ತಂದೆಯೊಬ್ಬರು ಮಗನ ಕೈಹಿಡಿದು ರಸ್ತೆಯಲ್ಲಿ ನಡೆದು ಬಂದದ್ದೇ ನನ್ನ ಈ ಲೇಖನಕ್ಕೆ ಸ್ಪೂರ್ತಿ. ದಿನನಿತ್ಯ ನಾನು ನಡೆದು ಹೋಗುವ ಕಾಲೇಜಿನ ದಾರಿಯಲ್ಲೇ ನಡೆದ ಈ ಘಟನೆ ನನ್ನ ಮನಸ್ಸನ್ನು ಹಾಸುಹೊಕ್ಕಿತು.
ಹೆಚ್ಚಿನ ಜನರು ಬದುಕನ್ನು 'ಫಾಸ್ಟ್ ಫಾರ್ವರ್ಡ್'ನಲ್ಲಿ ನೋಡುತ್ತಾರೆ. ಬಸ್ ಸ್ಟಾಪ್‌ನಲ್ಲಿ ನಿಂತಿರುವ ಅಜ್ಜಿಯ ಕೈ ನಡುಕ, ಮಳೆ ಬಂದಾಗ ರಸ್ತೆ ಬದಿಯಲ್ಲಿ ಪುಸ್ತಕ ಮಾರುವ ಹುಡುಗನ ಆತಂಕ, ಮಗುವಿಗೆ ಬಿಸ್ಕೆಟ್ ಕೊಡುವಾಗ ಅಮ್ಮನ ಕಣ್ಣಿನಲ್ಲಿನ ಖುಷಿ - ಇದೆಲ್ಲಾ ಅವರಿಗೆ ಕಾಣುವುದೇ ಇಲ್ಲ. ಆದರೆ ನನ್ನ ಮನಸ್ಸು 'ಸ್ಲೋ ಮೋಷನ್ ಕ್ಯಾಮೆರಾ' ಇದ್ದ ಹಾಗೆ. ಪ್ರತಿ ಸಣ್ಣ ಹೆಜ್ಜೆಯಲ್ಲೂ ಒಂದು ಕಥೆ ಹುಡುಕುತ್ತದೆ, ಪ್ರತಿ ಮೌನದಲ್ಲೂ ಒಂದು ಮಾತು ಕೇಳುತ್ತದೆ.
ಬರಿಗಾಲಿನ ತಂದೆ, ಹೊಸ ಶೂ ಕೇಳಿದ ಮಗ!
ನನ್ನ ಈ 'ಸ್ಲೋ ಮೋಷನ್ ಕ್ಯಾಮೆರಾ' ಕಣ್ಣಿಗೆ ಆ ತಂದೆ-ಮಗ ಕಾಣಿಸಿಕೊಂಡದ್ದು ಹೀಗೆ: ನನ್ನ ಮುಂದೆಯೇ ತಂದೆ-ಮಗ ನಡೆದು ಬರುತ್ತಿದ್ದರು. ತಂದೆ ತನ್ನ ಒಂದು ಕೈಯಲ್ಲಿ ಮಗನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡು, ಅವನ ಕಾಲೇಜು ಬ್ಯಾಗನ್ನು ತನ್ನ ಹೆಗಲಿಗೆ ಹಾಕಿಕೊಂಡು ಮುನ್ನಡೆಯುತ್ತಿದ್ದರು. ಮಗ ತನ್ನ ಕಾಲಿಗೆ ಒಂದು ಜೊತೆ ಚಪ್ಪಲಿ ಮೆಟ್ಟಿಕೊಂಡು ಸಾಗಿದ್ದ. ಆದರೆ, ಆ ತಂದೆ ಮಾತ್ರ ಬರಿಗಾಲಿನಲ್ಲೇ ಬಿಸಿಲ ರಸ್ತೆಯಲ್ಲಿ ನಡೆದು ಬರುತ್ತಿದ್ದರು!
ಆಗ ಮಗ ಹೇಳಿದ– "ಅಪ್ಪ, ನಾನೀಗ ಹಾಸ್ಟೆಲ್‌ಗೆ ಹೋಗುತ್ತೇನೆ. ನೀನು ಮುಂದಿನ ವಾರ ನನ್ನನ್ನು ನೋಡಲು ಬರುವಾಗ ನನಗೆ ಒಂದು ಜೊತೆ ಹೊಸ ಶೂ ತಗೊಂಡು ಬಾ."
