚ್ಚೆದ್ದು ಕುಣಿಯುವ ಯುವ ಜನತೆ, ತನ್ನತನವನ್ನೇ ಮರೆತ ಯುವ ಜನತೆ, ಸಾಮಾಜಿಕ ಜಾಲತಾಣಗಳ ಜಾಲಕ್ಕೆ ಸಿಲುಕಿ ನರಳುವ ಯುವ ಜನತೆ, ತನ್ನ ಅಭಿವೃದ್ಧಿಯ ಹಾದಿಯನ್ನೇ ಮರೆತಿದೆ. ಇಂತಹ ಸಮಯದಲ್ಲಿ ನಮಗಿರುವ ಸಾಹಿತ್ಯ ಹಾಗೂ ಪುಸ್ತಕಗಳು ತನ್ನತನವನ್ನು ಅರಿಯಲು ನೆರವಾಗುತ್ತವೆ; ಅಮೋಘವಾದ ಬದುಕನ್ನು ಕಟ್ಟಿಕೊಳ್ಳಲು ದಾರಿ ತೋರುತ್ತವೆ. ದಾರಿ ತಪ್ಪುವ ಮನಸ್ಸಿಗೆ ಜಾಗೃತಿ ನೀಡುತ್ತವೆ. ವ್ಯಕ್ತಿಯನ್ನು ಪುಸ್ತಕಗಳು ಆದರ್ಶ ಮೂರ್ತಿಯನ್ನಾಗಿ ಮಾಡುತ್ತವೆ.
ರಾಷ್ಟ್ರಕವಿ, ಜ್ಞಾನಪೀಠ ಪ್ರಶಸ್ತಿ ವಿಜೇತ ಕುವೆಂಪು ಅವರ 'ಕಾನೂರು ಹೆಗ್ಗಡತಿ' ಕಾದಂಬರಿ ಕನ್ನಡ ಸಾಹಿತ್ಯ ಲೋಕದ ಒಂದು ಅದ್ಭುತ ಕೃತಿ. ಕುವೆಂಪು ಅವರ ಬರಹ ಈ ಕಾದಂಬರಿಯಲ್ಲಿ ಸರಳವಾದುದು, ಸ್ಪಷ್ಟವಾದದು ಮತ್ತು ಓದುಗರನ್ನು ಸರಾಗವಾಗಿ ಓದಿಸಿಕೊಂಡು ಹೋಗುವಂತಹುದು. ಅವರ ಬರಹದ ಶೈಲಿಯೇ ಅತ್ಯಂತ ಅದ್ಭುತವಾದದ್ದು.
ಕಾದಂಬರಿಯ ವೈವಿಧ್ಯಮಯ ಮುಖಗಳು
ಕಾನೂರು ಹೆಗ್ಗಡತಿ ಕೇವಲ ಒಂದೆರಡು ವಿಷಯಗಳನ್ನು ಒಳಗೊಂಡ ಕಾದಂಬರಿಯಲ್ಲ:
ಹೂವಯ್ಯ-ಸೀತೆಯ ಕಾರಣದಿಂದ ಅದೊಂದು ಪವಿತ್ರವಾದ ಪ್ರೇಮ ಕಾದಂಬರಿ.
ಮಲೆನಾಡಿನ ಜನಜೀವನ ವ್ಯಕ್ತವಾಗಿರುವುದರಿಂದ ಅದೊಂದು ಸಾಮಾಜಿಕ ಕಾದಂಬರಿ.
ಹೂವಯ್ಯನ ಜ್ಞಾನ ಮತ್ತು ಕಾರುಣ್ಯದಿಂದ ಮಲೆನಾಡಿಗೆ ಆಧುನಿಕತೆಯನ್ನು ತಂದ ಕಾದಂಬರಿ.
ಮೂಢನಂಬಿಕೆಗಳು ತೊಲಗಿ ವೈಚಾರಿಕತೆಯ ಬೆಳಕು ಮಲೆನಾಡಿನಲ್ಲಿ ಬೆಳಗಿದ ಕಾದಂಬರಿ.
