ಭಾನುವಾರದ ವಿಶೇಷ: ಒಮ್ಮೆ ಹೆಣ್ಣಾಗು ಪ್ರಭುವೇ ಕಥೆಯ ವಿಮರ್ಶೆ-ರಶ್ಮಿ ಹೆಚ್. ಎಲ್. - Kannada global

Breaking

Saturday, August 1, 2026

ಭಾನುವಾರದ ವಿಶೇಷ: ಒಮ್ಮೆ ಹೆಣ್ಣಾಗು ಪ್ರಭುವೇ ಕಥೆಯ ವಿಮರ್ಶೆ-ರಶ್ಮಿ ಹೆಚ್. ಎಲ್.

ಬೂಕರ್ ಪ್ರಶಸ್ತಿಯನ್ನು ಗೆದ್ದು ಕನ್ನಡದ ಕೀರ್ತಿಯನ್ನು ವಿಶ್ವ ಮಟ್ಟದಲ್ಲಿ ಹರಡಿರುವ ಬರಹಗಾರ್ತಿ ಮತ್ತು ಹೋರಾಟಗಾರ್ತಿ ಬಾನು ಮುಷ್ತಾಕ್. ಹಾಸನದಲ್ಲಿ ನೆಲೆಸಿರುವ ಬಾನು ಮುಷ್ತಾಕ್ ಅವರು 3 ಏಪ್ರಿಲ್ 1948 ರಲ್ಲಿ ಜನಿಸಿದರು. ಅವರ ಕೃತಿಗಳ ಬಗ್ಗೆ ವಿಶ್ಲೇಷಣೆ ಮಾಡುವಾಗ ಅವುಗಳನ್ನು ಉಳಿದವರ ಕಥೆಗಳಂತೆ ಕೇವಲ ಕಾಲ್ಪನಿಕ ಎಂದು ನೋಡಿದರೆ ಸಾಲದು. ಕಥೆಗಳೆಲ್ಲವೂ ಆತ್ಮಕಥೆಗಳೇ ಎನ್ನುವ ಸುರಳೀಕೃತ ಧೋರಣೆಯನ್ನು ಒಪ್ಪಿಕೊಳ್ಳಲಾಗದಿದ್ದರೂ ಕಥೆಗಾರ್ತಿ ಒಬ್ಬರ ವೈಯಕ್ತಿಕ ಬದುಕಿನಲ್ಲಿ ಹೋರಾಟಗಾರ್ತಿಯು, ವಕೀಲೆಯು, ಸಮಾಜ ಸುಧಾರಕಿಯು, ರಾಜಕಾರಣಿಯು ಜೊತೆಗೆ ಮತ್ತು ಏನೇನೋ ಆದಾಗ ಆಕೆಯ ಬದುಕು ಮತ್ತು ಬರಹಗಳ ನಡುವಿನ ಗೆರೆ ಅಳಿಸಿ ಹೋಗುತ್ತದೆ. ಅದರಲ್ಲೂ ಬಾನು ಅಲ್ಪಸಂಖ್ಯಾತ ಮುಸಲ್ಮಾನ ಸಮುದಾಯದ ಹೆಣ್ಣಾಗಿದ್ದು ವೈಯಕ್ತಿಕ ಬದುಕಿನ ಹೋರಾಟಗಳು ಮತ್ತು ಹಲವಾರು ದಿನಗಳಲ್ಲಿ ಮಹಿಳೆಯನ್ನು ದಮನಗೊಳಿಸುವ ಸಾರ್ವತ್ರಿಕ ಸಮಸ್ಯೆಗಳು ಬೇರೆ ಬೇರೆಯಲ್ಲದೇ ತಳುಕು ಹಾಕಿಕೊಂಡಾಗ ಅವುಗಳ ನಡುವನ ಭೇದ ಗುರುತಿಸುವುದು ಇನ್ನೂ ಕಷ್ಟ ಮತ್ತು ಅದನ್ನು ಸಾಹಿತ್ಯವಾಗಿ ಮಾತ್ರ ನೋಡುವುದು ಸ್ವಲ್ಪ ಕಷ್ಟ.

