ಭಾನುವಾರದ ವಿಶೇಷ: ಬಾರದ ದಿನಗಳು -ಚೈತ್ರ. ಏನ್. - Kannada global

Breaking

Saturday, May 30, 2026

ಭಾನುವಾರದ ವಿಶೇಷ: ಬಾರದ ದಿನಗಳು -ಚೈತ್ರ. ಏನ್.

ಮುಸ್ಸಂಜೆಯ ಸುಮಾರಿಗೆ ವಯಸ್ಸಾದ ಅಜ್ಜಿಯೊಂದು "ಯಾವೂರು ತಂಗಿ ನಿಂದು ಎಂದು ಕೇಳುವವರೆಗೂ ನಾನೆಲ್ಲಿದ್ದೇನೆ ಎನ್ನುವ ಅರಿವೇ ಇಲ್ಲದಂತಾಗಿತ್ತು. ಮುಗುಳ್ನಗುತ್ತಾ  "ಮಲೆನಾಡು ಶಿವಮೊಗ್ಗ" ಎಂದವಳಿಗೆ ಕಣ್ಣ ತುದಿಯಿಂದ ನೀರುರುಳಿದ್ದು ಬೋರ್ಗರೆದ ಮಳೆ ಒಮ್ಮೆಲೇ ನಿಂತು ಪ್ರಶಾಂತತೆಯಿಂದ ಕಂಗೊಳಿಸುತ್ತಿದ್ದ ಮಳೆನಾಡ ಮನೆಯಂಗಳದಂತೆ ಹಗುರವೆನಿಸಿತು.

          "ಅರೆ!  ಇದ್ದಕ್ಕಿದ್ದಂತೆ ಹೀಗೇಕಾಗುತ್ತಿದೆ? ಎಂಬ ಪ್ರಶ್ನೆಗೆ ಉತ್ತರವೂ ನನ್ನ ಬಳಿಯೇ ಇತ್ತು. ಚಿಕ್ಕಂದಿನಿಂದ ಮಾರ್ಲಮಿ ರಜೆ,ಬೇಸಿಗೆ ರಜೆ, ಹಬ್ಬ ಹಬ್ಬಕ್ಕೂ ಎರಡು ಮೂರು ದಿನಗಟ್ಟಲೆ ರಜೆ, ಊರ ಜಾತ್ರೆಗೊಂದು ರಜೆ, ಮೈ ಜ್ವರಕ್ಕೊಂದು ರಜೆ, ಜೋರು ಮಳೆಗೊಂದು ರಜೆ, ಯಾರೋ ಮಹಾನ್ ವ್ಯಕ್ತಿಗಳು ಸತ್ತರು ರಜೆ, ಕೊಟ್ಟಿಗೆಯಲ್ಲಿ ಕರು ಹುಟ್ಟಿದರು ರಜೆ, ಇಷ್ಟೆಲ್ಲಾ ರಜೆ ಕಂಡವಳಿಗೆ ಈಗ ತನ್ನೂರಿಗೆ ಹೋಗಲಾರದಂತಹ ಜವಾಬ್ದಾರಿ ಎನ್ನುವ ದೊಡ್ಡ ಹಡಗನ್ನು ಹತ್ತಿದ್ದೇವೆ.

     " ಓದಿ ದುಡಿದು ಕೈ ತುಂಬಾ ಸಾವಿರಗಟ್ಟಲೆ ಸಂಬಳ ಪಡೆದರು, ಶಾಲೆಯ ದಿನಗಳಲ್ಲಿ ಪೆಪ್ಪರ್ಮೆಂಟಿಗಾಗಿ ಒಂದು ರೂಪಾಯಿಗೋಸ್ಕರ ಅಮ್ಮನ ಬಳಿ ಬೆಳ್ಳಂಬೆಳಗ್ಗೆ ಕಾಡಿ-ಬೇಡಿ ಒದಿಸಿಕೊಳ್ಳುತ್ತಿದ್ದ ದಿನಗಳೆ ಸುಂದರವೆನಿಸುತ್ತಿದೆ". ಮತ್ತೆ- ಮತ್ತೆ ಹಳೆಯ ದಿನಗಳನ್ನು ನೆನೆಸಿಕೊಂಡಷ್ಟು ಮನಸ್ಸಿಗೆ ಮುದವೆನಿಸುತ್ತದೆ. ಕ್ಷಣ ಕಾಲ ನಸು ನಕ್ಕು ಮತ್ತೆದೇ ದಿನಜನಚರಿಯ ಕಡೆ ಮುಖ ಮಾಡುವುದೊಂದೇ ನಮ್ಮ ಪಾಲಿಗೆ ಉಳಿದಿರುವುದು.

