ಭಾನುವಾರದ ವಿಶೇಷ:ಮೈಂಡ್ ಸೆಟ್ ಈಸ್ ಎವೆರಿಥಿಂಗ್- ಲತಿಕಾ ಗಣಪತಿ - Kannada global

Breaking

Saturday, May 16, 2026

ಭಾನುವಾರದ ವಿಶೇಷ:ಮೈಂಡ್ ಸೆಟ್ ಈಸ್ ಎವೆರಿಥಿಂಗ್- ಲತಿಕಾ ಗಣಪತಿ

ನನ್ನ ನಾ ಅರಿತಷ್ಟು  ಮತ್ತಾರು ಅರಿಯಲು ಸಾಧ್ಯವಿಲ್ಲ ಇದು ಸತ್ಯವಾದ ಮಾತು. ಮನುಷ್ಯ ತನ್ನನ್ನು ತಾನು ತಿಳಿಯುವ ಕಾರ್ಯ ನಡೆಸಬೇಕು.ಆಗ ಜಗತ್ತಿನ ಯಾವ ಅಂಶಗಳು ಕಷ್ಟವಾಗಲಾರದು.ಕಾರಣ ತನ್ನನ್ನು ತಾನು ಸಂಪೂರ್ಣವಾಗಿ ಅರಿತವನು,ತನ್ನ ಮನಸ್ಸಿನ ತುಮುಲಗಳನ್ನ ಸ್ಪಷ್ಟಪಡಿಸಿಕೊಂಡವನು,ತನ್ನ ಆಸೆ ಆಸಕ್ತಿಗಳನ್ನ ಇಷ್ಟ ಕಷ್ಟಗಳನ್ನು ಅರಿತುಕೊಂಡಿರುತ್ತಾನೆ.  ತನ್ನ ಬದುಕಿಗೆ ಬೇಕಾದ ಬೇಡವಾದ ವಿಚಾರಗಳ,ವ್ಯಕ್ತಿಗಳ ಬಗೆಗೂ ಗಮನಹರಿಸುತ್ತಾನೆ. ಇಷ್ಟೆಲ್ಲ ವಿಚಾರಗಳನ್ನು ಅರಿತವನ್ನು ಬದುಕಿನಲ್ಲಿ ಹೇಗೆ ಸೋತಾನು...!

ಮೈಂಡ್ ಸೆಟ್ ಇಸ್ ಎವರಿಥಿಂಗ್ ಎಂಬ ಮಾತನ್ನು ಗ್ರಹಿಸಿದಾಗ ಅದನ್ನು ಆಳವಾಗಿ ಅರಿಯುವ ಪ್ರಯತ್ನ ಮಾಡುವುದೇ ಇಲ್ಲ.ಇತ್ತೀಚಿನ ದಿನಮಾನಗಳಲ್ಲಿ ಸಾಮಾಜಿಕ ಜಾಲತಾಣ ಕೇವಲ ನಕರಾತ್ಮಕ ವಿಚಾರಗಳನ್ನು ಬಿತ್ತುವ ಬದಲಿಗೆ ಆಗಾಗ ಸಕರಾತ್ಮಕ ವಿಚಾರಗಳನ್ನು ಬಿತ್ತುತ್ತಿರುತ್ತದೆ ಅದನ್ನು ಅರಿಯುವ ಪ್ರಯತ್ನ ಮಾಡಬೇಕಷ್ಟೇ. ಸದ್ಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಚಾರ ನೋಡಿದೆ. ಒಬ್ಬ ವ್ಯಕ್ತಿ ಜೈಲು ಶಿಕ್ಷೆಗೆ ಒಳಪಟ್ಟಿರುತ್ತಾನೆ. ಅವನಿಗೆ ನೇಣಿಗೇರಿಸುವ ಬದಲಿಗೆ ವಿಷಕಾರಿ ಹಾವುಗಳ ಕಚ್ಚಿಸುವುದಾಗಿ ತಿಳಿಸಿರುತ್ತಾರೆ.ಇದೇ ರೀತಿ ಅವನ ಕೊನೆಯ ಆಸೆಯನ್ನೆಲ್ಲ ತಿಳಿಸಿ ಅವನ ಕಣ್ಣಿಗೆ ಬಟ್ಟೆ ಕಟ್ಟಿ ಕತ್ತಲೆ ಕೋಣೆಯೊಳಗೆ ಬಿಡಲಾಗುತ್ತದೆ.ಆದರೆ ಅಲ್ಲಿ ವಿಷಕಾರಿ ಹಾವುಗಳ ಬಿಡುವ ಬದಲಿಗೆ ವಿಷವಿಲ್ಲದ ಕಚ್ಚಿದರೂ ಸಾಯದ ಹಾವುಗಳನ್ನು ಬಿಟ್ಟಿರುತ್ತಾರೆ.ಆದರೂ ಆ ವ್ಯಕ್ತಿ ಸಾಯುತ್ತಾನೆ,ಹೇಗೆ ಎಂಬ ಪ್ರಶ್ನೆ ಮೂಡುವುದು ಸಹಜ.ನಾನು ಸಾಯುತ್ತೇನೆ ಎಂಬ ಮನಸ್ಥಿತಿಯಲ್ಲಿದ್ದ ಅವನಿಗೆ ವಿಷ ಅಮೃತದ ಯೋಚನೆ ಇರಲಿಲ್ಲ. ಇದೇ ರೀತಿ ಯಾವ ರೀತಿಯ ವಿಚಾರಗಳು ನಮ್ಮ ಮನಸ್ಥಿತಿಯನ್ನು ಆವರಿಸಿಕೊಂಡಿರುತ್ತದೆಯೋ,ಅದೇ ರೀತಿ ಯೋಚಿಸುತ್ತೇವೆ ಅದೇ ರೀತಿ ಬದುಕುತ್ತೇವೆ ಅದೇ ರೀತಿ ಆಗುತ್ತದೆ ಕೂಡ...

