ಭಾನುವಾರದ ವಿಶೇಷ:ಕಪ್ಪು ರಾಷ್ಟ್ರದ ದಿನಚರಿ ಮತ್ತು ಸ್ವಾತಂತ್ರ್ಯದ ನಲುಗು: ಒಂದು ಆತ್ಮಾವಲೋಕನ - ಡಾ. ಕೃಷ್ಣವೇಣಿ - Kannada global

Breaking

Saturday, June 13, 2026

ಭಾನುವಾರದ ವಿಶೇಷ:ಕಪ್ಪು ರಾಷ್ಟ್ರದ ದಿನಚರಿ ಮತ್ತು ಸ್ವಾತಂತ್ರ್ಯದ ನಲುಗು: ಒಂದು ಆತ್ಮಾವಲೋಕನ - ಡಾ. ಕೃಷ್ಣವೇಣಿ

“ಲಾಲ್ ಬನೋ ಗುಲಾಮಿ ಛೋಡೋ, ಬೋಲೋ ವಂದೇ ಮಾತರಂ” — ತೆಲುಗಿನ ಪ್ರಸಿದ್ಧ ಕವಿ ‘ಎನ್ ಕೆ’ ಅವರ ಈ ನೀಳ್ಗವಿತೆಯನ್ನು ಡಾ. ಬಂಜಗೆರೆ ಜಯಪ್ರಕಾಶ್ (ಜೆ.ಪಿ) ಅವರು ಕನ್ನಡಕ್ಕೆ ಅನುವಾದಿಸಿರುವುದು ಕೇವಲ ಭಾಷಾಂತರವಲ್ಲ; ಅದೊಂದು ಅದ್ಭುತವಾದ ವೈಚಾರಿಕ ಸಂಗತಿ. ಈ ಕವಿತೆಯ ಒಡಲಲ್ಲಿ ಅಡಗಿರುವ ರಾಷ್ಟ್ರದ ನಗ್ನ ಸತ್ಯವು ಇಂದಿನ ಪ್ರತಿ ಮಾನವನನ್ನು ದಿಗಿಲುಗೊಳಿಸುತ್ತದೆ, ದಿಗ್ಭ್ರಾಂತಿಗೆ ತಳ್ಳುತ್ತದೆ ಎಂದರೆ ಅದು ಅತಿಶಯೋಕ್ತಿಯಲ್ಲ.

ಈ ಕಾವ್ಯದ ಪ್ರತಿ ಪಾದ, ಪ್ರತಿ ಚರಣಗಳನ್ನು ಅಕ್ಷರಶಃ ಓದುತ್ತಾ ಹೋದಾಗ ನನಗೆ ಅನಿಸಿದ್ದು ಯಾವುದೇ ಒಂದು ಸಾರ್ವತ್ರಿಕ ರಾಷ್ಟ್ರ ಸಂಘಟನೆಯಲ್ಲ, ಬದಲಿಗೆ ಇದು ಇಬ್ಭಾಗದ ‘ಕಪ್ಪು ರಾಷ್ಟ್ರದ’ ಕಟು ದಿನಚರಿ! ನನ್ನ ದೃಷ್ಟಿಯಲ್ಲಿ, “ಕೆಂಪಾಗೂ, ಗುಲಾಮಗಿರಿಯನ್ನು ತೊಡೆದು ಇಡೀ ರಾಷ್ಟ್ರಕ್ಕೆ ಸಾರು, ಸಾರಿ ಸಾರಿ ಹೇಳು ವಂದೇ ಮಾತರಂ” ಎನ್ನುವ ಘೋಷಣೆಯೇ ಇಲ್ಲಿ ಮುಖ್ಯವಾದುದು. ದೇಶಕ್ಕಾಗಿ ಮಡಿದ ವೀರರ, ಅದರಲ್ಲೂ ಅಲ್ಲೂರಿ ಸೀತಾರಾಮರಾಜು ಅವರ ಬುಡಕಟ್ಟು ಜನತೆಯ ಸಮಯ ಪ್ರಜ್ಞೆ, ಆ ಸಮೂಹದ ಒಗ್ಗಟ್ಟು ಮತ್ತು ಒಮ್ಮತವನ್ನು ಜಾಗೃತಗೊಳಿಸಲು ಪರಂಗಿಯರನ್ನು ಓಡಿಸಲು ಫಿರಂಗಿಯನ್ನೇ ಬಳಸಿ ಚರಿತ್ರೆ ಮೆರೆದ ದಿವ್ಯ ಇತಿಹಾಸ ನಮಗೆ ರೋಮಾಂಚನ ತರಬಹುದು. ಆದರೆ ಮತ್ತೊಂದೆಡೆ, ಬಂಗಾಳದ ಇಬ್ಭಾಗದ ಹೊತ್ತಿನಲ್ಲಿ ಮೊಳಗಿದ ‘ವಂದೇ ಮಾತರಂ’ ಕೇವಲ ಘೋಷಣೆಯಾಗಿ ಉಳಿಯದೆ, ಭರತಮಾತೆಯ ಮಕ್ಕಳನ್ನು ಚಿದ್ರ-ಚಿದ್ರವಾಗಿ ಸೀಳಿದ ಆ ವಾರೆನೋಟಗಳು, ಇಂದಿನ 79ರ ಸ್ವಾತಂತ್ರ್ಯದ ಸಂವತ್ಸರದ ಒಳಗೆ ವಿಚಿತ್ರ ರೀತಿಯಲ್ಲಿ ನಮ್ಮೆದುರು ಬಂದು ನಿಲ್ಲುತ್ತಿದೆಯೇನೋ ಎಂಬ ಆತಂಕ ಕಾಡುತ್ತಿದೆ.

