ಭಾನುವಾರದ ವಿಶೇಷ: ಅನುಭವಗಳೇ ವಿಶ್ವವಿದ್ಯಾಲಯ; ಪೃಥ್ವಿ ಅಂಬರ್ ಬದುಕಿನ ವಿಶಿಷ್ಟ ಪಾಠಗಳು — ಲತಿಕಾ ಗಣಪತಿ - Kannada global

Breaking

Saturday, April 4, 2026

ಭಾನುವಾರದ ವಿಶೇಷ: ಅನುಭವಗಳೇ ವಿಶ್ವವಿದ್ಯಾಲಯ; ಪೃಥ್ವಿ ಅಂಬರ್ ಬದುಕಿನ ವಿಶಿಷ್ಟ ಪಾಠಗಳು — ಲತಿಕಾ ಗಣಪತಿ


ಪೃಥ್ವಿ ನೀ ವಿಶಿಷ್ಟ

ಅನುಭವಗಳು ಕಲಿಸುವ ಪಾಠವನ್ನು ಜಗತ್ತಿನ ಯಾವ ವಿಶ್ವವಿದ್ಯಾಲಯಗಳೂ ಕಲಿಸಲು ಸಾಧ್ಯವಿಲ್ಲ. ಎಲ್ಲೋ ಓದಿದ ಮಾತು, ಬಹು ನೈಜ ಮತ್ತು ಅರ್ಥಗರ್ಭಿತವಾದುದು. ಹೌದು, ಒಂದು ಘಟನೆ ನಮ್ಮ ಬದುಕಿನಲ್ಲಿ ಸಂಭವಿಸಿದಾಗ ಅಥವಾ ಯಾವುದೇ ವ್ಯಕ್ತಿಯನ್ನು ಬಹು ಹತ್ತಿರದಿಂದ ನೋಡಿದಾಗ ಅಥವಾ ಯಾವುದೋ ವಿಷಯವನ್ನು ಅರ್ಥೈಸಿಕೊಂಡಾಗ ಮಾತ್ರ ಅದರ ಒಳತಿರುವನ್ನು ಅರಿಯಲು ಸಾಧ್ಯ. ನಿರಂತರ ಕಲಿಕೆಯಿಂದ ಅನುಭವಗಳು ಸೃಷ್ಟಿಯಾಗುತ್ತವೆ. ಅನುಭವಗಳು ಬದುಕಿನ ಮುಂದಿನ ತಿರುವಿನ ದಾರಿದೀಪವಾಗಿ ಪರಿವರ್ತನೆಗೊಳ್ಳುತ್ತವೆ.