ಒಬ್ಬ ವ್ಯಕ್ತಿಯ ಬಗ್ಗೆ ನಕರಾತ್ಮಕ ಯೋಚನೆಗಳು ತುಂಬಿಕೊಂಡಾಗ ಆ ವ್ಯಕ್ತಿ ಒಳ್ಳೆಯದನ್ನೇ ಮಾಡಿದರು ಸಹ ಅವನು ನಮಗೆ ಕೆಟ್ಟವನಾಗಿಯೇ ಕಾಣಿಸಿಕೊಳ್ಳುತ್ತಾನೆ,ಕಾರಣ ಅದು ನಮ್ಮ ಮನಸ್ಥಿತಿ. ಅಂದರೆ ನಮ್ಮ ಯೋಚನೆಗಳು ಅಥವಾ ನಮ್ಮ ಮನಸ್ಥಿತಿಯು ಬದುಕಿನ ಅದೆಷ್ಟೋ ವಿಚಾರಗಳನ್ನು ನಿರ್ಧರಿಸುವ ಹಾಗೂ ನಮ್ಮನ್ನು ಹಿಡಿದಿಡುವ ಮತ್ತು ನಮ್ಮನ್ನು ಪ್ರೆಸೆಂಟ್ ಮಾಡುವುದು ಎಂದರ್ಥ..

ಮನಸ್ಥಿತಿ ಎಂಬುದು  ಕೇವಲ ಮನಸ್ಸಿಗೆ ಅಥವಾ ಮನುಷ್ಯನಿಗೆ ಸಂಬಂಧಿಸಿದ್ದಲ್ಲ.ಸುಪ್ತ ಮನಸ್ಸಿಗೆ ಸಂಬಂಧಿಸಿದ್ದು.ಮನುಷ್ಯ ನಿದ್ರಾವಸ್ಥೆಯಲ್ಲಿ ಇರುವಾಗಲೂ ಸಹ ಸುಪ್ತ ಮನಸ್ಸು ಎಚ್ಚರಾವಸ್ಥೆಯಲ್ಲಿಯೇ ಇರುತ್ತದೆ. ಮನುಷ್ಯ ಯಾವ ರೀತಿಯ ಯೋಚನೆಗಳನ್ನು ಅಥವಾ ಯಾವ ರೀತಿಯ ಮಾಹಿತಿಯನ್ನು ತನ್ನ ಸುಪ್ತಮನಸ್ಸಿಗೆ ನೀಡುತ್ತಾನೋ ಅದು ಅಂತೆಯೇ ವರ್ತಿಸಲು ಪ್ರಾರಂಭಿಸುತ್ತದೆ. ತಲುಪಿಸುವ ಮೊದಲು ತೀರ ಜಾಗೃತರಾಗಿರಬೇಕು ಕಾರಣ ಸುಪ್ತ ಮನಸ್ಸಿಗೆ ಸಕರಾತ್ಮಕ ಮತ್ತು ನಕರಾತ್ಮಕ ಯೋಚನೆಗಳ ವ್ಯತ್ಯಾಸದ ಅರಿವಿರುವುದಿಲ್ಲ. ಮನುಷ್ಯ ಯಾವ ರೀತಿಯ ಮಾಹಿತಿ ನೀಡುತ್ತಾನೆ ಅದನ್ನೇ ಒಪ್ಪಿಕೊಳ್ಳುತ್ತದೆ. ಈ ಕಾರಣದಿಂದ  ವಿಚಾರ ಯೋಚನೆಗಳ ಬಗ್ಗೆ  ತುಂಬಾ ಜಾಗೃತನಾಗಿರಬೇಕು. 