ಒಂದು ನೂರು ವರ್ಷಗಳ ಹಿಂದಿನ ಮಲೆನಾಡಿನ ಜನ-ಜೀವನ, ಕಷ್ಟ-ಸುಖಗಳು, ಅಲ್ಲಿನ ಶಿಕಾರಿ, ಹಳ್ಳಿ ಜನರ ಶ್ರೀಮಂತ ಸಂಸ್ಕೃತಿ, ಹಳ್ಳಿ ಜನರು ತಮ್ಮ ಬದುಕನ್ನು ಕಟ್ಟಿಕೊಂಡ ಬಗೆ ಮುಂತಾದವುಗಳನ್ನು ಕಣ್ಣೆದುರಿಗೆ ತರುವ ಅದ್ಭುತ ಕಾದಂಬರಿ ಇದಾಗಿದೆ.
ಕುವೆಂಪು ಕನ್ನಡದ ರಸಕವಿ, ಋಷಿಕವಿ, ವಿಶ್ವಮಾನವ ಕವಿ. ಕುವೆಂಪು ಅಂದಾಕ್ಷಣ ನೆನಪಾಗುವುದು ಸುಂದರ ರಮ್ಯ ತರಂಗಿತ ಮಲೆನಾಡು. ಅಂತಹ ಮಲೆನಾಡಿನ ಜನಜೀವನ, ವೈವಿಧ್ಯತೆ, ಸಾಮಾಜಿಕ ಪ್ರಜ್ಞೆ, ಅಲ್ಲಿನ ಸಂಸ್ಕೃತಿ ಮುಂತಾದವುಗಳನ್ನು ಅತ್ಯಂತ ಮನೋಜ್ಞವಾಗಿ ತಿಳಿಸಿಕೊಟ್ಟದ್ದು ಅವರ ಕಾನೂರು ಹೆಗ್ಗಡತಿ ಕಾದಂಬರಿ.
ಕಾನೂರು ಮನೆತನ ಮತ್ತು ಕಥಾ ಹಂದರ
ಕಾದಂಬರಿ ಶುರುವಾಗುವುದು ಹೂವಯ್ಯ ಮತ್ತು ರಾಮಯ್ಯ ಎಂಬ ದಾಯಾದಿ ಅಣ್ಣ-ತಮ್ಮಂದಿರು ಮೈಸೂರಿನಿಂದ ಬೇಸಿಗೆ ರಜೆಗೆ ಕಾನೂರಿಗೆ ಮರಳಿ ಬರುವ ಸಂದರ್ಭದಿಂದ. ಕಾನೂರು ಮನೆಗೆ ರಾಮಯ್ಯನ ಅಪ್ಪನಾದ ಚಂದ್ರಯ್ಯಗೌಡರೇ ಯಜಮಾನರು. ಅವರ ಎರಡನೇ ಹೆಂಡತಿ (ರಾಮಯ್ಯನ ಮಲತಾಯಿ) ಸತ್ತ ನಂತರ, ಅರ್ಧ ವಯಸ್ಸು ಕಳೆದ ಚಂದ್ರಯ್ಯಗೌಡರು ಮೂರನೇ ಮದುವೆಯಾಗಲು ಇಚ್ಛಿಸಿದಾಗ, ಸುಸಂಸ್ಕೃತ ಶ್ರೀಮಂತರು ಯಾರು ಅವರಿಗೆ ವಧು ಕೊಡಲು ಒಪ್ಪುವುದಿಲ್ಲ. ಆಗ ಅವರು ನೆಲ್ಲುಹಳ್ಳಿಗೆ ಹೋಗಿ ಬಡವರಾದ ಪೆದ್ದೇಗೌಡರ ಮಗಳು ಸುಬ್ಬಿಯನ್ನು ಮದುವೆಯಾಗುತ್ತಾರೆ.