ಇದೆಲ್ಲದರ ಪೀಠಿಕೆಗೆ ಮುಖ್ಯ ಕಾರಣ ಗೊತ್ತೇ? ನಾನು ನನ್ನ ಅನುಭವಗಳನ್ನು ಗೀಚುವ ಹುಚ್ಚನ್ನು ಹೆಚ್ಚಾಗಿಸಿಕೊಂಡವಳು. ಅಂತೆಯೇ ಒಬ್ಬ ವ್ಯಕ್ತಿಯ ಬದುಕಿನ ಬಗ್ಗೆ ತಿಳಿದುಕೊಳ್ಳುವ ಹಂಬಲದಿಂದ ಆಗಾಗ ಪಾಡ್‌ಕಾಸ್ಟ್ (Podcast) ಗಳನ್ನು ನೋಡುತ್ತಿರುತ್ತೇನೆ. ಪ್ರತಿಯೊಬ್ಬರಲ್ಲಿ ಒಂದೊಂದು ನವನವೀನ ವಿಶೇಷ ಗುಣಗಳು ಇರುತ್ತವೆ. ಅಂತಹ ವಿಶೇಷತೆಯನ್ನು ಹುಡುಕುವ ಚಪಲದಿಂದ ಸಮಯ ಸಿಕ್ಕಾಗಲೆಲ್ಲ ಪಾಡ್‌ಕಾಸ್ಟ್ ಕೇಳುವ ಕೆಲಸ ಸರಾಗವಾಗಿ ನಡೆಯುತ್ತಿರುತ್ತದೆ. ಹೀಗೆ ನೋಡುತ್ತಿರುವಾಗ 'ದಿಯಾ' ಸಿನಿಮಾದ ಹೀರೋ ಪೃಥ್ವಿ ಅವರ ವಿಡಿಯೋ ಕಣ್ಣಿಗೆ ಕಾಣಿಸಿದ್ದರಿಂದ ನೋಡಲು ನಿರ್ಧರಿಸಿದೆ. ಬಹುವಾಗಿ ನಾನು ಪುಸ್ತಕಗಳನ್ನು ಓದುವುದರ ಜೊತೆಗೆ ಆಗಾಗ ಸಿನಿಮಾಗಳನ್ನು ಹೆಚ್ಚಾಗಿಯೇ ನೋಡುತ್ತೇನೆ. ಸಿನಿಮಾಗಳು ನಮ್ಮ ವಿಚಾರಗಳನ್ನು ವಿಸ್ತರಿಸುವುದರ ಜೊತೆಗೆ ನಮ್ಮ ಭಾವನೆಗಳನ್ನು ಸೇರುವ ಸಾಹಸ ಮಾಡುತ್ತವೆ ಎಂಬುದು ನನ್ನ ನಂಬಿಕೆ. ಮನಸ್ಸಿಗೆ ಬಹುವಾಗಿ ಹಿಡಿಸಿದ ಸಿನಿಮಾಗಳಲ್ಲಿ 'ದಿಯಾ' ಕೂಡ ಒಂದು.

ನಮ್ಮದೇ ಕಾಲೇಜಿನ 'ಝೇಂಕಾರ' ಕಾರ್ಯಕ್ರಮದ ಸ್ಟಾರ್ ನೈಟ್‌ಗೆ ಪೃಥ್ವಿ ಅಂಬರ್ ಅತಿಥಿಯಾಗಿ ಬರುತ್ತಾರೆಂದು ತಿಳಿದಾಗ, ಅವರ ಬದುಕು-ಭವಣೆಗಳನ್ನು ಅರಿಯುವ ಕುತೂಹಲದಿಂದ ಪಾಡ್‌ಕಾಸ್ಟ್ ನೋಡುವುದರ ಜೊತೆಗೆ 'ದಿಯಾ' ಸಿನಿಮಾವನ್ನು ಮತ್ತೊಮ್ಮೆ ನೋಡಿದೆ. ಬಹು ಸಾದಾಸೀದ ಮನುಷ್ಯ ಇವರು. ನಾನು ವ್ಯಕ್ತಿಗಳನ್ನು ಇಷ್ಟಪಡುವುದು ಬಹಳ ಕಡಿಮೆ, ಆದರೆ ವ್ಯಕ್ತಿತ್ವಗಳನ್ನು ಬಹುವಾಗಿ ಇಷ್ಟಪಡುತ್ತೇನೆ. ಸರಳ ವ್ಯಕ್ತಿತ್ವದ ಇವರ ಬದುಕನ್ನು ಆಪ್ತವಾಗಿ ಅರಿತವರು ಇವರ ಬಗ್ಗೆ ಇನ್ನಷ್ಟು ಮಾಹಿತಿಯನ್ನು ನೀಡಿದಾಗ ಅವರ ಮೇಲಿನ ಗೌರವ ಹೆಚ್ಚಾಯಿತು.