ಮನುಷ್ಯ ಎಂದ ಮೇಲೆ ತಪ್ಪು ಸಹಜ.ಆದರೆ ಇಲ್ಲಿ ತಪ್ಪು ಸರಿಗಳು ಮುಖ್ಯವಲ್ಲ. ಅದನ್ನು ತಿದ್ದಿ ಮುಂದೆ ನಡೆಯುವುದು ಪ್ರಮುಖವಾದದ್ದು. ಹೇಳಿದಂತೆ ಕೇಳುವ ಮನಸ್ಸಿರುವಾಗ  ಅದಕ್ಕೆ ಒಳ್ಳೆಯ ವಿಚಾರಗಳನ್ನು,ಹವ್ಯಾಸಗಳನ್ನು ಬಿತ್ತುವ ಕಾರ್ಯ ನಡೆಸಿದಾಗ ಅದು ನಮ್ಮ ಬದುಕಿನಲ್ಲಿ ಬದಲಾವಣೆಯ ಜೊತೆಗೆ ವ್ಯಕ್ತಿತ್ವವನ್ನು ರೂಪಿಸುತ್ತದೆ. ನಮ್ಮ ಕನಸುಗಳತ್ತ ನಮ್ಮನ್ನು ಚಲಿಸುವ ಮಾರ್ಗ ತೋರಿಸುತ್ತದೆ. ಇದೆಲ್ಲದಕ್ಕೂ ಒಂದು ಉದಾಹರಣೆ ನೋಡುವುದಾದರೆ ಎಪ್ರಿಲ್ ಮೇ ತಿಂಗಳಲ್ಲಿ ಶಾಲೆಗಳಿಗೆ ಬೇಸಿಗೆ ರಜಾ ನೀಡುತ್ತಾರೆ.  ಮಕ್ಕಳು ತಮ್ಮ ಪಾಡಿಗೆ ಆಟ ಪಾಠ ಎಂದು ಬಹು ಸುಂದರ ದಿನವನ್ನು ಅನುಭವಿಸುತ್ತಿರುತ್ತಾರೆ. ಈ ಸಮಯದಲ್ಲಿ ಆರೋಗ್ಯವಾಗಿರುತ್ತಾರೆ ಕೂಡ, ಕಾರಣ ಮಕ್ಕಳು ತಮಗಿಷ್ಟದ ಕೆಲಸ ಮಾಡುತ್ತಿರುತ್ತಾರೆ ಈ ಸಮಯವನ್ನು ಆನಂದಿಸುತ್ತಿರುತ್ತಾರೆ. ಇದರ ಅರ್ಥ ಯಾವ ಕೆಲಸಗಳು ನಮ್ಮನ್ನು ತೃಪ್ತಿಪಡಿಸುತ್ತದೆಯೋ ಅಥವಾ ಯಾವ ಕೆಲಸ ನಮ್ಮನ್ನು ಆನಂದಪಡಿಸುತ್ತದೆಯೋ ಆಗ ನಾವು ಸಂತೋಷವಾಗಿರುತ್ತೇವೆ. 

