ಭಾನುವಾರದ ವಿಶೇಷ : ಸ್ತ್ರೀ ಎಂದರೆ ಅಷ್ಟೇ ಸಾಕೇ? - ನಂದನ ಎನ್ - Kannada global

Breaking

Saturday, May 2, 2026

ಭಾನುವಾರದ ವಿಶೇಷ : ಸ್ತ್ರೀ ಎಂದರೆ ಅಷ್ಟೇ ಸಾಕೇ? - ನಂದನ ಎನ್

ಇತ್ತೀಚಿನ ದಿನಗಳಲ್ಲಿ ಪ್ರಜಾವಾಣಿ ಪತ್ರಿಕೆ ಕೆಲವು ಸಾಧಕಿಯರನ್ನು ಗುರುತಿಸಿ ಗೌರವಿಸಿರುವುದು ಗಮನಾರ್ಹ ಸಂಗತಿ. ನಮ್ಮ ಸಮಾಜ ಇಂದಿಗೂ ಮಾನವೀಯ ಮೌಲ್ಯಗಳೊಂದಿಗೆ ಉಳಿದುಕೊಂಡಿರುವುದಕ್ಕೆ ಸ್ತ್ರೀಯರ ಪಾತ್ರ ಅತಿ ಮಹತ್ತರವಾದದ್ದು ಎಂಬುದರಲ್ಲಿ ಸಂಶಯವಿಲ್ಲ. ಆದರೆ ಆ ಶಕ್ತಿ ಬಹುಪಾಲು ಸಂದರ್ಭಗಳಲ್ಲಿ ಪ್ರಚಾರದ ಬೆಳಕಿಗೆ ಬಾರದೆ, ಮೌನವಾಗಿ, ಅದೃಶ್ಯವಾಗಿ ಉಳಿದುಕೊಂಡಿರುವುದು ವಿಷಾದಕರ ಸಂಗತಿಯಾಗಿದೆ.

ಸ್ತ್ರೀ ಇಂದು ಕೇವಲ ಮನೆತನದ ಸೀಮೆಯೊಳಗೆ ಸೀಮಿತಳಾಗಿಲ್ಲ. ಆಕೆ ಶಿಕ್ಷಣ ತಜ್ಞಳಾಗಿ, ಸಮಾಜ ಪರಿವರ್ತನೆಯ ಹರಿಕಾರಳಾಗಿ, ಆವಿಷ್ಕಾರಗಳ ಮುಂಚೂಣಿಯಲ್ಲಿರುವ ನಾಯಕಿಯಾಗಿ, ನ್ಯಾಯಕ್ಕಾಗಿ ಹೋರಾಡುವ ಧೀರಳಾಗಿ, ಭವಿಷ್ಯದ ಪೋಷಕಿಯಾಗಿ ತನ್ನನ್ನು ತಾನು ಸ್ಥಾಪಿಸಿಕೊಂಡಿದ್ದಾಳೆ. ಇಂತಹ ಅಸಾಮಾನ್ಯ ಮಹಿಳೆಯರ ಸಾಧನೆಗಳನ್ನು ಸಮಾಜಕ್ಕೆ ಪರಿಚಯಿಸುವ ಉದ್ದೇಶದಿಂದ ಪತ್ರಿಕೆ ಕೈಗೊಂಡಿರುವ ಕಾರ್ಯ ಶ್ಲಾಘನೀಯ.

ಈ ಗೌರವಕ್ಕೆ ಭಾಜನರಾಗಿರುವವರು ಎಲೆಮರೆಯ ಕಾಯಿಯಂತೆ ಮೌನವಾಗಿ ದುಡಿಯುತ್ತಿರುವ ಅಸಾಮಾನ್ಯ ಮಹಿಳೆಯರು. ಕಸಮುಕ್ತ ಗ್ರಾಮ ನಿರ್ಮಾಣದಿಂದ ಹಿಡಿದು ಅಂಚಿನ ಸಮುದಾಯಗಳಲ್ಲಿ ಶಿಕ್ಷಣದ ಬೆಳಕು ಹರಡುವುದರವರೆಗೆ, ಕಡಲ ತೀರದಲ್ಲಿ ದೋಣಿ ಮೀನುಗಾರಿಕೆ ಮಾಡುವುದರಿಂದ ಹಿಡಿದು ಲಾರಿ ಕವಚ ತಯಾರಿಸುವವರೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಬೆಂಗಳೂರಿನ 32 ವರ್ಷದ ಸವಿತಾ ಅವರಂತಹವರು ಅಂಗವಿಕಲತೆಯನ್ನು ಮೆಟ್ಟಿನಿಟ್ಟು ಸ್ವಾವಲಂಬಿ ಬದುಕು ನಡೆಸುತ್ತಿರುವುದು ನಮ್ಮೆಲ್ಲರಿಗೂ ಪ್ರೇರಣೆ. ಸವಿತಾ, ಕಮಲಮ್ಮ, ಶಂಕರವ್ವ ಲಂಬಾಣಿ, ಎಸ್. ಆಶ್ ಜಾನು, ಎಂ. ಗೌಸಿಯ ಖಾನ್, ಗಿರಿಜಮ್ಮ ಸಾರಂಗ, ರಾಗಿಣಿ, ದೀಪಿಕಾ ಮುಂತಾದವರ ಸಾಧನೆಗಳು ಇತರ ಮಹಿಳೆಯರಿಗೆ ದಾರಿದೀಪವಾಗಿವೆ.

