ಸಾಗರ : ಉಪವಿಭಾಗದಲ್ಲಿ ಮಾದಕ ವಸ್ತುಗಳ ಹಾವಳಿಯನ್ನು ನಿಯಂತ್ರಿಸಲು ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಶಿಸ್ತು ಮೂಡಿಸುವ ನಿಟ್ಟಿನಲ್ಲಿ ಸಾಗರ ಪೊಲೀಸರು ಶನಿವಾರ (ಜುಲೈ 4) ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಸಾಗರ ಉಪವಿಭಾಗದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ASP) ಡಾ. ಬೆನಕ ಪ್ರಸಾದ್ ಎನ್.ಜೆ. ಅವರ ನೇತೃತ್ವದಲ್ಲಿ ಸಾಗರ ನಗರಾದ್ಯಂತ ಏಕಕಾಲದಲ್ಲಿ 10ಕ್ಕೂ ಹೆಚ್ಚು ಕಡೆಗಳಲ್ಲಿ ಮೆಗಾ ಪೊಲೀಸ್ ರೈಡ್ ನಡೆಸಲಾಗಿದೆ.
ಸಾಗರ ನಗರದ ಹೊಸ ಖಾಸಗಿ ಬಸ್ ನಿಲ್ದಾಣದ ಸುತ್ತಮುತ್ತ, ನೆಹರೂ ಸ್ಟೇಡಿಯಂ, ಆಡಿಟೋರಿಯಂ ಹಾಗೂ ಗೋಪಾಲಗೌಡ ಕ್ರೀಡಾಂಗಣದ ಬಳಿ ಪೊಲೀಸರು ಡ್ರೋನ್ ಕ್ಯಾಮೆರಾಗಳನ್ನು ಹಾರಿಸುವ ಮೂಲಕ ಇಡೀ ಪ್ರದೇಶವನ್ನು ಹದ್ದಿನ ಕಣ್ಣಿನ ಕಾವಲಿಗೆ ಒಳಪಡಿಸಿದ್ದರು. ಅಲ್ಲದೆ, ಶ್ವಾನದಳವನ್ನು ಬಳಸಿಕೊಂಡು ಗಾಂಜಾ ಮತ್ತು ಇತರ ಮಾದಕ ವಸ್ತುಗಳ ಪತ್ತೆಗಾಗಿ ತೀವ್ರ ತಪಾಸಣೆ ನಡೆಸಲಾಯಿತು.
ಕ್ಲಾಸ್ ಬಂಕ್ ಮಾಡಿ ಹರಟೆ ಹೊಡೆಯುತ್ತಿದ್ದ ವಿದ್ಯಾರ್ಥಿಗಳಿಗೆ ಖಡಕ್ ವಾರ್ನಿಂಗ್:
ಕಾಲೇಜು ಅವಧಿಯಲ್ಲಿ ತರಗತಿಗಳನ್ನು ಬಂಕ್ ಮಾಡಿ ನೆಹರು ಮೈದಾನ, ಪದವಿ ಪೂರ್ವ ಕಾಲೇಜು ಆವರಣ, ಬಿ.ಹೆಚ್. ರಸ್ತೆ ಹಾಗೂ ಇಂದಿರಾ ಗಾಂಧಿ ಕಾಲೇಜು ರಸ್ತೆಗಳಲ್ಲಿ ಅನಗತ್ಯವಾಗಿ ಅಡ್ಡಾಡುತ್ತಾ, ಹರಟೆ ಹೊಡೆಯುತ್ತಿದ್ದ ವಿದ್ಯಾರ್ಥಿಗಳಿಗೆ ಎಎಸ್‌ಪಿ ಡಾ. ಬೆನಕ ಪ್ರಸಾದ್ ಸ್ಥಳದಲ್ಲೇ ಜಬರ್ದಸ್ತ್ ಕ್ಲಾಸ್ ತಗೆದುಕೊಂಡರು. ವಿದ್ಯಾರ್ಥಿಗಳನ್ನು ತರಾಟೆಗೆ ತೆಗೆದುಕೊಂಡು, ಅವರ ಭವಿಷ್ಯದ ದೃಷ್ಟಿಯಿಂದ ಬುದ್ಧಿಮಾತು ಹೇಳಿ ಖಡಕ್ ಎಚ್ಚರಿಕೆ ನೀಡಿದರು. ಕೆಲವು ಅಂಗಡಿಗಳ ಬಳಿ ಧೂಮಪಾನ ಹಾಗೂ ಗಾಂಜಾ ಸೇವನೆಯಂತಹ ಕೃತ್ಯಗಳಲ್ಲಿ ತೊಡಗಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ವಿವಿಧ ಕ್ಯಾಂಟೀನ್, ಬಸ್ ನಿಲ್ದಾಣಗಳ ಮೇಲೆ ದಾಳಿ:
ನಗರದ ವಿವಿಧ ಕ್ಯಾಂಟೀನ್‌ಗಳು, ಬಸ್ ನಿಲ್ದಾಣಗಳ ಮೇಲೆ ದಾಳಿ ನಡೆಸಿ ಶಂಕಿತ ಗ್ರಾಹಕರು ಹಾಗೂ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಯಿತು. ಈ ಸಂದರ್ಭದಲ್ಲಿ ಎಎಸ್‌ಪಿ ಅವರು ಸಾರ್ವಜನಿಕರಲ್ಲಿ ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿ ಕಾನೂನು ಕ್ರಮದ ಅರಿವು ಮೂಡಿಸಿದರು.