ಅದಕ್ಕೆ ಆ ತಂದೆ ಮೃದುವಾಗಿ ಉತ್ತರಿಸಿದರು– "ಸರಿ ಮಗಾ. ಇವತ್ತು ಹೋಗು. ನಾಳೆಯಿಂದ ಎರಡು ದಿನ ಕೂಲಿ ಮಾಡಿದ ಕಾಸನ್ನು ಹಾಗೇ ಎತ್ತಿಟ್ಟು, ಮುಂದಿನ ವಾರ ಬರುವಾಗ ನಿನಗೆ ಹೊಸ ಶೂ ಜೊತೆಗೆ ಒಂದು ಹೊಸ ಜೊತೆ ಬಟ್ಟೆಯನ್ನೂ ತಗೊಂಡು ಬರ್ತೀನಿ."
ಆ ತಂದೆಯ ಬಾಯಿಂದ ಈ ಮಾತು ಕೇಳಿದ ನನಗೆ ಅನಿಸಿದ್ದು ಒಂದೇ– "ಕಾರು ಇರುವವರು ದೊಡ್ಡವರಲ್ಲ, ಕಣ್ಣೀರು ಒರೆಸಿಕೊಳ್ಳುವ ಧೈರ್ಯ ಇರುವವರು ದೊಡ್ಡವರು."
ತನ್ನಲ್ಲಿ ಎಷ್ಟೇ ಕಷ್ಟವಿದ್ದರೂ, ನೋವಿದ್ದರೂ ಮಗನ ಹತ್ತಿರ ತಂದೆ ಅದನ್ನು ತೋರಿಸಿಕೊಳ್ಳಲಿಲ್ಲ. ಆ ಕ್ಷಣಕ್ಕೆ ನನಗಾದ ದುಃಖವನ್ನು ನಾನು ಮಾತ್ರ ಅರಿಯಬಲ್ಲೆ. ಜೋರಾಗಿ ಸುರಿಯುತ್ತಿದ್ದ ಮಳೆ ಒಂದೇ ಸಲ ನಿಂತಂತಾಯಿತು. ನನ್ನ ಹೆತ್ತ ತಂದೆಯೇ ನನಗೆ ನೆನಪಾದರು.
ಮೇಲೆ ನೋಡಿದರೆ ದುಃಖ, ಕೆಳಗೆ ನೋಡಿದರೆ ನೆಮ್ಮದಿ!
ಹೌದಲ್ವಾ? ನಾವು ಎಷ್ಟೋ ಸಲ ನಮಗಿಂತ ದೊಡ್ಡವರನ್ನು ನೋಡಿ "ನಾವು ಹಾಗಿರಬಾರದೇ" ಎಂದು ಅಂದುಕೊಳ್ಳುತ್ತೇವೆ. ಆದರೆ ನನಗೆ ಆಗ ಅನಿಸಿದ್ದಿಷ್ಟೇ– ಮೇಲೆ ನೋಡಿದರೆ ದುಃಖ, ಕೆಳಗೆ ನೋಡಿದರೆ ನೆಮ್ಮದಿ. ನಮಗಿಂತ ಮೇಲಿರುವವರನ್ನು ನೋಡಿ ನಮ್ಮ ಜೀವನವನ್ನು ಹೋಲಿಕೆ ಮಾಡಿಕೊಂಡರೆ ನಮಗೆ ಸದಾ ಕೊರಗು. ಅದೇ ನಮಗಿಂತ ಕೆಳಗಿರುವವರನ್ನು ನೋಡಿದರೆ "ದೇವರು ನಮಗೆ ಎಷ್ಟೊಂದು ಕೊಟ್ಟಿದ್ದಾನಲ್ಲಾ" ಎಂಬ ಕೃತಜ್ಞತಾ ಭಾವ ಮೂಡುತ್ತದೆ.
ಪ್ರತಿಯೊಬ್ಬರೂ ದಿನನಿತ್ಯ ಒಂದಲ್ಲ ಒಂದು ಇಂಥ ಘಟನೆಯನ್ನು ನೋಡಿರುತ್ತಾರೆ. ಬಹುತೇಕ ಜನ ನೋಡಿಯೂ ನೋಡದಂತೆ ದಾಟಿ ಹೋಗುತ್ತಾರೆ. ಇನ್ನು ಕೆಲವರು ತಮ್ಮ ಸೂಕ್ಷ್ಮ ಸಂವೇದನೆಗಳಿಂದ ಇದನ್ನೆಲ್ಲ ಗಮನಿಸಿ, ಜೀವನದ ಪಾಠ ಕಲಿಯುತ್ತಾರೆ. "ನೋಡುವ ಕಣ್ಣು ಒಂದೇ, ಆದರೆ ಕಾಣುವ ದೃಷ್ಟಿ ಬೇರೆ" ಅಂತಾರಲ್ಲ, ಹಾಗೆ.