ಇದರ ಜೊತೆಗೆ, ನಮ್ಮ ಸಮಾಜದಲ್ಲಿ ಹೆಣ್ಣಿನ ಮೇಲೆ ನಡೆಯುತ್ತಿರುವ ಶೋಷಣೆಗಳು ಕೂಡ ಅಷ್ಟೇ ಗಂಭೀರವಾದ ಪ್ರಶ್ನೆಯನ್ನು ಎತ್ತುತ್ತವೆ. ಸಂಸ್ಕೃತಿಯ ಹೆಸರಿನಲ್ಲಿ ಅವಳಿಗೆ ನೀಡಲ್ಪಟ್ಟ ಗೌರವಪೂರ್ಣ ನುಡಿಗಳು ಎಷ್ಟೇ ಸುಂದರವಾಗಿದ್ದರೂ, ಅವಳ ಜೀವನದ ವಾಸ್ತವತೆ ಹಲವೊಮ್ಮೆ ಭಿನ್ನವಾಗಿರುತ್ತದೆ. ವೇದಗಳ ಕಾಲದಿಂದಲೂ, ರಾಮಾಯಣ ಮತ್ತು ಮಹಾಭಾರತಗಳಂತಹ ಮಹಾಕಾವ್ಯಗಳಲ್ಲಿ ಸಹ ಹೆಣ್ಣು ಪ್ರಮುಖ ಪಾತ್ರಧಾರಿಣಿಯಾಗಿ ಕಾಣಿಸಿಕೊಂಡಿದ್ದಾಳೆ. ಅವಳ ಗೌರವಕ್ಕಾಗಿ ಯುದ್ಧಗಳೇ ನಡೆದಿವೆ ಎನ್ನುವುದು ಇತಿಹಾಸದ ಸಾಕ್ಷಿ. ಆದರೆ ಇಂದಿನ ಸಮಾಜದಲ್ಲಿ ಅವಳ ಸ್ಥಾನಮಾನ ಹೇಗಿದೆ ಎಂಬ ಪ್ರಶ್ನೆ ನಮ್ಮೆದುರು ಇನ್ನೂ ನಿಂತೇ ಇದೆ.

“ಹೆಣ್ಣು ಜಗದ ಕಣ್ಣು”, “ಮನೆಯ ಮಹಾಲಕ್ಷ್ಮಿ”, “ಪ್ರಕೃತಿಯ ಮಾತೆ”, “ಮಮತೆಯ ರೂಪ” ಎಂಬ ಸುಂದರ ಪದಗಳಿಂದ ಅವಳನ್ನು ಕೊಂಡಾಡುತ್ತೇವೆ. ಆದರೆ ಅವುಗಳು ಅನೇಕ ಸಂದರ್ಭಗಳಲ್ಲಿ ಮಾತಿನ ಮಟ್ಟದಲ್ಲೇ ಉಳಿದುಬಿಡುತ್ತವೆ. ವಾಸ್ತವದಲ್ಲಿ ಹೆಣ್ಣಿಗೆ ಸಮಾನ ಅವಕಾಶಗಳು ಮತ್ತು ಗೌರವ ಸಿಗುವ ಸಂದರ್ಭಗಳು ಇನ್ನೂ ಅಪೂರ್ಣವಾಗಿವೆ.

ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ಮುಂದೆ ಬರುವುದನ್ನು, ಬಲಿಷ್ಠಳಾಗಿ ಬದುಕುವುದನ್ನು ಸಹಿಸಲಾಗದ ಮನೋಭಾವನೆ ಇನ್ನೂ ಜೀವಂತವಾಗಿದೆ. ಮದುವೆಯ ನಂತರ ವರದಕ್ಷಿಣೆ ಕಿರುಕುಳ, ಮಾನಸಿಕ ಮತ್ತು ದೈಹಿಕ ಹಿಂಸೆಗಳು ಅನೇಕ ಮನೆಗಳಲ್ಲಿ ನಡೆಯುತ್ತಿವೆ. “ಎಲ್ಲರ ಮನೆಯಲ್ಲೂ ಹೀಗೇ ಇರುತ್ತದೆ, ಹೊಂದಿಕೊಂಡು ಹೋಗು” ಎಂಬ ಮಾತುಗಳು ಅವಳ ನೋವನ್ನು ಮತ್ತಷ್ಟು ಹೆಚ್ಚಿಸುತ್ತವೆ. ಅವಳ ಮನಸ್ಸಿನ ಮೇಲಿನ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಲು ಸಮಾಜ ವಿಫಲವಾಗುತ್ತದೆ.

ಗಂಡು-ಹೆಣ್ಣು ಸಮಾನತೆಯ ನೆಲೆಯಲ್ಲಿ ನಿರ್ಮಿತವಾದ ಕುಟುಂಬಗಳು ಮಾತ್ರ ಸುಖ ಮತ್ತು ಸಂತೋಷದ ನೆಲೆಗಳಾಗುತ್ತವೆ. ಕುಟುಂಬ ಸದಸ್ಯರ ನಡುವೆ ಪರಸ್ಪರ ಗೌರವ ಮತ್ತು ಸಮಾನತೆ ಹಂಚಿಹೋದಾಗ ಆ ಕುಟುಂಬವು ಸುಂದರವಾಗಿರುತ್ತದೆ. ಅಹಂಕಾರ, ವ್ಯಾಮೋಹ ಮತ್ತು ಸ್ಪರ್ಧಾತ್ಮಕ ಭಾವನೆಗಳು ಮನೆ ಮಾಡಿದಾಗ ಅಲ್ಲಿ ಸಂಘರ್ಷಗಳು ಉಂಟಾಗುತ್ತವೆ. ಸಕಾರಾತ್ಮಕ ಚಿಂತನೆಗಳು ಮಾತ್ರ ಸುಖೀ ಜೀವನಕ್ಕೆ ದಾರಿ ತೋರಿಸುತ್ತವೆ.

ಸಮಾಜದಲ್ಲಿ ಸಾಧಕಿಯಾಗಿರುವ ಮಹಿಳೆಯರು ಸುಲಭವಾದ ಬದುಕನ್ನು ನಡೆಸಿಲ್ಲ. ಅವರು ಪ್ರತಿಕ್ಷಣವೂ ಶೋಷಣೆ ಮತ್ತು ದೌರ್ಜನ್ಯಗಳ ವಿರುದ್ಧ ಹೋರಾಡುತ್ತಲೇ ತಮ್ಮ ಗುರಿಯನ್ನು ಸಾಧಿಸಿದ್ದಾರೆ. ಮಹಿಳೆಯರು ತಾವು ಹಿಡಿದ ಹಠವನ್ನು ಬಿಡದೆ ಸಮಾಜಕ್ಕೆ ದಾರಿದೀಪವಾಗಿರುವುದು ಮುಂದಿನ ತಲೆಮಾರಿಗೆ ಆಶಾಭಾವನೆಯನ್ನು ಮೂಡಿಸುತ್ತಿದೆ.

ಸ್ತ್ರೀ ಎಂದರೆ ಕೇವಲ ಒಂದು ಸಂಬಂಧವಲ್ಲ, ಒಂದು ಶಕ್ತಿ. ಅವಳನ್ನು ಕೇವಲ ಮಾತುಗಳಲ್ಲಿ ಕೊಂಡಾಡುವುದು ಸಾಕಾಗುವುದಿಲ್ಲ. ಅವಳಿಗೆ ಸಮಾನ ಅವಕಾಶಗಳು, ಗೌರವ ಮತ್ತು ಸುರಕ್ಷತೆ ನೀಡುವ ಸಮಾಜ ನಿರ್ಮಾಣ ಮಾಡುವುದು ನಮ್ಮೆಲ್ಲರ ಹೊಣೆಗಾರಿಕೆ. ಸ್ತ್ರೀಯ ಸಾಧನೆಗಳನ್ನು ಗುರುತಿಸಿ, ಪ್ರೋತ್ಸಾಹಿಸಿ, ಅವಳ ಸ್ವಾಭಿಮಾನವನ್ನು ಉಳಿಸುವುದೇ ಆಕೆಗೆ ನಾವು ನೀಡುವ ನಿಜವಾದ ಗೌರವ.

