ಹೊಸನಗರ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಹೊಸನಗರ ತಾಲ್ಲೂಕಿನಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯವು ಜೂನ್ 20ರಿಂದ ಅಕ್ಟೋಬರ್ 7ರವರೆಗೆ ನಡೆಯಲಿದೆ ಎಂದು ಹೊಸನಗರ ತಹಶೀಲ್ದಾರ್ ಭರತ್‌ರಾಜ್ ತಿಳಿಸಿದ್ದಾರೆ.
ಪಟ್ಟಣದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮಹತ್ವದ ಪ್ರಕ್ರಿಯೆಯ ಸಂಪೂರ್ಣ ವೇಳಾಪಟ್ಟಿ ಮತ್ತು ತಾಲೂಕಿನ ಮತದಾರರ ವಿವರಗಳನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡರು. ಹೊಸನಗರ ತಾಲ್ಲೂಕು ಒಟ್ಟು 132 ಮತಗಟ್ಟೆಗಳನ್ನು ಹೊಂದಿದ್ದು, ಇದು 114-ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ 62 ಮತಗಟ್ಟೆಗಳು ಹಾಗೂ 117-ಸಾಗರ ವಿಧಾನಸಭಾ ಕ್ಷೇತ್ರದ 70 ಮತಗಟ್ಟೆಗಳ ವ್ಯಾಪ್ತಿಗೆ ಹಂಚಿಕೆಯಾಗಿದೆ ಎಂದರು.
ತಾಲೂಕಿನ ಮತದಾರರ ವಿವರ ಮತ್ತು ಮ್ಯಾಪಿಂಗ್ ಪ್ರಗತಿ:
ಹೊಸನಗರ ತಾಲೂಕಿನ ಒಟ್ಟು 132 ಮತಗಟ್ಟೆಗಳ ಪೈಕಿ, 114-ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 22,986 ಪುರುಷರು ಹಾಗೂ 23,440 ಮಹಿಳೆಯರು ಸೇರಿ ಒಟ್ಟು 46,426 ಮತದಾರರಿದ್ದಾರೆ. ಇವರಲ್ಲಿ ಈಗಾಗಲೇ 43,994 ಮತದಾರರ ಮ್ಯಾಪಿಂಗ್ ಪೂರ್ಣಗೊಂಡು ಶೇ. 94.76ರಷ್ಟು ಸಾಧನೆಯಾಗಿದ್ದು, ಇನ್ನು 2,432 ಮತದಾರರ ಮ್ಯಾಪಿಂಗ್ ಬಾಕಿಯಿದೆ. ಅದೇ ರೀತಿ, 117-ಸಾಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 27,502 ಪುರುಷರು ಹಾಗೂ 28,217 ಮಹಿಳೆಯರು ಸೇರಿ ಒಟ್ಟು 55,719 ಮತದಾರರಿದ್ದಾರೆ. ಇವರಲ್ಲಿ 51,304 ಮತದಾರರ ಮ್ಯಾಪಿಂಗ್ ಮುಕ್ತಾಯಗೊಂಡು ಶೇ. 92.08ರಷ್ಟು ಪ್ರಗತಿಯಾಗಿದ್ದು, ಇನ್ನು 4,415 ಮತದಾರರ ಮ್ಯಾಪಿಂಗ್ ಬಾಕಿ ಉಳಿದಿದೆ. ಒಟ್ಟಾರೆಯಾಗಿ ಇಡೀ ತಾಲೂಕಿನಲ್ಲಿ 50,488 ಪುರುಷರು ಹಾಗೂ 51,657 ಮಹಿಳೆಯರು ಸೇರಿ ಒಟ್ಟು 1,02,145 ಮತದಾರರಿದ್ದು, ಈ ಪೈಕಿ 95,298 ಮತದಾರರ ಮ್ಯಾಪಿಂಗ್ (ಶೇ. 93.30) ಪೂರ್ಣಗೊಂಡಿದ್ದು, ಇನ್ನು ಒಟ್ಟು 6,847 ಮತದಾರರ ಮ್ಯಾಪಿಂಗ್ ಪ್ರಕ್ರಿಯೆ ಬಾಕಿ ಇದೆ ಎಂದು ತಹಶೀಲ್ದಾರ್ ಮಾಹಿತಿ ನೀಡಿದ್ದಾರೆ.
ಪರಿಷ್ಕರಣೆಯ ಸಂಪೂರ್ಣ ವೇಳಾಪಟ್ಟಿ
ಬಾಕಿ ಉಳಿದಿರುವ ಮತದಾರರ ಮ್ಯಾಪಿಂಗ್ ಪೂರ್ಣಗೊಳಿಸಲು ಮತ್ತು ಪಟ್ಟಿಯನ್ನು ದೋಷಮುಕ್ತಗೊಳಿಸಲು ಚುನಾವಣಾ ಆಯೋಗವು ಈ ಕೆಳಗಿನಂತೆ ಕಾಲಮಿತಿ ನಿಗದಿಪಡಿಸಿದೆ:
ಜೂನ್ 20ರಿಂದ 29: ಬಿಎಲ್‌ಓಗಳ (BLO) ನೇತೃತ್ವದಲ್ಲಿ ತರಬೇತಿ, ಸಿದ್ಧತೆ ಮತ್ತು ಅಗತ್ಯ ದಾಖಲೆಗಳ ಮುದ್ರಣ ಕಾರ್ಯ.
