Saturday, May 9, 2026
ಭಾನುವಾರದ ವಿಶೇಷ : ಅಂತರಾಳದ ಪರಿ - ಸೌಖ್ಯ ಬಿ
ಬೆಲ್ಲವನ್ನು ತಿಂದವನೇ ಬಲ್ಲ ಬೆಲ್ಲದ ರುಚಿ ಏನೆಂದು,ಮುಡಿದವಳೆ ಬಲ್ಲಳು ಮಲ್ಲಿಗೆಯ ಪರಿಮಳ ಏನೆಂದು, ಹಾಗೆ ಬಲ್ಲವರೇ ಬಲ್ಲರು ನಮ್ಮ ತಾಯ್ನುಡಿಯ ಮಹತ್ವವೇನೆಂದು...
ಕನ್ನಡವು ಸುಮಾರು 2000 ವರ್ಷಗಳ ಹೆಚ್ಚಿನ ಸುಧೀರ್ಘ ಇತಿಹಾಸವನ್ನು ಹೊಂದಿದ್ದು, ಶ್ರೀಮಂತ ಲಿಪಿ ಹಾಗು ಶ್ರೀಮಂತ ಸಾಹಿತ್ಯ ಪರಂಪರೆಯನ್ನು ಹೊಂದಿರುವ ಭಾರತದ ಅತ್ಯಂತ ಪ್ರಾಚೀನ ಹಾಗೂ ಶ್ರೇಷ್ಠ ಭಾಷೆಗಳಲ್ಲಿ ಒಂದಾಗಿದೆ. ಶಾಸ್ತ್ರೀಯ ಭಾಷೆಯ ಮಾನ್ಯತೆ ಹೊಂದಿರುವ ಕನ್ನಡ ಜ್ಞಾನಪೀಠ ಪ್ರಶಸ್ತಿಗಳ ಸರಮಾಲೆಯನ್ನು ಹೊಂದಿದ್ದು ಹಲ್ಮಿಡಿ ಶಾಸನದಿಂದ ಹಿಡಿದು ಆಧುನಿಕ ಸಾಹಿತ್ಯದವರೆಗೆ ವಿಶಿಷ್ಟ ಶೈಲಿ ಹಾಗೂ ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ.
ತಮಗೆಲ್ಲರಿಗೂ ಈಗ ಅನಿಸುತ್ತಿರಬಹುದು ಏನಿದು ಕನ್ನಡದ ಇತಿಹಾಸವನ್ನು ಕುರಿತು ಮಾತನಾಡುತ್ತಿದ್ದಾರೆಂದು,
ಇದಕ್ಕೆ ಉತ್ತರ ಕೊಡುವಂತದ್ದೆ ನನ್ನ ಅಂತರಾಳದ ಪರಿಯಾಗಿದೆ.
ಕನ್ನಡಕ್ಕೆ ಯಾಕೆ ಪ್ರಾಶಸ್ತ್ಯ, ಪ್ರಾಮುಖ್ಯತೆ, ಮೊದಲ ಆದ್ಯತೆಯನ್ನು ಕೊಡಬೇಕೆಂದು ಬಹು ಮುಖ್ಯವಾಗಿ ಕನ್ನಡವನ್ನೇ ಮುಖ್ಯ ವಿಷಯವಾಗಿಟ್ಟುಕೊಳ್ಳಬೇಕು ಎಂಬುದರ ಕುರಿತಾಗಿ ನನ್ನ ಅಂತರಾಳದಪರಿಯನ್ನು ನಿಮ್ಮೊಟ್ಟಿಗೆ ಹೀಗೆ ಹಂಚಿಕೊಂಡಿದ್ದೇನೆ.
ಕನ್ನಡ ಪದಗಳ ಬಳಕೆ, ಸಂದರ್ಭೋಚಿತವಾದ ಅರ್ಥಗಳು ಓದುಗನ ಮನಸ್ಥಿತಿಯಂತೆ ಅವು ಪಡೆದುಕೊಳ್ಳುವ ಭಿನ್ನ ದೃಷ್ಟಿಕೋನಗಳು ಹೀಗೆ ಎಲ್ಲವನ್ನ ಬಹಳ ಸುಂದರವಾಗಿ ಎಲ್ಲರ ಮನಮುಟ್ಟಿಸುವಂಥದ್ದು ಕನ್ನಡ ಹಾಗೂ ಕನ್ನಡ ಭಾಷೆ.
