ಬೆಂಗಳೂರು: ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಮತ್ತೊಮ್ಮೆ ಅಬ್ಬರಿಸಿದೆ. ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಮುಂಜಾನೆಯೇ ಲೋಕಾಯುಕ್ತ ಅಧಿಕಾರಿಗಳು ಏಕಕಾಲಕ್ಕೆ ಬೃಹತ್ ಕಾರ್ಯಾಚರಣೆ ನಡೆಸಿದ್ದಾರೆ. ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ, ಧಾರವಾಡ ಹಾಗೂ ರಾಯಚೂರಿನ ಹಲವು ಪ್ರಮುಖ ಅಧಿಕಾರಿಗಳ ನಿವಾಸ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿ, ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ.
ಶಿವಮೊಗ್ಗ ACF ಕಿರಣ್ ಅಂಗಡಿ ನಿವಾಸಗಳ ಮೇಲೆ ದಾಳಿ
ಈ ಇಡೀ ಕಾರ್ಯಾಚರಣೆಯಲ್ಲಿ ಶಿವಮೊಗ್ಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ACF) ಕಿರಣ್ ಅಂಗಡಿ ಅವರಿಗೆ ಲೋಕಾಯುಕ್ತ ಅಧಿಕಾರಿಗಳು ಭಾರಿ ಶಾಕ್ ನೀಡಿದ್ದಾರೆ. ಶಿವಮೊಗ್ಗದ ಅವರ ಕಚೇರಿ ಮತ್ತು ನಿವಾಸ ಮಾತ್ರವಲ್ಲದೆ, ಧಾರವಾಡದಲ್ಲಿರುವ ಅವರ ಐಷಾರಾಮಿ ಮನೆಗಳ ಮೇಲೂ ಏಕಕಾಲಕ್ಕೆ ದಾಳಿ ನಡೆದಿದೆ.
ಐಷಾರಾಮಿ ಆಸ್ತಿ ಪತ್ತೆ: ಧಾರವಾಡದ ದೊಡ್ಡನಾಯಕನಕೊಪ್ಪ ಬಡಾವಣೆಯಲ್ಲಿರುವ ಅವರ ಐಷಾರಾಮಿ ಬಂಗಲೆ, ಅಳ್ನಾವರ ರಸ್ತೆಯಲ್ಲಿರುವ ತೋಟದ ಮನೆ (ಫಾರ್ಮ್‌ಹೌಸ್) ಹಾಗೂ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಫ್ಯಾಕ್ಟರಿ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಶೋಧ ನಡೆಸುತ್ತಿದ್ದಾರೆ.
ಬಂಧುಗಳ ಮನೆ ಮೇಲೂ ಕಣ್ಣು: ಎಸಿಎಫ್ ಅವರ ಸೋದರ ಮಾವನ ಮನೆ ಮೇಲೂ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಜಾಲಾಡುತ್ತಿದ್ದಾರೆ.
ತಂಡದ ನೇತೃತ್ವ: ಶಿವಮೊಗ್ಗ ಲೋಕಾಯುಕ್ತ ಇನ್ಸ್‌ಪೆಕ್ಟರ್ ವೀರಬಸಪ್ಪ ಕುಶಲಾಪುರ ಹಾಗೂ ಧಾರವಾಡ ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ನೇತೃತ್ವದ ತಂಡಗಳು ಈ ಭರ್ಜರಿ ಕಾರ್ಯಾಚರಣೆ ಕೈಗೊಂಡಿವೆ.
ಕುಂಬಳಗೋಡು ಪಿಡಿಒ ತಿಮ್ಮಯ್ಯ ಮನೆ ಮೇಲೆ ದಾಳಿ
ಬೆಂಗಳೂರು ದಕ್ಷಿಣ ಜಿಲ್ಲೆಯ ಕುಂಬಳಗೋಡು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಬಿ.ಕೆ. ತಿಮ್ಮಯ್ಯ ಅವರ ಮನೆ ಹಾಗೂ ಕಚೇರಿಗಳ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರು ದಕ್ಷಿಣ ಜಿಲ್ಲಾ ಲೋಕಾಯುಕ್ತ ಎಸ್ಪಿ ಸ್ನೇಹಾ ಅವರ ನೇತೃತ್ವದಲ್ಲಿ ಮಾಗಡಿ ತಾಲೂಕಿನ ಬೆಳಗವಾಡಿ ಗ್ರಾಮದಲ್ಲಿರುವ ಪಿಡಿಒ ಅವರ ತೋಟದ ಮನೆ, ಅಣ್ಣ ಹಾಗೂ ಅಕ್ಕನ ಮಗನ ಮನೆಗಳು ಸೇರಿ ಒಟ್ಟು ನಾಲ್ಕು ಕಡೆಗಳಲ್ಲಿ ಪರಿಶೀಲನೆ ಮುಂದುವರಿದಿದೆ.