ಜೀವನದಲ್ಲಿ ಪರಿಚಯವಾದ ಪ್ರತಿಯೊಬ್ಬರಿಂದಲೂ ತಿಳಿಯುವ, ಕಲಿಯುವ ಹಲವು ಅಂಶಗಳಿರುತ್ತವೆ. ಅದನ್ನು ಹುಡುಕಿ ಅಳವಡಿಸಿಕೊಳ್ಳುವ ಹಂಬಲ ಇರಬೇಕಷ್ಟೇ. ಒಬ್ಬ ಡ್ಯಾನ್ಸರ್ ಆಗಿ ಪ್ರಾರಂಭವಾದ ಇವರ ಬದುಕಿನ ಜರ್ನಿ, ಮಂಗಳೂರಿನಲ್ಲಿ ಆರ್.ಜೆ (R.J) ಆಗಿ ಮುಂದುವರಿಯಿತು. ಕಿರುಚಿತ್ರ ನಿರ್ದೇಶನ ಮಾಡುವ ಮುಖಾಂತರ ಸಿನಿಮಾ ರಂಗಕ್ಕೆ ಮೊದಲ ಹೆಜ್ಜೆ ಇಟ್ಟರು. ಇಲ್ಲಿ ಇವರ ವೈಯಕ್ತಿಕ ಜೀವನವನ್ನು ತಿಳಿದುಕೊಳ್ಳುವುದಕ್ಕಿಂತ ಹೆಚ್ಚಾಗಿ, ಅವರ ವಿಚಾರಗಳನ್ನು ಮತ್ತು ಬದುಕುವ ಕಲಿಕೆಯನ್ನು ತಿಳಿಯುವ ಪ್ರಯತ್ನ ಒಳ್ಳೆಯದೆಂದು ನನ್ನ ಅಭಿಪ್ರಾಯ. ಅಂತೆಯೇ ಬದುಕಿನ ಅನಿವಾರ್ಯತೆಗಾಗಿ ಆರ್.ಜೆ ಆಗಿ ಹೊರಹೊಮ್ಮಿದ ಇವರು, ಮನತಣಿಸುವ ಮಾತುಗಾರಿಕೆಯನ್ನು ತಮ್ಮದಾಗಿಸಿಕೊಂಡರು. ಕೊನೆಗೆ 'ದಿಯಾ' ಸಿನಿಮಾದ ಮುಖಾಂತರ ಚಿತ್ರರಂಗದಲ್ಲಿ ತಮ್ಮದೇ ಆದ ಹೊಸ ಛಾಪು ಮೂಡಿಸಿ, ನೋದುಗರ ಕಣ್ಣಿಗೆ ಮನೆಮಗ 'ಆದಿ'ಯಂತೆ ಮಿಂಚಿದ್ದಲ್ಲದೆ, ಜನಮನ್ನಣೆಗೆ ಪಾತ್ರವಾದರು.

