ಕೆಲವರಿರುತ್ತಾರೆ ಬದುಕು ಅನ್ನುವುದು ಅವರಿಗೆ ಅದೃಷ್ಟದ ಆಟ ಆಗಿರುತ್ತದೆ. ಅದೃಷ್ಟಕ್ಕಾಗಿಯೇ ಅವರ ಜೀವ ಹಂಬಲಿಸುತ್ತದೆ. ಅದೃಷ್ಟ ಕೈತಪ್ಪಿದ್ದಾಗ "ಜೀವನ ಇಷ್ಟೇ ಕಣಪ್ಪ, ನಮ್ಮಂತೋರಿಂದ ಆಗೋ ಕೆಲಸನಾ ಅದು" ಎಂದು ಬದುಕಿನ ಮೇಲೆ ತಪ್ಪೆಸೆದು ಅದೃಷ್ಟಕ್ಕೆ ಹಲುಬಿ ಕೂರುತ್ತಾರೆ. ಇವತ್ತು ನಾನು ನಿಮಗೊಂದು ಕಥೆ ಹೇಳಬೇಕು, ಜಗತ್ತಿನ 85 ಭಾಷೆಗೆ ಅನುವಾದವಾಗಿರುವ ಕಥೆ. ಓದಿದವರ ಮೈ ನವಿರೇಳಿಸುವ ಕಥೆ. ಹೆಣ್ಣಿನ ಧೈರ್ಯಕ್ಕೆ ಸಾಕ್ಷಿಯಾದ ಭಂಡ ಧೈರ್ಯದ ಕಥೆ.
ಪುಸ್ತಕಗಳು ಅಳುಸ್ತಾವೆ ಬದುಕಿನ ಭೀತಿಯನ್ನ, ಕಲಿಸ್ತಾವೇ ಬದುಕುವ ರೀತಿಯನ್ನ, ಇನ್ಸ್ಟಾಗ್ರಾಮ್ ಅಲ್ಲಿ ಈ ಸಾಲನ್ನು ನೋಡಿದ ತಕ್ಷಣ ನೆನಪಾಗುವುದು ಇಂತಹ ಪುಸ್ತಕಗಳೇ. ಬದುಕುವ ಹಂಬಲ ಹುಟ್ಟೋದು, ಸಾಧಿಸೋ ಕಿಚ್ಚು ಮೂಡೋದು, ಸವಾಲನ್ನು ಮೆಟ್ಟಿ ನಿಲ್ಲೋದು, ಎದೆಗುಂದದೆ ಬಾಳೋದು, ಈಕೆಯ ಸಾಧನೆಗೆ ತಲೆಬಾಗಬೇಕು ಎನಿಸೋದು, ಈ ಪುಸ್ತಕ ಓದಿದಾಗಲೇ.
ಈ ಕಥೆಯ ಕಥಾನಾಯಕಿಯ ಹೆಸರು ವಾರೀಸ್ ಡೀರಿ. ಈಕೆ ಹುಟ್ಟಿದ್ದು ದಕ್ಷಿಣ ಆಫ್ರಿಕಾದ ಸೋಮಾಲಿಯಾದ ಮರುಭೂಮಿಯ ಬುಡಕಟ್ಟು ಸಮುದಾಯದ ಅಲೆಮಾರಿ ಕುಟುಂಬದಲ್ಲಿ. ಈಕೆಯ ಕುಟುಂಬದ ಮುಖ್ಯ ವೃತ್ತಿ ಒಂಟೆಗಳನ್ನು ಮೇಯಿಸುತ್ತಾ ಅಲೆಯುವುದು. ವಾರೀಸ್ ಡೀರಿ ಯ ತಂದೆ ಒಂಟೆಗಳ ಆಸೆಗಾಗಿ 60 ರ ವಯಸ್ಸಿನ ಮುದುಕನನ್ನು ವಾರಿಸ್ ಗೆ ಮದುವೆ ಮಾಡಲು ಬಯಸಿದಾಗ 13 ವರ್ಷದ ವಾರೀಸ್ ಮನೆ ಬಿಟ್ಟು ನೂರಾರು ಕಿಲೋಮೀಟರ್ ಮರುಭೂಮಿಯನ್ನು ಬರಿಗಾಲಿನಲ್ಲಿ ದಾಟಿ ಸೋಮಾಲಿಯಾದ ರಾಜಧಾನಿಯಾದ ಮೊಗದಿಶು ನಗರ ತಲುಪುತ್ತಾಳೆ. ಆಸರೆ ಇಲ್ಲದೆ ಒಬ್ಬಂಟಿ ಹೆಣ್ಣು ಮಗಳು ತಮ್ಮ ಚಿಕ್ಕಮ್ಮ, ಅಕ್ಕ, ಮತ್ತು ಅತ್ತೆಯ ಮನೆಯಲ್ಲಿ ವಾಸವಿರುತ್ತಾಳೆ. ಚಿಕ್ಕಮ್ಮನ ಮನೆಯಲ್ಲಿ ವಾಸವಿರುವಾಗ ಲಂಡನ್ ನಗರದ ಇನ್ನೊಬ್ಬ ಚಿಕ್ಕಮ್ಮನ ಮನೆಯಲ್ಲಿ ಮನೆ ಕೆಲಸ ಮಾಡಲು ಆಳು ಬೇಕೆಂಬ ವಿಷಯ ತಿಳಿದು ಮೊಗದಿಶು ನಗರದ ಚಿಕ್ಕಮ್ಮನ ಮನೆಯಿಂದ ಲಂಡನ್ ನಗರಕ್ಕೆ ವಾರಿಸ್ ಪ್ರಯಾಣ ಬೆಳೆಸುತ್ತಾಳೆ.