ಬಾನು ಅವರ ‘ಎದೆಯ ಹಣತೆ’ ಕಥೆ ಪ್ರಕಟವಾದಾಗ ಅದು ಓದುಗರನ್ನು ಬಡಿದೆಬ್ಬಿಸಿತು, ಅದರ ಕ್ರೌರ್ಯ ಅವರ ಅಂತಃಕರಣವನ್ನು ಅಲ್ಲಾಡಿಸಿತ್ತು. ನಂತರ ಒಂದು ಸಂದರ್ಶನದಲ್ಲಿ ಬಾನು ಅವರು ಅದು ತಮ್ಮದೇ ಬದುಕಿನ ಘಟನೆ ಎಂದು ಹೇಳಿದಾಗ ಕಥೆಗೆ ಮತ್ತೊಂದು ಆಯಾಮ ದೊರಕಿತು. ಅವರ ಹಲವಾರು ಕಥೆಗಳು ಸತ್ಯ ಘಟನೆಗಳ ನಿರೂಪಣೆಯೇನೋ ಎನ್ನುವ ಸಂಶಯ ಹುಟ್ಟಿಸಿದವು.

ಬಾನು ಅವರ ಕಥೆಗಳನ್ನು ಓದುವುದೂ, ಸಂದರ್ಶನಗಳಲ್ಲಿ ಅವರ ತಮ್ಮ ಬದುಕಿನ ಕಥೆಗಳನ್ನು ನಿರ್ಭಾವುಕವಾಗಿ ನಿರೂಪಿಸುವುದು ಮೈನವಿರೇಳಿಸುವ ಅನುಭವ ಕೊಡುತ್ತವೆ.

ಬಾನು ಮುಷ್ತಾಕ್ ಅವರ ಕಥೆಗಳಲ್ಲಿ ಮುಖ್ಯವಾಗಿ ಮೂರು ನೆಲೆಗಳಿವೆ:

  1. ವ್ಯವಸ್ಥೆಯ ಒಳಗಿನ ಮುಖಾಮುಖಿ

  2. ಬಡತನ

  3. ಹೆಣ್ಣಿನ ಕೊನೆ ಇರದ ನೋವಿನ ಬದುಕು

ಈ ಮೂರರ ಅನನ್ಯತೆಗೆ ಬಾನುರವರ ಕಥೆಗಳ ಮೂಲ ವಿನ್ಯಾಸ ಎಂದು ನನಗನ್ನಿಸುತ್ತದೆ.

ಮಹಿಳೆ ಎಂದರೆ ತುಂಬಾ ಸರಳ ಅರ್ಥದಲ್ಲಿ ಗರ್ಭ, ಅಂಡಾಶಯ ಹಾಗೂ ಅವಳು ಒಂದು ಹೆಣ್ಣು ಎಂಬ ವ್ಯಾಖ್ಯಾನ ನೀಡುವ ಪುರುಷಪ್ರಧಾನ ವ್ಯವಸ್ಥೆ ಹೆಣ್ಣಿನ ಸೂಕ್ತ ಜೈವಿಕ ಗುಣದಿಂದಾಗಿ ಅವಳನ್ನು “ಹೆಣ್ಣು” ಎಂಬ ವಸ್ತುನಿಷ್ಠೆಯ ಮೂಲಕ ಗುರುತಿಸುವರು. ಈ ಪದವನ್ನು ಬಹಳಷ್ಟು ಬಾರಿ ಅವಹೇಳನಕಾರಿಯಾಗಿಯೇ ಉಪಯೋಗಿಸುವರು ಹಾಗೂ ಹೆಣ್ಣನ್ನು ಆ ಪದದಿಂದಲೇ ಬಂಧಿಸಿಡುವ ಕೆಲಸ ಶತಶತಮಾನಗಳಿಂದಲೂ ನಡೆಯುತ್ತಾ ಬಂದಿದೆ. ಹೀಗಾಗಿಯೇ ಸಿಮೊನ್ ಡಿ ಬೋವಾ ತಮ್ಮ “ದಿ ಸೆಕೆಂಡ್ ಸೆಕ್ಸ್” ನಲ್ಲಿ ಹೇಳಿದಂತೆ:

“ಹೆಣ್ಣು ಹುಟ್ಟಿನಿಂದ ಹೆಣ್ಣಾಗುವುದಿಲ್ಲ, ಸಮಾಜ ಅವಳನ್ನು ಹೆಣ್ಣಾಗಿ ಮಾರ್ಪಡಿಸುತ್ತಿದೆ.”