ಅಂಬಾನಿ ಜೊತೆ ಹೋಲಿಕೆ ಯಾಕೆ?
ಅಂಬಾನಿ ಯಾರು? ಮಲ್ಟಿಪ್ಲೆಕ್ಸ್, ಬಿಲ್ಡಿಂಗ್, ಬಂಗಲೆ ಕಟ್ಟುವವರು. ಅವರ ಜೊತೆ ಯಾಕೆ ನಾವು ನಮ್ಮ ಬದುಕನ್ನು ಹೋಲಿಕೆ ಮಾಡಿಕೊಳ್ಳಬೇಕು? ಅಂಬಾನಿ ಅವರನ್ನು ನೋಡಿ ಕಲಿಯಬೇಕಾದದ್ದು ಅವರ ಹಣವನ್ನಲ್ಲ, ಅವರ ಶ್ರಮ ಮತ್ತು ಧೈರ್ಯವನ್ನು. ಹಾಗೆಯೇ ಬೀದಿ ಬದಿಯ ಅಸಹಾಯಕನನ್ನು ನೋಡಿ ಕಲಿಯಬೇಕಾದದ್ದು ಅವನ ಸ್ಥಿತಿಯನ್ನಲ್ಲ, ನಮ್ಮ ಅದೃಷ್ಟವನ್ನು! ನಮಗಿಂತ ಕೆಳಗಿರುವವರನ್ನು ನೋಡಿ ಬದುಕಿದಾಗಲೇ ಬದುಕಿಗೆ ನಿಜವಾದ ಸಾರ್ಥಕತೆ ದೊರೆಯುತ್ತದೆ.
ನಿಮ್ಮ ಜೀವನದಲ್ಲಿ ಸಮಸ್ಯೆಗಳು ಬಂದಾಗ ಒಮ್ಮೆ ಕಿಟಕಿಯಿಂದ ಹೊರಗೆ ನೋಡಿ. ನಿಮ್ಮ ಸಮಸ್ಯೆಗಿಂತ ದೊಡ್ಡ ಸಮಸ್ಯೆಗಳನ್ನು ಎದುರಿಸುತ್ತಿರುವವರು ನಿಮಗೆ ಕಾಣಿಸುತ್ತಾರೆ. ಆಗ ನಿಮಗೆ ಅನಿಸುತ್ತದೆ– "ನನ್ನ ಜೀವನ ಒಂದು ವರದಾನ ಅಲ್ಲವೇ?" ಎಂದು.
"ಅಯ್ಯೋ, ದೇವರು ಎಲ್ಲರಿಗೂ ಎಲ್ಲದನ್ನೂ ಕೊಟ್ಟಿದ್ದಾನೆ, ನಮಗೆ ಏನೂ ಕೊಟ್ಟಿಲ್ಲ" ಎಂದು ಕೊರಗುವ ಬದಲು, ನಮ್ಮ ಸುತ್ತಲೂ ನಡೆಯುವ ಇಂಥ ಜೀವಂತ ದೃಶ್ಯಗಳನ್ನು ನಾವು ಗಮನಿಸಿದಾಗ, ಎಲ್ಲವನ್ನೂ ಎದುರಿಸುವ ಹುಮ್ಮಸ್ಸು ನಮ್ಮಲ್ಲಿ ಬರುತ್ತದೆ. ನಮ್ಮ ಸುತ್ತಮುತ್ತಲಿನ ಸಣ್ಣ ವಿಷಯಗಳೇ ಜೀವನದ ದೊಡ್ಡ ಸತ್ಯಗಳಾಗಿರುತ್ತವೆ.