         ಅಮ್ಮನ ಪೆಟ್ಟು, ಅಪ್ಪನ ಗದರಿಕೆಗೆ ಹೆದರಿ ಮನೆಯಿಂದ ಹೋದರೆ ಸಾಕು ಎಂದುಕೊಳ್ಳುತ್ತಾ ಕಣ್ತುಂಬಿಕೊಳ್ಳುತ್ತಿದ್ದ ದಿನಗಳಿಂದ, ಅದೇ ಹೆತ್ತವರ ನೋಡುವ ಸಲುವಾಗಿ ಯಾವಾಗ ಮನೆ ಸೇರುತ್ತೇವೋ ಎಂದು ಕಣ್ತುಂಬಿಕೊಳ್ಳುತ್ತಿದ್ದೇವೆ. "ಹೆತ್ತವರ ಮಮತೆ ಮನೆ ತೊರೆದಾಗಲೇ ಮನವರಿಕೆಯಾಗುವುದು." ಸಮಯಕ್ಕೆ ಸರಿಯಾಗಿ ರುಚಿ- ರುಚಿ ಆಗಿ ಕೇಳಿದ್ದನ್ನೇ ಅಡುಗೆ ಮಾಡಿ ಬಡಿಸುತ್ತಿದ್ದ ಅಮ್ಮನ ಕೈಗೆ ಮುತ್ತಿಕ್ಕುವುದ ಬಿಟ್ಟು, ತುತ್ತಿಗೊಂದು ನೆಪವಿಡುತ್ತಾ ನಿಂದಿಸಿದ್ದೇ ಹೆಚ್ಚು, ಆದರೆ ಈಗ ನೆಮ್ಮದಿಯ ಊಟಕ್ಕೂ ಸಮಯವಿಲ್ಲದಂತೆ ಅದೆಂತಹ ಅಡುಗೆಯಾದರೂ "ಪಾಲಿಗಿದ್ದುದೇ ಪಂಚಾಮೃತ"ವೆನ್ನುತ್ತಾ ದಿನಸಾಗಿಸಲೇಬೇಕಿದೆ. ಇಲ್ಲಿ ನಮ್ಮ ನೆಪಗಳನ್ನು ಕೇಳಲು ನಮ್ಮಮ್ಮ ಇಲ್ಲ. 

           ಅಪ್ಪ ಗದರಿಸಿದಾಕ್ಷಣ ಇನ್ನಷ್ಟು ಕೋಪವೇರಿ ಒಂದಕ್ಕೆ ನಾಲ್ಕು ಮಾತನಾಡಿ ನಾನೇನು ಕಮ್ಮಿ ಇಲ್ಲ, ಎಂದು ಹೆಮ್ಮೆಪಡುತ್ತಿದ್ದ ನಾವುಗಳೇ ಯಾವುದೋ ಕಂಪನಿಯಲ್ಲಿ ಯಾರದೋ ಕೈ ಕೆಳಗೆ ಕೆಲಸ ಮಾಡುತ್ತಾ ಮ್ಯಾನೇಜರ್ ಬೈದರು ಎಂದು ತಿರುಗಿ ಬಯ್ಯಲು ಧೈರ್ಯವೇ ಇಲ್ಲ, ಜೀವನ ಹಾಗೂ ಸಮಯ ತಾಳ್ಮೆಯನ್ನು ಕಳಿಸಿದೆ. ಇಲ್ಲಿ ನಮ್ಮ ಸಿಟ್ಟು ಕೇಳಲು ನಮ್ಮಪ್ಪ ಇಲ್ಲ.

        ದೂರದ ಊರಿನಲ್ಲಿರುವ ನನಗೆ ಜ್ವರ, ಶೀತ, ಮೈ ಕೈ ಗಾಯವಾದಾಗ ಡಾಕ್ಟರ್ ನೆನಪಾಗುವುದಿಲ್ಲ, ತಕ್ಷಣ ನೆನೆಯುವುದೇ ನಮ್ಮಜ್ಜಿ, ಆಟವಾಡಿ ಬಿದ್ದು ಬಂದಾಗ ಅಡುಗೆ ಮನೆಯ ಅರಿಶಿಣವೇ ಅಜ್ಜಿಯ ಮದ್ದು, ಅಂದು ನಾ ತಿಳಿದದ್ದು ಗಾಯ ಬೇಗ ವಾಸಿಯಾಗುವುದು ಅರಿಶಿಣದಿಂದ ಎಂದು, ಇಂದು ತಿಳಿದಿದೆ ಅದು ಅಜ್ಜಿಯ ಮಮತೆ, ಕಾಳಜಿ, ಮತ್ತು ಪ್ರೀತಿ ತುಂಬಿದ ಕೈಗಳಿಂದ ಎಂದು. 