ಹೆಣ್ಣನ್ನು ತಾಯಿ ಅಂತಲೂ, ಜಗನ್ಮಾತೆ ಅಂತಲೂ ಹೇಳುವ ಈ ಸಮಾಜ, ಅದೇ ಹೆಣ್ಣನ್ನು ಹೆಣ್ಣು ಎಂದು ತುಂಬಾ ಕೀಳಾಗಿಯೂ ನಡೆಸಿಕೊಳ್ಳುತ್ತದೆ. ಇದಕ್ಕೆ ಉತ್ತಮ ಉದಾಹರಣೆಯಾಗಿ ಬಾನು ಮುಷ್ತಾಕ್ ಅವರ ‘ಒಮ್ಮೆ ಹೆಣ್ಣಾಗು ಪ್ರಭುವೇ’ ಕಥೆ ಹೆಣ್ಣಿನ ಮೇಲಾಗುವ ದೌರ್ಜನ್ಯಕ್ಕೆ ಹಿಡಿದ ಕೈಗನ್ನಡಿಯಾಗಿ ತೋರುತ್ತದೆ. ಬಾನು ಅವರು ಹೇಳಿದಂತೆ:

ಒಂದು ಹೆಣ್ಣು ಭ್ರೂಣವಾಗಿ ಹೊಟ್ಟೆಯಲ್ಲಿ ಇರುವಾಗಲಿಂದ ಅವಳ ಅತ್ತೆ, ಗಂಡ ಎಲ್ಲರೂ ಅದು ಹೆಣ್ಣು ಹೆಣ್ಣು ಎಂದು ನಿಂದಿಸುವರು. ಬೆಳೆಯುವಾಗ ತಾಯಿಯು ಅವಳನ್ನು ಹೆಣ್ಣು ಎಂದು ಒತ್ತಿ ಒತ್ತಿ ಹೇಳುತ್ತಾ ಬಾಲ್ಯ ಮುಳ್ಳಿನ ಒಳಗಿರುವ ಹೂವಿನ ಹಾಗೆ ಎಂದು ತೋರಿಸುವರು. ಕಥಾನಾಯಕಿ ಹೋಗುವ ಹಾದಿಯಲ್ಲಿ ಹೋಗುವವರೆಲ್ಲ ಕಣ್ಣು ಹಾಕುವರು. ಅವರ ನೋಟಗಳು ಹೇಗಿದ್ದವು ಎಂದರೆ — ಕಬ್ಬಿನದ ಚೂಪಾದ ಬಾಣದ ಹಾಗೆ ಇರುತ್ತಿದ್ದವು. ಹೀಗಾಗಿ ನಾಲ್ಕು ಗೋಡೆಯಲ್ಲಿ ಬಂಧಿಯಲ್ಲಿದ್ದ ತಾನು ದೇವರು ಸೃಷ್ಟಿಸಿದ ಅದ್ಭುತ ಪ್ರಪಂಚವನ್ನು ನೋಡ ಬಯಸಿದಾಗ ನಾಲ್ಕು ಗೋಡೆಗಳಿರುವ ಕಿಟಕಿಯನ್ನು ತೆರೆದಾಗ ಮಾತ್ರ ಸಾಧ್ಯವಾಗುತ್ತಿತ್ತು. ಮನೆಯ ಅಂಗಳಕ್ಕೆ ಹೆಜ್ಜೆ ಇಡುವಂತಿರಲಿಲ್ಲ. ಅವಳ ದುಃಖವನ್ನು ತಿಳಿಗೊಳಿಸುತ್ತಿದ್ದ ಒಂದೇ ಒಂದು ಅಂಶವೆಂದರೆ ಅದು ಅಮ್ಮನ ಕೋಮಲತೆ.

ಈ ಜಗತ್ತಿನಲ್ಲಿ ಹೆಣ್ಣು-ಗಂಡಿಗೆ ಸಮಾನತೆ ಇಲ್ಲ. ಗಂಡನ್ನು ಅಹಂಕಾರಿಯನ್ನಾಗಿ ಮಾಡಿದ್ದೀಯ, ಹೆಣ್ಣಿನ ಕಷ್ಟಗಳು ಅವನಿಗೆ ತಿಳಿಯದ ಹಾಗೆ. ಅದರಿಂದ ಬಾನು ಮುಷ್ತಾಕ್ ಅವರು ದೇವರಿಗೆ ಒಮ್ಮೆಯಾದರೂ ಹೆಣ್ಣಾಗು ಪ್ರಭುವೇ ಎಂದಿದ್ದಾರೆ. ಗಂಡಿನ ಹಾಗೆ ಹೆಣ್ಣು ಸ್ವತಂತ್ರವಾಗಿರುವ ಹಾಗಿಲ್ಲ. ಗಂಡು ಏನು ಮಾಡಿದರೂ ಅದು ಸರಿಯೇ. ಹಾಗೆ ಬಾಲ್ಯ ಕಳೆಯುತ್ತಿದ್ದಂತೆ ಅವಳಿಗೆ ಇಷ್ಟವಿಲ್ಲದಿದ್ದರೂ ಗಂಡು കുಡುಕನೋ, ವ್ಯಸನಿಯೋ, ವ್ಯಭಿಚಾರಿಯೋ ಇದ್ಯಾವುದನ್ನೂ ನೋಡದೆ ಅಮ್ಮ ಬಡತನಕ್ಕೆ ಕಟ್ಟುಬಿದ್ದು ಅವನ ಜೊತೆ ಮದುವೆ ಮಾಡುವರು. ಅಮ್ಮನೇ ಪ್ರಪಂಚವಾದ ಹೆಣ್ಣು ಅಮ್ಮನನ್ನು ಬಿಟ್ಟು ಬೇರೆಲ್ಲೂ ಹೋಗಿ ಯಾರೋ ಗೊತ್ತಿಲ್ಲದ ಮನುಷ್ಯನ ಜೊತೆ ಜೀವನಪೂರ್ತಿ ಕಳೆಯಬೇಕಾದ ಸಂದರ್ಭ.