ರಾಯಚೂರಿನಲ್ಲಿ KBJNL ಅಧಿಕಾರಿಗೆ ಲೋಕಾ ಶಾಕ್
ರಾಯಚೂರಿನ ಕೃಷ್ಣಾ ಭಾಗ್ಯ ಜಲ ನಿಗಮದ (KBJNL) ಕಾರ್ಯನಿರ್ವಾಹಕ ಎಂಜಿನಿಯರ್ (EE) ಬಸನಗೌಡ ಅವರ ಮನೆ ಮತ್ತು ಕಚೇರಿಗಳ ಮೇಲೂ ಲೋಕಾಯುಕ್ತ ಬಲೆ ಬೀಸಿದೆ. ದೇವದುರ್ಗ ತಾಲೂಕಿನ ಚಿಕ್ಕಹೊನ್ನಕುಣಿ ಕಚೇರಿ ಹಾಗೂ ಅವರ ಸಂಬಂಧಿಕರ ಮನೆಗಳ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಯಾಕ್ಲಾಸಪುರ ಗ್ರಾಮದಲ್ಲಿರುವ ವಿವಿಧ ನಿವಾಸಗಳು, ಹೆಂಡತಿ ಹೆಸರಿನಲ್ಲಿರುವ ಪೆಟ್ರೋಲ್ ಬಂಕ್, ಬಾರ್ ಆಂಡ್ ರೆಸ್ಟೋರೆಂಟ್ ಮತ್ತು ಗೋದಾಮುಗಳ ಮೇಲೂ ದಾಳಿ ನಡೆಸಿ ಅಕ್ರಮ ಆಸ್ತಿ ಪತ್ತೆ ಹಚ್ಚುವ ಕಾರ್ಯ ಸಾಗಿದೆ.
ರಾಜ್ಯಾದ್ಯಂತ ನಡೆದಿರುವ ಈ ದಿಢೀರ್ ಲೋಕಾಯುಕ್ತ ದಾಳಿಯು ಭ್ರಷ್ಟ ಅಧಿಕಾರಿಗಳ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ.
ಸಂಪಾದಕೀಯ ನುಡಿ :
"ಭ್ರಷ್ಟಾಚಾರದ ಬೇರುಗಳಿಗೆ ಕೊಡಲಿ ಪೆಟ್ಟು ಬೀಳಲಿ"
ಸರ್ಕಾರಿ ಅಧಿಕಾರಿಗಳು ಜನಸಾಮಾನ್ಯರ ಸೇವಕರಾಗಿ ಕೆಲಸ ಮಾಡಬೇಕೇ ಹೊರತು, ಸಾರ್ವಜನಿಕರ ಹಣದಲ್ಲಿ ಐಷಾರಾಮಿ ಬದುಕು ಕಟ್ಟಿಕೊಳ್ಳುವುದಕ್ಕಲ್ಲ. ಇಂದು ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧೆಡೆ ನಡೆದಿರುವ ಲೋಕಾಯುಕ್ತ ದಾಳಿಗಳು ಭ್ರಷ್ಟರ ಮನಸ್ಸಿನಲ್ಲಿ ಕಾನೂನಿನ ಭಯ ಹುಟ್ಟಿಸಲು ಅತ್ಯಗತ್ಯವಾಗಿವೆ. ಕೇವಲ ದಾಳಿ ಮತ್ತು ದಾಖಲೆಗಳ ವಶಕ್ಕೆ ಈ ಪ್ರಕ್ರಿಯೆ ಸೀಮಿತವಾಗದೆ, ತನಿಖೆ ತಾರ್ಕಿಕ ಅಂತ್ಯ ಕಂಡು ಭ್ರಷ್ಟರಿಗೆ ಕಠಿಣ ಶಿಕ್ಷೆಯಾಗಬೇಕು. ಆಗ ಮಾತ್ರ ಪ್ರಾಮಾಣಿಕ ವ್ಯವಸ್ಥೆ ನಿರ್ಮಾಣ ಸಾಧ್ಯ. ಲೋಕಾಯುಕ್ತದ ಈ ಪಾರದರ್ಶಕ ಮತ್ತು ದಿಟ್ಟ ನಡೆಗೆ 'ಕನ್ನಡ ಗ್ಲೋಬಲ್ ನ್ಯೂಸ್' ಸದಾ ಬೆಂಬಲ ನೀಡುತ್ತದೆ.

No comments:
Post a Comment