ಇರುವುದೊಂದೇ ಬದುಕು ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವುದ ಬಿಟ್ಟು ಇದ್ದದ್ದನ್ನು ಇದ್ದಂತೆ ಸ್ವೀಕರಿಸಿ, ಬೇಕಾಗಿದ್ದನ್ನು ದಕ್ಕಿಸಿಕೊಂಡು ಬದುಕುವುದು ನಮ್ಮ ಕೈಯಲ್ಲಿಯೇ ಇದೆ. ಯಾವುದೇ ನಮಗೆ ಇಷ್ಟದ ಕೆಲಸ ಮಾಡುವಾಗ ನಮಗೆ ಸುಸ್ತಾಗುವುದಿಲ್ಲ, ಜ್ವರವಿದ್ದರೂ ಅದು ನಮ್ಮನ್ನು ಕಾಡುವುದಿಲ್ಲ.ಅದೇ ಆ ಕೆಲಸ ನಮಗೆ ಇಷ್ಟವಿಲ್ಲದಿರುವಾಗ ಇಲ್ಲ ಸಲ್ಲದ ರೋಗದ ಜೊತೆ ಬಹು ದೊಡ್ಡ ರೋಗವಾದ ಆಲಸ್ಯವು ನಮ್ಮ ಮೇಲೆ ಆಳ್ವಿಕೆ ನಡೆಸುತ್ತದೆ.ಇಷ್ಟ ಪಟ್ಟ ವ್ಯಕ್ತಿಗಳಾಗಿ ಅಥವಾ ಕೆಲಸಗಳಾಗಲಿ ಎಂದಿಗೂ ನಮಗೆ ಭಾರವಾಗುವುದಿಲ್ಲ ಹಾಗೂ ಬೇಸರವಾಗುವುದಿಲ್ಲ ಕಾರಣ ನಮ್ಮ ಮನಸ್ಸಿಗೆ ಹಿಡಿಸಿದ್ದು ಕಷ್ಟವಾಗಲಾರದು....

ನಮ್ಮ ಮನಸ್ಸಿಗೆ ಹಿಡಿಸಿದ್ದು ಕಷ್ಟವಾಗಲಾರದು ಎಂಬುದಕ್ಕೆ ನಾನೇ ಸ್ವತಃ ನೋಡಿದ ಒಬ್ಬ ವ್ಯಕ್ತಿಯ ಉದಾಹರಣೆ ನೀಡುತ್ತೇನೆ. ಕೆಲವು ದಿನಗಳ ಹಿಂದೆ ಒಬ್ಬ ಅಪರಿಚಿತ ವ್ಯಕ್ತಿಯನ್ನು ಭೇಟಿಯಾಗಿದ್ದೆ.ಮಾತನಾಡುತ್ತಾ ಅವರ ವಿಧ್ಯಾಭ್ಯಾಸದ ಕುರಿತು ವಿಚಾರಿಸಿದಾಗ ತಾವು ಎಂ.ಬಿಎ ಮಾಡಿರುವುದಾಗಿ ತಿಳಿಸಿದರು. ನನಗೂ ಬಹು ಆಶ್ಚರ್ಯವಾಯಿತು.ಕಾರಣ ಅವರ ಕೆಲಸಕ್ಕೂ ಅವರ ಶಿಕ್ಷಣಕ್ಕೂ ಸಂಬಂಧವೇ ಇರಲಿಲ್ಲ. ಆಗಲೇ ನಿಂತು ದುಡಿಯುವ ಈ ಕೆಲಸಕ್ಕಿಂತ ಎ.ಸಿ ರೂಮಿನಲ್ಲಿ ಕುಳಿತು ಮಾಡುವ ಕೆಲಸವೇ ಒಳ್ಳೆಯದೇನೋ ಎಂದು ನನಗನಿಸಿ ಹೀಗೆ ಕೇಳಿದೆ "ಎಂ.ಬಿಎ ಮಾಡಿರುವವರು ದಿನವಿಡಿ ನಿಂತ್ಕೊಂಡು ಕಿರ್ಚೋ, ಈ ಕೆಲಸ ಬೇಕಿತ್ತಾ ಅಂದೆ, "I am satisfied" ಎಂದ ಅವರ ಉತ್ತರ ನನ್ನ ಆಶ್ಚರ್ಯಗೊಳಿಸಿದಂತೂ ಸುಳ್ಳಲ್ಲ. ಆಗ ಆ ವ್ಯಕ್ತಿ ನನಗೆ ಬಹು ವಿಶಿಷ್ಟ ಅನಿಸಿದರು ಮತ್ತು ಅವರ ಧೃಡ ನಿರ್ಧಾರ ನನ್ನನ್ನು ಮತ್ತಷ್ಟು ಸೆಳೆಯಿತು...

