ಶಿವಮೊಗ್ಗದಲ್ಲಿ ಭುಗಿಲೆದ್ದ ನೀಟ್ ಅಕ್ರಮ ಪ್ರತಿಭಟನೆ: ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಕಾಂಗ್ರೆಸ್ ಕಾರ್ಯಕರ್ತರ ಯತ್ನ, ತೀವ್ರ ಉದ್ವಿಗ್ನತೆ - Kannada global

Breaking

Thursday, July 23, 2026

ಶಿವಮೊಗ್ಗದಲ್ಲಿ ಭುಗಿಲೆದ್ದ ನೀಟ್ ಅಕ್ರಮ ಪ್ರತಿಭಟನೆ: ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಕಾಂಗ್ರೆಸ್ ಕಾರ್ಯಕರ್ತರ ಯತ್ನ, ತೀವ್ರ ಉದ್ವಿಗ್ನತೆ

ಶಿವಮೊಗ್ಗ:ನೀಟ್ (NEET) ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವನ್ನು ಖಂಡಿಸಿ ಶಿವಮೊಗ್ಗ ನಗರದಲ್ಲಿ ಜಿಲ್ಲಾ ಕಾಂಗ್ರೆಸ್ ಕಮಿಟಿ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆ ವೇಳೆ ವಾತಾವರಣ ತೀವ್ರ ಕಾವು ಪಡೆದುಕೊಂಡಿದ್ದು, ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಹತೋಟಿಗೆ ತಂದ ಘಟನೆ ನಡೆದಿದೆ.

ಮಹಾವೀರ ವೃತ್ತದಿಂದ ಪಾದಯಾತ್ರೆ

ನಗರದ ಪ್ರಮುಖ ಮಹಾವೀರ ವೃತ್ತದಲ್ಲಿ ನೆರೆದಿದ್ದ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ಧರಣಿ ನಡೆಸಿದರು. ಕೇಂದ್ರ ಸರ್ಕಾರದ ನಡವಳಿಕೆಯನ್ನು ಖಂಡಿಸಿ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ಬಳಿಕ ಮಹಾವೀರ ವೃತ್ತದಿಂದ ಶಿವಮೊಗ್ಗದ ಜಿಲ್ಲಾ ಬಿಜೆಪಿ ಕಚೇರಿಯತ್ತ ದಿಢೀರ್ ಪಾದಯಾತ್ರೆ ಬೆಳೆಸಿದರು.

ಬ್ಯಾರಿಕೇಡ್ ತಳ್ಳಿ ನುಗ್ಗಿದ ಪ್ರತಿಭಟನಾಕಾರರು

ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಪೊಲೀಸರು ಬಿಜೆಪಿ ಕಚೇರಿ ಮುಂಭಾಗದಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ತಡೆಯಲು ಯತ್ನಿಸಿದರು. ಆದರೆ, ರೋಷದೃಪ್ತರಾಗಿದ್ದ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸರ ತಡೆಯನ್ನೂ ಲೆಕ್ಕಿಸದೆ ಬ್ಯಾರಿಕೇಡ್‌ಗಳನ್ನು ತಳ್ಳಿ ಬಿಜೆಪಿ ಕಚೇರಿಯ ಆವರಣಕ್ಕೆ ನುಗ್ಗಿದರು. ಈ ವೇಳೆ ಪೊಲೀಸರು ಅವರನ್ನು ತಡೆಯಲು ಹರಸಾಹಸ ಪಡಬೇಕಾಯಿತು.

ಪೊಲೀಸ್ ವಾಹನವೇರಿ ಧ್ವಜ ಪ್ರದರ್ಶನ – ಗಲಾಟೆ

ಪ್ರತಿಭಟನೆಯ ಕಾವು ಹೆಚ್ಚಾಗುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಸಳದಲ್ಲಿದ್ದ ಪೊಲೀಸ್ ವಾಹನದ ಮೇಲೆ ಹತ್ತಿ ಪಕ್ಷದ ಬಾವುಟ ಬೀಸಿದ್ದು, ಬಿಜೆಪಿ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಯಿತು. ಇದರಿಂದ ಕಚೇರಿ ಬಳಿ ಜಮಾಯಿಸಿದ್ದ ಬಿಜೆಪಿ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪರಿಣಾಮವಾಗಿ ಉಭಯ ಪಕ್ಷಗಳ ಕಾರ್ಯಕರ್ತರ ನಡುವೆ ನೂಕಾಟ-ತಳ್ಳಾಟ ಉಂಟಾಗಿ ವಾತಾವರಣ ಕೈಮೀರಿ ಹೋಗುವ ಹಂತಕ್ಕೆ ತಲುಪಿತು.

ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಲು ಹಲವು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು.

ಬಿಜೆಪಿ ಮುಖಂಡರ ಆಕ್ರೋಶ – ಪೊಲೀಸರೊಂದಿಗೆ ವಾಗ್ವಾದ

ಘಟನೆಯಿಂದ ಆಕ್ರೋಶಗೊಂಡ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಕಚೇರಿಯ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದರು. ಕಚೇರಿಯ ಶಟರ್ ಎಳೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಕಾರ್ಯಕರ್ತರು ಮತ್ತು ಸ್ಥಳದಲ್ಲಿದ್ದ ಪೊಲೀಸರ ನಡುವೆ ತೀವ್ರ ವಾಗ್ವಾದ ನಡೆಯಿತು.

No comments:

Post a Comment

Advertisement

ಜಾಹೀರಾತು ಹಾಗೂ ಸುದ್ದಿ ನೀಡಲು ಸಂಪರ್ಕಿಸಿ

📞 9110857339 ಗೆ ಕರೆ ಮಾಡಿ 💬 WhatsApp ಗ್ರೂಪ್ ಸೇರಿ 🎥 YouTube ಚಂದಾದಾರರಾಗಿ

ಕನ್ನಡ ಗ್ಲೋಬಲ್ ನ್ಯೂಸ್