ಲಂಡನ್ ನಗರದ ರಾಯಭಾರಿಯಾದ ಶ್ರೀಮಂತ ಚಿಕ್ಕಪ್ಪನ ಮನೆಯಲ್ಲಿ ನಾಲ್ಕು ವರ್ಷಗಳ ಕಾಲ ಬಿಡುವಿಲ್ಲದೆ, ಗಡಿಯಾರದ ಮುಳ್ಳಿನೊಂದಿಗೆ ಸ್ಪರ್ಧೆಗೆ ಇಳಿದಂತೆ ಮನೆ ಕೆಲಸ ಮಾಡುತ್ತಾಳೆ. ಇದಕ್ಕೆ ಪ್ರತಿಯಾಗಿ ಆಕೆಗೆ ಸಿಕ್ಕ ಬಹುಮಾನ ಹೊಟ್ಟೆಗೆ ಊಟ ಮತ್ತು ಚಿಕ್ಕಪ್ಪ ಕೊಟ್ಟ ಬಿಡಿಗಾಸು. ಲಂಡನ್ ನಗರದ ರಾಯಭಾರಿಯಾಗಿದ್ದ ಚಿಕ್ಕಪ್ಪನ ಅವಧಿ ಮುಗಿಯುತ್ತಾ ಬಂದು ಚಿಕ್ಕಪ್ಪನ ಕುಟುಂಬ ಸೋಮಾಲಿಯಾಕೆ ಹೋಗಲು ನಿರ್ಧರಿಸುತ್ತದೆ. ಖಾಲಿ ಕೈಲಿ ಸಂಪಾದನೆ ಇಲ್ಲದೆ ತನ್ನ ತಾಯ್ನಾಡಿಗೆ ವಾಪಸ್ ಆಗಲು ಮನಸ್ಸಿಲ್ಲದ ವಾರಿಸ್ ಡೀರಿ ತನ್ನ ಪಾಸ್ ಪೋರ್ಟ್ ಮತ್ತು ವೀಸಾವನ್ನು ಮಣ್ಣಿನಲ್ಲಿ ಅಡಗಿಸಿಟ್ಟು, ಕಾಣೆಯಾಗಿದೆ ಎಂದು ನಾಟಕವಾಡಿ ಲಂಡನ್ ನಗರದಲ್ಲಿ ಉಳಿಯುತ್ತಾಳೆ, ಈ ಘಟನೆ ಅವಳ ಗಟ್ಟಿತನಕ್ಕೆ ಸಾಕ್ಷಿ. ಚಿಕ್ಕಪ್ಪನ ಕುಟುಂಬ ಲಂಡನ್ ನಗರ ಬಿಟ್ಟು ಸೊಮಾಲಿಯಾ ನಗರಕ್ಕೆ ಹೋದಾಗ ಅನಾಥಳಾಗಿ ಬೀದಿಗೆ ಬಿದ್ದ ವಾರಿಸ್ ಡೀರಿಗೆ ಲಂಡನ್ನಲ್ಲಿ ಪರಿಚಯವಾದ ಒಬ್ಬ ಗೆಳತಿ ತಾನಿದ್ದ ವೈ ಎಂ ಸಿ ಎ ಎಂಬ ಹಾಸ್ಟೆಲ್ ನಲ್ಲಿ ವಾರಿಸ್ಗೆ ಜಾಗ ಕೊಟ್ಟಿದ್ದಲ್ಲದೆ ತಂದೆಯಾಗಿ, ಅಕ್ಕನಾಗಿ, ಅಮ್ಮನಾಗಿ, ನೆರವಾಗುತ್ತಾಳೆ. ನಂತರ ಮೇಕ್ ಡೊನಾಲ್ಡ್ ರೆಸ್ಟೋರೆಂಟ್ ನಲ್ಲಿ ಕೈ ರೇಖೆಗಳು ಅಳಿಸಿ ಹೋಗುವಂತೆ ಕೆಲಸ ಮಾಡಿದ ವಾರಿಸ್ ಮಾಲ್ಕಂಫೇರ್ ಚೈಲ್ಡ್ ಎಂಬ ಫೋಟೋಗ್ರಾಫರ್ ನ ಸಹಾಯದಿಂದ ಜಾಹೀರಾತು ರಂಗವನ್ನು ಪ್ರವೇಶಿಸುತ್ತಾಳೆ. ನಂತರ ರೂಪದರ್ಶಿಯಾಗಿ ಕಾಣಿಸಿಕೊಂಡ ವಾರಿಸ್ ಬಾಂಡ್ ಸಿನಿಮಾಗಳಲ್ಲಿ ನಟಿಸಿ ಜಗತ್ ಪ್ರಸಿದ್ಧ ರೂಪದರ್ಶಿಯಾಗುತ್ತಾಳೆ. ನೂರಾರು ಸಂದರ್ಶನಗಳು, ಬೇಕಾದಷ್ಟು ಲೇಖನಗಳು, ಈಕೆಯ ಕುರಿತು ಪ್ರಕಟವಾಗುತ್ತದೆ.