ಕನ್ನಡವನ್ನು ಮೊದಲ ಆದ್ಯತೆಯಾಗಿಟ್ಟುಕೊಳ್ಳುವುದರಿಂದ ಭಾಷೆಯ ಶುದ್ಧತೆ ,ಶಬ್ದ ಸಂಪತ್ತು ಮತ್ತು ವ್ಯಾಕರಣ ಉತ್ತಮವಾಗುತ್ತದೆ. ಕನ್ನಡವೆಂಬುದು ನಮ್ಮ ಅಸ್ತಿತ್ವದ ಗುರುತು ಕನ್ನಡದಲ್ಲಿ ಸಂವಹನ ಮಾಡಿದರೆ ಆತ್ಮೀಯತೆ ವಿಶ್ವಾಸ ಹೆಚ್ಚುತ್ತದೆ ನಮ್ಮ ಕನ್ನಡ ಸಾಹಿತ್ಯ ಕಲೆ ಸಂಸ್ಕೃತಿ, ಸಂಶೋಧನೆಗೆ ಉತ್ತೇಜನ ಸಿಗುತ್ತದೆ. ಮುಖ್ಯವಾಗಿ ಇಂದಿನ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗೆ ಮುಂಚಿತವಾಗಿ ಕನ್ನಡ ವಿಷಯವನ್ನು ಕಡ್ಡಾಯವಾಗಿ ಇಟ್ಟಿದ್ದಾರೆ.
ಸದ್ಯ ಈ ನಿಟ್ಟಿನಲ್ಲಾದರೂ ಕನ್ನಡವನ್ನು ಅಭ್ಯಾಸ ಮಾಡುತ್ತಾರಲ್ಲ ಎಂಬುದೇ ನಮ್ಮ ಖುಷಿ...
ಕನ್ನಡ ಅಭ್ಯಾಸದಿಂದ ನಮಗೆ ಸ್ಪರ್ಧಾ ಲೋಕಕ್ಕೆ ಮುನ್ನುಗ್ಗಲು ಒಂದು ಉತ್ತಮ ಅವಕಾಶ.
ಕನ್ನಡ ಕಲಿಕೆಯಿಂದ ಪದ ಸಂಪತ್ತು, ಭಾಷಾ ನೈಪುಣ್ಯತೆ ನಮ್ಮಲ್ಲಿ ಬೆಳೆಯುತ್ತದೆ.ಕವನ,ಕಥೆ,ನಾಟಕ, ಪ್ರಬಂಧಗಳ ಮೂಲಕ ಸಾಹಿತ್ಯ ಉಳಿಯುತ್ತದೆ.ನಮ್ಮ ಕರ್ನಾಟಕದಲ್ಲಿ ಉದ್ಯೋಗ,ಆಡಳಿತ, ಮಾಧ್ಯಮ, ಶಿಕ್ಷಣ ಕ್ಷೇತ್ರಗಳಲ್ಲಿ ಕನ್ನಡ ಜ್ಞಾನವು ಹೆಚ್ಚುವರಿ ಅರ್ಹತೆಯಾಗಿದೆ. ಕನ್ನಡಕ್ಕೆ ಶೇಕಡವಾರು ಅವಕಾಶ ಮತ್ತು ಸ್ಥಾನಗಳನ್ನ ಉಳಿಸಿಕೊಳ್ಳಲು ನಾವು ಕನ್ನಡವನ್ನು ಕಡ್ಡಾಯವಾಗಿ ಅಭ್ಯಾಸ ಮಾಡಬೇಕು.
