ನಂಜವಳ್ಳಿ (ಹೊಸನಗರ):ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಂಜವಳ್ಳಿಯಲ್ಲಿ ಸುದೀರ್ಘ 28 ವರ್ಷಗಳ ಕಾಲ ಅಕ್ಷರ ದಾಸೋಹ ನಡೆಸಿ, ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಿ ನಿವೃತ್ತಿ ಹೊಂದಿದ ನೆಚ್ಚಿನ ಶಿಕ್ಷಕರಾದ ಶ್ರೀ ಮಂಜುನಾಥ್ ಹೆಚ್.ಸಿ. ಅವರಿಗೆ ಹಳೆಯ ವಿದ್ಯಾರ್ಥಿಗಳು ಹಾಗೂ ನಂಜವಳ್ಳಿ ಗ್ರಾಮಸ್ಥರ ವತಿಯಿಂದ ಅತ್ಯಂತ ಅದ್ದೂರಿಯಾಗಿ ಬಿಳ್ಕೊಡುಗೆ ಹಾಗೂ ಭಾವಪೂರ್ಣ ಸನ್ಮಾನ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ಬಡತನದ ಹಾದಿಯಿಂದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯವರೆಗೆ:
ಕಾರ್ಯಕ್ರಮದಲ್ಲಿ ಶಿಕ್ಷಕ ಮಂಜುನಾಥ್ ಹೆಚ್.ಸಿ. ಅವರ ಸೇವಾ ಜೀವನದ ಹಾದಿಯನ್ನು ಸ್ಮರಿಸಲಾಯಿತು. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹರತಾಳು ಗ್ರಾಮದ ಶ್ರೀಮತಿ ಗಂಗಮ್ಮ ಹಾಗೂ ಶ್ರೀ ಚನ್ನಬಸವಣ್ಣ ದಂಪತಿಗಳ ಪುತ್ರರಾಗಿ ದಿನಾಂಕ 22-07-1966 ರಂದು ಬಡ ಕುಟುಂಬದಲ್ಲಿ ಜನಿಸಿದ ಮಂಜುನಾಥ್ ಅವರು, ಬಾಲ್ಯದಲ್ಲಿ ಕಾಲಿಗೆ ಚಪ್ಪಲಿಯೂ ಇಲ್ಲದೆ, ಬಸ್ ಚಾರ್ಜ್‌ಗೂ ಪರದಾಡುತ್ತಾ ತಂದೆ-ತಾಯಿಯ ಕೂಲಿ ದುಡಿಮೆಯ ಅಲ್ಪ ಆದಾಯದಲ್ಲೇ ವಿದ್ಯಾಭ್ಯಾಸ ಮುಂದುವರಿಸಿದ್ದರು.
ಅನಂದಪುರಂ ಜೂನಿಯರ್ ಕಾಲೇಜಿನಲ್ಲಿ ಪಿಯುಸಿ ಹಾಗೂ ಟಿಸಿಹೆಚ್ ತರಬೇತಿ ಮುಗಿಸಿ,
1998 ರಲ್ಲಿ ಎಲ್.ಪಿ.ಎಸ್. ನಂಜವಳ್ಳಿ ಶಾಲೆಯಲ್ಲಿ ಸೇವೆಗೆ ಸೇರುವ ಮೂಲಕ ಜ್ಞಾನ ದೀಪವನ್ನು ಬೆಳಗಿಸಿದರು. ತದನಂತರ ಈ ಶಾಲೆ ಹೆಚ್.ಪಿ.ಎಸ್. ಶಾಲೆಯಾಗಿ ಬೆಳೆಯುವಲ್ಲಿ ಇವರ ಶ್ರಮ ಅಪಾರ. ಇವರ ಅತ್ಯುತ್ತಮ ಸೇವೆಯನ್ನು ಗುರುತಿಸಿ
2015-16 ನೇ ಸಾಲಿನಲ್ಲಿ "ಅತ್ಯುತ್ತಮ ಶಿಕ್ಷಕ ಪ್ರಶಸ್ತಿ" ನೀಡಿ ಗೌರವಿಸಲಾಗಿತ್ತು.
