ಶಿಕಾರಿಪುರ: ಸಕಾಲಕ್ಕೆ ಮಳೆಯಾಗದೆ ರಾಜ್ಯದ ಅನ್ನದಾತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಇಂತಹ ಕಠಿಣ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ತಕ್ಷಣವೇ ರೈತರ ನೆರವಿಗೆ ಧಾವಿಸಬೇಕು ಹಾಗೂ ಅವರ ಬೆಳೆಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಗ್ರಹಿಸಿದ್ದಾರೆ. ರೈತರ ಹಿತರಕ್ಷಣೆಗಾಗಿ ಅಗತ್ಯ ಬಿದ್ದರೆ ವಿಧಾನಸೌಧದ ಮುಂಭಾಗದಲ್ಲೇ ಧರಣಿ ಸತ್ಯಾಗ್ರಹ ನಡೆಸಲು ಸಿದ್ಧ ಎಂದು ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ತಾಲ್ಲೂಕಿನ ಹೋತನಕಟ್ಟೆ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಬಿಜೆಪಿ ಜನಸಂಪರ್ಕ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಅಭಿವೃದ್ಧಿ ಮರೆತ ಕಾಂಗ್ರೆಸ್ ಸರ್ಕಾರಕ್ಕೆ ಜನರೇ ಪಾಠ ಕಲಿಸಲಿದ್ದಾರೆ:
ಹಾಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಯಡಿಯೂರಪ್ಪನವರು, "ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಕುಂಠಿತಗೊಂಡಿವೆ. ಕೇವಲ ಕಾಲಹರಣ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಜನಸಾಮಾನ್ಯರಿಗೆ ದ್ರೋಹ ಎಸಗುತ್ತಿದೆ. ಇಂತಹ ಜನವಿರೋಧಿ ಸರ್ಕಾರ ಅಧಿಕಾರದಲ್ಲಿ ಮುಂದುವರಿಯಲು ಅರ್ಹವಲ್ಲ. ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೆ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಈ ನಿಟ್ಟಿನಲ್ಲಿ ಪಕ್ಷವನ್ನು ಸಂಘಟಿಸಲು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಈಗಾಗಲೇ ರಾಜ್ಯಾದ್ಯಂತ ಬಿರುಸಿನ ಪ್ರವಾಸ ಕೈಗೊಂಡಿದ್ದಾರೆ" ಎಂದರು.
ಇದೇ ವೇಳೆ ಹಿಂದಿನ ಬಿಜೆಪಿ ಸರ್ಕಾರದ ಜನಪರ ಯೋಜನೆಗಳಾದ ಭಾಗ್ಯಲಕ್ಷ್ಮಿ, ಸಂಧ್ಯಾಸುರಕ್ಷಾ, ಹಾಲಿಗೆ ಪ್ರೋತ್ಸಾಹಧನ ಹಾಗೂ ತಾಲ್ಲೂಕಿನ ಸಮಗ್ರ ನೀರಾವರಿ ಯೋಜನೆಗಳನ್ನು ನೆನಪಿಸಿಕೊಂಡ ಅವರು, ಮುಂದಿನ ದಿನಗಳಲ್ಲೂ ಸಾರ್ವಜನಿಕರು ನಮ್ಮ ಪಕ್ಷವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಸದ ಬಿ.ವೈ. ರಾಘವೇಂದ್ರ ಕರೆ:
ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಬಿ.ವೈ. ರಾಘವೇಂದ್ರ ಅವರು, "ಮತದಾರರ ಪಟ್ಟಿ ಪರಿಷ್ಕರಣೆ (SSR) ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಭಾಗವಹಿಸಬೇಕು. ಅರ್ಹ ಮತದಾರರ ಹೆಸರು ಯಾವುದೇ ಕಾರಣಕ್ಕೂ ಪಟ್ಟಿಯಿಂದ ಕೈಬಿಟ್ಟು ಹೋಗದಂತೆ ಜಾಗ್ರತೆ ವಹಿಸಬೇಕು. ಸರ್ಕಾರದ ವಿವಿಧ ಯೋಜನೆಗಳ ಲಾಭ ಪಡೆಯಲು ಮತದಾರರ ಪಟ್ಟಿಯಲ್ಲಿ ಹೆಸರು ಇರುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಮನೆಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸಬೇಕು" ಎಂದು ತಿಳಿಸಿದರು.
ಈ ಜನಸಂಪರ್ಕ ಸಭೆಯಲ್ಲಿ ಪ್ರಮುಖ ಮುಖಂಡರಾದ ಕೆ.ಎಸ್. ಗುರುಮೂರ್ತಿ, ಹನುಮಂತಪ್ಪ ಸಂಕ್ಲಾಪುರ, ಅಶೋಕ್, ಬಂಗಾರಿನಾಯ್ಕ, ಹುಲ್ಯಾರ್ ಮಹೇಶ್, ರಾಮಾನಾಯ್ಕ, ಮಧು, ಪರಮೇಶ್ ಸೇರಿದಂತೆ ಮತ್ತಿತರ ಸ್ಥಳೀಯ ನಾಯಕರು ಹಾಗೂ ಅಪಾರ ಸಂಖ್ಯೆಯ ಕಾರ್ಯಕರ್ತರು ಉಪಸ್ಥಿತರಿದ್ದರು.

No comments:
Post a Comment