ಇಂತಹ ಸಂದರ್ಭದಲ್ಲಿ ಬಿಬಿಸಿ ಎಂಬ ಚಾನೆಲ್ ಇವಳ ಜೀವನದ ಕುರಿತು ಸಾಕ್ಷಚಿತ್ರ ತೆಗೆಯಲು ನಿರ್ಧರಿಸುತ್ತದೆ. ಇದಕ್ಕೆ ವಾರಿಸ್ ಒಪ್ಪಿಗೆ ಸೂಚಿಸುತ್ತಾಳೆ. ಈ ಸಾಕ್ಷಾ ಚಿತ್ರಕ್ಕೆ ಮೊದಲಿಗೆ ಬದುಕು ಬದಲಿಸಿದ ಆ ದಿನ (The Day That Changed My Life) ಎಂದು ಹೆಸರಿಡಲಾಗಿತ್ತು, ನಂತರ ಚಿತ್ರೀಕರಣದ ಬೆಳವಣಿಗೆ ಗಮನಿಸಿ ಅಂತಿಮವಾಗಿ ನ್ಯೂ ಯಾರ್ಕ್ ನಲ್ಲಿ ಅಲೆಮಾರಿ (A Nomad in New York) ಎಂದು ಹೆಸರಿಡುತ್ತಾರೆ.
ಇಂಥಹ ಸಂದರ್ಭದಲ್ಲಿ ಒಮ್ಮೆ ಅಮೆರಿಕದ ಪ್ರಸಿದ್ಧ ಪ್ಯಾಷನ್ ಜಗತ್ತಿನ ಮೇರಿ ಕ್ಲೇರ್ ಎಂಬ ಪತ್ರಿಕೆ ವಾರಿಸ್ ಡಿರಿಳ ಸಂದರ್ಶನಕ್ಕೆ ಅನುಮತಿ ಕೇಳುತ್ತದೆ. ವಾರಿಸ್ ಅದಕ್ಕೆ ಒಪ್ಪಿಗೆ ಸೂಚಿಸುತ್ತಾಳೆ. ಅದಕ್ಕೂ ಮುಂಚೆ ನೂರಾರು ಸಂದರ್ಶನದಲ್ಲಿ ಅದೇ ಪ್ರಶ್ನೆ ಅದೇ ಉತ್ತರವನ್ನು ಹೇಳಿ ಬೇಸತ್ತಿದ್ದ ವಾರಿಸ್ ಈ ಸಂದರ್ಶನದಲ್ಲಿ ವಿಭಿನ್ನ ವಿಷಯ ಹೇಳುವುದಾಗಿ ಸೂಚಿಸಿದಾಗ ಪ್ರಸಿದ್ಧ ಪತ್ರಿಕೆ ಒಪ್ಪಿಕೊಳ್ಳುತ್ತದೆ. ಆಗ ಅವಳು ಸೋಮಾಲಿಯಾದ ಬುಡಕಟ್ಟು ಜನರಲ್ಲಿ ಆಚರಣೆಯಲ್ಲಿದ್ದ ಯೋನಿ ವಿಚ್ಛೇದನ ಎಂಬ ಅಮಾನುಷ ಕ್ರಿಯೆಯ ಕುರಿತು ಹೇಳುತ್ತಾಳೆ. ಇದನ್ನು ಕೇಳಿದ ಇಡೀ ಅಮೆರಿಕಾದ ನಾಗರಿಕ ಜಗತ್ತು ಬೆಚ್ಚಿ ಬೀಳುತ್ತದೆ. ಈ ಕ್ರಿಯೆ ಸೊಮಾಲಿಯಾದಲ್ಲಿ ಮಾತ್ರವಲ್ಲ ದಕ್ಷಿಣ ಆಫ್ರಿಕಾದ ರಾಷ್ಟ್ರಗಳ ಬಹುತೇಕ ಬುಡಕಟ್ಟು ಕುಟುಂಬಗಳಲ್ಲಿ ತಲತಲಾಂತರ ಗಳಿಂದ ಆಚರಣೆಯಲ್ಲಿರುವ ಒಂದು ಅನಿಷ್ಟ, ಅಮಾನುಷವಾದ ಆಚರಣೆ. ಹೆಣ್ಣು ಮಕ್ಕಳಿಗೆ ಋತುಮತಿಯಾಗುವ ಮುನ್ನ ಆಕೆಯ ಯೋನಿಯ ಹೊರ ಭಾಗದ ಕೆಲವು ಭಾಗ ತೆಗೆದುಹಾಕಿ ಯೋನಿಯನ್ನು ಒಲೆಯುವ ಕ್ರಿಯೆ. ಇದನ್ನು ಇಂಗ್ಲಿಷ್ ಭಾಷೆಯಲ್ಲಿ CIRCUMCISE ಎನ್ನುತ್ತಾರೆ. ಹೆಣ್ಣು ಹುಟ್ಟುವಾಗ ತನ್ನೊಂದಿಗೆ ಕೆಲವು ಅಪವಿತ್ರ ಭಾಗಗಳನ್ನು ಇಟ್ಟುಕೊಂಡು ಜನಿಸುವುದರಿಂದ ಅವಳು