ಕಥಾನಾಯಕಿ ಗಂಡನ ಮನೆಯಲ್ಲಿ ಕಷ್ಟ ಸುಖವನ್ನು ಹಂಚಿಕೊಳ್ಳುವ ಹೆಣ್ಣಾಗದೆ ಬರಿ ಸುಖವನ್ನು ನೀಡುವ ಹೆಣ್ಣಿನಂತೆ, ಆಟಿಕೆಯ ಗೊಂಬೆಯಂತಾಗುವಳು. ಹೆಣ್ಣನ್ನು ಹಾಸಿಗೆಯ ಸುಖಕ್ಕೋಸ್ಕರ ಅವಳನ್ನು ಮನಬಂದಂತೆ ಉಪಯೋಗಿಸಿಕೊಳ್ಳುವನು. ಅವನು ಆಡುವ ಅಹಂಕಾರ, ಗರ್ವದ ಮಾತುಗಳು ಹೆಣ್ಣಿನ ಕೋಮಲವಾದ ಮನಸ್ಸನ್ನು ಗಾಸಿಗೊಳಿಸುವುದು.

ಅವನ ಮೇಲೆ ಎಷ್ಟು ಕೋಪ, ದ್ವೇಷ ಮಾಡಿಕೊಂಡರೂ ಸಹ ತನ್ನೊಳಗೆ ನುಂಗಿಕೊಳ್ಳುತ್ತಾಳೆ. ಒಂದು ಹೆಣ್ಣಿಗೆ ತನ್ನ ಗಂಡ ಆದವನು ಹೆಂಡತಿಯನ್ನು ಬರಿ ಹಾಸಿಗೆಯ ಸುಖಕ್ಕಾಗಿ ಬಳಸದೆ ತನ್ನ ಭಾವನೆಗಳಿಗೆ ಸ್ಪಂದಿಸುತ್ತಾ, ಆರೈಕೆ ಮಾಡುವ ತಂದೆ-ತಾಯಿ ಪ್ರೀತಿ ಕೊಡುವ ಗಂಡ ಸಿಕ್ಕರೆ ಅವಳಂತ ಪುಣ್ಯವಂತೆ ಬೇರೆ ಯಾರೂ ಇರುವುದಿಲ್ಲ. ಆದರೆ ಗಂಡು ಎನ್ನುವ ಅಹಂಕಾರ ಅವೆಲ್ಲವನ್ನೂ ಮರೆಸಿ ಬಿಡುತ್ತದೆ. ತಾನೇ ಸರ್ವ ಶ್ರೇಷ್ಠ ಎಂಬ ಅಹಂಕಾರದಿಂದ ತನ್ನನ್ನು ನಂಬಿರುವ ಜೀವ ಎಂಬುದನ್ನು ಮರೆತು, ಅವಳಿಗೆ ವರದಕ್ಷಣೆ ಕಿರುಕುಳ ನೀಡುವನು. ಅತ್ತೆ ಎನ್ನುವ ಹೆಣ್ಣು ಸಹ ಅವನೊಂದಿಗೆ ಸೇರಿ ಕಾಟ ಕೊಡುವಳು. ಅವಳ ಸ್ಥಿತಿ ಈಗ ಮಲಿನವಾದ ವಸ್ತ್ರದಲ್ಲಿ ಕಟ್ಟಿದ ಗಿಲೀಟಿನ ಒಡವೆಯಂತೆ.