ಕುವೆಂಪುರವರೇ ಹೇಳಿರುವಂತೆ ನೆಲ್ಲುಹಳ್ಳಿಯ ಜನರ ಬಾಯಿಂದ 'ಸುಬ್ಬಿ' ಎಂದು ಕರೆಸಿಕೊಂಡ ಸುಬ್ಬಮ್ಮ, ಚಂದ್ರಯ್ಯಗೌಡರ ಹೆಂಡತಿಯಾಗಿ ಕಾನೂರು ಸುಬ್ಬಮ್ಮ ಹೆಗ್ಗಡತಿ ಆಗುತ್ತಾಳೆ. ಒರಟು ಸ್ವಭಾವದ ಹೆಣ್ಣಾದ ಸುಬ್ಬಮ್ಮನಿಗೆ ಶ್ರೀಮಂತ ಮನೆಗೆ ಹೊಂದಿಕೊಳ್ಳಲಾಗದೆ ಚಡಪಡಿಸುತ್ತಾ, ಮುಂದೆ ಗಂಡನ ಅನುಮಾನ ಮತ್ತು ಸಂಶಯಗಳಿಗೆ ಗುರಿಯಾಗಿ ನರಳುವ ಪರಿಸ್ಥಿತಿ ಬರುತ್ತದೆ. ಮುಂದೆ ಚಂದ್ರಯ್ಯಗೌಡರ ಹಿಂಸೆಗೆ ಹೆದರಿ ಕಾನೂರು ಮನೆಯನ್ನು ಬಿಟ್ಟು ತವರು ಮನೆ ಸೇರುವುದು ಅವಳ ಪಾಡಾಗುತ್ತದೆ.
ಊರಿಗೆ ಬಂದ ಹೂವಯ್ಯ-ರಾಮಯ್ಯರಿಗೆ ಮುಂದೆ ಮೈಸೂರಿಗೆ ವಿದ್ಯಾಭ್ಯಾಸಕ್ಕೆ ಹೋಗಲು ಕಾರಣಾಂತರಗಳಿಂದ ಸಾಧ್ಯವಾಗುವುದಿಲ್ಲ. ಹೂವಯ್ಯನ ತಂದೆಯ ತಮ್ಮನಾದ ಚಂದ್ರಯ್ಯಗೌಡರಿಗೆ, ಹೂವಯ್ಯನನ್ನು ಹಾಗೂ ಆತನ ತಾಯಿ ನಾಗಮ್ಮನನ್ನು ಕಂಡರೆ ಮನಸ್ತಾಪ. ಹೂವಯ್ಯನ ತಂದೆ ತುಂಬಾ ಕಾಲದ ಹಿಂದೆ ಸತ್ತುಹೋದ ಕಾರಣ ಕಾನೂರಿಗೆ ಚಂದ್ರಯ್ಯಗೌಡರೇ ಯಜಮಾನರು.