ಪವಿತ್ರವಾಗಿ, ಮುಂದಿನ ದಿನಗಳಲ್ಲಿ ವಿವಾಹಕ್ಕೆ ಮತ್ತು ತಾಯಿಯಾಗಲು ಅರ್ಹತೆ ಗಳಿಸಬೇಕಾದರೆ ಯೋನಿ ವಿಚ್ಛೇದನ ಕ್ರಿಯೆಗೆ ಒಳಗಾಗುವುದು ಕಡ್ಡಾಯ. ಇದು ಸೋಮಾಲಿಯದಲ್ಲಿರುವ ನಂಬಿಕೆ. ಆದರೆ ಇದರ ಹಿಂದಿರುವ ಸತ್ಯ ಹೆಣ್ಣು ಪವಿತ್ರ ವಾಗುವುದು ಖಂಡಿತ ಅಲ್ಲ. ದಕ್ಷಿಣ ಆಫ್ರಿಕಾದ ಮುಗ್ಧ ಮತ್ತು ಅಸಹಾಯಕ ಹೆಣ್ಣು ಮಕ್ಕಳ ಮೇಲೆ ಅಲ್ಲಿನ ಪುರುಷ ಪ್ರಧಾನ ಸಮಾಜ ಏರಿರುವ ಕ್ರೂರ ಮತ್ತು ಅಮಾನುಷವಾದ ಪದ್ಧತಿ ಇದಾಗಿದೆ. ಇದರ ಹಿಂದೆ ಆಫ್ರಿಕಾದ ಬುಡಕಟ್ಟು ಜನಾಂಗದಲ್ಲಿ ಮಹಿಳೆಯರು ವಿವಾಹಕ್ಕೆ ಮುನ್ನ ಪರಪುರುಷನೊಂದಿಗೆ ಮಿಲನಗೊಳ್ಳದೆ ಪರಿಶುದ್ಧರಾಗಿ ಇರಬೇಕೆಂಬ ವೈಯಕ್ತಿಕ ಸ್ವಾರ್ಥ ಅಡಗಿದೆ. ದಕ್ಷಿಣ ಆಫ್ರಿಕಾದ ಬುಡಕಟ್ಟು ಪುರುಷ ಪ್ರಧಾನ ಸಮಾಜ ತನ ಸ್ವಾರ್ಥ ಸಾಧನೆಗಾಗಿ ದೇವರನ್ನು ಮತ್ತು ಧರ್ಮವನ್ನು ಯಾವುದೇ ಅಳುಕಿಲ್ಲದೆ ಸಂದರ್ಭಕ್ಕೆ ತಕ್ಕಂತೆ ಕತ್ತಿಯನ್ನಾಗಿ ಬಳಸಿಕೊಂಡಿದೆ. ಈ ಕ್ರಿಯೆಗೆ ಒಳಗಾಗದ ಹೆಣ್ಣು ಮಕ್ಕಳನ್ನು ವಿವಾಹವಾಗಲು ಪುರುಷ ಸಮಾಜ ನಿರಾಕರಿಸುವುದು ಇವತ್ತಿಗೂ ನಡೆದು ಬಂದಿರುವ ಆಚರಣೆಯಾಗಿದೆ. ಆಫ್ರಿಕಾದ ಬುಡಕಟ್ಟು ಸಮಾಜದಲ್ಲಿ ಹೆಣ್ಣು ಜೀವಕ್ಕೂ, ಅವಳ ಭಾವನೆಗಳಿಗೂ, ಯಾವ ಮಹತ್ವವಿಲ್ಲ. ಆಕೆಗೆ ಯಾವ ಬೆಲೆಯೂ ಇಲ್ಲ. ಬುಡಕಟ್ಟು ಜನರು ಸಾಕಿಕೊಂಡಿರುವ ಒಂಟೆ, ಕುರಿ, ಮೇಕೆ, ಮತ್ತು ಕೋಳಿಗಳ ಹಾಗೆ ಅವಳದು ಒಂದು ಜೀವ ಅಷ್ಟೇ. ಇವತ್ತಿಗೂ ಹೆರಿಗೆಯಾದ ನಂತರ ಗಂಡಸರ ಸುಖಕ್ಕೋಸ್ಕರ ಯೋನಿ ಸಡಿಲವಾಗಬಾರದು ಎಂಬ ಕಾರಣಕ್ಕೆ ಹರಿದ ಬಟ್ಟೆ ಒಲೆಯುವ ಹಾಗೆ ಸೂಜಿ ದಾರಗಳ ಮೂಲಕ ಅವೈಜ್ಞಾನಿಕವಾಗಿ ಹೆಣ್ಣು ಮಕ್ಕಳ ಗುಪ್ತಾಂಗಗಳನ್ನು ಒಲೆಯಲಾಗುತ್ತದೆ, ಎಂಬ ಸಂಗತಿಯನ್ನು ಯಾವ ಬಗೆಯಲ್ಲಿ ನಿಮ್ಮೆದುರು ಬಣ್ಣಿಸಲಿ..? ಎಂದು ವಾರಿಸ್ ಅವರೆ ತಮ್ಮ ಆತ್ಮಕಥೆಯಾದ ಮರುಭೂಮಿಯವ ಹೂ ಪುಸ್ತಕದಲ್ಲಿ ವಿವರಿಸಿದ್ದಾರೆ.