ಹಳೆಯ ಶಿಕ್ಷಕರು, ಸಿಬ್ಬಂದಿಗಳಿಗೂ ಗೌರವ:
ಕಾರ್ಯಕ್ರಮದಲ್ಲಿ ಈ ಹಿಂದೆ ಇದೇ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದ ಶಿಕ್ಷಕರಾದ ಉಮೇಶ್ ಮತ್ತು ಶ್ರೀಮತಿ ಶುಭ, ಹರತಾಳು ಶಾಲೆಯ ನಿವೃತ್ತ ಶಿಕ್ಷಕರಾದ ಗಣಪತಿ, ಎಸ್‌ಡಿಎಂಸಿ ಅಧ್ಯಕ್ಷರಾದ ರಾಘವೇಂದ್ರ ಹಾಗೂ ಶಾಲೆಯ ಅಡುಗೆ ಸಿಬ್ಬಂದಿಗಳಾದ ಶ್ರೀಮತಿ ನಾಗರತ್ನ ಮತ್ತು ಪದ್ದಮ್ಮ ಅವರನ್ನು ಗ್ರಾಮಸ್ಥರು ಹಾಗೂ ಹಿರಿಯ ವಿದ್ಯಾರ್ಥಿಗಳ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ಅನಿಸಿಕೆ ಹಾಗೂ ಹಾರೈಕೆ:
ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನು ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರಾದ ರವೀಂದ್ರ ಅವರು ಆಡಿದರು. ಶಾಲೆಯ ಹಳೆಯ ಶಿಕ್ಷಕರಾದ ಉಮೇಶ್, ಶ್ರೀಮತಿ ಶುಭ ಹಾಗೂ ಹರತಾಳು ಶಾಲೆಯ ನಿವೃತ್ತ ಶಿಕ್ಷಕ ಗಣಪತಿ ಅವರು ಶಾಲೆಯೊಂದಿಗಿನ ತಮ್ಮ ಹಳೆಯ ಒಡನಾಟ ಹಾಗೂ ಮಂಜುನಾಥ್ ಮಾಸ್ಟರ್ ಅವರ ಸರಳತೆ, ಕಾರ್ಯನಿಷ್ಠೆಯನ್ನು ಸ್ಮರಿಸಿದರು.
ಗ್ರಾಮಸ್ಥರು ಮತ್ತು ಹಿರಿಯ ವಿದ್ಯಾರ್ಥಿಗಳಾದ
ಶ್ರೀಯುತ ಗುರುರಾಜ್, ಶ್ರೀಧರ್, ಭಾಸ್ಕರ್, ಹೇಮಂತ್, ಪೂಜಾ ಮುಂತಾದವರು ತಮ್ಮ ಶಿಕ್ಷಕರ ಕುರಿತು ಅನಿಸಿಕೆಗಳನ್ನು ಹಂಚಿಕೊಂಡರು. ಇಡೀ ಕಾರ್ಯಕ್ರಮದ ನಿರ್ವಹಣೆಯನ್ನು
ಆದಿತ್ಯ ನಂಜವಳ್ಳಿ, ಚಂದನ, ಹರ್ಷಿತಾ, ಸೀಮಾ ಹಾಗೂ ತಂಡದವರು ಅತ್ಯಂತ ಅಚ್ಚುಕಟ್ಟಾಗಿ ನಡೆಸಿಕೊಟ್ಟರು.