         ಊಟ ಬೇಡ ಎಂದಾಗ ಬೈದು ಊಟ ಮಾಡಿಸುತ್ತಿದ್ದಾಗ ಸಿಟ್ಟು ನೆತ್ತಿಗೇರುತ್ತಿತ್ತು. ಈಗ "ಊಟ ಮಾಡಿದ್ಯಾ" ಎಂದು ಕೇಳಲು ಜೊತೆಗೆ ಯಾರಿಲ್ಲ.  ಬಿದ್ದಾಗ ಸಮಾಧಾನಪಡಿಸುವ ಕೈಗಳಿಲ್ಲ, ಬೆಳೆಯುತ್ತಾ- ಬೆಳೆಯುತ್ತಾ ಎಷ್ಟೆಲ್ಲಾ ಬದಲಾವಣೆಗಳಾದವೆಂದರೆ,  ನಾವೇ ಬೇಡವೆಂದರೂ ಬೇರೆ ಆಯ್ಕೆಗಳಿಲ್ಲ ಆದ ಬದಲಾವಣೆಯನ್ನು ಮೈಗೂಡಿಸಿಕೊಳ್ಳಲೇ ಬೇಕಿದೆ.

        ತಿಂಗಳ ಕೊನೆಯಲ್ಲಿ ಎಷ್ಟೇ ದುಡಿದರು, ದಿನದ ಕೊನೆಯಲ್ಲಿ ನೆನಪಾಗುವ ಬಾಲ್ಯದ ಬಾರದ ದಿನಗಳಿಗೆ ಅಂತ್ಯವೇ ಇಲ್ಲ.  ಈಗ ಅದರ ಒಂದೊಂದು ಅನುಭವವು ಪ್ರತಿದಿನದ ಸಂತೋಷಕ್ಕೆ ಕಾರಣ. ನಮ್ಮ ಬಾಲ್ಯದಲ್ಲಿ ನಮ್ಮಗೂಡಿ ಆಡಿ, ಓದಿ ಜೊತೆಗಿದ್ದ ಸ್ನೇಹಿತರೆಲ್ಲ ಈಗ ದೂರದ ನೆಂಟರಿದ್ದಂತೆ. ಅವರ ಜೊತೆ ಸೇರಿ ಮಾಡಿದ ತರ್ಲೆ -ತಮಾಷೆಗಳು ಮರೆಯಲಾಗದಂತವು. ನಮ್ಮ ಬಾರದ ಬಾಲ್ಯ ಸುಂದರವೆನಿಸುವಂತೆ ಮಾಡಿದ್ದೇ ನಮ್ಮ ಯಡವಟ್ಟುಗಳು.

      ಅಬ್ಬಬ್ಬಾ!,  ಒಂದೇ ದಿನಕ್ಕೆ ಎಷ್ಟೆಲ್ಲಾ ನೆನಪುಗಳು ಮರುಕಳಿಸಿದವು, ಮನೆಗೆ ಹೋಗುವ ಖುಷಿಯಲ್ಲಿ ಪೂರ್ತಿ ಬಾಲ್ಯವನ್ನೇ ತಿರುಗಿ ನೋಡಿದಂತಾಯಿತು. ಅದೇ ಗುಂಗಿನಲ್ಲಿ ಮುಳುಗಿದ್ದ ನನಗೆ ಕಂಡಕ್ಟರ್ "ಶಿವಮೊಗ್ಗ ಬಂತು" ಎಂದು ಕೂಗಿದಾಗಲೇ ಎಚ್ಚರವಾಯ್ತು. ಈ ಸುಂದರ ನೆನಪುಗಳನ್ನು ಮತ್ತೆ ಪೋಣಿಸಲು ಅಣಿಯಾದ ಅಜ್ಜಿಗೊಂದು ಧನ್ಯವಾದ ಹೇಳಿ ಇಳಿಯೋಣವೆಂದು ತಿರುಗಿದರೆ ಅಜ್ಜಿ ಇರಲೇ ಇಲ್ಲ. ಛೇ! ನನ್ನ ಗುಂಗಿನಲ್ಲಿ ಅಜ್ಜಿಯನ್ನೇ ಮರೆತೆನಲ್ಲ ಎಂದು, ಬೇಸರಗೊಳ್ಳುತ್ತ ಬಸ್ನಿಂದ ಇಳಿದೆ. 