ಬಲಿದಾನ ಮತ್ತು ತ್ಯಾಗದ ಮೂಲಕ ಬ್ರಿಟಿಷರ ಹಕ್ಕನ್ನು ಮಟ್ಟಹಾಕಿ, ನಮ್ಮ ಹಕ್ಕನ್ನು ಪಡೆಯುವ ಸಲುವಾಗಿ ಭಗತ್ ಸಿಂಗ್ ನಡೆಸಿದಂತಹ ಸ್ವಚ್ಛ ಹೋರಾಟ ಇಂದು ಯಾವ ಸಿದ್ಧಾಂತಗಳ ಆಲೋಚನೆಯೊಳಗೆ ನಲುಗಿ ಹೋಗಿದೆ? ಇದು ನಮ್ಮ ತನುವನ್ನು ರೊಚ್ಚೆಬ್ಬಿಸುವಂತೆ ನನ್ನ ದೇಶದ ಇಂದಿನ ವ್ಯವಸ್ಥೆಯನ್ನು ಕುರಿತು ನಾನೇ ಕೇಳಿಕೊಳ್ಳುತ್ತಿರುವ ಪ್ರಶ್ನೆ. ಈ ಕಪ್ಪು ರಾಷ್ಟ್ರದ ಸಂಸ್ಕೃತಿಗೆ, ಎಡಗೈ-ಬಲಗೈ ಪಂಥಗಳ ಪ್ರಕೃತಿಗೆ, ಸಮಾಜದ ಕಪ್ಪು ಕಾಡಿಗೆ ಯಾರೋ ದೃಷ್ಟಿಬೊಟ್ಟು ಇಟ್ಟಂತಿದೆ. ಸ್ವಚ್ಛ ಹಸಿರು ಬಾಳೆ ಎಲೆಗೆ ರಕ್ತಸಿಕ್ತ ಗರ್ಭಪಾತದ ಹೋರಾಟವು ರಣಹೇಡಿ ಕೊಲೆಗಡುಕರಿಗೆ ಪ್ರೀತಿಯ ಭೋಜನವಾಗಿ ಪರಿಣಮಿಸಿದೆ!

ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿದಾಗ, ದಿನೇ ದಿನೇ ಹೆಚ್ಚಾಗುತ್ತಿರುವ ಕುಲ, ಮತ, ವ್ಯಭಿಚಾರದ ಸ್ವೇಚ್ಛಾಚಾರಕ್ಕೆ ದೇಶ ನಲುಗುತ್ತಿರುವುದು ಸ್ಪಷ್ಟವಾಗುತ್ತದೆ. ಈ ಕರ್ಮದ ಮಹಿಮೆಗೆ ಭವ್ಯ ಭಾರತದ ಬಿಳೇ ಸೀರೆಯು ಕೆಂಪು ರಕ್ತದ ಓಕುಳಿಯಿಂದ ತೊಯ್ದು, ಒದ್ದೆಯಾಗಿ ಸೋರುತ್ತಿದೆ. ನಿಜಕ್ಕೂ ಇಂದಿನ ಕಲಿಗಾಲದ ತರ್ಪಣಕ್ಕೆ ಅಂದು ವೀರಬ್ರಹ್ಮೇಂದ್ರ ಸ್ವಾಮಿಗಳ ಚರಿತ್ರೆಯಲ್ಲಿ ಹೇಳಿದ ಧೇಯ ವಾಕ್ಯಗಳೇ ನಿಜವೇನೋ ಅನ್ನುವ ಭ್ರಾಂತಿ ಈಗ ನನ್ನೊಳಗೆ ಮೊಳಕೆಯೊಡೆಯುತ್ತಿದೆ. ಯಾವ ಕಣ್ಣಿನಿಂದ ನೋಡಿದರೂ, ನಮ್ಮ ಸ್ವತಂತ್ರತೆಯು ಇಂದಿನ ರಾಜಕೀಯ ನೂಕು-ನುಗ್ಗಲಿನಲ್ಲಿ ತೇಲಿಹೋಗಿದೆ. ಇಬ್ಭಾಗದ ಕಪ್ಪು ಕೊಂಬೆಗಳು ಮುಳುಗುತ್ತಿರುವ ಲೀಲಾಜಾಲದ ಅಯೋಮಯ ಸ್ಥಿತಿ ನಮ್ಮದು.

ನ್ಯಾಯವುಳ್ಳ ಬಂಧುತ್ವವು ಸ್ವಲ್ಪ ನೆಮ್ಮದಿ ಸಿಗಲಿ ಎಂದು ಆಕಾಶದ ಕಡೆ ಮುಖಮಾಡಿ ಬೇಡುತ್ತಿದೆ; ಹಸಿರುಳ್ಳ ಪೈರು ಹಾಗೂ ಭೂಮಿ ಬದುಕಿಗಾಗಿ ಎದುರು ನೋಡುತ್ತಿವೆ. ಹುತ್ತಿನೊಳಗೆ ಅಡಗಿದ ಹಾವು “ನಾನು ಯಾರನ್ನು ಹಿಡಿಯಲಿ?” ಎಂದು ತನ್ನೊಳಗೆ ತಾನೇ ಪ್ರಶ್ನೆ ಹಾಕುತ್ತಾ ಆಡುತ್ತಿದೆ. ನಮ್ಮ ಮಾತೃಭೂಮಿಯ ಸ್ವಾತಂತ್ರ್ಯಕ್ಕೋಸ್ಕರ ಅಂದು ಕಾಲಾಪಾನಿ (ಅಂಡಮಾನ್ ಜೈಲು) ಶಿಕ್ಷೆಯಲ್ಲಿ ಪೆಟ್ಟು ತಿಂದು ಬಲಿಯಾದ ಜನ್ಮಗಳೆಷ್ಟೋ? ಒಂದೊಂದು ಬಲಿಗೂ ಒಂದೊಂದು ರೀತಿಯ ಕ್ರೂರ ಹೊಡೆತ! ಅದಕ್ಕಾಗಿ ರಕ್ತವು ಚರಂಡಿಯ ನೀರಿನಂತೆ ತೇಲಿ ಹೋಯಿತು. ಇದನ್ನು ಅಂದು ಮತ್ತು ಇಂದು ಧೈರ್ಯವಾಗಿ ಪ್ರಶ್ನೆ ಮಾಡಿದ ಲೇಖನಿಗಳು, ಕಲಾಮುಗಳು ಎಷ್ಟು?