ಪಾತ್ರಗಳ ವಿಶ್ಲೇಷಣೆ
ಹೂವಯ್ಯ:
ಇಲ್ಲಿ ಸಾಕ್ಷಾತ್ ಬುದ್ಧನಂತಹ ಮನುಷ್ಯ. ಅವನು ಸತ್ಯ, ಸುಂದರ, ಸ್ನೇಹ ಮೂರ್ತಿ, ಅದಮ್ಯ ಮಹಾನ್ ಚೇತನ. ಆಧುನಿಕತೆಯನ್ನು ಮತ್ತು ಉಪನಿಷತ್ತು ತತ್ವಗಳನ್ನು ಮೈಗೂಡಿಸಿಕೊಂಡ ಆತ ಮಲೆನಾಡಿನಲ್ಲಿ ಜನ್ಮವೆತ್ತಿದ ಬುದ್ಧನೇ ಸರಿ. ತನ್ನ ಪ್ರಭಾವದಿಂದ ಸುತ್ತಮುತ್ತಲಿನವರ ಮೇಲೆ ಧನಾತ್ಮಕ ಪರಿಣಾಮ ಬೀರುತ್ತಾನೆ. ಮೊದಲೇ ಹೂವಯ್ಯನನ್ನು ದ್ವೇಷಿಸುತ್ತಿದ್ದ ಚಂದ್ರಯ್ಯ ಗೌಡರು, ತಮ್ಮ ಹೆಂಡತಿಯ ಮೇಲೆ ಮತ್ತು ಹೂವಯ್ಯನ ಮೇಲೆ ಇಲ್ಲಸಲ್ಲದ ಸುಳ್ಳು ಅನುಮಾನ ತಾಳಿ ಹೂವಯ್ಯನ ತಂದೆಯ ಪಾಲನ್ನು ಆತನಿಗೆ ಕೊಟ್ಟು ಕಾನೂರು ಮನೆ ಪಾಲಾಗುವಂತೆ ಮಾಡುತ್ತಾರೆ. ಮುಂದೆ ಚಂದ್ರಯ್ಯಗೌಡರ ಕ್ರೂರ ಬುದ್ಧಿ ಮತ್ತು ಹಿಂಸೆ ತಾಳಲಾರದೆ ಮೃದು ಮನಸ್ಸಿನ ಹೂವಯ್ಯ ತನ್ನ ಪಾಲು ಇಸ್ಸೆ ಮಾಡಿಕೊಂಡು ಅಣ್ಣಯ್ಯ ಗೌಡರು ಬಿಟ್ಟು ಹೋದ ಕೆಳ ಕಾನೂರು ಮನೆ ಸೇರುತ್ತಾನೆ.
ರಾಮಯ್ಯ:
ರಾಮಯ್ಯನು ಹೂವಯ್ಯನ ಸಹವಾಸದಿಂದ ಸೃಜನಶೀಲತೆ ಮೈಗೂಡಿಸಿಕೊಂಡವನು. ಆದರೆ ತನ್ನ ತಂದೆಯ ಚಾಡಿ ಮಾತಿಗೆ ಕಿವಿಗೊಟ್ಟು ಮೌಢ್ಯಕ್ಕೆ ಒಳಗಾಗುತ್ತಾನೆ. ಸೀತೆಯ ಇಷ್ಟಕ್ಕೆ ವಿರುದ್ಧವಾಗಿ ವಿವಾಹವಾಗಿ ಸಂಸಾರದ ಜಂಜಾಟಕ್ಕೆ ಸಿಲುಕುತ್ತಾನೆ. ಮಾನಸಿಕ ನೆಮ್ಮದಿ ಇಲ್ಲದೆ ಆತನೂ ಮುಂದೆ ಸುಬ್ಬಮ್ಮನ ಮರಣದ ನಂತರ ಆತ್ಮಹತ್ಯೆಗೆ ಶರಣಾಗುತ್ತಾನೆ.
ಸೀತೆ:
ಸೀತೆ ಬಾಹ್ಯ ಪ್ರಪಂಚದಲ್ಲಿ ರಾಮಯ್ಯನನ್ನು ಮದುವೆಯಾದರೂ, ಆಂತರಿಕ ಪ್ರಪಂಚದಲ್ಲಿ ಹೂವಯ್ಯನನ್ನು ಆರಾಧಿಸುತ್ತಾಳೆ. ಅವಳದು ಪವಿತ್ರ ಪ್ರೇಮ. ಅವರ ಪ್ರೇಮಕ್ಕೆ ಸಂಪರ್ಕದ, ಸ್ಪರ್ಶದ ಸುಖಕ್ಕಿಂತಲೂ ಸಾನಿಧ್ಯದ ಪವಿತ್ರವಾದ ಮಧುರವಾದ ಆನಂದವೇ ಹೆಚ್ಚು ಪ್ರಿಯವಾದದ್ದು. ಹೂವಯ್ಯ ಸೀತೆಗೆ "ಪಂಚಪ್ರಾಣ", ಆಕೆಯ ಆರಾಧ್ಯಮೂರ್ತಿ, ಸತ್ಯ ಸುಂದರ ಮೂರ್ತಿ, ಪ್ರಿಯಮೂರ್ತಿ.