ಬದುಕಿನ ನಿರ್ಧಾರ ನಮ್ಮ ಆಲೋಚನೆಯಲ್ಲಿದೆ
ಜೀವನ ಯಾವಾಗಲೂ ಸುಂದರ. ಆದರೆ ಅದರ ನಿರ್ಧಾರವಾಗುವುದು ನಮ್ಮ ಆಲೋಚನೆಗಳ ಮೇಲೆ. ತಂದೆಗೆ ತನ್ನ ಕಾಲಿಗೆ ಚಪ್ಪಲಿ ಇಲ್ಲದಿದ್ದರೂ, ಮಗನ ಕಾಲಿಗೆ ಚಪ್ಪಲಿ ಹಾಕಿ, ಬ್ಯಾಗ್ ಹೆಗಲಿಗೇರಿಸಿಕೊಂಡು ಬಂದ ಆ ತಂದೆಯನ್ನು ವರ್ಣಿಸಲು ಪದಗಳೇ ಸಾಲುತ್ತಿಲ್ಲ. ಸದಾ ಮಕ್ಕಳ ಹಿತವನ್ನೇ ಅರಸಿ, ಕಷ್ಟವನ್ನೆಲ್ಲ ತಾವೇ ನುಂಗುವವರು ತಂದೆ-ತಾಯಿ. ಹೋಲಿಸಲು ಸಾಧ್ಯವೇ ಇಲ್ಲದ ಪ್ರೀತಿ ಅವರದು. ಜಗತ್ತಿನ ಎಲ್ಲಾ ತಂದೆ-ತಾಯಂದಿರು ತಮ್ಮ ಮಕ್ಕಳಿಗಾಗಿ ಎಷ್ಟೋ ಆಸೆ-ಕನಸುಗಳನ್ನು ತ್ಯಾಗ ಮಾಡಿದ್ದಾರೆ. ಯಾವಾಗಲೂ ನಮಗಿಂತ ಕೆಳಗಿರುವವರನ್ನು ನೋಡಿ ಬದುಕು ನಡೆಸಬೇಕು ಎಂದು ಹೇಳಿಕೊಟ್ಟವರೇ ಅವರು.
ಇವಾಗ ಹೇಳಿ, ಕಾರು ಇರೋರು ದೊಡ್ಡವರಾ? ಕಣ್ಣೀರು ಒರೆಸಿಕೊಳ್ಳುವ ಧೈರ್ಯ ಇರೋರು ದೊಡ್ಡವರಾ?
ನನಗೆ ಉತ್ತರ ಆ ಬರಿಗಾಲಿನ ತಂದೆಯ ಹೆಜ್ಜೆಯಲ್ಲಿ ಸಿಕ್ಕಿದೆ. ಕಣ್ಣೀರು ಒರೆಸಿಕೊಳ್ಳುವ ಧೈರ್ಯ ಇರುವವನೇ ನಿಜವಾದ ದೊಡ್ಡವನು. ಯಾಕಂದರೆ ಕಾರನ್ನು ದುಡ್ಡು ಕೊಟ್ಟು ಕೊಳ್ಳಬಹುದು, ಆದರೆ ಮಗನ ಮುಂದೆ ನೋವನ್ನು ನುಂಗಿ ನಗುವ ಧೈರ್ಯವನ್ನು ಯಾವ ಅಂಗಡಿಯಲ್ಲೂ ಕೊಂಡುಕೊಳ್ಳಲು ಸಾಧ್ಯವಿಲ್ಲ. ಕಾರು ಹಳೆಯದಾಗುತ್ತದೆ, ಬಂಗಲೆ ಒಡೆದು ಹೋಗುತ್ತದೆ, ಆದರೆ ಮಗನ ಕಣ್ಣೀರಿಗೆ ಅಡ್ಡಗೋಡೆಯಾಗಿ ನಿಲ್ಲುವ ತಂದೆಯ ಎದೆ ಎಂದಿಗೂ ಕುಸಿಯುವುದಿಲ್ಲ. ಇದು 'ತಂದೆ' ಎಂಬ ದೇವರಿಗೆ ಮಾತ್ರ ಸಾಧ್ಯ.
ನನ್ನ ಬದುಕಿನ ಜೀವಂತ ಜೀವಾಳ ನನ್ನಪ್ಪ, ನನ್ನಮ್ಮ. ನನ್ನ 'ಸ್ಲೋ ಮೋಷನ್ ಕ್ಯಾಮೆರಾ' ಮನಸ್ಸು ಹಿಡಿದಿಟ್ಟ ದೃಶ್ಯ ಇದು... ನನ್ನ ಉತ್ತರವನ್ನಂತೂ ನಾನು ಕಂಡುಕೊಂಡಿದ್ದೇನೆ.
ಓದುಗರೇ, ನಿಮ್ಮೆಲ್ಲರ ಉತ್ತರಕ್ಕಾಗಿ ನಾನು ಕಾದಿದ್ದೇನೆ... ನಿಮ್ಮ ಅನಿಸಿಕೆಯನ್ನು ಕಮೆಂಟ್ ಮಾಡಿ ತಿಳಿಸಿ.
