ಕನ್ನಡದ ಅಸ್ತಿತ್ವ ಉಳಿಸಿ; ಸಾಗರಕ್ಕೆ ಕೆಪಿಎಸ್ ಶಾಲೆ ಮಂಜೂರು, ಜಾನಪದ ಕಲಾವಿದನಿಗೆ ರಾಜ್ಯೋತ್ಸವ ಪ್ರಶಸ್ತಿ
ಸಾಗರದಲ್ಲಿ 70ನೇ ಕನ್ನಡ ರಾಜ್ಯೋತ್ಸವ
ಸಾಗರ : ಕನ್ನಡ ನಾಡು ಸಾಹಿತ್ಯ, ಸಾಂಸ್ಕೃತಿಕ ಹಾಗೂ ಸೌಜನ್ಯತೆಯ ನೆಲವಿದಾಗಿದ್ದು, ಕನ್ನಡಿಗರು ಎಲ್ಲಾ ಕ್ಷೇತ್ರಗಳಲ್ಲೂ ಅದ್ವಿತೀಯ ಸಾಧನೆ ಮಾಡುತ್ತಿದ್ದಾರೆ ಎಂದು ಸಾಗರ ಉಪವಿಭಾಗಾಧಿಕಾರಿ (ಎ.ಸಿ.) ವಿರೇಶ್ ಕುಮಾರ್ ಅವರು ತಿಳಿಸಿದರು. ನಾಡುನುಡಿ ಅಸ್ತಿತ್ವವನ್ನು ಉಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ಕನ್ನಡಿಗ ಕಟಿಬದ್ಧರಾಗಿರಬೇಕು ಎಂದು ಅವರು ಕರೆ ನೀಡಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ನೆಹರೂ ಮೈದಾನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ನಗರಸಭೆ ವತಿಯಿಂದ ಹಮ್ಮಿಕೊಂಡಿದ್ದ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ದೇವರಾಜ ಅರಸು ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ 1973ರ ನವೆಂಬರ್ 1ರಂದು 'ಕರ್ನಾಟಕ' ಎಂದು ನಾಮಕರಣಗೊಂಡ ನಮ್ಮ ಕನ್ನಡ ನಾಡು ವಿಶ್ವದಾದ್ಯಂತ ತನ್ನ ಶ್ರೇಷ್ಠತೆಯ ಮೂಲಕ ಜನಮಾನಸದಲ್ಲಿ ನೆಲೆಯೂರಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಕನ್ನಡ ಭಾಷೆ ಅತ್ಯಂತ ಸುಂದರ ಭಾಷೆ. ಮೈಸೂರಿನ ನಂತರ ಸಾಗರ ಸಾಂಸ್ಕೃತಿಕವಾಗಿ ಅತ್ಯಂತ ಶ್ರೀಮಂತ ತಾಲ್ಲೂಕು ಎಂಬ ಹೆಗ್ಗಳಿಕೆ ಹೊಂದಿದೆ ಎಂದು ಹೇಳಿದರು.
ಡಾ. ರಾಜಕುಮಾರ್ ನೇತೃತ್ವದಲ್ಲಿ ನಡೆದ ಗೋಕಾಕ ಚಳುವಳಿ ನಂತರ ಕನ್ನಡ ನಾಡು ಸದೃಢವಾಗಿದೆ. ಸಾಗರ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ತಾಲ್ಲೂಕಿನ ಶಿರವಂತೆ, ತ್ಯಾಗರ್ತಿ, ಬ್ಯಾಕೋಡು ಭಾಗಕ್ಕೆ ಕೆಪಿಎಸ್ ಶಾಲೆ ಮಂಜೂರಾಗಿದೆ ಎಂದು ಶಾಸಕರು ಮಾಹಿತಿ ನೀಡಿದರು. ಅಲ್ಲದೆ, ಆವಿನಹಳ್ಳಿ, ಹಿರೇಬಿಲಗುಂಜಿ, ಕಾನ್ಲೆ, ಭೀಮನೇರಿ, ಕುದುರೂರು ಗ್ರಾಮಗಳನ್ನು ಕಾಯಕ ಗ್ರಾಮ ಎಂದು ಆಯ್ಕೆ ಮಾಡಲಾಗಿದೆ ಎಂದರು.
ಸಾಗರ ತಾಲ್ಲೂಕಿನ ಜಾನಪದ ಕಲಾವಿದ ಬಿ. ಟಾಕಪ್ಪ ಸೇರಿ ಜಿಲ್ಲೆಯ ಮೂವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ್ದು, ಅವರಿಗೆ ಕ್ಷೇತ್ರದ ಜನತೆ ಪರವಾಗಿ ಅಭಿನಂದನೆ ಸಲ್ಲಿಸುತ್ತಿದ್ದೇನೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಈ ಸಂದರ್ಭದಲ್ಲಿ ಸಾಗರ ನಗರಸಭೆ ಅಧ್ಯಕ್ಷೆ ಮೈತ್ರಿ ವಿರೇಂದ್ರ ಪಾಟೀಲ್, ಉಪಾಧ್ಯಕ್ಷೆ ಸವಿತಾ ವಾಸು, ತಹಶೀಲ್ದಾರ್ ರಶ್ಮಿ ಜೆ.ಎಚ್., ಪೌರಾಯುಕ್ತ ಎಚ್.ಕೆ. ನಾಗಪ್ಪ, ಕಾರ್ಯನಿರ್ವಾಹಣಾಧಿಕಾರಿ ಶಿವಪ್ರಕಾಶ್ ಬಿ.ಎಲ್., ಕ್ಷೇತ್ರ ಶಿಕ್ಷಣಾಧಿಕಾರಿ ಪರಶುರಾಮಪ್ಪ, ಎಎಸ್‌ಪಿ ಡಾ. ಬೆನಕ ಪ್ರಸಾದ್ ಇನ್ನಿತರ ಗಣ್ಯರು ಉಪಸ್ಥಿತರಿದ್ದರು. ನಂತರ ಆರಕ್ಷಕ, ಗೃಹರಕ್ಷಕ, ಎನ್.ಸಿ.ಸಿ. ಸೇರಿ ವಿವಿಧ ತಂಡಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.

No comments:
Post a Comment