ಇತ್ತೀಚಿನ ದಿನಮಾನಗಳಲ್ಲಿ ನಮ್ಮ ಬದುಕಿನ ಬಗ್ಗೆ ನಮಗೆ ಅರಿತಿರುವುದಿಲ್ಲ.ಗುರಿಯ ಬಗ್ಗೆ ದೃಢಸಂಕಲ್ಪವೇ ಇರುವುದಿಲ್ಲ, ಮಾಡುವ ಕೆಲಸದ ಬಗ್ಗೆ ನೆಮ್ಮದಿಯೂ ಇರುವುದಿಲ್ಲ,ಸಾರ್ಥಕತೆಯಂತೂ ಕೊನೆಯ ಮಾತು.ಇದೆಲ್ಲದಕ್ಕೂ ಮೂಲ ಕಾರಣ ನಮ್ಮ ಮನಸ್ಥಿತಿ, ನಮ್ಮೊಳಗಿನ ನಮ್ಮನ್ನು ಅರಿಯುವ ಪ್ರಯತ್ನ ಮಾಡದ ನಾವು ನಮ್ಮ ಆಸೆ ಕನಸುಗಳನ್ನು ಸರಿಯಾಗಿ ಅರಿಯುವ ಪ್ರಯತ್ನ ವನ್ನು ಮಾಡಲಾರೆವು.ಈ ಕಾರಣದಿಂದಲೇ ನಮ್ಮ ಮನಸ್ಥಿತಿ  ಯಾವಾಗಲೂ ಕನ್ಫ್ಯೂಸ್ ಸ್ಟೇಟ್ ಅಂತಿವಲ್ಲ ಅಲ್ಲಿ ಇರುತ್ತದೆ.ನಮಗೆ ಯಾವುದು ಬೇಕು ಯಾವುದು ಬೇಡ ಎಂಬುದನ್ನು ಸುಪ್ತ ಮನಸ್ಸಿಗೆ ಕಲಿಸಿ ಇಡಬೇಕು. ನಮಗೆ ಸಂತೋಷ ನೀಡುವ ಕಾರ್ಯವನ್ನು ನಮ್ಮೊಳಗೆ ತಲುಪಿಸಿಡಬೇಕು. ನಾವು ಸಂತೋಷವಾಗಿದ್ದಷ್ಟು ನಮ್ಮ ಸುಪ್ತ ಮನಸ್ಸು ನಮ್ಮಿಷ್ಟದ ಕೆಲಸಗಳನ್ನು ಅಥವಾ ನಮ್ಮಿಷ್ಟದ ನಮಗೆ ನೆಮ್ಮದಿ ನೀಡುವ ಅದೆಷ್ಟೋ ವ್ಯಕ್ತಿತ್ವಗಳನ್ನು ಹಾಗೂ ಅಂಶಗಳನ್ನು ನಮ್ಮೆದೆಗೆ ಬಿತ್ತುತ್ತಲೇ ಇರುತ್ತದೆ. ಆಗ ಬದುಕಿನಲ್ಲಿ ಸಾಧನೆಯ ಜೊತೆ ಅದೆಷ್ಟೋ ಹೊಸ ವಿಷಯಗಳನ್ನು ಕಲಿಯಬಹುದು...

- ಲತಿಕಾ ಗಣಪತಿ
MSC in Psychology 
SDM PG Centre Ujire
:

 ಸಂಪಾದಕೀಯ ನುಡಿ: ನಮ್ಮ ಯೋಚನೆಯೇ ನಮ್ಮ ಬದುಕು

ಮನುಷ್ಯನ ಇಡೀ ಬದುಕಿನ ದಿಕ್ಕನ್ನು ನಿರ್ಧರಿಸುವುದು ಅವನ 'ಮನಸ್ಥಿತಿ' (Mindset). ಜಗತ್ತು ಎಷ್ಟು ಸುಂದರವಾಗಿದೆ ಅಥವಾ ಎಷ್ಟು ಕಷ್ಟಕರವಾಗಿದೆ ಎಂಬುದು ಹೊರಗಿನ ಪರಿಸ್ಥಿತಿಗಿಂತ ಹೆಚ್ಚಾಗಿ, ನಾವು ಅದನ್ನು ಯಾವ ದೃಷ್ಟಿಕೋನದಿಂದ ನೋಡುತ್ತೇವೆ ಎಂಬುದರ ಮೇಲೆ ಆಧಾರಿತವಾಗಿರುತ್ತದೆ. ಸಕಾರಾತ್ಮಕ ಆಲೋಚನೆಗಳು ಬದುಕಿಗೆ ಹೊಸ ಚೈತನ್ಯ ನೀಡಿದರೆ, ನಕಾರಾತ್ಮಕ ಯೋಚನೆಗಳು ನಮ್ಮೊಳಗಿನ ಆತ್ಮವಿಶ್ವಾಸವನ್ನೇ ಕೊಲ್ಲುತ್ತವೆ ಎಂಬುದನ್ನು ನಾವು ಅರಿಯಬೇಕಿದೆ.