ಸುಬ್ಬಮ್ಮನ ದುರಂತ ಮತ್ತು ಸಮಾಜದ ಮುಖವಾಡ
ಚಂದ್ರಯ್ಯ ಗೌಡರ ಹಿಂಸೆ ಮತ್ತು ಅನುಮಾನಕ್ಕೆ ಗುರಿಯಾಗಿ ಕಾನೂರು ಮನೆ ಬಿಟ್ಟಿದ್ದ ಸುಬ್ಬಮ್ಮ, ಚಂದ್ರಯ್ಯ ಗೌಡರ ಸಾವಿನ ಸಮಯದಲ್ಲಿ ಕಾನೂರು ಮನೆಗೆ ಮತ್ತೆ ಮರಳುತ್ತಾಳೆ. ಚಂದ್ರಯ್ಯ ಗೌಡರ ಮರಣದ ನಂತರ ಮತ್ತೆ ಸುಬ್ಬಮ್ಮ ಕಾನೂರಿಗೆ ಹೆಗ್ಗಡತಿಯಾಗಿ ಮರಳಿ ಅಧಿಕಾರ ಸ್ವೀಕರಿಸುತ್ತಾಳೆ. ಅವಳ ಆಡಳಿತ ಸುತ್ತಮುತ್ತಲಿನ ಊರುಗಳಿಗೆಲ್ಲ ಜನಜನಿತವಾಗುತ್ತದೆ.
ಆದರೆ, ವೃದ್ಧ ಗಂಡನನ್ನು ಮದುವೆಯಾಗಿ ಸಂಸಾರಿಕ ಸುಖವನ್ನು ಕಾಣದ ಸುಬ್ಬಮ್ಮ, ಸೇರೆಗಾರ ರಂಗಪ್ಪ ಶೆಟ್ಟರ ನಾಯಿಬುದ್ಧಿ ಮತ್ತು ಕುತಂತ್ರಕ್ಕೆ ಬಲಿಯಾಗಿ, ವಿಧವೆಯಾದವಳು ಗರ್ಭಿಣಿಯಾಗುತ್ತಾಳೆ. ರಂಗಪ್ಪ ಶೆಟ್ಟರ ಮೂಲಕ ಗಂಗೆಯಿಂದ ಗರ್ಭಪಾತದ ಔಷಧಿ ಪಡೆದು ಸಾಯಬಾರದ ಸಾವಿಗೆ ಬಲಿಯಾಗುತ್ತಾಳೆ.
"ಇಲ್ಲಿ ಸುಬ್ಬಮ್ಮ ಪುರುಷ ಪ್ರಧಾನ ರಾಜಕಾರಣ ಹಾಗೂ ಸಮಾಜದ ಕೈಗೊಂಬೆ ಮತ್ತು ಬಲಿಪಶು ಆಗುತ್ತಾಳೆ."
