ಸಾಗರ:ತಾಲ್ಲೂಕಿನಲ್ಲಿ ಅಕ್ರಮ ಒತ್ತುವರಿ ಹಾಗೂ ಕಾನೂನುಬಾಹಿರ ಗಣಿಗಾರಿಕೆ ಚಟುವಟಿಕೆಗಳ ವಿರುದ್ಧ ಕಂದಾಯ ಇಲಾಖೆ ಸಮರ ಸಾರಿದೆ. ಸಾಗರ ತಾಲ್ಲೂಕಿನ ಬೊಮ್ಮತ್ತಿ ಸಮೀಪದ ಬ್ರಾಹ್ಮಣ ಮಂಚಾಲೆ ಗ್ರಾಮದ ಸರ್ವೇ ಸಂಖ್ಯೆ 107ರಲ್ಲಿ ಯಾವುದೇ ಸರ್ಕಾರಿ ಅನುಮತಿ ಪಡೆಯದೇ ಅಕ್ರಮವಾಗಿ ಜಂಬಿಟ್ಟಿಗೆ (ಲ್ಯಾಟರೈಟ್ ಕಲ್ಲು) ಗಣಿಗಾರಿಕೆ ನಡೆಸುತ್ತಿದ್ದ ಸ್ಥಳದ ಮೇಲೆ ತಹಶೀಲ್ದಾರ್ ಡಾ. ಪ್ರತಿಭಾ ಅವರ ನೇತೃತ್ವದಲ್ಲಿ ದಿಢೀರ್ ದಾಳಿ ನಡೆಸಲಾಗಿದೆ.
ದಾಳಿಯ ವೇಳೆಯಲ್ಲಿ ಜಂಬಿಟ್ಟಿಗೆಯನ್ನು ಕಾನೂನುಬಾಹಿರವಾಗಿ ಲಾರಿಯಲ್ಲಿ ತುಂಬಿಕೊಂಡು ಸಾಗಿಸುತ್ತಿದ್ದಾಗ ಅಧಿಕಾರಿಗಳ ತಂಡ ತಡೆದು, ವಾಹನ ಹಾಗೂ ಆರೋಪಿಗಳನ್ನು ವಶಕ್ಕೆ ಪಡೆದಿದೆ. ಈ ಕಾರ್ಯಾಚರಣೆಯಲ್ಲಿ ಕಂದಾಯ ಪರಿವೀಕ್ಷಕರಾದ ಗುರುರಾಜ್ ಹಾಗೂ ಕಂದಾಯ ಇಲಾಖೆಯ ಇತರ ಸಿಬ್ಬಂದಿ ಮತ್ತು ಪೋಲಿಸ್ ತಂಡ ಸಕ್ರಿಯವಾಗಿ ಭಾಗವಹಿಸಿತ್ತು.
ಈ ಘಟನೆಗೆ ಸಂಬಂಧಿಸಿದಂತೆ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೃತ್ಯಕ್ಕೆ ಬಳಸಿದ್ದ ಲಾರಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ತಹಶೀಲ್ದಾರ್ ಖಡಕ್ ಎಚ್ಚರಿಕೆ:
ಆರಂಭದಿಂದಲೂ ತಾಲ್ಲೂಕಿನಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳಿಗೆ ಕಟ್ಟುನಿಟ್ಟಿನ ತಡೆ ಒಡ್ಡುತ್ತಿರುವ ತಹಶೀಲ್ದಾರ್ ಡಾ. ಪ್ರತಿಭಾ ಅವರು, "ಯಾರೇ ಆಗಲಿ ಕಾನೂನು ಮೀರಿ ಅಕ್ರಮ ಗಣಿಗಾರಿಕೆ ಅಥವಾ ಒತ್ತುವರಿಯಲ್ಲಿ ತೊಡಗಿಸಿಕೊಂಡರೆ ಮುಲಾಜಿಲ್ಲದೆ ದಾಳಿ ನಡೆಸಿ, ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು," ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.
ಸಂಪಾದಕೀಯ ನುಡಿ :
ಪ್ರಕೃತಿ ಸಂಪತ್ತಿನ ದರೋಡೆಗೆ ಬ್ರೇಕ್ ಬೀಳಲಿ
ಗ್ರಾಮೀಣ ಹಾಗೂ ಅರಣ್ಯ ಪ್ರದೇಶಗಳಲ್ಲಿ ನಿಯಮಗಳನ್ನು ಗಾಳಿಗೆ ತೂರಿ ನಡೆಯುವ ಅಕ್ರಮ ಗಣಿಗಾರಿಕೆಗಳು ಕೇವಲ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡುವುದಿಲ್ಲ, ಬದಲಿಗೆ ಪರಿಸರದ ಸಮತೋಲನವನ್ನೇ ಏರುಪೇರು ಮಾಡುತ್ತವೆ. ಸಾಗರ ತಾಲ್ಲೂಕಿನಲ್ಲಿ ತಹಶೀಲ್ದಾರ್ ಡಾ. ಪ್ರತಿಭಾ ಅವರ ನೇತೃತ್ವದಲ್ಲಿ ನಡೆದ ಈ ದಿಢೀರ್ ಕಾರ್ಯಾಚರಣೆ ಮತ್ತು ಭ್ರಷ್ಟ ಹಾಗೂ ಅಕ್ರಮಕೋರರಿಗೆ ನೀಡಿದ ಖಡಕ್ ಸಂದೇಶ ಮೆಚ್ಚುವಂತಹದ್ದು.
ಇಂತಹ ದಕ್ಷ ಅಧಿಕಾರಿಗಳ ಕಾರ್ಯಾಚರಣೆಗೆ ಸಾರ್ವಜನಿಕರ ಹಾಗೂ ಸ್ಥಳೀಯ ಆಡಳಿತದ ಬೆಂಬಲ ಅತ್ಯಗತ್ಯ. ಗಣಿ ದಂಧೆಕೋರರು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರ ವಿರುದ್ಧ ಕಾನೂನು ರೀತಿಯಲ್ಲಿ ಕಠಿಣ ಕ್ರಮ ಜರುಗಿಸಿದಾಗ ಮಾತ್ರವೇ ಸರ್ಕಾರಿ ಆಸ್ತಿ ಹಾಗೂ ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸಲು ಸಾಧ್ಯ. ಅಕ್ರಮಗಳ ವಿರುದ್ಧ ಕಂದಾಯ ಮತ್ತು ಪೊಲೀಸ್ ಇಲಾಖೆಯ ಈ ಜಂಟಿ ಸಮರ ನಿರಂತರವಾಗಿ ಮುಂದುವರಿಯಲಿ.

No comments:
Post a Comment