ಭಾನುವಾರದ ವಿಶೇಷ: ನಾ ಗೀಚಿದ್ದು... ಕಲೆಗಂಟಿದ ಕಳಂಕ ಕಳಚಿ ಬಿದ್ದಾಗ! - ಅನಾಮಿಕ - Kannada global

Breaking

Saturday, July 11, 2026

ಭಾನುವಾರದ ವಿಶೇಷ: ನಾ ಗೀಚಿದ್ದು... ಕಲೆಗಂಟಿದ ಕಳಂಕ ಕಳಚಿ ಬಿದ್ದಾಗ! - ಅನಾಮಿಕ

ನನ್ನದೊಂದು ಪುಟ್ಟ ಪ್ರಪಂಚ. ಅಲ್ಲಿ ಯಾರೋ ಚಿತ್ರಿಸಿದ್ದನ್ನೇ ನೋಡಿ ಮರುಚಿತ್ರಿಸುವ ಒಂದು ಸಾಧಾರಣ ಹವ್ಯಾಸ ನನ್ನದು. ಕಲ್ಪನಾ ಲೋಕಕ್ಕೆ ರೆಕ್ಕೆ ಕಟ್ಟಿ ನನ್ನ ಕಲೆಯನ್ನು ಎಂದಿಗೂ ಅದ್ಭುತ ಎನ್ನುವ ಎತ್ತರಕ್ಕೆ ಕೊಂಡೊಯ್ಯಲು ನನಗೆ ಸಾಧ್ಯವಾಗಲೇ ಇಲ್ಲ. ಎಲ್ಲರಂತೆಯೇ ನಾನೂ ಒಬ್ಬಳು ಸಾಮಾನ್ಯ ಹುಡುಗಿ. ಆದರೆ, ನನ್ನ ಆಳದಲ್ಲಿ ನನ್ನನ್ನೇ ಸದಾ ನೋಯಿಸಿಕೊಳ್ಳುವ, ಒಳಗೊಳಗೇ ಹಿಂಡಿ ಹಿಪ್ಪೆ ಮಾಡುವ ವಿಚಿತ್ರ ಭಾವವೊಂದಿದೆ. ಅದಕ್ಕೆ ಕಾರಣ ನಾನಿಂದು ಕಲೆ ಎಂದು ಆರಾಧಿಸುವ ಈ ಚಿತ್ರಕಲೆ ನನ್ನ ಬದುಕಿನಲ್ಲಿ ತಂದ ಬಿರುಗಾಳಿ.

ನಾನು ಚಿತ್ರಕಲೆಯನ್ನು ಪ್ರೀತಿಸಲು ಪ್ರೇರಣೆಯಾಗಿದ್ದು ತರಗತಿ ಏಳರಲ್ಲಿದ್ದಾಗ. ಅಂದು ಶಾಲೆಯ 'ಪ್ರತಿಭಾ ಕಾರಂಜಿ' ಕಾರ್ಯಕ್ರಮದಲ್ಲಿ ಚಿತ್ರಕಲೆಗೆ ನನ್ನನ್ನು ಆಯ್ಕೆ ಮಾಡಲಿಲ್ಲ ಎಂಬ ಕಾರಣಕ್ಕೆ ನನಗೆ ಸಿಟ್ಟು ಬಂದಿತ್ತು. ಆ ನಿರಾಸೆ ನನ್ನನ್ನು ಕುಗ್ಗಿಸುವ ಬದಲು, ನನ್ನೊಳಗಿನ ಹಠವನ್ನು ಹಿಗ್ಗಿಸಿತು. ನಾನೂ ಚಿತ್ರ ಬಿಡಿಸಬಲ್ಲೆ ಎಂದು ಸಾಬೀತುಪಡಿಸಲು ನಾನು ಪೆನ್ನು-ಪೆನ್ಸಿಲ್ ಹಿಡಿದೆ.

ಆದರೆ, ಈ ಚಿತ್ರಗಾರ್ತಿಯ ಬದುಕು ಸಂಪೂರ್ಣ ತಿರುವು ಪಡೆದದ್ದು ಎಂಟನೇ ತರಗತಿಯಲ್ಲಿದ್ದಾಗ. ಆ ನೆನಪು ಈಗಲೂ ನನ್ನನ್ನು ಹಿಂಡಿ ಹಿಪ್ಪೆ ಮಾಡುತ್ತದೆ, ಉಸಿರುಗಟ್ಟಿಸಿ ಹಿಂಸಿಸುತ್ತದೆ, ನನ್ನನ್ನು ಆತ್ಮರಹಿತಳನ್ನಾಗಿ ಮಾಡಿಬಿಡುತ್ತದೆ...