ತವರು ಮನೆಯಲ್ಲಿ ತುಂಬಾ ಬಡತನದಲ್ಲಿದ್ದರೂ ಏನು ದಿಕ್ಕು ತೋಚದೆ ಅಮ್ಮನ ಮನೆಗೆ ಬಂದಳು. ಅಮ್ಮ ಮಗಳನ್ನು ನೋಡಿದ ತಕ್ಷಣ ಅಮ್ಮನ ಮುಖದಲ್ಲಿ ಸಂತೋಷಕ್ಕೆ ಪಾರವೇ ಇಲ್ಲ. ಸೂರ್ಯ-ಚಂದ್ರರು ಒಮ್ಮೆಲೇ ಹೊಳೆಯುವ ಹಾಗೆ ಅವಳ ಕಣ್ಣಲ್ಲಿ ಹೊಳೆದವು. ಅವಳ ಗಂಡ ಬಾರದನ್ನು ನೋಡಿ ಆ ಖುಷಿ ಹಾಗೆ ಬಾಡಿ ಹೋಯಿತು. ಹೆಣ್ಣಿಗೆ ತಾಯಿ ಮಡಿಲು ತುಂಬಾ ಹಿತವಾಗಿರುತ್ತದೆ. ಒಬ್ಬ ಮಗಳಿಗೆ ತನ್ನ ತಾಯಿಯೇ ಮೊದಲ ಗೆಳತಿಯೂ ಆಗಿರುತ್ತಾಳೆ. ಆದರೆ ಈ ಬಡತನ ಹಾಗೂ ವರದಕ್ಷಿಣೆ ಭೂತ ಹೇಗೆಂದರೆ ಹೆಣ್ಣಿನ ತವರುಮನೆ ಸಂಬಂಧವನ್ನೇ ದೂರ ಮಾಡಿತು. ಈ ಸಮಾಜದಲ್ಲಿ ಹಣಕ್ಕೆ ಇರುವ ಬೆಲೆ ಹೆಣ್ಣಿನ ಭಾವನೆಗಳಿಗಿಲ್ಲ. ಗಂಡನೇ ಸರ್ವಸ್ವ, ಗಂಡನೇ ದೈವ, ಎಲ್ಲವನ್ನೂ ಸಹಿಸಿಕೊಂಡು ಅವನನ್ನು ಅನುಸರಿಸುವುದು ಅವಳ ಕರ್ತವ್ಯ ಎಂಬ ಹಿತವಚನಗಳ ನಡುವೆ ಬೆಳೆದ ಹೆಣ್ಣು ಇವೆಲ್ಲ ದುಃಖವನ್ನು ನುಂಗಿ ಬದುಕುತ್ತಾಳೆ.

ಗಂಡು ಯಾರನ್ನು ಬೇಕಾದರೂ ಯಾವಾಗ ಬೇಕಾದರೂ ಭೇಟಿಯಾಗಬಹುದಾದ ಈ ಜಗತ್ತಿನಲ್ಲಿ, ಗಂಡನಾದವನು ತನ್ನ ಹೆಂಡತಿಗೆ ಅವಳ ತಾಯಿಯನ್ನು ನೋಡಲು ಅವಕಾಶ ಕೊಡದೆ ಹಿಂಸೆ ನೀಡುವನು. ತನ್ನ ತವರು ಮನೆಯವರು ಮಗಳ ಸುಖಕ್ಕೋಸ್ಕರ ತಮ್ಮಲ್ಲಿರುವುದನ್ನು ಮಾರಿ ಅಳಿಯನಿಗೆ ನೀಡುವರು. ಈ ವರದಕ್ಷಿಣೆಯಿಂದಾಗಿ ತನ್ನ ತವರು ಮನೆ ಸಂಬಂಧವನ್ನೇ ಕಳೆದುಕೊಳ್ಳುವ ಸಂದರ್ಭ ತನ್ನ ತಾಯಿಯೇ ಸತ್ತರೂ ಅವಳ ಮುಖವನ್ನು ಸಹ ನೋಡದೆ ಇರುವ ಹಾಗೆ ಮಾಡಿತು.

ಹೆಣ್ತನವನ್ನು ಆಲಿಂಗಿಸಿ ಬದುಕನ್ನು ನಡೆಸಲು ಕಲಸಿದ ತನ್ನ ಸ್ಪೂರ್ತಿ “ಅಮ್ಮ” ಎಂಬ ಶಕ್ತಿ ತನ್ನಿಂದ ದೂರವಾದಾಗ ಪಾಪ ಆ ಹೆಣ್ಣಿನ ಮನ ಹೇಗೆ ಕುಂದು ಹೋಗಿರಬಹುದು? ನೋವಿನ ಕಟ್ಟೆಯೊಡೆದು ಎಷ್ಟು ದೂರ ಹರಿದಿರಬಹುದು?