ಕನ್ನಡ ಕಲಿತವರ ಮನಸ್ಥಿತಿ ತಾನಾಗೇ ಬದಲಾಗುತ್ತದೆ. ಸದಾ ಭಾಷಾ ಪ್ರೇಮ, ಮತ್ತು ಅಭಿಮಾನ ಸಾಹಿತ್ಯ ಹಾಗೂ ಸಂಸ್ಕೃತಿಯ ಬಗೆಗೆ ಗಾಢ ಒಲವು ಸಂವೇದನಾಶೀಲ ಮನಸ್ಸು, ಭಾವನೆಗಳನ್ನು ಆಳವಾಗಿ ಅರ್ಥಮಾಡಿಕೊಳ್ಳುವ ಮನೋಭಾವನೆ, ಸಮಾಜ, ಜೀವನ, ಮಾನವೀಯ ಮೌಲ್ಯಗಳ ಬಗೆಗೆ ಆಲೋಚಿಸುವ ಗುಣ ಹೆಚ್ಚಾಗಿರುತ್ತದೆ.ಬರವಣಿಗೆ, ಕಾವ್ಯ ರಚನೆ, ವಿಮರ್ಶೆ ಮಾಡುವ ಆಸಕ್ತಿ ಹೆಚ್ಚಾಗಿರುತ್ತದೆ. ಸಾಮಾಜಿಕ ಸಮಸ್ಯೆಗಳ ಅರಿವು ಹಾಗೂ ಅವುಗಳ ಪರಿಹಾರಕ್ಕೆ ಸ್ಪಂದಿಸುವ ಮನಸ್ಥಿತಿ ನಮ್ಮಲ್ಲಿ ಇರುತ್ತದೆ.
ಭಾರತದ ಅತ್ಯಂತ ಪ್ರಾಚೀನ ಹಾಗೂ ಶ್ರೇಷ್ಠ ಭಾಷೆಗಳಲ್ಲಿ ಒಂದಾಗಿರುವ ಕನ್ನಡವೂ ಜ್ಞಾನಪೀಠ ಪ್ರಶಸ್ತಿಗಳ ಸರಮಾಲೆಯನ್ನು ತನ್ನ ಮುಡಿಗೇರಿಸಿಕೊಂಡಿದೆ.ಜೊತೆಗೆ ಕುವೆಂಪು,ಡಿವಿಜಿ, ಬಿ ಎಂ ಶ್ರೀ, ಜಿಎಸ್ ಶಿವರುದ್ರಪ್ಪ, ಕೆ ಎಸ್ ನರಸಿಂಹಸ್ವಾಮಿ ,ಪೂ.ತಿ.ನ ಇವರೆಲ್ಲರೂ ಕನ್ನಡ ಮಾಧ್ಯಮದಲ್ಲಿಯೇ ಕಲಿತು "ನಾವಳಿದರು ನಮ್ಮ ಸಾಹಿತ್ಯಗಳು ಅಳಿಯದೇ ಇರಲಿ" ಎಂಬ ದೃಢ ನಿರ್ಧಾರ ಕೈಗೊಂಡ ಕವಿಪುಂಗವರಾಗಿದ್ದಾರೆ. ಈ ಛಲವನ್ನು ನಮ್ಮಲ್ಲೂ ಹುಟ್ಟು ಹಾಕಿಕೊಳ್ಳಬೇಕು.
ಇಷ್ಟೇ ಅಲ್ಲದೆ ಇದಕ್ಕಿಂತ ಹೆಚ್ಚಿನ ಮಹತ್ವ ಹೊಂದಿರ್ತಕ್ಕಂತದ್ದು ಕನ್ನಡ ಭಾಷೆ ಆದರೆ ಪ್ರಸ್ತುತ ದಿನಗಳಲ್ಲಿ ನಾವು ಯಾವುದೇ ಕಚೇರಿಗಳಿಗೆ ಹೋದಾಗ ನಮ್ಮ ಸಂವಹನ ಹಾಗೂ ವಹಿವಾಟುಗಳನ್ನು ನಡೆಸುವ ಸಂದರ್ಭದಲ್ಲಿ ಇಂಗ್ಲಿಷ್ ಅನ್ನ ಮಾತನಾಡುವುದು ಕಾಣುತ್ತೇವೆ ಅದೇ ಯಾಕೆ ಕನ್ನಡವನ್ನು ಮಾತನಾಡುವುದಿಲ್ಲ ಕನ್ನಡವನ್ನು ಮಾತನಾಡಿದರೆ ತಪ್ಪೇನಿದೆ?
ಕನ್ನಡ ನಾಡಿನಲ್ಲಿರುವ ನಮಗೆ ನಾವು ಪರಕೀಯರೆಂಬ ಸ್ಥಿತಿ ಬಂದಂತಾಗಿದೆ.