ಜೆ.ಪಿ. ಅವರ ಅನುವಾದದೊಳಗೆ ದೇಶಭಕ್ತಿ, ತ್ಯಾಗದ ಜೊತೆಗೇ ಭಾರತ ಭುವಿಯ ಅಡವಿಯ ಕಂದಮ್ಮಗಳ ರೋಧನೆ, ಹೆಣ್ಣುಮಕ್ಕಳ ಅತ್ಯಾಚಾರ, ಕೊಲೆಗೈದ ಗರ್ಭಗಳ ಆರ್ತನಾದ ಅಡಗಿದೆ. ಈ ಕಟು ವಾಸ್ತವಗಳು ಇಂದಿನ 79ರ ಸಂವತ್ಸರ ಯುಗದೊಳಗೆ ಯಾವ ತರ್ಕದ ಅಡಿಯಲ್ಲಿ ಉತ್ತರ ನೀಡಬೇಕೋ ಎಂದು ನಮ್ಮನ್ನು ಈ ಭುವಿಗೆ ಹೆತ್ತ ಪ್ರಾಕೃತಿಕ ಸೌಂದರ್ಯವೇ ಕಳವಳದಿಂದ ಯೋಚಿಸುತ್ತಿದೆ.

ಕಣ್ತೆರೆದರೂ ಇಂದಿನ ಕಾನೂನು ಮತ್ತು ನ್ಯಾಯ ವ್ಯವಸ್ಥೆಯು ಪ್ರಜಾಪ್ರಭುತ್ವದ ಮಹಾಯುದ್ಧದಲ್ಲಿ ಗಾಂಧಾರಿಯಂತೆ ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಆಟವಾಡುತ್ತಿದೆ. ಹುಟ್ಟಲಿರುವ ಭ್ರೂಣ ಕೂಡ ಹೊಸ ಜಗತ್ತನ್ನು ಕಾಣಲು ಗರ್ಭದ ಒಳಗೇ ಹೆದರುತ್ತಿದೆ! ಪ್ರತಿ ಗಲ್ಲಿ ಗಲ್ಲಿಗಳಲ್ಲೂ ಬೀಸುತ್ತಿರುವ ಕೆಟ್ಟ ಗಾಳಿ ಇಡೀ ದೇಶವನ್ನು ಮಲಿನವಾಗಿಸಿದೆ. ಇಂತಹ ಪರಿಸ್ಥಿತಿಗೆ ಜಾರುತ್ತಿರುವ ಕಟು ರಾಷ್ಟ್ರವನ್ನು ಕಾಪಾಡಲು ಇನ್ನು ಯಾವ ಯದುವಂಶದ ಕೃಷ್ಣ ಬರುವನೋ ಗೊತ್ತಿಲ್ಲ. ಆಟ ಆಡುವ ಮಣ್ಣಿನ ಬೊಂಬೆಗಳಿಗೆ ಆ ದೈವಶಕ್ತಿಯೇ ಜಾಗೃತಿಯನ್ನು ಉಂಟುಮಾಡಬೇಕಾಗಿದೆ.

ನೈಜತೆಯ ಸಿದ್ಧಾಂತಕ್ಕೆ ಕೊಳ್ಳಿ ಇಟ್ಟು ಆಟ ನೋಡುತ್ತಿರುವವರ, ಅದರ ಹಿಂದೆ ನಿಂತು ನೀರೆರೆಯುತ್ತಿರುವ ಕೈಗಳು ಎಷ್ಟೋ ಇರಬಹುದು. ಆದರೂ, ಎಲ್ಲ ನಿರಾಸೆಗಳ ನಡುವೆಯೂ ಈ ರಾಷ್ಟ್ರದ ಅಂತರಾಳದ ಧ್ವನಿ ಹೆಮ್ಮೆಯಿಂದ ಹೇಳುತ್ತಿದೆ:

ಭೋಲೋ ಭಾರತ್ ಮಾತಾಕಿ ಜೈ

ವಂದೇ ಮಾತರಂ.

- ಡಾ. ಕೃಷ್ಣವೇಣಿ. ಆರ್. ಗೌಡ, ಉಪನ್ಯಾಸಕಿ

ಹೊಸಪೇಟೆ, ವಿಜಯ ನಗರ ಜಿಲ್ಲೆ

                                                                                                    