- ಸೌಖ್ಯ ಬಿ
ಸ್ವತಂತ್ರ ಬರಹಗಾರ್ತಿ, ಸೊರಬ (ತಾ), ಶಿವಮೊಗ್ಗ (ಜಿಲ್ಲೆ)
_______________________________________________________
ಸಂಪಾದಕೀಯ ನುಡಿ:
"ಇಂದಿನ ಡಿಜಿಟಲ್ ಯುಗದಲ್ಲಿ ನಮ್ಮ ಬದುಕು ಎಷ್ಟು ವೇಗವಾಗಿದೆ ಎಂದರೆ, ನಮ್ಮ ಕಣ್ಣೆದುರೇ ಇರುವ ಸಣ್ಣಸಣ್ಣ ಭಾವನೆಗಳನ್ನು ಕಳೆದುಕೊಳ್ಳುತ್ತಾ ಸಾಗುತ್ತಿದ್ದೇವೆ. ಇಂತಹ 'ಫಾಸ್ಟ್ ಫಾರ್ವರ್ಡ್' ಓಟದ ಮಧ್ಯೆ, ಲೇಖಕಿ ಸೌಖ್ಯ ಬಿ. ಅವರು ತಮ್ಮ ಮನಸ್ಸನ್ನು 'ಸ್ಲೋ ಮೋಷನ್ ಕ್ಯಾಮೆರಾ' ಮಾಡಿ ಕಣ್ಣೆದುರಿನ ದೃಶ್ಯವೊಂದನ್ನು ಕಾವ್ಯಾತ್ಮಕವಾಗಿ ಹಾಗೂ ತಾರ್ಕಿಕವಾಗಿ ವಿಶ್ಲೇಷಿಸಿರುವುದು ಈ ಬರಹದ ಹೆಗ್ಗಳಿಕೆ.
ಈ ಲೇಖನ ಕೇವಲ ಒಬ್ಬ ಬರಿಗಾಲಿನ ತಂದೆ ಮತ್ತು ಮಗನ ಕಥೆಯಲ್ಲ; ಇದು ಇಡೀ ಮಧ್ಯಮ ವರ್ಗದ ತ್ಯಾಗದ ಪ್ರತೀಕ. ಅಂಬಾನಿಯ ಶ್ರೀಮಂತಿಕೆಯ ಭ್ರಮೆಯಿಂದ ಹೊರಬಂದು, ನಮ್ಮ ಕೆಳಗಿರುವವರ ಬದುಕನ್ನು ನೋಡಿ ಕೃತಜ್ಞತೆಯಿಂದ ಬದುಕು ಸಾಗಿಸಬೇಕು ಎನ್ನುವ ಲೇಖಕಿಯ ದೃಷ್ಟಿಕೋನ ಇಂದಿನ ಯುವ ಪೀಳಿಗೆಗೆ ಅತ್ಯಗತ್ಯವಾದ ಬದುಕಿನ ಪಾಠ. ತಂದೆಯ ಬರಿಗಾಲಿನ ನಡಿಗೆಯಲ್ಲಿ ಜಗತ್ತಿನ ಅತಿ ದೊಡ್ಡ ಶ್ರೀಮಂತಿಕೆಯನ್ನು ಗುರುತಿಸಿದ ಲೇಖಕಿಯ ಸೂಕ್ಷ್ಮ ಸಂವೇದನೆ ಮತ್ತು ಕೊನೆಯಲ್ಲಿ ಓದುಗರಿಗೆ ಎಸೆದ 'ಕಾರು ಇರೋರು ದೊಡ್ಡವರಾ? ಕಣ್ಣೀರು ಒರೆಸೋರು ದೊಡ್ಡವರಾ?' ಎಂಬ ಪ್ರಶ್ನೆ ಇಡೀ ಬರಹವನ್ನು ಕೇವಲ ಒಂದು ಲೇಖನವಾಗಿ ಉಳಿಸದೆ, ಓದುಗನ ಆತ್ಮಾವಲೋಕನಕ್ಕೆ ಹಚ್ಚುವ ಒಂದು ಜೀವಂತ ಕನ್ನಡಿಯಾಗಿಸಿದೆ.
- ಸಂಪಾದಕರು, ಕನ್ನಡ ಗ್ಲೋಬಲ್ ನ್ಯೂಸ್

No comments:
Post a Comment