ಜೂನ್ 30ರಿಂದ ಜುಲೈ 29: ಬಿಎಲ್‌ಓಗಳಿಂದ ಮನೆ-ಮನೆ ಭೇಟಿ ಹಾಗೂ ಮತದಾರರ ವಿವರಗಳ ನೇರ ಪರಿಶೀಲನೆ.
ಜುಲೈ 29: ಮತಗಟ್ಟೆಗಳ ತರ್ಕಬದ್ಧತೆ ಪ್ರಕ್ರಿಯೆ.
ಆಗಸ್ಟ್ 5: ಮತದಾರರ ಕರಡು ಪಟ್ಟಿ ಪ್ರಕಟಣೆ.
ಆಗಸ್ಟ್ 5ರಿಂದ ಸೆಪ್ಟೆಂಬರ್ 4: ಸಾರ್ವಜನಿಕರಿಂದ ದೂರುಗಳು, ತಿದ್ದುಪಡಿಗಳು ಹಾಗೂ ಆಕ್ಷೇಪಣೆಗಳ ಸ್ವೀಕಾರ.
ಅಕ್ಟೋಬರ್ 3ರೊಳಗೆ: ಬಂದಿರುವ ಅರ್ಜಿಗಳ ಸಮಗ್ರ ಪರಿಶೀಲನೆ ಮತ್ತು ವಿಲೇವಾರಿ.
ಅಕ್ಟೋಬರ್ 7: ಅಧಿಕೃತ ಅಂತಿಮ ಮತದಾರರ ಪಟ್ಟಿ ಪ್ರಕಟಣೆ.
ಲೋಪದೋಷಗಳಿಲ್ಲದ ಶುದ್ಧ ಮತದಾರರ ಪಟ್ಟಿ ತಯಾರಿಸಲು ತಾಲೂಕಿನ ಸಾರ್ವಜನಿಕರು ಮತ್ತು ಮತದಾರರು ಬಿಎಲ್‌ಓಗಳಿಗೆ ಸೂಕ್ತ ಮಾಹಿತಿ ನೀಡಿ ಸಹಕರಿಸಬೇಕೆಂದು ತಹಶೀಲ್ದಾರ್ ಭರತ್‌ರಾಜ್ ಅವರು ಇದೇ ವೇಳೆ ಮನವಿ ಮಾಡಿದರು.
ಸುದ್ದಿಗೋಷ್ಠಿಯ ಬಳಿಕ ತಾಲ್ಲೂಕಿನ ಮಾನ್ಯತೆ ಪಡೆದ ವಿವಿಧ ರಾಜಕೀಯ ಪಕ್ಷಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಸಭೆ ನಡೆಸಿ, ವಿಶೇಷ ಸಮಗ್ರ ಪರಿಷ್ಕರಣೆ ಹಾಗೂ ಮ್ಯಾಪಿಂಗ್ ಕಾರ್ಯದ ಕುರಿತು ಅಧಿಕೃತ ಮಾಹಿತಿ ನೀಡಿ, ಪ್ರಕ್ರಿಯೆಗೆ ಸಹಕಾರ ಕೋರಲಾಯಿತು.
ಸಂಪಾದಕೀಯ ನುಡಿ : ಪ್ರಜಾಪ್ರಭುತ್ವದ ಅತಿ ದೊಡ್ಡ ಶಕ್ತಿಯೇ ಮತದಾನ. ಅರ್ಹ ಪ್ರತಿಯೊಬ್ಬ ನಾಗರಿಕನೂ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದುವುದು ಸಂವಿಧಾನಬದ್ಧ ಹಕ್ಕು ಮಾತ್ರವಲ್ಲ, ಜವಾಬ್ದಾರಿಯೂ ಹಾಗಿದೆ. ಹೊಸನಗರ ತಾಲೂಕಿನ ಸಾರ್ವಜನಿಕರು ಈ ವಿಶೇಷ ಪರಿಷ್ಕರಣಾ ಕಾರ್ಯದ ಸದುಪಯೋಗ ಪಡಿಸಿಕೊಳ್ಳಬೇಕು. ಬಿಎಲ್‌ಓಗಳು ನಿಮ್ಮ ಮನೆಗೆ ಭೇಟಿ ನೀಡಿದಾಗ ಸರಿಯಾದ ಮಾಹಿತಿ ನೀಡಿ ಸಹಕರಿಸಿ. ಹೊಸದಾಗಿ 18 ವರ್ಷ ತುಂಬಿದ ಯುವ ಮತದಾರರು ಹಾಗೂ ಇದುವರೆಗೆ ಹೆಸರು ನೋಂದಾಯಿಸದವರು ಈ ಅವಕಾಶವನ್ನು ಬಳಸಿಕೊಂಡು ತಪ್ಪದೇ ಹೆಸರು ಸೇರ್ಪಡೆಗೊಳಿಸಿ, ಪ್ರಜಾಪ್ರಭುತ್ವದ ಬಲವರ್ಧನೆಗೆ ಕೈಜೋಡಿಸಬೇಕಾಗಿ 'ಕನ್ನಡ ಗ್ಲೋಬಲ್' ಕಳಕಳಿಯ ವಿನಂತಿ ಮಾಡುತ್ತದೆ.
- ಸಂಪಾದಕರು, ಕನ್ನಡ ಗ್ಲೋಬಲ್ ನ್ಯೂಸ್

No comments:
Post a Comment