ಇನ್ನು ಇವರ ವಿಚಾರ ಶೈಲಿಯತ್ತ ಕಣ್ಣು ಹಾಯಿಸುವುದಾದರೆ, ಇವರ ಅದೆಷ್ಟೋ ನವನವೀನ ವಿಚಾರಗಳನ್ನು ನಾವು ಅಳವಡಿಸಿಕೊಳ್ಳಬೇಕು. ಆಗ ಎಂತಹ ಪರಿಸ್ಥಿತಿಯಲ್ಲೂ ಬದುಕನ್ನು ಎದುರಿಸಿ ನಿಲ್ಲುವ ಶಕ್ತಿ ದಕ್ಕುತ್ತದೆ ಎನ್ನುವುದಕ್ಕೆ ಇವರೇ ಸಾಕ್ಷಿ. ಸದಾ ಕಲಿಕೆಯಲ್ಲಿ ನಿರತರಾಗಿರಬೇಕು, ಬದುಕು ಕಲಿಸುವ ಪಾಠ ಎಂದಿಗೂ ನಷ್ಟವಲ್ಲ; ಅದು ಒಂದಲ್ಲ ಒಂದು ರೀತಿಯಲ್ಲಿ ನಮ್ಮನ್ನು ಸದೃಢಗೊಳಿಸುತ್ತದೆ. ಬದುಕು ಬಂದಂತೆ ಸ್ವೀಕರಿಸಬೇಕೇ ವಿನಃ ನಮ್ಮದೇ ನಿರೀಕ್ಷೆಗಳೊಟ್ಟಿಗೆ ಕಾಲ ಕಳೆಯುತ್ತಿದ್ದರೆ ಕಾಲ ಉರುಳುತ್ತದೆಯೇ ಹೊರತು ಬದುಕು ಮುಂದೆ ಸಾಗುವುದಿಲ್ಲ. "ಮನುಷ್ಯತ್ವವಿಲ್ಲದ ಮನುಷ್ಯ ತೃಣಕ್ಕೆ ಸಮಾನ" ಎಂಬಂತೆ ಗೌರವ ಕೊಟ್ಟು ಗೌರವ ಪಡೆದುಕೊಳ್ಳುವ ಮನುಷ್ಯ ಎಂದಿಗೂ ಸೋಲಲಾರ. ಅಹಂಕಾರವನ್ನು ದತ್ತು ಪಡೆಯುವ ಮೊದಲು ಒಳ್ಳೆಯ ವ್ಯಕ್ತಿತ್ವವನ್ನು ಅಳವಡಿಸಿಕೊಳ್ಳುವುದರಿಂದ ಬದುಕಿನ ಅದೆಷ್ಟೋ ಸೆಣಸಾಟದ ಮೈಲುಗಳನ್ನು ದಾಟಿ ಮುಂದೆ ಸಾಗಬಹುದು. ವ್ಯಕ್ತಿ ಮತ್ತು ವ್ಯಕ್ತಿತ್ವದ ನಡುವೆ ಪಾಂಡಿತ್ಯ ಮುಖ್ಯ ಪಾತ್ರ ವಹಿಸುತ್ತದೆ. ನಮ್ಮಿಷ್ಟದ ಕ್ಷೇತ್ರದಲ್ಲಿ ನಿಪುಣರಾದರೆ ಹಾಗೂ ಅದರ ಬಗ್ಗೆ ಬಹುವಾಗಿ ಅಧ್ಯಯನ ನಡೆಸಿದಾಗ ದಕ್ಕುವ ಜ್ಞಾನ ಮುಂದಿನ ಬದುಕಿಗೆ ಮೈಲಿಗಲ್ಲು ಎನ್ನುವುದು ಸುಳ್ಳಲ್ಲ.

ಪ್ರತಿನಿತ್ಯದ ಜೀವನದಲ್ಲಿ ಹವ್ಯಾಸಗಳು ಬಹುಮುಖ್ಯವಾದವು. ಓದುವುದು, ಅನುಭವಗಳನ್ನು ಗೀಚುವುದು, ಪ್ರವಾಸ ಹೋಗುವುದು, ಸಿನಿಮಾ ನೋಡುವುದು - ಹೀಗೆ ಹತ್ತು ಹಲವು. ಆದರೆ ನಮ್ಮ ಹವ್ಯಾಸಗಳು ದಿನ ಕಳೆದಂತೆ ನಮ್ಮನ್ನು ಗಟ್ಟಿಗೊಳಿಸಬೇಕು. ಪುಸ್ತಕಗಳು ಬದುಕಿನ 'ಮ್ಯಾಜಿಕ್ ಚೇಂಜರ್'ಗಳು. ನಮ್ಮನ್ನು ನಾವು ಅರಿಯುವುದರ ಜೊತೆ ಬದುಕನ್ನು ನೋಡುವ ದೃಷ್ಟಿಯನ್ನು ಬದಲಿಸುವ ಕೆಲಸ ಮಾಡುತ್ತಲೇ ಇರುತ್ತವೆ. ನೆಮ್ಮದಿಯನ್ನು ನೀಡುವುದರ ಜೊತೆಗೆ ಜ್ಞಾನದ ಜ್ಯೋತಿಯನ್ನು ಹತ್ತಿಸುತ್ತಲೇ ಇರುತ್ತವೆ.