ಇದೆಲ್ಲವನ್ನೂ ಮರೆಸಲೆಂದೇನೋ ಹೆಣ್ಣಿಗೆ ತಾಯ್ತನವನ್ನು ವರವಾಗಿ ಆ ದೇವರು ನೀಡುವನು. ಆದರೆ ಆ ವರ ಶಾಪವಾಗಿ ಬದಲಾಗುವುದು ಎಂದು ಅವಳು ಎಂದೂ ಎಣಿಸಿರಲಿಲ್ಲ. ತಾಯ್ತನದ ವರದಿಂದ ಕೃಶವಾದ ದೇಹಕ್ಕೆ ನೆರವಾಗುವ ಬದಲು, ತನ್ನ ಸುಖದ ತುಚ್ಚ ನೆಪ ನೀಡಿ ಎರಡನೇ ಮದುವೆಯಾಗುವ ಸಂದರ್ಭ ಹೆಣ್ಣಿನ ಮೇಲೆ ಗಂಡಿಗಿರುವುದು ಸುಖ ಲೋಲುಪತೆಯ ಭಾವನೆಯಲ್ಲದೆ ಮತ್ತೇನು ಅಲ್ಲ ಎಂಬುದನ್ನು ಒತ್ತಿಹೇಳುತ್ತದೆ.

ಹೆಣ್ಣು ತನ್ನ ಗಂಡನಿಗೆ ಯಾವಾಗಲೂ ಅತ್ಯಂತ ವಿಧೇಯ ಸೇವಕಿ ಆಗಿರಬೇಕು ಎಂಬುದು ಈ ಸಮಾಜದ ನಿರೀಕ್ಷೆ. ಹೆಣ್ಣು ಏನನ್ನೂ ಆಕ್ಷೇಪಿಸದೆ ಸಾಮಾಜಿಕ ಸಂಬಂಧದ ಅರಿವೇ ಇಲ್ಲದೆ ಒಟ್ಟು ಗಂಡಸಿನ ಸೇವಕಿಯಾಗಿರುವಳು. ತವರು ಮನೆಯ ಸಂಬಂಧ ದೂರವಾಗಿದೆ, ಅವನಿಲ್ಲದಿದ್ದರೆ ಸಮಾಜ ಅವಳನ್ನು ನೋಡುವ ದೃಷ್ಟಿಯೇ ಬದಲಾಗುತ್ತದೆ ಎಂಬ ಸಂಕೋಲೆಯಲ್ಲಿ ಆಕೆ ಜೀವನ ಸವೆಸುತ್ತಾಳೆ. ಆದರೆ ಹೆಣ್ಣು ಎಲ್ಲವನ್ನೂ ಬಿಟ್ಟು ತನ್ನ ಖುಷಿಯನ್ನು ತ್ಯಾಗ ಮಾಡಿ ಅವನಿಗಾಗಿ ತನ್ನ ಇಡೀ ಜೀವನವನ್ನು ಸಮರ್ಪಿಸಿದರೂ ಈ ದುರಹಂಕಾರಿ ಗಂಡಿಗೆ ಅವಳ ಮೇಲೆ ಕಿಂಚಿತ್ತು ಪ್ರೀತಿ ಇಲ್ಲ.

“ಒಮ್ಮೆ ಹೆಣ್ಣಾಗು ಪ್ರಭುವೇ” ಎನ್ನುವ ಕಥೆ ಬರೆದದ್ದು ಮುಸಲ್ಮಾನ ಮಹಿಳೆಯರು ಅನುಭವಿಸುವ ಶೋಷಣೆಗಳನ್ನು ನಿರೂಪಿಸಲು. ಮುಸಲ್ಮಾನ ಸಮಾಜ ಅದರಿಂದ ಪಾಠ ಕಲಿಯುವ ಬದಲು ಬಾನು ಅವರನ್ನು ಕುಟುಂಬ ಸಮೇತ ಬಹಿಷ್ಕರಿಸಿ ಚಿತ್ರಹಿಂಸೆಗೆ ಗುರಿ ಮಾಡಿತು.

ತನ್ನ ಯಾವುದೇ ದುಃಖಗಳಿಗೆ ಸ್ಪಂದಿಸದ ಸಮಾಜ, ದೇವರ ನಿಯಮ ಎಂಬ ಹೆಸರಿನಲ್ಲಿ ಆಕೆಯ ಮೇಲಾಗುತ್ತಿರುವ ಶೋಷಣೆಯನ್ನು ಅರ್ಥಮಾಡಿಕೊಳ್ಳಬೇಕಾದರೆ ಆ ದೇವರೇ ಒಮ್ಮೆ ಹೆಣ್ಣಾಗಬೇಕು. ಹೆಣ್ಣಾಗಿ ಬದುಕಿದಾಗ ಮಾತ್ರ ಹೆಣ್ಣಿನ ನೋವು, ತಳಮಳಗಳನ್ನು ದೇವರು ಅರ್ಥ ಮಾಡಿಕೊಳ್ಳಲು ಸಾಧ್ಯವೆಂಬ ಆಕ್ರೋಶ ಭಾವನೆಯನ್ನು ಬಾನು ಮುಷ್ತಾಕ್ ಅವರು ತಮ್ಮ “ಒಮ್ಮೆ ಹೆಣ್ಣಾಗು ಪ್ರಭುವೇ” ಈ ಕಥೆಯ ಮೂಲಕ ವ್ಯಕ್ತಪಡಿಸಿದ್ದಾರೆ.