ಚಂದ್ರಯ್ಯಗೌಡರ ಆಕ್ರೋಶ ಮತ್ತು ಅನುಮಾನ, ರಂಗಪ್ಪ ಶೆಟ್ಟರ ಹೇಯ ಬುದ್ಧಿ ಹಾಗೂ ಕುತಂತ್ರಕ್ಕೆ ಬಲಿಯಾದ ಸುಬ್ಬಮ್ಮನ ದಡ್ಡತನ, ರಾಮಯ್ಯನ ಮಾನಸಿಕ ವ್ಯವಸ್ಥೆ—ಇವೆಲ್ಲವೂ ಕಾನೂರು ಮನೆತನದ ನಾಶಕ್ಕೆ ಕಾರಣವಾಗುತ್ತದೆ. ಪುರುಷಪ್ರಧಾನ ವ್ಯವಸ್ಥೆಗೆ ಬಲಿಯಾದ ಸುಬ್ಬಮ್ಮನನ್ನು ಕುರಿತು ಇಲ್ಲಿ ಮಮಕಾರ ಉಂಟಾಗುತ್ತದೆ. ವೃದ್ಧ ಗಂಡನನ್ನು ಕೈಹಿಡಿದು ಸಂಸಾರಿಕ ಸುಖ ಕಾಣದೆ, ಅವಮಾನ ಮತ್ತು ಹಿಂಸೆಗೆ ಒಳಗಾಗಿ, ರಂಗಪ್ಪ ಶೆಟ್ಟರ ಕುತಂತ್ರಕ್ಕೆ ಬಲಿಯಾಗಿ ಶ್ರೀಮಂತ ಸಂಸ್ಕೃತಿಗೆ ಹೊಂದಿಕೊಳ್ಳಲಾಗದೆ, ಗಂಡನಿಂದ ಅನುಮಾನ-ಸಂಶಯಕ್ಕೆ ಒಳಗಾಗಿ ಹೆಗ್ಗಡಿತಿ ಆದರೂ ಆಕೆಯ ಜೀವನ ಮುಳ್ಳಿನ ಮೇಲೆ ನಿಂತ ಬದುಕಾಗುತ್ತದೆ.
ವೈಚಾರಿಕತೆಯ ಉದಯ ಮತ್ತು ಮಲೆನಾಡಿನ ಸೊಬಗು
ಮುಂದೆ ಹೂವಯ್ಯ ಬುದ್ಧನ ಕಾರುಣ್ಯ ಮೈಗೂಡಿಸಿಕೊಂಡು ಕರ್ಮಯೋಗಿಯಾಗಿ ಮಲೆನಾಡಿನ ಕಾನುಬೈಲಿನಲ್ಲಿ ನೆಲೆಕೊಳ್ಳುತ್ತಾನೆ. ಪವಿತ್ರ ಪ್ರೇಮಿಯಾದ ಸೀತೆ ತಪಸ್ವಿನಿ ಸ್ಥಾನ ಪಡೆದು ಆತನ ಸೇವೆ ಮಾಡುತ್ತಾಳೆ.
ಇದರೊಂದಿಗೆ ಮಲೆನಾಡಿಗೆ ಆಧುನಿಕತೆಯ ಸ್ಪರ್ಶ ಆಗುತ್ತದೆ. ಮಲೆನಾಡಿಗರಿಗೆ ರೋಗ-ರುಜಿನಗಳು ಬಂದರೆ ದೇವರಿಗೆ ಹರಕೆ ಕಟ್ಟುವ ಬದಲು ಆಸ್ಪತ್ರೆಗೆ ಹೋಗಲು ಪ್ರಾರಂಭಿಸುತ್ತಾರೆ. ಕಳ್ಳನ್ನು ಕಾಸುವ ಕಳ್ಳಂಗಡಿಗೆ ಹಾಳು ಬಿದ್ದಿತು ಎಂದು ಹೇಳುವ ಕುವೆಂಪು, ಮಲೆನಾಡಿನ ಮೌಢ್ಯಕ್ಕೆ ಪಾಳು ಬಿದ್ದು ಆಧುನಿಕತೆ ಚಿಗುರಿತು ಎಂದು ಅಭಿಪ್ರಾಯ ಪಡುತ್ತಾರೆ. ಈ ಕಾದಂಬರಿಯ ಒಟ್ಟಾರೆ ಆಶಯ ಮಲೆನಾಡಿಗೆ ಆಧುನಿಕತೆ ತರುವುದು, ಹೂವಯ್ಯ ಅದಮ್ಯ ಚೇತನನಾಗಿ ಮೌಢ್ಯ ನಿವಾರಿಸುವುದು ಮತ್ತು ಮಲೆನಾಡಿನಲ್ಲಿ ವೈಚಾರಿಕ ಬೆಳಕಿನ ಸ್ಪರ್ಶ ತರುವುದು.