ಆಫ್ರಿಕಾ ಖಂಡದ ಬುಡಕಟ್ಟು ಪುರುಷ ಪ್ರಧಾನ ಸಮಾಜ ತನ್ನ ಸ್ವಾರ್ಥ ಸಾಧನೆಗಾಗಿ ರೂಪಿಸಿಕೊಂಡ ಈ ಪದ್ಧತಿಗೆ ಒಳಗಾದ ಹೆಣ್ಣು ಮಕ್ಕಳು ಮೂತ್ರ ವಿಸರ್ಜಿಸುವ ಸಮಯದಲ್ಲಿ ಯೋನಿಯ ಒಳಭಾಗಕ್ಕೆ ಆ್ಯಸಿಡ್ ಸುರಿದ ಅನುಭವವಾಗುತ್ತಿತ್ತು. ಈ ಕ್ರಿಯೆಗೆ ಒಳಗಾದ ಹೆಣ್ಣು ಮಕ್ಕಳಿಗೆ ಪ್ರತಿ ತಿಂಗಳು ಋತುಸ್ರಾವದ ವೇಳೆ ಯಲ್ಲಂತೂ ನೋವಿನ ನರಕವನ್ನೇ ಅನುಭವಿಸಬೇಕಾಗಿತ್ತು. ತಡೆದಿದ್ದ ಮೂತ್ರವನ್ನು ಸರಾಗವಾಗಿ ವಿಸರ್ಜಿಸಲಾಗದೆ ಹನಿಹನಿಯಾಗಿ ಎಂಟರಿಂದ ಹತ್ತು ನಿಮಿಷಗಳ ಕಾಲ ವಿಸರ್ಜಿಸಬೇಕಿತ್ತು. ಈ ಅಮಾನುಷ ಕ್ರಿಯೆಗೆ ಬಳಸಲಾಗುವ ಹಳೆಯದಾದ ಬ್ಲೇಡು ಮತ್ತು ತುಕ್ಕು ಹಿಡಿದ ಚಾಕು, ಕತ್ತರಿ ಇವುಗಳ ಬಳಕೆಯಿಂದಾಗಿ ಸೋಂಕು ತಗಲಿ ಟೈಟಾನಸ್ ಕಾಯಿಲೆ ಇಲ್ಲವೇ ತೀವ್ರವಾದ ರಕ್ತಸ್ರಾವದಿಂದ ಸಾವನ್ನಪ್ಪುತ್ತಿದ್ದರು. ಇಂತಹ ಅಮಾನುಷ, ಅನಿಷ್ಟ ಪದ್ದತಿಯನ್ನು ಮತ್ತು ಇದರಿಂದ ಉಂಟಾಗುವ ಪರಿಣಾಮವನ್ನು ಸಂದರ್ಶನದಲ್ಲಿ ವಾರಿಸ್ ಹೇಳಿದಾಗ ಹೆಣ್ಣೊಬ್ಬಳ ಯೋನಿ ಛೇದನದ ದುರಂತ ಕಥೆ ಎಂಬ ಶೀರ್ಷಿಕೆಯಡಿ ಮೇರಿ ಕ್ಲೈರ್ ಎಂಬ ಪತ್ರಿಕೆಯಲ್ಲಿ ಪ್ರಕಟವಾದಾಗ ಅಮೆರಿಕದ ಇಡೀ ನಾಗರಿಕ ಸಮಾಜ ಒಮ್ಮೆ ಬೆಚ್ಚಿ ಬಿದ್ದಿತ್ತು. ಆಫ್ರಿಕಾದ ಪುರುಷ ಸಮಾಜ ತನ್ನ ಸ್ವಾರ್ಥ ಸಾಧನೆಗಾಗಿ ಅಲ್ಲಿನ ಮುಗ್ಧ ಮತ್ತು ಅಸಹಾಯಕ ಹೆಣ್ಣು ಮಕ್ಕಳ ಮೇಲೆ ಏರಿದಂತಹ ಒಂದು ಅನಿಷ್ಟ ಮತ್ತು ಅಮಾನುಷ ಪದ್ಧತಿ ಇದಾಗಿದೆ.
