ಭದ್ರಾವತಿ:ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮನೆ ಕಳವು ಪ್ರಕರಣವನ್ನು ಪೊಲೀಸರು ಕೇವಲ ಎರಡೇ ದಿನಗಳಲ್ಲಿ ಅತ್ಯಂತ ಯಶಸ್ವಿಯಾಗಿ ಭೇದಿಸಿದ್ದಾರೆ. ಕೃತ್ಯಕ್ಕೆ ಸಂಬಂಧಿಸಿದಂತೆ ಇಬ್ಬರು ಅಪ್ರಾಪ್ತ ಬಾಲಕರನ್ನು (ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರು) ವಶಕ್ಕೆ ಪಡೆದಿರುವ ಪೊಲೀಸರು, ಅವರಿಂದ ಒಟ್ಟು
₹6,89,965/- ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಘಟನೆಯ ವಿವರ:
ಆಗಸ್ಟ್ 17, 2026 ರಂದು ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತಡಸ ಗ್ರಾಮದಲ್ಲಿ ಮನೆಮಂದಿ ಇಲ್ಲದ ಸಮಯವನ್ನು ನೋಡಿ ಸಂಚು ರೂಪಿಸಿದ್ದ ಕಳ್ಳರು, ಮನೆಯೊಂದರ ಅಡುಗೆ ಕೋಣೆಯ ವೆಂಟಿಲೇಟರ್ ಮೂಲಕ ಒಳನುಗ್ಗಿದ್ದರು. ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕ್ರೈಂ ಸಂಖ್ಯೆ: 177/2026, ಕಲಂ 331(3), 305(A) BNS ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
ಮಿಂಚಿನ ಕಾರ್ಯಾಚರಣೆ ನಡಸಿದ ಪೊಲೀಸ್ ಪಡೆ:
ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ನಿಖಿಲ್ ಬಿ. ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕಾರಿಯಪ್ಪ ವಿ. ಜಿ. ಅವರ ನೇರ ಮಾರ್ಗದರ್ಶನದಲ್ಲಿ, ಭದ್ರಾವತಿ ಡಿವೈಎಸ್ಪಿ ಪ್ರಕಾಶ್ ರಾಥೋಡ್ ಅವರ ಮೇಲ್ವಿಚಾರಣೆಯಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು.
ಗ್ರಾಮಾಂತರ ಇನ್ಸ್‌ಪೆಕ್ಟರ್
ಚಿದಾನಂದ, ಪಿಎಸ್‌ಐ
ಶಿಲ್ಪಾ ನಾಯನೇಗಲಿ, ಪಿಎಸ್‌ಐ
ಮಹೇಶ್, ಎಎಸ್‌ಐಗಳಾದ
ವೆಂಕಟೇಶ್, ರವಿಕುಮಾರ್, ಚಂದ್ರಶೇಖರ್ ಹಾಗೂ ಸಿಬ್ಬಂದಿಗಳಾದ
ಮಂಜುನಾಥ್, ಅರುಣ್ ಕುಮಾರ್, ಈರಯ್ಯ ಮತ್ತು
ವಿಜಯ್ ಕುಮಾರ್ ಅವರನ್ನೊಳಗೊಂಡ ಚುರುಕಿನ ತಂಡವು ಕಾರ್ಯಾಚರಣೆ ನಡೆಸಿ, ಆಗಸ್ಟ್ 19, 2026 ರಂದು ಇಬ್ಬರು ಅಪ್ರಾಪ್ತ ಬಾಲಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಬಂಧಿತರಿಂದ ಕಳುವಾಗಿದ್ದ ಸಂಪೂರ್ಣ
₹6.89 ಲಕ್ಷ ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ದಾಖಲಾದ 48 ಗಂಟೆಗಳಲ್ಲೇ ಕಳ್ಳರನ್ನು ಪತ್ತೆಹಚ್ಚಿ, ಮಾಲು ವಶಪಡಿಸಿಕೊಂಡ ಭದ್ರಾವತಿ ಗ್ರಾಮಾಂತರ ಪೊಲೀಸರ ಕಾರ್ಯಕ್ಷಮತೆಯನ್ನು ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಸಂಪಾದಕೀಯ ನುಡಿ :
ಅಪ್ರಾಪ್ತರು ಅಪರಾಧ ಲೋಕಕ್ಕೆ ಜಾರುತ್ತಿರುವುದು ಆತಂಕಕಾರಿ ಬೆಳವಣಿಗೆ!