ಗಾಂಜಾ ಪತ್ತೆ ಮತ್ತು 6 ಜನರ ವಶ:
ಸಾಗರ ಟೌನ್ ಮತ್ತು ಗ್ರಾಮಾಂತರ ಠಾಣಾ ವ್ಯಾಪ್ತಿಯ ಸುಮಾರು 60ಕ್ಕೂ ಹೆಚ್ಚು ಸಿಬ್ಬಂದಿಗಳು ಹಾಗೂ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಶ್ವಾನ ದಳದೊಂದಿಗೆ ನಡೆಸಿದ ಈ ದಾಳಿಯಲ್ಲಿ, ಬಳಸಗೋಡು ಹತ್ತಿರದ 'ಹಣ್ಣು ಕ್ಯಾಂಟೀನ್' ಎಂಬ ಅಂಗಡಿಯಲ್ಲಿ ಅಲ್ಪ ಪ್ರಮಾಣದ ಗಾಂಜಾ ಪತ್ತೆಯಾಗಿದೆ. ಸ್ವಂತ ಬಳಕೆಗೆ ಇಟ್ಟುಕೊಂಡಿರುವ ರೀತಿಯಲ್ಲಿ ಇದು ಕಂಡುಬಂದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೇ ವೇಳೆ ಗಾಂಜಾ ಸೇವನೆ ಮಾಡಿರುವ ಶಂಕೆಯ ಮೇರೆಗೆ ಆರು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.
ಸಂಪಾದಕೀಯ ನುಡಿ (Editorial Note):
ಯುವ ಪೀಳಿಗೆಯೇ ದೇಶದ ಸಂಪತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವಕರು ಮಾದಕ ದ್ರವ್ಯಗಳ ಜಾಲಕ್ಕೆ ಬಲಿಯಾಗುತ್ತಿರುವುದು ಮತ್ತು ತರಗತಿಗಳನ್ನು ಬಂಕ್ ಮಾಡಿ ದಾರಿ ತಪ್ಪುತ್ತಿರುವುದು ಇಡೀ ಸಮಾಜವೇ ಕಳವಳ ಪಡುವಂತಾಗಿದೆ. ಸಾಗರದಲ್ಲಿ ಎಎಸ್‌ಪಿ ಡಾ. ಬೆನಕ ಪ್ರಸಾದ್ ನೇತೃತ್ವದಲ್ಲಿ ನಡೆದಿರುವ ಈ ಪ್ರಶಂಸನೀಯ ತಂತ್ರಜ್ಞಾನ ಆಧಾರಿತ ಕಾರ್ಯಾಚರಣೆಯು ಕೇವಲ ಅಪರಾಧ ಮುಕ್ತ ಸಮಾಜ ನಿರ್ಮಾಣಕ್ಕೆ ಮಾತ್ರವಲ್ಲದೆ, ಯುವಕರ ಭವಿಷ್ಯವನ್ನು ರಕ್ಷಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಕೇವಲ ಪೊಲೀಸ್ ಇಲಾಖೆಯಷ್ಟೇ ಅಲ್ಲದೆ, ಪೋಷಕರು ಹಾಗೂ ಸಾರ್ವಜನಿಕರು ಜಾಗೃತರಾಗಿ ಇಲಾಖೆಯೊಂದಿಗೆ ಕೈಜೋಡಿಸಿದಾಗ ಮಾತ್ರ ಇಂತಹ ಪಿಡುಗುಗಳನ್ನು ಸಂಪೂರ್ಣವಾಗಿ ಬೇರುಸಹಿತ ಕಿತ್ತೆಸೆಯಲು ಸಾಧ್ಯ. 'ಕನ್ನಡ ಗ್ಲೋಬಲ್ ನ್ಯೂಸ್' ಇಲಾಖೆಯ ಈ ಜನಪರ ಮತ್ತು ಕಠಿಣ ಕ್ರಮವನ್ನು ಮುಕ್ತಕಂಠದಿಂದ ಶ್ಲಾಘಿಸುತ್ತದೆ.

No comments:
Post a Comment