'Create your own opportunity' ಎಂಬಂತೆ ನಮ್ಮ ಬದುಕಿನ ಅವಕಾಶಗಳನ್ನು ನಾವೇ ಸೃಷ್ಟಿ ಮಾಡಿಕೊಳ್ಳುವ ಕಲೆ ಕಲಿತಾಗ ಮಾತ್ರ ಬದುಕಿನ ಪ್ರತಿ ಕ್ಷಣವನ್ನು ಸಂಭ್ರಮಿಸಲು ಸಾಧ್ಯ. ಆಸಕ್ತಿ ಬದುಕಿನ ಅವಿಭಾಜ್ಯ ಅಂಗವಾಗಬೇಕು, ಆಗ ಬದುಕು ಅವಕಾಶಗಳ ಜೊತೆ ಯಶಸ್ಸನ್ನು ನೀಡುತ್ತದೆ. ಇದೆಲ್ಲದರ ಜೊತೆಗೆ ತನ್ನೊಟ್ಟಿಗೆ ಇರುವವರ ಭವಿಷ್ಯದ ಯಶಸ್ಸಿನ ಕನಸು ಕಾಣುತ್ತಿರುವ ಇವರ ವ್ಯಕ್ತಿತ್ವ ಬಹು ಇಷ್ಟವಾಯಿತು. ಮನುಷ್ಯನನ್ನು ಗಮನಿಸಿದಷ್ಟು (Observation) ನಾವು ಸದೃಢವಾಗುತ್ತೇವೆ ಎನ್ನುವುದು ಇವರ ತತ್ವ. ಈ ತತ್ವ ಪ್ರಸ್ತುತತೆಯ ಜೊತೆಗೆ ಬದುಕುವ ಕಲೆ ಕಲಿಸಿದೆ ಎನ್ನುತ್ತಾರೆ.

ನಮ್ಮ ಕಾಲೇಜಿನ 'ಝೇಂಕಾರ' ಕಾರ್ಯಕ್ರಮದಲ್ಲಿ ಇವರನ್ನು ನೋಡಿದಾಗ, ಇವರು ತಮ್ಮ ಮಾತಿಗಿಂತ ವ್ಯಕ್ತಿತ್ವವನ್ನು ಬಹು ಗಟ್ಟಿಗೊಳಿಸಿಕೊಂಡಿದ್ದಾರೆ ಎಂದೆನಿಸಿತು. ಸದಾ ಮುಗುಳುನಗೆ ಹೊತ್ತು ಎಲ್ಲರೊಟ್ಟಿಗೆ ತಾನೂ ಒಬ್ಬ ಎನ್ನುವಂತೆ ಕಾಣಿಸಿಕೊಂಡ ಇವರ ಸರಳತೆ ಎಲ್ಲರನ್ನೂ ಸೆಳೆದಿದ್ದು ಸುಳ್ಳಲ್ಲ. ಅಮ್ಮನನ್ನು ಬಹುವಾಗಿ ಪ್ರೀತಿಸುವ ಇವರು, ಅವರನ್ನೇ ಬದುಕಿನ ಸ್ಫೂರ್ತಿಯನ್ನಾಗಿ ಮಾಡಿಕೊಂಡು ಬದುಕನ್ನು ಸಂಭ್ರಮಿಸುತ್ತಿದ್ದಾರೆ. ಸಿನಿಮಾ ಹೀರೋ ಎಂದಾಕ್ಷಣ ಕೇವಲ ಅವರ ಅಭಿಮಾನಿ ಎಂದು ಹೇಳಿಕೊಳ್ಳುವ ನಾವು, ಅವರ ವ್ಯಕ್ತಿತ್ವ ಅರಿಯುವ ಗೋಜಿಗೆ ಹೋಗುವುದೇ ಇಲ್ಲ. ಅವರ ಒಳ್ಳೆ ಗುಣಗಳನ್ನು, ವಿಚಾರಗಳನ್ನು ಅಳವಡಿಸಿಕೊಂಡಾಗ ಮಾತ್ರ ನಾವು ನಿಜವಾದ ಅಭಿಮಾನಿಗಳಾಗುತ್ತೇವೆ ಎಂಬುದು ನನ್ನ ಅಭಿಪ್ರಾಯ.