ರಶ್ಮಿ ಸಂಗಣ್ಣನಕೆರೆ.
ತೃತೀಯ ಬಿಎ.
ಕಮಲ ನೆಹರು ಕಾಲೇಜು ಶಿವಮೊಗ್ಗ 

ಸಂಪಾದಕೀಯ ನುಡಿ: ಹೆಣ್ಣಿನ ಕರುಳಬಳ್ಳಿ ಮತ್ತು ಅಹಂಕಾರದ ಸಮಾಜ

ಕನ್ನಡ ಸಾಹಿತ್ಯ ಲೋಕದಲ್ಲಿ ಬಾನು ಮುಷ್ತಾಕ್ ಅವರ ಬರಹಗಳು ಕೇವಲ ಕಾಲ್ಪನಿಕ ಕಥೆಗಳಾಗಿ ಉಳಿಯುವುದಿಲ್ಲ; ಅವು ನಮ್ಮ ಸಮಾಜದ ಕಹಿ ಸತ್ಯಗಳನ್ನು ನಗ್ನವಾಗಿ ತೆರೆದಿಡುವ ಜೀವಂತ ಸಾಕ್ಷ್ಯಗಳು. ಅವರ ಪ್ರಸಿದ್ಧ ಕಥೆ ‘ಒಮ್ಮೆ ಹೆಣ್ಣಾಗು ಪ್ರಭುವೇ’ ಎಂಬುದು ಕೇವಲ ಒಬ್ಬ ಮುಸಲ್ಮಾನ ಮಹಿಳೆಯ ಕಥೆಯಲ್ಲ, ಬದಲಿಗೆ ಶತಶತಮಾನಗಳಿಂದ ಪುರುಷಪ್ರಧಾನ ವ್ಯವಸ್ಥೆಯ ಸಂಕೋಲೆಗಳಲ್ಲಿ ನಲುಗುತ್ತಿರುವ ಸಮಗ್ರ ಸ್ತ್ರೀ ಕುಲದ ಶೋಷಣೆಯ ಆಕ್ರೋಶದ ಧ್ವನಿ.

ಸಾಮಾಜಿಕವಾಗಿ ಹೆಣ್ಣನ್ನು ‘ತಾಯಿ’, ‘ಜಗನ್ಮಾತೆ’ ಎಂದು ಪೂಜನೀಯ ಸ್ಥಾನದಲ್ಲಿಟ್ಟು ಹೊಗಳುವ ಇದೇ ಸಮಾಜ, ವ್ಯಾವಹಾರಿಕ ಬದುಕಿನಲ್ಲಿ ಆಕೆಯನ್ನು ಬರಿ ವಸ್ತು ಅಥವಾ 'ಹಾಸಿಗೆಯ ಸುಖ ನೀಡುವ ಉಪಕರಣ'ವನ್ನಾಗಿ ನೋಡುತ್ತಿರುವುದು ನಮ್ಮ ಸಾಮಾಜಿಕ ದ್ವಿಮುಖ ನೀತಿಗೆ ಹಿಡಿದ ಕನ್ನಡಿ. ಹುಟ್ಟಿನಿಂದಲೇ ಹೆಣ್ಣನ್ನು ನಿಂದಿಸುವ, ಬಾಲ್ಯದ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಮತ್ತು ಮದುವೆಯ ಹೆಸರಿನಲ್ಲಿ ವರದಕ್ಷಿಣೆ ಎಂಬ ಭೂತಕ್ಕೆ ಆಕೆಯನ್ನು ಬಲಿಕೊಡುವ ಪ್ರವೃತ್ತಿ ಇಂದಿಗೂ ನಿಂತಿಲ್ಲ.