ಇವುಗಳ ಜೊತೆಗೆ ಮಲೆನಾಡಿನಲ್ಲಿದ್ದ ಮೂಢನಂಬಿಕೆಗಳು, ಸಹ್ಯಾದ್ರಿಯ ರಮಣೀಯ ಪರ್ವತ ತರಂಗ ಶ್ರೇಣಿಗಳು, ಮಲೆನಾಡಿನ ಅನನ್ಯ-ಅದಮ್ಯ ಸೌಂದರ್ಯದ ವರ್ಣನೆ, ಮಲೆನಾಡಿನ ಜನರ ಸಾಮಾಜಿಕ ಜೀವನ, ಮಲೆನಾಡಿಗರ ಧೈರ್ಯಕ್ಕೆ ಪ್ರತಿಬಿಂಬವಾದ ಶಿಕಾರಿ, ಜನರ ಬದುಕಿನಲ್ಲಿ ಅವರಿಗಿದ್ದ ನಂಬಿಕೆಗಳು, ದಯ್ಯದ ಹರಕೆ, ಹಳ್ಳಿ ಜನರ ಆಚರಣೆಗಳು ಮುಂತಾದವುಗಳನ್ನು ಕುವೆಂಪು ಅವರು ಅತ್ಯಂತ ಅದ್ಭುತವಾಗಿ ನಿರೂಪಿಸಿದ್ದಾರೆ.
ಒಟ್ಟಾರೆಯಾಗಿ ಹೂವಯ್ಯನ ಕಾರುಣ್ಯ ನಮ್ಮೆಲ್ಲರೊಳಗೂ ಹಬ್ಬಲಿ, ನಮ್ಮಲ್ಲಿಯ ಮೌಡ್ಯತೆ ಎನ್ನುವುದು ಅವನತಿಯ ಹಂತ ತಲುಪಲಿ.
- ವಿಶ್ವನಾಥ ಜಿ. ಎಚ್.
ಯುವ ಬರಹಗಾರ
ಸೊರಬ (ತಾ) ಶಿವಮೊಗ್ಗ (ಜಿ)
ಸಂಪಾದಕೀಯ ನುಡಿ
ಕುವೆಂಪು ಅವರ 'ಕಾನೂರು ಹೆಗ್ಗಡತಿ' ಕೇವಲ ಒಂದು ಕಾದಂಬರಿಯಲ್ಲ; ಅದು ಮಲೆನಾಡಿನ ಪ್ರಕೃತಿ ಸೌಂದರ್ಯ, ಜನರ ಸಂಸ್ಕೃತಿ ಮತ್ತು ವೈಚಾರಿಕ ಜಾಗೃತಿಯ ಜೀವಂತ ದಸ್ತಾವೇಜು. ಶತಮಾನದ ಹಿಂದಿನ ಹಳ್ಳಿ ಜೀವನದ ಬದುಕಿನ ಸಂಕೀರ್ಣತೆಯನ್ನು ತೆರೆದಿಡುವ ಈ ಕೃತಿಯಲ್ಲಿ, ಒಂದು ಕಡೆ ಮೂಢನಂಬಿಕೆಗಳ ಕತ್ತಲಿದ್ದರೆ, ಮತ್ತೊಂದೆಡೆ ಆಧುನಿಕತೆಯ ಬೆಳಕನ್ನು ತರಲು ಶ್ರಮಿಸುವ ಹೂವಯ್ಯನಂತಹ ಚೇತನಗಳಿವೆ. ಕೇವಲ ಪ್ರಣಯ ಅಥವಾ ಸಾಮಾಜಿಕ ಕಥಾಹಂದರವನ್ನು ದಾಟಿ, ಮನುಷ್ಯನ ಅಂತರಂಗದ ಹೋರಾಟಗಳು ಹಾಗೂ ಸಮಾಜದ ಮೌಢ್ಯಗಳ ವಿರುದ್ಧ ವೈಚಾರಿಕ ಬೆಳಕನ್ನು ಚೆಲ್ಲುವಲ್ಲಿ ಈ ಕಾದಂಬರಿಯ ಪಾತ್ರ ಅನನ್ಯವಾದದ್ದು.