ಇತ್ತೀಚಿನ ತಾಂತ್ರಿಕ ಹಾಗೂ ಸಾಮಾಜಿಕ ಜಾಲತಾಣಗಳ ಯುಗದಲ್ಲಿ ನಮ್ಮನ್ನು ನಾವೇ ಕಳೆದುಕೊಳ್ಳುತ್ತಿರುವ, ಸದಾ ಗೊಂದಲದ ಸ್ಥಿತಿಯಲ್ಲಿ ಬದುಕುತ್ತಿರುವ ನಮಗೆ 'ಸ್ವಯಂ ಅರಿವು' ಮತ್ತು 'ಸುಪ್ತ ಮನಸ್ಸಿನ ಶಕ್ತಿ'ಯ ಪರಿಚಯ ಮಾಡಿಕೊಡುವುದು ಇಂದಿನ ಅಗತ್ಯವಾಗಿದೆ. ಇರುವುದೊಂದೇ ಬದುಕು, ಅದನ್ನು ಇಷ್ಟಪಟ್ಟು, ತೃಪ್ತಿಯಿಂದ ಹಾಗೂ ಸಾರ್ಥಕತೆಯಿಂದ ಬಾಳುವುದು ಹೇಗೆ ಎಂಬುದನ್ನು ಪ್ರಸ್ತುತ ಲೇಖನವು ಅತ್ಯಂತ ಮಾರ್ಮಿಕವಾಗಿ ನಮ್ಮ ಮುಂದೆ ತೆರೆದಿಡುತ್ತದೆ.

ನಮ್ಮ 'ಕನ್ನಡ ಗ್ಲೋಬಲ್' ಓದುಗರಿಗಾಗಿ ಈ ವಾರದ ಭಾನುವಾರದ ವಿಶೇಷ ಸಂಚಿಕೆಯಲ್ಲಿ, ಲೇಖಕಿ ಲತಿಕಾ ಗಣಪತಿ ಅವರು ಬರೆದಿರುವ "ಮೈಂಡ್ ಸೆಟ್ ಈಸ್ ಎವೆರಿಥಿಂಗ್" ಎಂಬ ಅತ್ಯುತ್ತಮ ವೈಚಾರಿಕ ಬರಹವನ್ನು ನಿಮ್ಮ ಮುಂದಿಡುತ್ತಿದ್ದೇವೆ. ಈ ಲೇಖನವು ನಿಮ್ಮ ಆಲೋಚನೆಗಳಿಗೆ ಹೊಸ ಬೆಳಕನ್ನು ನೀಡಿ, ಸಕಾರಾತ್ಮಕವಾಗಿ ಬದುಕಲು ಪ್ರೇರೇಪಿಸುತ್ತದೆ ಎಂಬ ನಂಬಿಕೆ ನಮ್ಮದು. ಓದಿ, ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ.

– ಚರಣ್ ರಾಜ್ ಮುಖ್ಯ ಸಂಪಾದಕರು, ಕನ್ನಡ ಗ್ಲೋಬಲ್ ನ್ಯೂಸ್ 


 

No comments:

Post a Comment

Advertisement

ಜಾಹೀರಾತು ಹಾಗೂ ಸುದ್ದಿ ನೀಡಲು ಸಂಪರ್ಕಿಸಿ

📞 9110857339 ಗೆ ಕರೆ ಮಾಡಿ 💬 WhatsApp ಗ್ರೂಪ್ ಸೇರಿ 🎥 YouTube ಚಂದಾದಾರರಾಗಿ

ಕನ್ನಡ ಗ್ಲೋಬಲ್ ನ್ಯೂಸ್