ಸಾಹಿತ್ಯ ಎನ್ನುವುದು ಸಮಾಜದ ಲೋಪಗಳನ್ನು ತಿದ್ದುಕೊಳ್ಳುವ ಅಸ್ತ್ರವಾಗಬೇಕೇ ಹೊರತು, ಸತ್ಯವನ್ನು ಹೇಳಿದ ಬರಹಗಾರ್ತಿಯನ್ನೇ ಬಹಿಷ್ಕರಿಸುವ ಅಂಧಾಭಿಮಾನವಾಗಬಾರದು.

ಬಾನು ಮುಷ್ತಾಕ್ ಅವರು ತಮ್ಮ ಕಥೆಯ ಮೂಲಕ ಕೇಳುವ ಪ್ರಶ್ನೆ ಅತ್ಯಂತ ಮಾರ್ಮಿಕವಾದದ್ದು—ದೇವರೇ ನಿನ್ನ ನಿಯಮಗಳ ಹೆಸರಿನಲ್ಲಿ ಹೆಣ್ಣಿನ ಮೇಲೆ ನಡೆಯುವ ಅನ್ಯಾಯಗಳನ್ನು ನೀನು ಗ್ರಹಿಸಬೇಕಾದರೆ, ನೀನೂ ಒಮ್ಮೆ ಈ ಭೂಮಿಯಲ್ಲಿ ಹೆಣ್ಣಾಗಿ ಹುಟ್ಟಿ ಬರಬೇಕು. ಹೆಣ್ಣಿನ ನೋವು, ತಾಯ್ತನದ ಯಾತನೆ, ತವರುಮನೆಯ ಪ್ರೀತಿಯಿಂದ ವಂಚಿತಳಾಗುವ ವಿಧಿ ಮತ್ತು ಗಂಡನ ಅಹಂಕಾರಕ್ಕೆ ಬಲಿಯಾಗುವ ದೈನ್ಯತೆ ಇವುಗಳನ್ನು ಅನುಭವಿಸಿದಾಗ ಮಾತ್ರ ಹೆಣ್ಣಿನ ತಳಮಳ ಅರ್ಥವಾಗಲು ಸಾಧ್ಯ.

ಇಂದಿನ ಆಧುನಿಕ ಯುಗದಲ್ಲೂ ವರದಕ್ಷಿಣೆ ಕಿರುಕುಳ, ಹೆಣ್ಣು ಭ್ರೂಣ ಹತ್ಯೆ ಮತ್ತು ತಾರತಮ್ಯಗಳು ಜೀವಂತವಾಗಿವೆ. ಅಂಕಣಗಾರ್ತಿ ರಶ್ಮಿ ಹೆಚ್. ಎಲ್. ಅವರು ಗುರುತಿಸಿರುವಂತೆ, ಹೆಣ್ಣನ್ನು ಬಂಧಿಸುವ ವ್ಯವಸ್ಥೆಯನ್ನು ಪ್ರಶ್ನಿಸುವುದು ಮತ್ತು ಆಕೆಗೆ ಸ್ವತಂತ್ರ ಜೀವಿಯಾಗಿ ಬಾಳುವ ವಾತಾವರಣ ನಿರ್ಮಿಸಿಕೊಡುವುದು ಇಂದಿನ ತುರ್ತು ಅಗತ್ಯವಾಗಿದೆ. ಸಮಾಜವು ಬದಲಾಗಬೇಕಿರುವುದು ಶಾಸನಗಳಿಂದಷ್ಟೇ ಅಲ್ಲ, ಪುರುಷ ಸಮಾಜದ ಮನಸ್ಥಿತಿಯಿಂದ. ಹೆಣ್ಣಿನ ಕಣ್ಣೀರನ್ನು ಅರ್ಥೈಸಿಕೊಳ್ಳುವ ಮಾನವೀಯತೆ ಸಮಾಜದಲ್ಲಿ ಮೊಳಕೆಯೊಡೆದಾಗ ಮಾತ್ರ ‘ಒಮ್ಮೆ ಹೆಣ್ಣಾಗು ಪ್ರಭುವೇ’ ಎನ್ನುವ ಕಥೆಯ ಆಕ್ರೋಶಕ್ಕೆ ನಿಜವಾದ ನ್ಯಾಯ ಸಿಗಲು ಸಾಧ್ಯ.

No comments:

Post a Comment

Advertisement

ಜಾಹೀರಾತು ಹಾಗೂ ಸುದ್ದಿ ನೀಡಲು ಸಂಪರ್ಕಿಸಿ

📞 9110857339 ಗೆ ಕರೆ ಮಾಡಿ 💬 WhatsApp ಗ್ರೂಪ್ ಸೇರಿ 🎥 YouTube ಚಂದಾದಾರರಾಗಿ

ಕನ್ನಡ ಗ್ಲೋಬಲ್ ನ್ಯೂಸ್