20/20 ಎಂಬ ಪ್ರಸಿದ್ಧ ಟಿವಿ ಜಗತ್ತಿನ ನಿರೂಪಕಿ ಯುರೋಪಿನಿಂದ ಅಮೆರಿಕಕ್ಕೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ *ಮೇರಿ ಕ್ಲೈರ್* ಪತ್ರಿಕೆಯಲ್ಲಿನ ಸಂದರ್ಶನ ನೋಡಿ ತಮ್ಮ ಚಾನಲ್ಗೆ ಸಂದರ್ಶನ ನೀಡಲು ವಾರೀಸ್ ಡೀರಿ ಅವರನ್ನು ಕೇಳಿಕೊಳ್ಳುತ್ತಾರೆ. ಇದಕ್ಕೆ ಒಪ್ಪಿಗೆ ಸೂಚಿಸುತ್ತಾರೆ ವಾರೀಸ್ ಡೀರಿ. 20/20 ಎಂಬ ಚಾನೆಲ್ ನಲ್ಲಿ "ಎ ಹೀಲಿಂಗ್ ಜರ್ನಿ" ಎಂಬ ಹೆಸರಿನಲ್ಲಿ ಪ್ರಸಾರವಾದ ಈ ಕಾರ್ಯಕ್ರಮವನ್ನು ವಿಶ್ವ ಸಂಸ್ಥೆಯ ರಾಯಭಾರಿಗಳು ನೋಡಿ ಆಫ್ರಿಕಾದಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿದ್ದ ಬರ್ಬರ ಗುಪ್ತಾಂಗ ಛೇದನ ಕ್ರಿಯೆ ಕುರಿತು ಅರಿವು ಮೂಡಿಸಲು ಜಾಗೃತಿ ಆಂದೋಲನವನ್ನು ಹಮ್ಮಿಕೊಂಡಿತ್ತು. ಈ ಆಂದೋಲನದ ರಾಯಭಾರಿಯಾಗಿ ವಾರೀಸ್ ನನ್ನು ನೇಮಿಸುತ್ತದೆ. ವಾರೀಸ್ ಡೀರಿ ಇಂತಹ ಅನಿಷ್ಟ ಪದ್ದತಿಯ ವಿರುದ್ಧ ಜಾಗೃತಿ ಮೂಡಿಸಿದ್ದಲ್ಲದೆ, ವಿಯಾನ್ನದಲ್ಲಿ "ಡೆಸರ್ಟ್ ಫ್ಲವರ್ ಫೌಂಡೇಶನ್" ಎಂಬ ಸಂಸ್ಥೆಯನ್ನು ಸ್ಥಾಪಿಸಿ ಈ ಕ್ರಿಯೆಯ ವಿರುದ್ಧ ಹೋರಾಡುತ್ತೇನೆಂದು ನಿರ್ಧರಿಸುತ್ತಾಳೆ. ತನ್ನ ಎಲ್ಲಾ ಆದಾಯವನ್ನು ಸಂಸ್ಥೆಗೆ ಸುರಿಯುತ್ತಾಳೆ.
ಮರುಭೂಮಿಯಿಂದ ಬಂದ ಅಲೆಮಾರಿ ಹೆಣ್ಣು ಜಗತ್ ಪ್ರಸಿದ್ಧ ರೂಪದರ್ಶಿಯಾದ ನಂತರ ಗೆಲುವಿನ ಹುಮ್ಮಸ್ಸಿನಲ್ಲಿ ಮೈಮರೆಯಲಿಲ್ಲ, ನಾನು ಗೆದ್ದೆ ಎಂದು ಬೀಗಲಿಲ್ಲ, ಆಫ್ರಿಕಾ ಎಂಬ ಕಗ್ಗತ್ತಲ್ಲ ಖಂಡದ ಒಬ್ಬೊಬ್ಬ ಹೆಣ್ಣುಮಗಳು ಯೋನಿ ಛೇದನವೆಂಬ ಶಿಕ್ಷೆಗೆ ಗುರಿಯಾಗದೆ ಪ್ರತಿದಿನ ಅದನ್ನು ನಿರಾಕರಿಸಿ ಹೊರ ಬರಬೇಕು, ಆಫ್ರಿಕಾ ರಾಷ್ಟ್ರಗಳಲ್ಲಿ ಜಾರಿಯಲ್ಲಿರುವ ಈ ಅನಿಷ್ಟ ಪದ್ದತಿ ಕಾನೂನು ಬಾಹಿರ ಎಂದು ಸರ್ಕಾರಗಳು ಘೋಷಿಸಬೇಕು, ಸೊಮಾಲಿಯಾದಲ್ಲಿ ಹೆಣ್ಣು ಮಕ್ಕಳಿಗೆ ಯೋನಿ ಛೇದನ ಎಂಬ ಶಿಕ್ಷೆಯನ್ನು ನಿರ್ಬಂಧಿಸಲಾಗಿದೆ, ಎಂಬ ಸುದ್ದಿಯನ್ನು ನಾನು ಕೇಳಬೇಕು, ಅಂದು ಮಾತ್ರ ನನ್ನ ಬದುಕು ಈ ಹೋರಾಟ ಸಾರ್ಥಕ ಎನ್ನುತ್ತಾಳೆ ವಾರಿಸ್ ಡೀರಿ.