   ನಂತರ ನನಗನ್ನಿಸಿದಿಷ್ಟೇ,  "ಸಮಯ  ಸಿಕ್ಕಾಗ ನಮ್ಮರ ಬಳಿ ಮಾತನಾಡುವುದಕ್ಕಿಂತ,   ನಮ್ಮವರಿಗಾಗಿಯೇ ಸಮಯ ಮಾಡಿಕೊಂಡು ಮಾತನಾಡಿಬಿಡಬೇಕು. ಕಳೆದ ಸಮಯ ಮತ್ತೆ- ಮತ್ತೆ ಬರುವುದಿಲ್ಲ, ನಮ್ಮ ಸಮಯ, ದಿನಗಳನ್ನು ಸುಂದರವಾಗಿಸಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ." ಈ ದಿನ ಮುಂದೊಂದು ದಿನದ ನೆನಪಷ್ಟೇ, ತಿರುಗಿ ಬರದ "ಬಾರದ ದಿನಗಳು".
ಚೈತ್ರ. ಏನ್.
ಸ್ವತಂತ್ರ ಬರಹಗಾರ್ತಿ
ದೊಂಬೇಸರ, ಸಾಗರ
                                                                                                   

ಸಂಪಾದಕೀಯ ನುಡಿ: ಕಳೆದುಹೋದ ಬಾಲ್ಯದ ಕನ್ನಡಿ

ಬದುಕು ಮತ್ತು ಉದ್ಯೋಗದ ಅರಸುವಿಕೆಯಲ್ಲಿ ನಾವೆಲ್ಲರೂ ಇಂದು ಹೆತ್ತವರನ್ನು, ಹುಟ್ಟಿದೂರನ್ನು ಬಿಟ್ಟು ಯಾಂತ್ರಿಕ ನಗರೀಕರಣದ ಹಡಗನ್ನೇರಿದ್ದೇವೆ. ಕೈತುಂಬಾ ಸಂಬಳ, ಸೌಕರ್ಯಗಳಿದ್ದರೂ ಮನಸ್ಸು ಮಾತ್ರ ಸದಾ ಹಳೆಯ ನೆನಪುಗಳ ಗೂಡಿನತ್ತ ಹಾರಲು ತವಕಿಸುತ್ತಿರುತ್ತದೆ. ಕೇವಲ ಒಂದು ರೂಪಾಯಿಯ ಪೆಪ್ಪರ್‌ಮೆಂಟಿಗಾಗಿ ಹಠ ಮಾಡುತ್ತಿದ್ದ ದಿನಗಳು, ಅಮ್ಮನ ಕೈ ಅಡುಗೆ, ಅಪ್ಪನ ಗದರಿಕೆ, ಬಿದ್ದಾಗ ಮದ್ದಾಗುತ್ತಿದ್ದ ಅಜ್ಜಿಯ ಮಮತೆಯ ಅರಿಶಿನ... ಇವೆಲ್ಲವೂ ಇಂದು ಜವಾಬ್ದಾರಿಗಳ ಬೆನ್ನೇರಿ ನಿಂತಿರುವ ಪ್ರತಿಯೊಬ್ಬ ಯುವಮನಸ್ಸಿನ ಒಳಗಣ್ಣನ್ನು ಒದ್ದೆ ಮಾಡುವ ಸತ್ಯಗಳು.

ಲೇಖಕಿ ಚೈತ್ರ ಎನ್. ಅವರು ತಮ್ಮ "ಬಾರದ ದಿನಗಳು" ಲೇಖನದ ಮೂಲಕ ಪ್ರತಿಯೊಬ್ಬ ಓದುಗನೂ ತನ್ನದೇ ಬಾಲ್ಯದ ದಿನಗಳನ್ನು ತಿರುಗಿ ನೋಡುವಂತೆ ಕಣ್ಣಿಗೆ ಕಟ್ಟಿದ ಹಾಗೆ ಬರೆದಿದ್ದಾರೆ. ಓಡುತ್ತಿರುವ ಇಂದಿನ ದಿನಚರಿಯಲ್ಲಿ ನಮ್ಮವರಿಗಾಗಿ ಸಮಯ ಮೀಸಲಿಡಬೇಕಾದ ಅನಿವಾರ್ಯತೆಯನ್ನು ನೆನಪಿಸುವ ಈ ಸುಂದರ ಭಾವನಾತ್ಮಕ ಬರಹ 'ಕನ್ನಡ ಗ್ಲೋಬಲ್' ಭಾನುವಾರದ ವಿಶೇಷ ಓದುಗರಿಗಾಗಿ...

- ಚರಣ್ ರಾಜ್ ಮುಖ್ಯ ಸಂಪಾದಕರು, ಕನ್ನಡ ಗ್ಲೋಬಲ್ ನ್ಯೂಸ್ 

No comments:

Post a Comment

Advertisement

ಜಾಹೀರಾತು ಹಾಗೂ ಸುದ್ದಿ ನೀಡಲು ಸಂಪರ್ಕಿಸಿ

📞 9110857339 ಗೆ ಕರೆ ಮಾಡಿ 💬 WhatsApp ಗ್ರೂಪ್ ಸೇರಿ 🎥 YouTube ಚಂದಾದಾರರಾಗಿ

ಕನ್ನಡ ಗ್ಲೋಬಲ್ ನ್ಯೂಸ್