ಸಂಪಾದಕೀಯ ನುಡಿ 

ಕಪ್ಪು ರಾಷ್ಟ್ರದ ದಿನಚರಿ ಮತ್ತು ಜಾಗೃತಗೊಳ್ಳಬೇಕಾದ ಅಂತರಾಳದ ಧ್ವನಿ

ತೆಲುಗಿನ ಪ್ರಸಿದ್ಧ ವೈಚಾರಿಕ ಕವಿ 'ಎನ್ ಕೆ' ಅವರ “ಲಾಲ್ ಬನೋ ಗುಲಾಮಿ ಛೋಡೋ, ಬೋಲೋ ವಂದೇ ಮಾತರಂ” ಎಂಬ ನೀಳ್ಗವಿತೆಯನ್ನು ಡಾ. ಬಂಜಗೆರೆ ಜಯಪ್ರಕಾಶ್ ಅವರು ಕನ್ನಡಕ್ಕೆ ತಂದಾಗ ಅದೊಂದು ಕೇವಲ ಸಾಹಿತ್ಯಕ ಅನುವಾದವಾಗಿ ಉಳಿಯಲಿಲ್ಲ; ಬದಲಿಗೆ ಈ ದೇಶದ ವರ್ತಮಾನದ ಸ್ಥಿತಿಗೆ ಹಿಡಿದ ಕನ್ನಡಿಯಾಯಿತು. ಇತ್ತೀಚೆಗೆ ಲೇಖಕಿ ಡಾ. ಕೃಷ್ಣವೇಣಿ ಅವರು ವ್ಯಕ್ತಪಡಿಸಿರುವ ತೀಕ್ಷ್ಣವಾದ ಆಲೋಚನೆಗಳು ನಮ್ಮ ಇಂದಿನ 79ರ ಸ್ವಾತಂತ್ರ್ಯದ ಸಂವತ್ಸರದಲ್ಲಿ ನಿಂತು ನಾವು ಮಾಡಬೇಕಾದ ಗಂಭೀರ ಆತ್ಮಾವಲೋಕನವನ್ನು ಬಡಿದೆಬ್ಬಿಸುತ್ತವೆ.

ಸ್ವಾತಂತ್ರ್ಯದ ನೈಜ ಸಿದ್ಧಾಂತಕ್ಕೆ ಕೊಳ್ಳಿ ಇಡುತ್ತಿರುವ ಇಂದಿನ ರಾಜಕೀಯ ನೂಕು-ನುಗ್ಗಲು, ಎಡ-ಬಲ ಪಂಥಗಳ ನಡುವಿನ ಕದನ, ಹಾಗೂ ಸಮಾಜದ ಶಾಂತಿಯನ್ನು ಕದಡುತ್ತಿರುವ ಕುಲ-ಮತಗಳ ವ್ಯಭಿಚಾರದ ಸ್ವೇಚ್ಛಾಚಾರವನ್ನು ಅವರು ‘ಕಪ್ಪು ರಾಷ್ಟ್ರದ ದಿನಚರಿ’ ಎಂದು ಕರೆದಿರುವುದು ಅತ್ಯಂತ ಮಾರ್ಮಿಕವಾಗಿದೆ. ದೇಶಕ್ಕಾಗಿ ಭಗತ್ ಸಿಂಗ್‌ನಂತಹ ಕಲಿಗಳು ನೀಡಿದ ಸ್ವಚ್ಛ ಬಲಿದಾನದ ಆಲೋಚನೆಗಳು ಇಂದಿನ ಸ್ವಾರ್ಥ ರಾಜಕೀಯದ ನಡುವೆ ಎಲ್ಲೋ ನಲುಗಿ ಹೋಗುತ್ತಿರುವುದು ಅಕ್ಷರಶಃ ಕಟು ವಾಸ್ತವ. ಪ್ರಜಾಪ್ರಭುತ್ವದ ಮಹಾಯುದ್ಧದಲ್ಲಿ ನ್ಯಾಯ ಮತ್ತು ಕಾನೂನು ವ್ಯವಸ್ಥೆಗಳು ಕಣ್ಣಿಗೆ ಪಟ್ಟಿ ಕಟ್ಟಿಕೊಂಡ ಗಾಂಧಾರಿಯಂತೆ ವರ್ತಿಸುತ್ತಿರುವಾಗ, ಹುಟ್ಟಲಿರುವ ಭ್ರೂಣವೂ ಹೊರ ಜಗತ್ತಿಗೆ ಬರಲು ಹೆದರುವಂತಹ ವಾತಾವರಣ ಸೃಷ್ಟಿಯಾಗಿರುವುದು ಇಡೀ ಸಮಾಜ ತಲೆತಗ್ಗಿಸಬೇಕಾದ ಸಂಗತಿ.