ಈ ಬದಲಾವಣೆ ಮೊದಲು ಇಲ್ಲಿಂದಲೇ ಪ್ರಾರಂಭವಾಗಬೇಕು.
ಸದ್ಯದ ಪರಿಸ್ಥಿತಿ ನಮ್ಮಲ್ಲಿರುವುದು ಹೇಗೆಂದರೆ ಇಂಗ್ಲಿಷ್ ಶಿಕ್ಷಣವನ್ನ ಕಲಿತವರು ಮಾತ್ರ ಬದುಕಬಲ್ಲರು ಕನ್ನಡವನ್ನು ಕಲಿತವರು ಬದುಕಲಾರರು ಎಂಬುವಂತ ಸ್ಥಿತಿಗೆ ಬಂದಿದ್ದೇವೆ..ಕನ್ನಡ ನಾಡಿನಲ್ಲೇ ಕನ್ನಡಿಗರನ್ನೇ ಇಂಗ್ಲಿಷ್ ಈ ಪರಿಯಾಗಿ ಆವರಿಸಿಕೊಂಡಿದೆ. ನಮ್ಮ ನಾಡಿನಲ್ಲಿ ನಮ್ಮ ಭಾಷೆಯನ್ನು ಮಾತನಾಡುವುದು ತಪ್ಪ ಹಾಗಿದ್ರೆ?
ಈ ಪರಿಕಲ್ಪನೆಯನ್ನು ಹೋಗಲಾಡಿಸಲಾದರು ನಾವು ಕನ್ನಡವನ್ನು ಕಡ್ಡಾಯವಾಗಿ ಅಭ್ಯಾಸವನ್ನು ಮಾಡಿ ಸರ್ಕಾರಿ ನೌಕರಿಯನ್ನು ಹಿಡಿದು ಇದಕ್ಕೆ ಪ್ರತ್ಯುತ್ತರವನ್ನು ನೀಡಬೇಕು. ಇವತ್ತಿನ ದಿನಗಳಲ್ಲಿ ಎಷ್ಟೋ ಜನ ಮಕ್ಕಳಿಗೆ ಕನ್ನಡವನ್ನು ಓದಲು ಮಾತನಾಡಲು ಬರುವುದಿಲ್ಲ ಯಾಕೆಂದರೆ ಮಕ್ಕಳಿಗೆ ಮೊದಲು ತಂದೆ ತಾಯಿ ಹೇಳೋದೇ ಇಂಗ್ಲಿಷ್ ಕಲಿ ಅಂತ ನಮ್ಮ ಭಾಷೆ ಸಂಸ್ಕೃತಿಯನ್ನು ಮೊದಲು ನಾವು ಎತ್ತಿಕೊಂಡು ಮುಂದೆ ಹೋಗದಿದ್ದರೆ ಇನ್ಯಾರು ಕೂಡ ಪೋಷಿಸಲಾರರು.
81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಿರಿಯ ಸಾಹಿತಿಯಾದ ಪ್ರೋ. ಎಸ್.ಎಲ್ ಭೈರಪ್ಪನವರು ಕನ್ನಡ ಓದಿದವರಿಗೆ ಸರಕಾರಿ ಕೆಲಸ ಕೊಡುದಾಗಿ ಘೋಷಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿದ್ದಾರೆ. ಖಂಡಿತವಾಗಿಯೂ ನುಡಿ ಕಲಿತವರಿಗೆ ನೌಕರಿ ಆಗಲೇಬೇಕು ಆಗಲಾದರೂ ತಾವಾಗಿ ಎಲ್ಲ ಕನ್ನಡವನ್ನು ಕಡ್ಡಾಯ ವಿಷಯವಾಗಿ ಕಲಿಯುತ್ತಾರೆ ಎಂಬುದು ನನ್ನ ಅನಿಸಿಕೆ.