ಅದೊಂದು ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ. ಹದಿನಾಲ್ಕರ ಹರೆಯದ ನಾನು ವಸತಿ ನಿಲಯದಲ್ಲಿದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದೆ. ಆ ಸ್ಪರ್ಧೆಯಲ್ಲಿ ನನಗೆ ಪ್ರಥಮ ಸ್ಥಾನ ಬಂದು, ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದೆ. ಆ ಪುಟ್ಟ ವಯಸ್ಸಿಗೆ ಅದೊಂದು ಬಹುದೊಡ್ಡ ಸಾಧನೆ. ಆದರೆ, ನನ್ನ ಶಾಲೆಯ ಚಿತ್ರಕಲಾ ಶಿಕ್ಷಕ ನನ್ನನ್ನು ಪ್ರಶಂಸಿಸಲು, ಆನಂದವನ್ನು ಹಂಚಿಕೊಳ್ಳಲು ಬಂದ ನೆಪವೇ ಬೇರೆಯಾಗಿತ್ತು.

ಆ ಕಟುಕ ಮನಸ್ಥಿತಿಯ ಮನುಷ್ಯ, ಇರುವೆ ಸಿಹಿಯನ್ನು ಆವರಿಸುವಂತೆ ಹೆಣ್ಣಾಗಿದ್ದ ನನ್ನನ್ನು ತನ್ನ ನಿಯಂತ್ರಣಕ್ಕೆ ನಯವಾಗಿ ತೆಗೆದುಕೊಳ್ಳಲು ಯತ್ನಿಸಿದ. ನನ್ನನ್ನು ವಿಭಿನ್ನವಾಗಿ ಪ್ರೋತ್ಸಾಹಿಸುವ ನೆಪದಲ್ಲಿ ನನ್ನ ಚಿತ್ರಕಲಾ ಕೌಶಲ್ಯವನ್ನೇ ಅಸ್ತ್ರವಾಗಿ ಬಳಸಿಕೊಂಡ. ಆತನ ವಿಕೃತ ನಡವಳಿಕೆ, ಹೆಣ್ಣಾಗಿ ನನಗೆ ಅರಗಿಸಿಕೊಳ್ಳಲು ಸಾಧ್ಯವಾಗದ ಒದ್ದಾಟದ ಭಾವವನ್ನು ಸೃಷ್ಟಿಸಿತು.

ಅಂದಿನಿಂದ ನನಗೆ ನನ್ನ ಪ್ರೀತಿಯ ವರ್ಣಗಳು, ಪೆನ್ನು, ಪೆನ್ಸಿಲ್, ಬಿಳಿ ಹಾಳೆ ಕಂಡರೆ ಸಾಕು... ಒಳಗೇನೋ ತಲ್ಲಣ, ತೀವ್ರ ದುಗುಡ. ಈ ಬದುಕಿಗೆ ವಿದಾಯ ಹೇಳಿಬಿಡಬೇಕೆಂಬ ನಕಾರಾತ್ಮಕ ಮನೋಭಾವ ನನ್ನನ್ನು ಆವರಿಸತೊಡಗಿತು. ಕಲೆ ಎಂಬುದು ನನ್ನ ಪಾಲಿಗೆ ಒಂದು ದುಸ್ಸ್ವಪ್ನವಾಗಿ ಕಾಡಲಾರಂಭಿಸಿತು.

ಆದರೆ ಕಲೆ ಎಂದಿಗೂ ಜೀವಂತ ತಾನೇ? ಕಳೆದುಹೋದ ನನ್ನ ಅಸ್ತಿತ್ವವನ್ನು ನಾನು ಮತ್ತೆ ಹುಡುಕಿಕೊಳ್ಳಲು ಪ್ರಕೃತಿಯೇ ಒಂದು ದಾರಿ ಮಾಡಿಕೊಟ್ಟಿತು. ನನ್ನನ್ನು ಒಳಗಣ್ಣಿನಲ್ಲಿ ಕೊಂದ ಆ ಕ್ರೂರಿ, ಇಂದು ತಾನು ಮಾಡಿದ ತಪ್ಪಿಗೆ ಕಾನೂನಿನ ಸೆರೆಯಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ ಎಂಬ ಸುದ್ದಿ ನನ್ನ ಕಿವಿಗೆ ಬಿತ್ತು. ಆ ಕ್ಷಣ ನನ್ನ ಉಸಿರು ಹಗುರವಾಯಿತು.