- ನಂದನ ಎನ್. ಗೌಡ 

ಪ್ರಥಮ ಎಂ.ಎ., ಕನ್ನಡ ಭಾರತಿ 

ಕುವೆಂಪು ವಿಶ್ವವಿದ್ಯಾಲಯ


ಸಂಪಾದಕೀಯ ನುಡಿ: ಮಾತು ಮೀರಿ ಮನ್ನಣೆ ಸಿಗಲಿ

ಸಮಾಜದ ಭದ್ರ ಬುನಾದಿ ಇರುವುದು ಸಮಾನತೆಯ ಮೇಲೆ. ಆದರೆ ಇಂದಿಗೂ ನಮ್ಮ ಸುತ್ತಲಿನ ಜಗತ್ತಿನಲ್ಲಿ ಸ್ತ್ರೀ ಶಕ್ತಿಯನ್ನು ಕೇವಲ ಅಲಂಕಾರಿಕ ಪದಗಳಿಂದ ವರ್ಣಿಸುವುದಕ್ಕಷ್ಟೇ ಸೀಮಿತಗೊಳಿಸಿದ್ದೇವೆ. "ಹೆಣ್ಣು ಜಗದ ಕಣ್ಣು" ಎನ್ನುವ ಘೋಷಣೆಗಳು ಕಿವಿಗೆ ಇಂಪಾಗಿದ್ದರೂ, ವಾಸ್ತವದ ನೆಲೆಯಲ್ಲಿ ಅವಳಿಗೆ ಸಿಗಬೇಕಾದ ಸುರಕ್ಷತೆ, ಗೌರವ ಮತ್ತು ಸಮಾನ ಅವಕಾಶಗಳ ಹಾದಿ ಇನ್ನೂ ಸುಗಮವಾಗಿಲ್ಲ.

ಈ ವಾರದ ನಮ್ಮ 'ಭಾನುವಾರದ ವಿಶೇಷ' ಅಂಕಣದಲ್ಲಿ ಕುವೆಂಪು ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ನಂದನ ಎನ್. ಗೌಡ ಅವರು ಸ್ತ್ರೀ ಸಂವೇದನೆಯ ಕುರಿತು ಅತ್ಯಂತ ಮಾರ್ಮಿಕವಾಗಿ ಬರೆದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳು ಗುರುತಿಸುತ್ತಿರುವ 'ಎಲೆಮರೆಯ ಕಾಯಿ'ಗಳಂತಹ ಸಾಧಕಿಯರ ಯಶೋಗಾಥೆಗಳನ್ನು ಲೇಖಕಿ ಇಲ್ಲಿ ಪ್ರಸ್ತಾಪಿಸುತ್ತಾ, ಸಾಧನೆಯ ಹಾದಿಯಲ್ಲಿ ಮಹಿಳೆಯರು ಎದುರಿಸುವ ಕೌಟುಂಬಿಕ ಮತ್ತು ಸಾಮಾಜಿಕ ಸವಾಲುಗಳನ್ನು ಕನ್ನಡಿ ಹಿಡಿದು ತೋರಿಸಿದ್ದಾರೆ.

ಕೇವಲ ಪ್ರಶಸ್ತಿ ಅಥವಾ ಪದಗಳ ಗೌರವವಷ್ಟೇ ಸ್ತ್ರೀಗೆ ಸಾಲದು; ಅವಳ ಸ್ವಾಭಿಮಾನವನ್ನು ಗೌರವಿಸುವ ಮತ್ತು ಶೋಷಣೆಮುಕ್ತ ಬದುಕಿಗೆ ಬೆಂಬಲ ನೀಡುವ ಸಮಾಜ ನಮ್ಮದಾಗಬೇಕಿದೆ. ಈ ಲೇಖನವು ಓದುಗರಲ್ಲಿ ಸ್ತ್ರೀ ಶಕ್ತಿಯ ಬಗ್ಗೆ ಹೊಸ ಚಿಂತನೆಯನ್ನು ಮೂಡಿಸಲಿ ಎಂಬುದು ನಮ್ಮ ಆಶಯ.

- ಸಂಪಾದಕರು, ಕನ್ನಡ ಗ್ಲೋಬಲ್


No comments:

Post a Comment

Advertisement

ಜಾಹೀರಾತು ಹಾಗೂ ಸುದ್ದಿ ನೀಡಲು ಸಂಪರ್ಕಿಸಿ

📞 9110857339 ಗೆ ಕರೆ ಮಾಡಿ 💬 WhatsApp ಗ್ರೂಪ್ ಸೇರಿ 🎥 YouTube ಚಂದಾದಾರರಾಗಿ

ಕನ್ನಡ ಗ್ಲೋಬಲ್ ನ್ಯೂಸ್