ಅಂದು ಬಂಗಾಳದ ಇಬ್ಭಾಗದ ನೋವಿನಲ್ಲೂ, ಬುಡಕಟ್ಟು ವೀರ ಅಲ್ಲೂರಿ ಸೀತಾರಾಮರಾಜು ಅವರ ಹೋರಾಟದಲ್ಲೂ ಮೊಳಗಿದ ‘ವಂದೇ ಮಾತರಂ’ ಕೇವಲ ಘೋಷಣೆಯಾಗಿರಲಿಲ್ಲ; ಅದು ಗುಲಾಮಗಿರಿಯ ಸಂಕೋಲೆಯನ್ನು ಕತ್ತರಿಸುವ ಕೆಂಡದಂತಹ ಆಕ್ರೋಶವಾಗಿತ್ತು. ಆದರೆ ಇಂದು ಪ್ರತಿ ಗಲ್ಲಿ ಗಲ್ಲಿಗಳಲ್ಲೂ ಬೀಸುತ್ತಿರುವ ದ್ವೇಷದ ಕೆಟ್ಟ ಗಾಳಿ ಭಾರತ ಮಾತೆಯ ಬಿಳೇ ಸೀರೆಯನ್ನು ರಕ್ತದ ಓಕುಳಿಯಿಂದ ಒದ್ದೆಯಾಗಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ವ್ಯವಸ್ಥೆಯನ್ನು ಸರಿಪಡಿಸಲು ಯಾವ ಯದುವಂಶದ ಕೃಷ್ಣನೋ ಬರುತ್ತಾನೆ ಎಂದು ಕಾಯುತ್ತಾ ಕೂರದೆ, ಮಣ್ಣಿನ ಬೊಂಬೆಗಳಂತಾಗಿರುವ ಸಾರ್ವಜನಿಕ ಪ್ರಜ್ಞೆಯಲ್ಲಿ ದೈವಶಕ್ತಿಯಂತಹ ಜಾಗೃತಿ ಮೂಡಬೇಕಿದೆ.

ನ್ಯಾಯವುಳ್ಳ ಬಂಧುತ್ವಕ್ಕಾಗಿ ಆಕಾಶವನ್ನು ಬೇಡುತ್ತಿರುವ, ಬದುಕಿಗಾಗಿ ಹಂಬಲಿಸುತ್ತಿರುವ ಹಸಿರು ಪೈರಿನಂತಹ ಸಾಮಾನ್ಯ ಜನತೆಯ ಧ್ವನಿಗೆ ನಾವು ಶಕ್ತಿಯಾಗಬೇಕಿದೆ. ವ್ಯವಸ್ಥೆಯ ಎಲ್ಲ ಅಯೋಮಯ ಸ್ಥಿತಿಗಳ ನಡುವೆಯೂ ಸಮಾಜದ ನೈಜತೆಯನ್ನು ಕಾಪಾಡುವ ಕೈಗಳು ಒಂದಾಗಬೇಕಿದೆ. ಕತ್ತಲೆಯು ಎಷ್ಟೇ ಆವರಿಸಿದ್ದರೂ ರಾಷ್ಟ್ರದ ಅಂತರಾಳದ ಧ್ವನಿ ಸದಾ ಜೀವಂತವಾಗಿರುತ್ತದೆ ಎಂಬುದನ್ನು ಸಾರುತ್ತಾ, ಸಾರುತ್ತಾ ಮುನ್ನಡೆಯುವುದೇ ಇಂದಿನ ತುರ್ತು ಅಗತ್ಯ.

- ಸಂಪಾದಕರು, ಕನ್ನಡ ಗ್ಲೋಬಲ್ ನ್ಯೂಸ್ 

No comments:

Post a Comment

Advertisement

ಜಾಹೀರಾತು ಹಾಗೂ ಸುದ್ದಿ ನೀಡಲು ಸಂಪರ್ಕಿಸಿ

📞 9110857339 ಗೆ ಕರೆ ಮಾಡಿ 💬 WhatsApp ಗ್ರೂಪ್ ಸೇರಿ 🎥 YouTube ಚಂದಾದಾರರಾಗಿ

ಕನ್ನಡ ಗ್ಲೋಬಲ್ ನ್ಯೂಸ್