೨೦೨೫ರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ: ಶಿವಮೊಗ್ಗಕ್ಕೆ ಮೂರು ಪ್ರಶಸ್ತಿಗಳ ಗರಿ
ಸಮಾಜ ಸೇವೆ, ಜಾನಪದ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದ ಕೋಣಂದೂರು ಲಿಂಗಪ್ಪ, ಟಾಕಪ್ಪ ಕಣ್ಣೂರು, ಮತ್ತು ಪ್ರೊ.ರಾಜೇಂದ್ರ ಚೆನ್ನಿ ಅವರಿಗೆ ಸಂದ ಗೌರವ
ಶಿವಮೊಗ್ಗ:
ರಾಜ್ಯ ಸರಕಾರವು 2025ನೇ ಸಾಲಿನ ಪ್ರತಿಷ್ಠಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟಿಸಿದ್ದು, ಈ ಬಾರಿ ಶಿವಮೊಗ್ಗ ಜಿಲ್ಲೆಯ ಮೂವರು ಮಹನೀಯರು ಪ್ರಶಸ್ತಿಗೆ ಭಾಜನರಾಗುವ ಮೂಲಕ ಜಿಲ್ಲೆಗೆ ಹೆಮ್ಮೆಯನ್ನು ತಂದಿದ್ದಾರೆ. ಸಮಾಜ ಸೇವೆ ಕ್ಷೇತ್ರದಲ್ಲಿ ಹಿರಿಯ ಸಮಾಜವಾದಿ ನಾಯಕ ಹಾಗೂ ಮಾಜಿ ಶಾಸಕರಾದ ಕೋಣಂದೂರು ಲಿಂಗಪ್ಪ, ಜಾನಪದ ಕ್ಷೇತ್ರದಲ್ಲಿ ಹಿರಿಯ ಕಲಾವಿದ ಟಾಕಪ್ಪ ಕಣ್ಣೂರು ಹಾಗೂ ಸಾಹಿತ್ಯ ಕ್ಷೇತ್ರದ ದಿಗ್ಗಜ ಪ್ರೊ. ರಾಜೇಂದ್ರ ಚೆನ್ನಿ ಅವರು ಈ ಗೌರವಕ್ಕೆ ಪಾತ್ರರಾಗಿದ್ದಾರೆ.
ಸಮಾಜ ಸೇವೆಗಾಗಿ ಕೋಣಂದೂರು ಲಿಂಗಪ್ಪ:
1934ರ ಫೆಬ್ರವರಿ 24ರಂದು ಜನಿಸಿದ ಕೋಣಂದೂರು ಲಿಂಗಪ್ಪ ಅವರು ತಮ್ಮ ವಿದ್ಯಾರ್ಥಿ ಜೀವನದಿಂದಲೇ ಸಮಾಜವಾದಿ ಮತ್ತು ಕನ್ನಡ ಚಳವಳಿಗಳಲ್ಲಿ ಸಕ್ರಿಯರಾಗಿದ್ದರು. ಮೈಸೂರು ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದ ಇವರು, ಕನ್ನಡ ಯುವಜನ ಸಭಾ ಸ್ಥಾಪಿಸಿ ಕನ್ನಡ ಚಳವಳಿಯಲ್ಲಿ ತೊಡಗಿದ್ದರು.
ದಿವಂಗತ ಶಾಂತವೇರಿ ಗೋಪಾಲಗೌಡರ ಗರಡಿಯಲ್ಲಿ ಪಳಗಿದ್ದ ಲಿಂಗಪ್ಪನವರು, ಕಾಗೋಡು ತಿಮ್ಮಪ್ಪ ಮತ್ತು ಎಸ್. ಬಂಗಾರಪ್ಪ ಅವರೊಂದಿಗೆ ಸೇರಿ ಗೇಣಿದಾರರ ಪರ ಹೋರಾಟ ನಡೆಸಿದ್ದರು. ದೇವರಾಜ ಅರಸು ಅವರ “ಉಳುವವನೇ ಭೂಮಿಯ ಒಡೆಯ” ಘೋಷವಾಕ್ಯದಡಿ ಭೂ ಸುಧಾರಣೆ ಪರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. 1972ರಿಂದ 78ರವರೆಗೆ ಎರಡು ಅವಧಿಗೆ ಶಾಸಕರಾಗಿ ಆಯ್ಕೆಯಾಗಿದ್ದ ಇವರು, ಉತ್ತಮ ಸಂಸದೀಯ ಪಟುವಾಗಿದ್ದು, ಹಾವನೂರು ವರದಿ ಜಾರಿಗಾಗಿ ಹೋರಾಟ ಮಾಡಿದ್ದರು.