ನಾನು ಇಲ್ಲಿ ಯಾವುದೇ ಒಂದು ಭಾಷೆಯನ್ನು ಉನ್ನತ ಸ್ಥಿತಿಯಲ್ಲಿ ಇಟ್ಟು ಮಾತನಾಡುತ್ತಿಲ್ಲ "ಇಂಗ್ಲಿಷ್ ತಲೆಯಲ್ಲಿರಲಿ ಕನ್ನಡ ಹೃದಯದಲ್ಲಿರಲಿ ಇದಕ್ಕಿಂತ ಸರಳ ಸೂತ್ರ ಬೇಕಾ?" ಸದಾ ನಮ್ಮನ್ನ ಇದು ಚುಂಬಿಸುತ್ತಿರಬೇಕು, ಕನ್ನಡಿಗರಾದ ನಾವೇ ಕನ್ನಡವನ್ನು ಉಳಿಸಲಿಲ್ಲ ಎಂದ ಮೇಲೆ ಇನ್ಯಾರು ಉಳಿಸಲಾರರು ಈ ಹೊಸ ಚಿಂತನೆ ಮೊದಲು ನಮ್ಮಲ್ಲಿ ಆಗಬೇಕು ಹೊಸ ಅಳವಡಿಕೆಯು ನಮ್ಮಲ್ಲಿ ಆಗಬೇಕು.ಕನ್ನಡ ಎಂದರೇ ಶ್ರೀಮಂತಿಕೆ ಎಂಬ ಭಾವನೆ ನಮ್ಮದಾಗಬೇಕು ಶಿಷ್ಟವಾಗುತ್ತಾ ಹೋದಂತೆ ಕನ್ನಡವನ್ನ ನಾವೇ ದುರ್ಬಲವಾಗಿ ಕಾಣುತ್ತಿದ್ದೇವೆ. ನನಗನಿಸುವ ಮಟ್ಟಿಗೆ ಸಂಸ್ಕೃತಿಕರಣ ಪರಿಣಾಮವಾಗಿ ಮತ್ತು ಕೀಳರಿಮೆಯ ಪರಿಣಾಮವಾಗಿ ನಾವು ನಮ್ಮ ಭಾಷೆಯನ್ನ ನಮ್ಮ ಕನ್ನಡವನ್ನ ನಾವು ಬಿಟ್ಟು ಕೊಡ್ತಾ ಇದ್ದೇವೆ. ಇದು ನಿಜಕ್ಕೂ ದುಃಖದ ಸಂಗತಿ ಹಾಗಂತ ದುಃಖ ಪಡುತ್ತಾ ಕೂರುವ ಕಾಲವಲ್ಲ ಇದು ಈ ದುಃಖವನ್ನೇ ನಾಳಿನ ಶಕ್ತಿಯಾಗಿ ಬದಲಾಯಿಸಿಕೊಳ್ಳಬೇಕು.
ನಾವೆಲ್ಲರೂ ನಮ್ಮ ಕನ್ನಡವನ್ನು ಗೌರವಿಸುವಂತಹ ಸಂದರ್ಭ ಇದಾಗಿದೆ.ಕನ್ನಡ ನಿಂತ ನೀರಾಗದೆ ನಿರಂತರವಾಗಿ ಪ್ರವಹಿಸುವ ಪ್ರವಾಹವಾಗಬೇಕು.. ಕನ್ನಡವೆಂಬುದೇ ನಮ್ಮ ಶಕ್ತಿ ಆಗಬೇಕು...💛❤️
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ
- ಸೌಖ್ಯ ಬಿ
ತೃತೀಯ ಬಿ.ಎ
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸೊರಬ
ಸೊರಬ (ತಾ) ಶಿವಮೊಗ್ಗ (ಜಿಲ್ಲೆ)
━━━━━━━━━━━━━━━━━━━━━━━━━━━━━━━━━━━━━
ಸಂಪಾದಕೀಯ ನುಡಿ: ನಮ್ಮ ನುಡಿ, ನಮ್ಮ ಹೆಮ್ಮೆ
ಭಾಷೆ ಎಂಬುದು ಕೇವಲ ಸಂವಹನದ ಮಾಧ್ಯಮವಲ್ಲ; ಅದು ಒಂದು ಸಂಸ್ಕೃತಿಯ ಜೀವನಾಡಿ, ಸಮುದಾಯದ ಅಸ್ತಿತ್ವದ ಗುರುತು. ಇಂದು ಜಾಗತೀಕರಣದ ಭರಾಟೆಯಲ್ಲಿ ಇಂಗ್ಲಿಷ್ ಅನಿವಾರ್ಯವಾಗಿರಬಹುದು, ಆದರೆ ಕನ್ನಡ ನಮ್ಮ ಅಂತರಾಳದ ಧ್ವನಿಯಾಗಬೇಕು. ಇಂದಿನ ಯುವ ಪೀಳಿಗೆಗೆ ಕನ್ನಡದ ಶ್ರೀಮಂತಿಕೆ ಮತ್ತು ಅದರ ಔಚಿತ್ಯವನ್ನು ಮನವರಿಕೆ ಮಾಡಿಕೊಡುವ ತುರ್ತು ಅಗತ್ಯವಿದೆ.