ಭದ್ರಾವತಿಯಲ್ಲಿ ನಡೆದ ಈ ಕಳವು ಪ್ರಕರಣವನ್ನು ಕೇವಲ ಎರಡೇ ದಿನಗಳಲ್ಲಿ ಭೇದಿಸಿ, ಸಾರ್ವಜನಿಕರ ಸ್ವತ್ತನ್ನು ಮರಳಿ ವಶಪಡಿಸಿಕೊಂಡ ಶಿವಮೊಗ್ಗ ಜಿಲ್ಲಾ ಪೊಲೀಸ್ ತಂಡದ ಶೀಘ್ರ ಕಾರ್ಯಾಚರಣೆ ನಿಜಕ್ಕೂ ಪ್ರಶಂಸನೀಯ. ಆದರೆ, ಈ ಪ್ರಕರಣದಲ್ಲಿ ಕಾನೂನು ಸಂಘರ್ಷಕ್ಕೆ ಒಳಗಾದವರು ಅಪ್ರಾಪ್ತ ಬಾಲಕರು ಎಂಬ ಅಂಶವು ಇಡೀ ಸಮಾಜ ತಲೆತಗ್ಗಿಸುವಂತೆ ಹಾಗೂ ಚಿಂತಿಸುವಂತೆ ಮಾಡಿದೆ.
ಇಂದಿನ ಯುವ ಪೀಳಿಗೆ ಹಾಗೂ ಅಪ್ರಾಪ್ತ ವಯಸ್ಸಿನ ಮಕ್ಕಳು ಸುಲಭವಾಗಿ ಹಣ ಗಳಿಸುವ ಹಂಬಲಕ್ಕೆ ಬಿದ್ದು ಅಥವಾ ದುರಭ್ಯಾಸಗಳಿಗೆ ಒಳಗಾಗಿ ಅಪರಾಧದ ಹಾದಿ ಹಿಡಿಯುತ್ತಿರುವುದು ಆತಂಕಕಾರಿ ಸಂಗತಿ. ಪೋಷಕರು ತಮ್ಮ ಮಕ್ಕಳ ಚಟುವಟಿಕೆಗಳು, ಅವರ ಗೆಳೆಯರ ಬಳಗ ಹಾಗೂ ನಡವಳಿಕೆಗಳ ಮೇಲೆ ನಿರಂತರ ನಿಗಾ ಇಡುವುದು ಇಂದಿನ ತುರ್ತು ಅಗತ್ಯವಾಗಿದೆ. ಸಮಾಜ, ಶಾಲೆ ಮತ್ತು ಪೋಷಕರು ಜಂಟಿಯಾಗಿ ಜಾಗೃತಿ ಮೂಡಿಸದಿದ್ದರೆ ನಾಳೆಯ ದಿನಗಳಲ್ಲಿ ಸಮಾಜಕ್ಕೆ ದೊಡ್ಡ ಅಪಾಯ ಕಾದಿದೆ. ಪೋಲಿಸರ ದಕ್ಷತೆಗೆ ಅಭಿನಂದನೆ ಸಲ್ಲಿಸುತ್ತಲೇ, ಮಕ್ಕಳನ್ನು ಸನ್ಮಾರ್ಗದಲ್ಲಿ ನಡೆಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂಬುದನ್ನು
'ಕನ್ನಡ ಗ್ಲೋಬಲ್ ನ್ಯೂಸ್' ನೆನಪಿಸುತ್ತದೆ.
No comments:
Post a Comment