ನಾನು ಸದಾ ಚಿರಋಣಿ - ಭಾವುಕ ರಾದ ಸನ್ಮಾನಿತ ಶಿಕ್ಷಕ:
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿಕ್ಷಕ ಮಂಜುನಾಥ್ ಹೆಚ್.ಸಿ. ಅವರು, "ಸುದೀರ್ಘ 28 ವರ್ಷಗಳಿಗೂ ಹೆಚ್ಚು ಕಾಲ ಈ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದು, ಶಾಲೆಯ ಮತ್ತು ಊರಿನ ಗ್ರಾಮಸ್ಥರ ಒಡನಾಟ ಅತಿ ಹೆಚ್ಚು ಅಚ್ಚುಮೆಚ್ಚಿನ ಬಾಂಧವ್ಯವನ್ನು ತಂದುಕೊಟ್ಟಿದೆ. ನಂಜವಳ್ಳಿ ಗ್ರಾಮಸ್ಥರ ಹಾಗೂ ವಿದ್ಯಾರ್ಥಿಗಳ ಪ್ರೀತಿ-ವಿಶ್ವಾಸಕ್ಕೆ ನಾನು ಸದಾ ಚಿರಋಣಿ. ಅಧಿಕಾರದಿಂದ ನಿವೃತ್ತಿ ಹೊಂದಿದ್ದರೂ ಇಲ್ಲಿ ನಾನು ಗಳಿಸಿದ ಆತ್ಮೀಯತೆ ಮತ್ತು ಪ್ರೀತಿ ಎಂದೆಂದಿಗೂ ನನ್ನ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯಲಿದೆ" ಎಂದು ಭಾವುಕವಾಗಿ ನುಡಿದರು.
ಸಂಪಾದಕೀಯ ನುಡಿ (Editorial Note):
"ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕ್ತಿ" ಎಂಬ ಮಾತಿನಂತೆ, ಸಮಾಜಕ್ಕೆ ಸುಜ್ಞಾನದ ದಾರಿ ತೋರಿಸುವ ಶಿಕ್ಷಕ ವೃತ್ತಿ ಕೇವಲ ಉದ್ಯೋಗವಲ್ಲ, ಅದೊಂದು ಪವಿತ್ರ ಕಾಯಕ. ಪ್ರಸ್ತುತ ದಿನಗಳಲ್ಲಿ ಸಣ್ಣಪುಟ್ಟ ವಿಷಯಗಳಿಗೂ ಮಾನವೀಯ ಸಂಬಂಧಗಳು ದೂರವಾಗುತ್ತಿರುವಾಗ, 28 ವರ್ಷಗಳ ಕಾಲ ಒಂದೇ ಶಾಲೆಯಲ್ಲಿ ಸೇವೆಯ ಸಲ್ಲಿಸಿ, ಗ್ರಾಮಸ್ಥರ ಹಾಗೂ ವಿದ್ಯಾರ್ಥಿಗಳ ಹೃದಯದಲ್ಲಿ ನೆಲೆಸಿ, ನಿವೃತ್ತಿಯ ಸಂದರ್ಭದಲ್ಲಿ ಇಡೀ ಊರೇ ಒಂದಾಗಿ ಬೀಳ್ಕೊಡುತ್ತಿರುವುದು ಶಿಕ್ಷಕ ಮಂಜುನಾಥ್ ಹೆಚ್.ಸಿ. ಅವರ ನಿಷ್ಕಳಂಕ ವ್ಯಕ್ತಿತ್ವಕ್ಕೆ ಸಾಕ್ಷಿ.
ಕಷ್ಟದ ಬಾಲ್ಯದಿಂದ ಬಂದು, ಅಸಂಖ್ಯಾತ ವಿದ್ಯಾರ್ಥಿಗಳ ಬಾಳಿಗೆ ಬೆಳಕಾದ ಇಂತಹ ಆದರ್ಶ ಶಿಕ್ಷಕರ ಸೇವೆ ಸಮಾಜಕ್ಕೆ ಸದಾ ಪ್ರೇರಣಾದಾಯಿ. ನಿವೃತ್ತ ಜೀವನಕ್ಕೆ ಕಾಲಿಡುತ್ತಿರುವ ಶ್ರೀ ಮಂಜುನಾಥ್ ಹೆಚ್.ಸಿ. ಅವರಿಗೆ 'ಕನ್ನಡ ಗ್ಲೋಬಲ್ ನ್ಯೂಸ್' ಬಳಗದ ವತಿಯಿಂದ ಆಯುಷ್ಯ, ಆರೋಗ್ಯ, ನೆಮ್ಮದಿ ಹಾಗೂ ಸುಖ-ಸಂತೋಷವನ್ನು ಭಗವಂತ ಕರುಣಿಸಲಿ ಎಂದು ಹಾರೈಸುತ್ತೇವೆ.
No comments:
Post a Comment