ಈ ವಾರದ 'ಭಾನುವಾರದ ವಿಶೇಷ' ಅಂಕಣದಲ್ಲಿ ಶಿವಮೊಗ್ಗ ಜಿಲ್ಲೆಯ ಸೊರಬದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಸೌಖ್ಯ ಬಿ. ಅವರು ಬರೆದ "ಅಂತರಾಳದ ಪರಿ" ಎಂಬ ಲೇಖನವನ್ನು ಪ್ರಕಟಿಸುತ್ತಿದ್ದೇವೆ. ಕನ್ನಡ ಭಾಷೆಯ ಇತಿಹಾಸ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅದರ ಪ್ರಾಮುಖ್ಯತೆ ಮತ್ತು ಕನ್ನಡ ನಾಡಿನಲ್ಲೇ ಕನ್ನಡಕ್ಕಿರುವ ಸವಾಲುಗಳ ಬಗ್ಗೆ ಅವರು ಅತ್ಯಂತ ಮಾರ್ಮಿಕವಾಗಿ ಈ ಲೇಖನದಲ್ಲಿ ಚರ್ಚಿಸಿದ್ದಾರೆ.
ವಿದ್ಯಾರ್ಥಿ ದೆಸೆಯಲ್ಲೇ ಭಾಷೆಯ ಬಗ್ಗೆ ಇಂತಹ ಜಾಗೃತಿ ಮತ್ತು ಅಭಿಮಾನ ಮೂಡಿರುವುದು ಆಶಾದಾಯಕ ಬೆಳವಣಿಗೆ. ಈ ಲೇಖನವು ಓದುಗರಲ್ಲಿ ಹೊಸ ಚಿಂತನೆಯನ್ನು ಮೂಡಿಸಲಿ ಎಂಬುದು ನಮ್ಮ ಆಶಯ.
- ಸಂಪಾದಕರು, ಕನ್ನಡ ಗ್ಲೋಬಲ್ ನ್ಯೂಸ್
━━━━━━━━━━━━━━━━━━━━━━━━━━━━━━━━━━━━━━
Tags
# ಭಾನುವಾರದ ವಿಶೇಷ
Share This
About Kannada Global
ಭಾನುವಾರದ ವಿಶೇಷ
Tags
ಭಾನುವಾರದ ವಿಶೇಷ
Subscribe to:
Post Comments (Atom)
Advertisement
ಜಾಹೀರಾತು ಹಾಗೂ ಸುದ್ದಿ ನೀಡಲು ಸಂಪರ್ಕಿಸಿ
📞 9110857339 ಗೆ ಕರೆ ಮಾಡಿ 💬 WhatsApp ಗ್ರೂಪ್ ಸೇರಿ 🎥 YouTube ಚಂದಾದಾರರಾಗಿಕನ್ನಡ ಗ್ಲೋಬಲ್ ನ್ಯೂಸ್
Author Details
"ಚರಣ್ - ಸಂಸ್ಥಾಪಕರು, ಕನ್ನಡ ಗ್ಲೋಬಲ್. ನಿಖರ ಸುದ್ದಿ, ನೇರ ಮಾತು ಹಾಗೂ ಸಮಾಜದ ಹಿತದೃಷ್ಟಿಯಿಂದ ಸುದ್ದಿಗಳ ವಿಶ್ಲೇಷಣೆ. ಸ್ಥಳೀಯ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಡಿಜಿಟಲ್ ಮಾಧ್ಯಮದ ಪಥದಲ್ಲಿ ನನ್ನ ಪಯಣ."

No comments:
Post a Comment