ಹೊಸನಗರ: ತಾಲೂಕಿನಾದ್ಯಂತ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಬೃಹತ್ ಗಾತ್ರದ ಹೊಂಡಗುಂಡಿಗಳು ಮರಣಮೃದಂಗ ಬಾರಿಸುತ್ತಿವೆ. ಕಳೆದ ಬಾರಿ ಕೈಗೊಳ್ಳಲಾದ ಪ್ಯಾಚ್ ವರ್ಕ್ ಕಾಮಗಾರಿ ಅತ್ಯಂತ ಕಳಪೆಯಾಗಿದ್ದು, ಇದೀಗ ರಸ್ತೆಗಳು ಮತ್ತೆ ಹೊಂಡ ಬಿದ್ದು ಸಾರ್ವಜನಿಕರು ಹಾಗೂ ವಾಹನ ಸವಾರರು ದಿನನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.
ರಸ್ತೆ 1: ಸಾಗರ-ಸಿಗಂದೂರು ಸಂಪರ್ಕಕ್ಕೆ ಸಂಚಕಾರ
ಗುಳ್ಳೆಕೊಪ್ಪದಿಂದ ಹೊಸನಗರ ಹಾಗೂ ಜಂಬಳ್ಳಿಯಿಂದ ಭೀಮನಕೆರೆ ವರೆಗಿನ ರಸ್ತೆಗಳು ಅತ್ಯಂತ ಶೋಚನೀಯ ಸ್ಥಿತಿಯಲ್ಲಿವೆ. ಈ ಮಾರ್ಗವು ಹೊಸನಗರದಿಂದ ಸಾಗರ, ಸಿಗಂದೂರು ಹಾಗೂ ಹಸಿರುಮಕ್ಕಿ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದೆ. ಈ ಹಿಂದೆ ಮಾಡಲಾಗಿದ್ದ ದುರಸ್ತಿ ಕಾರ್ಯಗಳು ಕೇವಲ ಕಣ್ಣೊರೆಸುವ ತಂತ್ರವಾಗಿದ್ದು, ಮಳೆಗಾಲ ಬರುವ ಮೊದಲೇ ರಸ್ತೆಗಳು ಕಿತ್ತು ಬರುವಂತಾಗಿದೆ. ನಿತ್ಯ ನೂರಾರು ವಾಹನಗಳು ಸಂಚರಿಸುವ ಈ ಮಾರ್ಗದಲ್ಲಿ ಗುಂಡಿಗಳ ಕಾರಣದಿಂದ ಸಣ್ಣಪುಟ್ಟ ಅಪಘಾತಗಳು ಸರ್ವೇಸಾಮಾನ್ಯವಾಗಿವೆ.
ರಸ್ತೆ 2: ಸಂಚಾರಕ್ಕೆ ಯೋಗ್ಯವಲ್ಲದ ಬ್ರಹ್ಮೇಶ್ವರ-ಕಾಡವಳ್ಳಿ ರಸ್ತೆ
ಇನ್ನು ಬ್ರಹ್ಮೇಶ್ವರದಿಂದ ಕಾಡವಳ್ಳಿ ವರೆಗಿನ ರಸ್ತೆಯ ಸ್ಥಿತಿ ಹೇಳತೀರದು. ಈ ರಸ್ತೆಯು ಮಸಗಲ್ಲಿ, ಶೇಣಿಗೆ, ಬಸವಾಪುರ, ಕಾಡವಳ್ಳಿ ಸೇರಿದಂತೆ ಹಲವು ಗ್ರಾಮಗಳನ್ನು ಹೊಸನಗರದೊಂದಿಗೆ ಬೆಸೆಯುವ ಪ್ರಮುಖ ಜೀವನಾಡಿಯಾಗಿದೆ. ಆದರೆ, ಇಂದು ಈ ರಸ್ತೆಯಲ್ಲಿ ವಾಹನ ಚಲಾಯಿಸುವುದೇ ಸಾಹಸದ ಕೆಲಸವಾಗಿದೆ. ರಸ್ತೆಯ ತುಂಬಾ ದೊಡ್ಡ ಗಾತ್ರದ ಗುಂಡಿಗಳು ಬಿದ್ದಿದ್ದು, ವಾಹನ ಸವಾರರು ತಮ್ಮ ವಾಹನಗಳ ಬಿಡಿಭಾಗಗಳನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ.
ಜನಪ್ರತಿನಿಧಿಗಳ ಮೌನಕ್ಕೆ ಸಾರ್ವಜನಿಕರ ಆಕ್ರೋಶ
ಈ ಕ್ಷೇತ್ರದ ಶಾಸಕರಾದ ಬೇಳೂರು ಗೋಪಾಲಕೃಷ್ಣ ಅವರು ಈ ಕೂಡಲೇ ಎಚ್ಚೆತ್ತುಕೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯ. ಜನಪ್ರತಿನಿಧಿಗಳು ಕೇವಲ ಭರವಸೆಗಳನ್ನು ನೀಡುತ್ತಿದ್ದಾರೆ ಹೊರತು, ರಸ್ತೆ ದುರಸ್ತಿ ಮಾಡುವಲ್ಲಿ ವಿಫಲರಾಗಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
ಸಾರ್ವಜನಿಕರ ಆಗ್ರಹ:
ಕಳಪೆ ಕಾಮಗಾರಿ ನಡೆಸಿದ ಗುತ್ತಿಗೆದಾರರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಮತ್ತು ಕೂಡಲೇ ಹೊಸದಾಗಿ ರಸ್ತೆಯನ್ನು ವೈಜ್ಞಾನಿಕವಾಗಿ ನಿರ್ಮಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇನ್ನು ಮುಂದಾದರೂ ಎಚ್ಚೆತ್ತುಕೊಳ್ಳುತ್ತಾರೆಯೇ ಅಥವಾ ಅಪಘಾತಗಳು ಸಂಭವಿಸುವವರೆಗೆ ಕಾಯುತ್ತಾರೆಯೇ ಎಂಬುದು ಸಾರ್ವಜನಿಕರ ಪ್ರಶ್ನೆ.
ಕನ್ನಡ ಗ್ಲೋಬಲ್ ಯೂಟ್ಯೂಬ್ ಚಾನೆಲ್ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
ಕನ್ನಡ ಗ್ಲೋಬಲ್ ವಾಟ್ಸಾಪ್ ಗ್ರೂಪ್ ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ
ಜಾಹೀರಾತು ಹಾಗೂ ಸುದ್ದಿ ನೀಡಲು ಸಂಪರ್ಕಿಸಿ - 9110857339

No comments:
Post a Comment