ನ್ಯಾಯ ಸಿಕ್ಕ ಆ ಸುದ್ದಿಯೇ ಈ ಚಿತ್ರಗಾರ್ತಿಯ ಮರುಜನ್ಮಕ್ಕೆ ಕಾರಣವಾಯಿತು. ನಾನು ಮತ್ತೆ ಚಿತ್ರಿಸಲು ಇಚ್ಚಿಸಿದೆ. ಕಲೆ ನನ್ನನ್ನು ನೋಯಿಸಿರಲಿಲ್ಲ, ನೋಯಿಸಿದ್ದು ಆ ಮನುಷ್ಯ ಮೃಗ. ಆದರೂ, ನನ್ನೊಳಗೆ ಉಳಿದುಕೊಂಡಿರುವ ಆ ಹಳೇ ಗಾಯದ ನೋವಿನಿಂದಾಗಿ, ನಾನು ಬಿಡಿಸುವ ಕಲೆಗೆ 'ನಾ ಚಿತ್ರಿಸಿದ್ದು' ಎಂದು ಹೆಮ್ಮೆಯಿಂದ ಕರೆಯುವ ಧೈರ್ಯ ಇನ್ನೂ ಬಂದಿಲ್ಲ. ಹಾಗಾಗಿಯೇ ನಾನಿದನ್ನು ಸದ್ಯಕ್ಕೆ 'ನಾ ಗೀಚಿದ್ದು...' ಎಂದೇ ಕರೆಯಲು ಇಷ್ಟಪಡುತ್ತೇನೆ.

- ಹೆಸರಲ್ಲೇನಿದೆ ಬಿಡಿ..

 ಸಂಪಾದಕೀಯ ನುಡಿ:ವಿಕೃತಿಯ ವಿರುದ್ಧ ಗೆದ್ದ 'ಕಲೆ'ಯ ಅಸ್ತಿತ್ವ!

ಕಲೆ ಎನ್ನುವುದು ಆತ್ಮವನ್ನು ಶುದ್ಧೀಕರಿಸುವ ಮಾಧ್ಯಮ. ಆದರೆ ದುರ್ದೈವವಶಾತ್, ಸಮಾಜದಲ್ಲಿ ರಕ್ಷಕರಾಗಬೇಕಾದವರೇ ಭಕ್ಷಕರಾದಾಗ ಅದೆಷ್ಟೋ ಮುಗ್ಧ ಪ್ರತಿಭೆಗಳು ಮೊಗ್ಗಿನಲ್ಲೇ ಹೊಸಕಿ ಹೋಗುತ್ತವೆ. ಈ ಲೇಖನ ಕೇವಲ ಒಬ್ಬ ಹುಡುಗಿಯ ನೋವಿನ ಕಥೆಯಲ್ಲ; ಇದು ಪ್ರೋತ್ಸಾಹದ ಮುಖವಾಡದಡಿ ಅಡಗಿರುವ ವಿಕೃತ ಮನಸ್ಥಿತಿಗಳ ವಿರುದ್ಧದ ಧ್ವನಿ.

ತನಗೆ ಉಸಿರುಗಟ್ಟುವಂತಹ ಹಿಂಸೆ ನೀಡಿದ ಶಿಕ್ಷಕ ಜೈಲು ಪಾಲಾದಾಗ, ತನ್ನೊಳಗಿನ ಕಲೆಗೆ ಮರುಜನ್ಮ ನೀಡಿದ ಈ ಲೇಖಕಿಯ ಧೈರ್ಯ ಮೆಚ್ಚುವಂತದ್ದು. ಇದು 'ನಾ ಗೀಚಿದ್ದು' ಮಾತ್ರವಲ್ಲ, ನೋವಿನ ಗೋಡೆಯ ಮೇಲೆ ಬರೆದ ವಿಜಯದ ಸಹಿ. ಕ್ರೌರ್ಯಕ್ಕೆ ಕಾನೂನಿನ ಶಿಕ್ಷೆಯಾಗಿದೆ, ಇನ್ನು ಮುಂದೆ ನಿಮ್ಮ ಲೇಖನಿ ಮತ್ತು ಕುಂಚ ಮುಕ್ತವಾಗಿ ಚಲಿಸಲಿ. ನಿಮ್ಮ ಕಲೆ 'ಗೀಚು' ಬರಹವಾಗಿ ಉಳಿಯದೆ, ಜಗತ್ತು ಮೆಚ್ಚುವ ಅದ್ಭುತ 'ಚಿತ್ರ'ವಾಗಲಿ ಎಂಬುದೇ ನಮ್ಮ ಆಶಯ. ನಿಮ್ಮ ಹೋರಾಟದ ಹಾದಿಗೆ 'ಕನ್ನಡ ಗ್ಲೋಬಲ್ ನ್ಯೂಸ್' ಕೃತಜ್ಞತೆ ಸಲ್ಲಿಸುತ್ತದೆ.

No comments:

Post a Comment

Advertisement

ಜಾಹೀರಾತು ಹಾಗೂ ಸುದ್ದಿ ನೀಡಲು ಸಂಪರ್ಕಿಸಿ

📞 9110857339 ಗೆ ಕರೆ ಮಾಡಿ 💬 WhatsApp ಗ್ರೂಪ್ ಸೇರಿ 🎥 YouTube ಚಂದಾದಾರರಾಗಿ

ಕನ್ನಡ ಗ್ಲೋಬಲ್ ನ್ಯೂಸ್