ಕಾದಂಬರಿಯ ಅತ್ಯಂತ ದುರಂತಮಯ ಹಾಗೂ ಶೋಷಿತ ಪಾತ್ರವಾಗಿ ಮೂಡಿಬರುವ ಸುಬ್ಬಮ್ಮನ ಬದುಕು, ನಮ್ಮ ಸಮಾಜದ ಕ್ರೂರ ಪುರುಷಪ್ರಧಾನ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ. ಅಸಹಾಯಕತೆ, ಅನುಮಾನ ಹಾಗೂ ಕುತಂತ್ರಗಳ ಜಾಲಕ್ಕೆ ಸಿಲುಕಿ ಬಲಿಯಾಗುವ ಸುಬ್ಬಮ್ಮನ ಪಾತ್ರವು ಪ್ರತಿಯೊಬ್ಬ ಓದುಗನಲ್ಲೂ ಕರುಣೆ ಮತ್ತು ಆಕ್ರೋಶಗಳನ್ನು ಒಟ್ಟಿಗೇ ಮೂಡಿಸುತ್ತದೆ. ಅಧಿಕಾರ ಹಾಗೂ ಶ್ರೀಮಂತಿಕೆ ಸಿಕ್ಕರೂ, ಹೆಣ್ಣೊಬ್ಬಳು ವ್ಯವಸ್ಥೆಯ ಕೈಗೊಂಬೆಯಾಗಿ ಹೇಗೆ ದುರಂತದ ಹಾದಿ ಹಿಡಿಯುತ್ತಾಳೆ ಎಂಬುದನ್ನು ಲೇಖಕರು ಅತ್ಯಂತ ಮಾರ್ಮಿಕವಾಗಿ ಈ ವಿಮರ್ಶೆಯಲ್ಲಿ ಚಿತ್ರಿಸಿದ್ದಾರೆ.
ಇಂದಿನ ತಂತ್ರಜ್ಞಾನ ಹಾಗೂ ಸಾಮಾಜಿಕ ಜಾಲತಾಣಗಳ ಯುಗದಲ್ಲೂ ಯುವಜನತೆ ತನ್ನತನವನ್ನು ಮರೆತು ದಾರಿ ತಪ್ಪುತ್ತಿರುವಾಗ, ಇಂತಹ ಸಾಹಿತ್ಯಿಕ ವಿಮರ್ಶೆಗಳು ನಮ್ಮನ್ನು ಚಿಂತನೆಗೆ ಹಚ್ಚುತ್ತವೆ. ಮೂಢನಂಬಿಕೆಗಳು ತೊಲಗಿ, ಹೂವಯ್ಯನಂತಹ ಕಾರುಣ್ಯ ಹಾಗೂ ವೈಚಾರಿಕ ದೃಷ್ಟಿಕೋನ ಸಮಾಜದಲ್ಲಿ ಬೆಳಗಬೇಕೆಂಬ ಲೇಖಕ ವಿಶ್ವನಾಥ್ ಜಿ. ಎಚ್. ಅವರ ಆಶಯ ಅತ್ಯಂತ ಪ್ರಸ್ತುತವಾಗಿದೆ. ಮಲೆನಾಡಿನ ಸೊಬಗಿನೊಂದಿಗೆ ಮಾನವೀಯ ಮೌಲ್ಯಗಳನ್ನು ಕಣ್ಣೆದುರು ತರುವ ಈ ಉತ್ತಮ ಲೇಖನವನ್ನು ನಮ್ಮ ‘ಕನ್ನಡ ಗ್ಲೋಬಲ್ ನ್ಯೂಸ್’ ನ ಭಾನುವಾರದ ವಿಶೇಷ ಪುರವಣಿಯಲ್ಲಿ ಪ್ರಕಟಿಸಲು ಹೆಮ್ಮೆಯೆನಿಸುತ್ತದೆ.
No comments:
Post a Comment