ಪೃಥ್ವಿ ಎಂದರೆ ಭೂಮಿ. ಭೂಮಿಯಷ್ಟೇ ವಿಶಾಲ ಮನಸ್ಥಿತಿಯವರಾದ ಇವರು ವಿಶಿಷ್ಟ ವಿಚಾರಗಳ ಜೊತೆ ಸರಳತೆಯನ್ನು ಮೈಗೂಡಿಸಿಕೊಂಡಿದ್ದಾರೆ.

— ಲತಿಕಾ ಗಣಪತಿ
MSC in Psychology SDM PG Centre Ujire


ಸಂಪಾದಕೀಯ ನುಡಿ:

ಅನುಭವಗಳೇ ಬದುಕಿನ ನಿಜವಾದ ಅಡಿಪಾಯ. ಲೇಖಕಿ ಲತಿಕಾ ಗಣಪತಿ ಅವರು ನಟ ಪೃಥ್ವಿ ಅಂಬರ್ ಅವರ ಜೀವನದ ಹಾದಿಯನ್ನು ಕೇವಲ ಚಲನಚಿತ್ರದ ಹಿನ್ನೆಲೆಯಲ್ಲಿ ನೋಡದೆ, ಒಬ್ಬ ಕಲಿಯುವ ಮನಸ್ಸಿನಿಂದ ಅವರ ವ್ಯಕ್ತಿತ್ವದ ಮೌಲ್ಯಗಳನ್ನು ವಿಶ್ಲೇಷಿಸಿರುವುದು ಶ್ಲಾಘನೀಯ.

ಸಿನಿಮಾದ ಗ್ಲಾಮರ್ ಲೋಕದ ನಡುವೆಯೂ ಒಬ್ಬ ವ್ಯಕ್ತಿ ತನ್ನ ಸರಳತೆ ಮತ್ತು ಮನುಷ್ಯತ್ವವನ್ನು ಹೇಗೆ ಉಳಿಸಿಕೊಳ್ಳಬಹುದು ಎಂಬುದಕ್ಕೆ ಪೃಥ್ವಿ ಅವರ ನಡೆ ಒಂದು ಉತ್ತಮ ಉದಾಹರಣೆ. "ಅಹಂಕಾರಕ್ಕಿಂತ ವ್ಯಕ್ತಿತ್ವ ಮುಖ್ಯ" ಎಂಬ ಈ ಲೇಖನದ ಆಶಯವು ಇಂದಿನ ಯುವ ಪೀಳಿಗೆಗೆ ದಾರಿದೀಪವಾಗಲಿ. ನಮ್ಮ ಸುತ್ತಮುತ್ತಲಿನ ಸಾಧಕರಿಂದ ಇಂತಹ ಸಕಾರಾತ್ಮಕ ಗುಣಗಳನ್ನು ಗುರುತಿಸಿ, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಹಂಬಲ ನಮ್ಮದಾಗಲಿ ಎಂಬುದು 'ಕನ್ನಡ ಗ್ಲೋಬಲ್' ತಂಡದ ಆಶಯ.

— ಚರಣ್ ರಾಜ್

ಮುಖ್ಯ ಸಂಪಾದಕರು, ಕನ್ನಡ ಗ್ಲೋಬಲ್


No comments:

Post a Comment

Advertisement

ಜಾಹೀರಾತು ಹಾಗೂ ಸುದ್ದಿ ನೀಡಲು ಸಂಪರ್ಕಿಸಿ

📞 9110857339 ಗೆ ಕರೆ ಮಾಡಿ 💬 WhatsApp ಗ್ರೂಪ್ ಸೇರಿ 🎥 YouTube ಚಂದಾದಾರರಾಗಿ

ಕನ್ನಡ ಗ್ಲೋಬಲ್ ನ್ಯೂಸ್