ಸಾಹಿತ್ಯಕ್ಕಾಗಿ ಪ್ರೊ.ರಾಜೇಂದ್ರ ಚೆನ್ನಿ:
ಬೆಳಗಾವಿ ಜಿಲ್ಲೆಯ ನಾಗರಗಾಳಿಯವರಾದ ಪ್ರೊ.ರಾಜೇಂದ್ರ ಚೆನ್ನಿ ಅವರು 1955ರ ಅಕ್ಟೋಬರ್ 21ರಂದು ಜನಿಸಿದರು. ಕರ್ನಾಟಕ ಮತ್ತು ಮೈಸೂರು ವಿಶ್ವವಿದ್ಯಾಲಯಗಳಿಂದ ಉನ್ನತ ಪದವಿ ಪಡೆದ ಇವರು, 1981 ರಿಂದ 1991ರವರೆಗೆ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಅಧ್ಯಾಪಕರಾಗಿ, ನಂತರ ಕುವೆಂಪು ವಿ.ವಿ.ಯ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಮತ್ತು ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಚಿಂತಕರಾಗಿ, ವಿಮರ್ಶಕರಾಗಿ, ಮತ್ತು ಬರಹಗಾರರಾಗಿ ಹೆಸರಾದ ಚೆನ್ನಿಯವರು ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ವಿಮರ್ಶೆ, ಕಥೆ ಹಾಗೂ ಲೇಖನಗಳನ್ನು ಬರೆದಿದ್ದಾರೆ. ಇವರ ಪ್ರಮುಖ ಕೃತಿಗಳಲ್ಲಿ ದೇಶೀವಾದ, ದೊಡ್ಡ ಮರ (ಕಥಾ ಸಂಕಲನ), ನಡುಹಗಲಿನಲ್ಲಿ ಕಂದೀಲುಗಳು (ವಿಮರ್ಶೆ), ಮಡ್ ಟೌನ್ (ಕಾದಂಬರಿ-ಇಂಗ್ಲಿಷ್) ಸೇರಿವೆ. ಜನಪರ ಚಳವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿರುವ ಇವರಿಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಜೀವಮಾನ ಸಾಧನೆ ಪ್ರಶಸ್ತಿ (2012), ಜಿಎಸ್‌ಎಸ್ ಪ್ರಶಸ್ತಿ, ದ.ರಾ.ಬೇಂದ್ರೆ ರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ಹಲವು ಪ್ರಮುಖ ಗೌರವಗಳು ಸಂದಿವೆ.
ಜಾನಪದಕ್ಕಾಗಿ ಟಾಕಪ್ಪ ಕಣ್ಣೂರು:
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಕಣ್ಣೂರಿನಲ್ಲಿ 1949ರ ಸೆಪ್ಟೆಂಬರ್ 4ರಂದು ಜನಿಸಿದ ಬಿ. ಟಾಕಪ್ಪ ಕಣ್ಣೂರು ಅವರು, ಡೊಳ್ಳು ಕುಣಿತದ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 1978ರಿಂದಲೇ 'ಜಾನಪದ ಕಲಾವಿದರ ಕೂಟ' ಕಟ್ಟಿ ಡೊಳ್ಳು ಕುಣಿತದ ಅಭ್ಯಾಸ ಆರಂಭಿಸಿದ ಟಾಕಪ್ಪನವರು, ಕಲಾವಿದರಾಗಿ, ಸಂಘಟಕರಾಗಿ ಮತ್ತು ತರಬೇತುದಾರರಾಗಿ ನಾಡಿನ ಖ್ಯಾತಿಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ.
ರಷ್ಯಾದ ಭಾರತೋತ್ಸವ, ಇಂಗ್ಲೆಂಡಿನ ಕನ್ನಡ ಸಮ್ಮೇಳನ, ಮತ್ತು ಅಮೇರಿಕಾದ ವಿಶ್ವ ಕನ್ನಡ ಸಮ್ಮೇಳನಗಳಲ್ಲಿ ಡೊಳ್ಳು ಕುಣಿತವನ್ನು ಪ್ರದರ್ಶಿಸುವ ಮೂಲಕ ನೆಲದ ಸೊಗಡನ್ನು ಜಾಗತಿಕವಾಗಿ ಪರಿಚಯಿಸಿದ್ದಾರೆ. 56ಕ್ಕೂ ಹೆಚ್ಚು ರಾಷ್ಟ್ರಮಟ್ಟದ ಕಾರ್ಯಕ್ರಮಗಳಲ್ಲಿ ತಂಡದೊಂದಿಗೆ ಡೊಳ್ಳು ಪ್ರದರ್ಶನ ನೀಡಿರುವ ದಾಖಲೆ ಇವರದಾಗಿದೆ.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ನಾಡಿನಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಈ ಮೂವರು ಸಾಧಕರಿಗೆ ಪ್ರಶಸ್ತಿ ಲಭಿಸಿರುವುದು ಶಿವಮೊಗ್ಗ ಜಿಲ್ಲೆಗೆ ಸಂದ ದೊಡ್ಡ ಗೌರವವಾಗಿದೆ.

No comments:
Post a Comment