ವಾರಿಸ್ ಬೆಳೆದು ಬಂದ ದಾರಿ ಅಷ್ಟೊಂದು ಸುಗಮವಾಗಿರಲಿಲ್ಲ. ಆಕೆ ನೂರಾರು ಕಿಲೋಮೀಟರ್ ಮರುಭೂಮಿಯನ್ನು ಬರಿಗಾಲಲ್ಲಿ ದಾಟುವಾಗ ಮರಳಿನ ಕಣಗಳು ಕಾಲಿನೊಳಗೆ ಸಿಲುಕಿ ಕಾಲಿನಿಂದ ರಕ್ತ ಸೋರುತ್ತದೆ. ಮೊಗದಿಶು ನಗರಕ್ಕೆ ಹೋಗುವಾಗ ಅವಳ ಮೇಲೆ ಅತ್ಯಾಚಾರದ ಪ್ರಯತ್ನ ನಡೆಯುತ್ತದೆ. ಅಲ್ಲಿಂದ ತಪ್ಪಿಸಿಕೊಂಡು ಮೊಗದಿಶು ನಗರ ತಲುಪಿದಾಗ ಅಲ್ಲಿ ಅವಳ ಅಸಹಾಯಕತೆ ಅರಿತ ವ್ಯಕ್ತಿ ಒಬ್ಬ ಅವಳ ಮೇಲೆ ಅತ್ಯಾಚಾರದ ಪ್ರಯತ್ನ ನಡೆಸುತ್ತಾನೆ. ಲಂಡನ್ ನಗರದ ಚಿಕ್ಕಮ್ಮನ ಮನೆಯಲ್ಲಿರುವಾಗ ಚಿಕ್ಕಮ್ಮನ ಮಗ, ತನ್ನ ಸ್ವಂತ ಅಣ್ಣನೇ ಇವಳ ಮೇಲೆ ಅತ್ಯಾಚಾರದ ಪ್ರಯತ್ನ ನಡೆಸುತ್ತಾನೆ. ಮನುಷ್ಯ ಸಂಬಂಧಕ್ಕೆ ಬೆಲೆನೇ ಇಲ್ಲವೇ ಎಂದುಕೊಳ್ಳುತ್ತಾಳೆ ವಾರೀಸ್ ಡೀರಿ. ಮರುಭೂಮಿಯ ಕಗ್ಗತ್ತಲ ಖಂಡದಲ್ಲಿ ಹುಟ್ಟಿ ಅಲ್ಲಿಂದ ಹೊರ ಬಂದು ತನ್ನ ಮೇಲಾದ ಅಮಾನುಷ ಕ್ರಿಯೆಯಿಂದ ಹೊರ ಬಂದಿದ್ದಲ್ಲದೆ ಅದರ ವಿರುದ್ಧ ಧ್ವನಿ ಎತ್ತಿ ಹೋರಾಟಕ್ಕೆ ಇಳಿದ ವಾರಿಸ್ ಡೀರಿ ಒಬ್ಬ ಧೀಮಂತ ವೀರಯೇ ಸರಿ. ಆಕೆಯ ಗಟ್ಟಿತನಕ್ಕೆ ನನ್ನದೊಂದು ನಮನ.
ಡೆಸರ್ಟ್ ಫ್ಲವರ್ ಎಂಬ ಹೆಸರಿನಲ್ಲಿ ಇಂಗ್ಲಿಷ್ ನಲ್ಲಿ ಪ್ರಕಟವಾದ ಈ ಕೃತಿಯನ್ನು ಡಾಕ್ಟರ್ ಏನ್. ಜಗದೀಶ್ ಕೊಪ್ಪ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿಗೆ "ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ ಅತ್ಯುತ್ತಮ ಅನುವಾದ ಕೃತಿ ಪ್ರಶಸ್ತಿ ಸಂದಿದೆ". ವಾರಿಸ್ ಡೀರಿ ಕುರಿತ ಸಾಕ್ಷಾ ಚಿತ್ರ ಯೂಟ್ಯೂಬ್ ನಲ್ಲಿ ಈಗಲೂ ಲಭ್ಯವಿದೆ.
"ತಂತ್ರಜ್ಞಾನದ ಅಮಲೇರಿ ಕುಣಿಯುತ್ತಿರುವ ಯುವ ಜನತೆ ಒಮ್ಮೆಯಾದರೂ ಈ ಪುಸ್ತಕ ಓದಿ "ಸ್ಪೂರ್ತಿ ಮತ್ತು ಜಾಗೃತಿ" ಪಡೆಯಬೇಕಾದಂತಹ ಕಥೆ ಇದು. ಗಟ್ಟಿತನವನ್ನೇ ಬದುಕಾಗಿಸಿದ ಹೆಣ್ಣು ಮಗಳೊಬ್ಬಳ ಕಥೆ, ಸೋತು ಸತ್ತೋರಿಗೋ ಸ್ಪೂರ್ತಿ ತುಂಬೋ ಕಥೆ, ಎಲ್ಲಕ್ಕಿಂತ ಹೆಚ್ಚಾಗಿ ಇದು ವಿಧಿಯನ್ನೇ ಮೆಟ್ಟಿ ನಿಂತವಳ ಬದುಕಿನ ಕಥೆ".
ಜಾಲತಾಣ ದಲ್ಲಿ ಸಿಕ್ಕ ಸಾಲುಗಳಿವು...
- ವಿಶ್ವನಾಥ ಜಿ ಹೆಚ್.
ಸ್ವತಂತ್ರ ಬರಹಗಾರ
ಸೊರಬ (ತಾ) ಶಿವಮೊಗ್ಗ (ಜಿ)
ಸಂಪಾದಕೀಯ ನುಡಿ: ಬದುಕು ಬದಲಿಸುವ ಹಂಬಲಕ್ಕೆ ಸಾಕ್ಷಿ ಈ 'ಮರುಭೂಮಿಯ ಹೂ’
ಬದುಕು ಎಂಬುದು ಎಲ್ಲರಿಗೂ ಹೂವಿನ ಹಾಸಿಗೆಯಲ್ಲ. ಕೆಲವರಿಗೆ ಅದು ಸುಡು ಮರಳಿನ ಮರುಭೂಮಿ. ಆದರೆ, ಅದೇ ಸುಡುವ ಮರಳಿನ ನಡುವೆ ಬಿರಿಯುವ ಹೂವು ಜಗತ್ತಿಗೆ ಹೊಸ ಸುಗಂಧವನ್ನು ನೀಡಬಲ್ಲದು ಎಂಬುದಕ್ಕೆ ವಾರೀಸ್ ಡೀರಿ ಅವರ ಜೀವನವೇ ಸಾಕ್ಷಿ.
ಕನ್ನಡ ಗ್ಲೋಬಲ್‌ನ ಈ ವಾರದ 'ಭಾನುವಾರದ ವಿಶೇಷ' ಸಂಚಿಕೆಯಲ್ಲಿ ನಾವು ಅಂತಹ ಒಬ್ಬ ಧೀಮಂತ ಮಹಿಳೆಯ ಹೋರಾಟದ ಕಥೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಸೋಮಾಲಿಯಾದ ಅಲೆಮಾರಿ ಬುಡಕಟ್ಟು ಜನಾಂಗದಲ್ಲಿ ಜನಿಸಿ, ಸಂಪ್ರದಾಯದ ಹೆಸರಿನಲ್ಲಿ ನಡೆಯುವ ಅನಿಷ್ಟ ಪದ್ಧತಿಗಳಿಗೆ ಬಲಿಯಾಗಿ, ನಂತರ ಅಲ್ಲಿಂದ ತಪ್ಪಿಸಿಕೊಂಡು ಬಂದು ಜಗತ್ತಿನ ಗಮನ ಸೆಳೆದ ರೂಪದರ್ಶಿಯಾದ ಈಕೆಯ ಕಥೆ ಕೇವಲ ಯಶೋಗಾಥೆಯಲ್ಲ; ಇದು ಹೆಣ್ಣಿನ ಅಸ್ಮಿತೆ ಮತ್ತು ಅವಳ ಮೇಲಾಗುವ ದೌರ್ಜನ್ಯಗಳ ವಿರುದ್ಧದ ಮಹಾನ್ ದನಿ.
ನಮ್ಮ ಸಮಾಜದಲ್ಲಿ ಇಂದಿಗೂ ನೂರಾರು ಮೌಢ್ಯಗಳು ಆಚರಣೆಯಲ್ಲಿವೆ. ಅಂತಹ ಕಂದಾಚಾರಗಳನ್ನು ಮೆಟ್ಟಿ ನಿಂತು, ತನ್ನ ನೋವನ್ನೇ ಜಗತ್ತಿನ ಜಾಗೃತಿಯನ್ನಾಗಿ ಬದಲಿಸಿದ ವಾರೀಸ್ ಅವರ ಜೀವನ ಪಯಣ ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಲಿ ಎಂಬುದು ನಮ್ಮ ಆಶಯ. ಯುವ ಬರಹಗಾರ ವಿಶ್ವನಾಥ ಜಿ. ಹೆಚ್. ಅವರು ಈ ಕಥೆಯನ್ನು ಅತ್ಯಂತ ಮನಕಲಕುವಂತೆ ಕಟ್ಟಿಕೊಟ್ಟಿದ್ದಾರೆ.
- ಸಂಪಾದಕರು, ಕನ್ನಡ ಗ್ಲೋಬಲ್ ನ್ಯೂಸ್.
No comments:
Post a Comment