ಭಾರೀ ಮಳೆ ಮತ್ತು ಪ್ರವಾಹದಿಂದ ರಾಜ್ಯದಲ್ಲಿ ಬರೋಬ್ಬರಿ 12.54 ಲಕ್ಷ ಹೆಕ್ಟೇರ್ ಬೆಳೆ ನಷ್ಟ: ಸಚಿವ ಕೃಷ್ಣ ಬೈರೇಗೌಡ ಮಾಹಿತಿ
ಬೆಂಗಳೂರು: ನೈಋತ್ಯ ಮುಂಗಾರು ಮತ್ತು ನಂತರದ ಭಾರೀ ಮಳೆಯಿಂದಾಗಿ ರಾಜ್ಯದಲ್ಲಿ ಅಂದಾಜು 12.54 ಲಕ್ಷ ಹೆಕ್ಟೇರ್‌ಗಳಷ್ಟು ಕೃಷಿ ಮತ್ತು ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ. ಸೆಪ್ಟೆಂಬರ್ ಮೊದಲ ವಾರದವರೆಗೆ ಸುರಿದ ಮಳೆಯಿಂದಾಗಿ ಸುಮಾರು 5.29 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿತ್ತು.
ಸೆಪ್ಟೆಂಬರ್ ಅಂತ್ಯದಲ್ಲಿ ಸುರಿದ ಭಾರೀ ಮಳೆ ಮತ್ತು ಮಹಾರಾಷ್ಟ್ರದ ಜಲಾಶಯಗಳಿಂದ ನೀರು ಬಿಡುಗಡೆ ಮಾಡಿದ ಕಾರಣ, ಉತ್ತರ ಒಳನಾಡಿನ ಭೀಮಾ ನದಿ ಪಾತ್ರದಲ್ಲಿ ಪ್ರವಾಹ ಉಂಟಾಯಿತು. ಇದರಿಂದಾಗಿ ಕಲಬುರಗಿ, ಯಾದಗಿರಿ, ಬೀದರ್ ಮತ್ತು ವಿಜಯಪುರ 4 ಜಿಲ್ಲೆಗಳಲ್ಲಿ ಹೆಚ್ಚುವರಿಯಾಗಿ 7.24 ಲಕ್ಷ ಹೆಕ್ಟೇರ್ ಬೆಳೆ ನಷ್ಟವಾಗಿದೆ.ಒಟ್ಟಾರೆಯಾಗಿ, 2025ರ ಮುಂಗಾರು ಅವಧಿಯಲ್ಲಿ 12.54 ಲಕ್ಷ ಹೆಕ್ಟೇರ್ ಬೆಳೆ ಹಾನಿ ಸಂಭವಿಸಿದೆ.
ಸರ್ಕಾರವು ಹಾನಿಗೊಳಗಾದ ರೈತರಿಗೆ ಪ್ರತಿ ಹೆಕ್ಟೇರ್‌ಗೆ ಕೇಂದ್ರ ನಿಗದಿತ ಪರಿಹಾರದ ಜೊತೆಗೆ ಹೆಚ್ಚುವರಿಯಾಗಿ ರೂ. 8500/- ಸೇರಿಸಿ ಪರಿಹಾರ ನೀಡುತ್ತಿದೆ. ರಾಜ್ಯ ಸರ್ಕಾರದ ಹೆಚ್ಚುವರಿ ಸಹಾಯದೊಂದಿಗೆ ಒಟ್ಟು ಪರಿಹಾರ (ಪ್ರತಿ ಹೆಕ್ಟೇರ್‌ಗೆ) ಮಳೆಯಾಶ್ರಿತ ಬೆಳೆ ಹಾನಿಗೆ ರೂ. 17,000/- , ನೀರಾವರಿ ಬೆಳೆ ಹಾನಿಗೆ ರೂ. 25,500/- , ದೀರ್ಘಕಾಲಿಕ ಬೆಳೆ ಹಾನಿಗೆ ರೂ. 31,000/-
ಸಚಿವರು, ರಾಜ್ಯ ಸರ್ಕಾರವು ಸಂಪೂರ್ಣ ಪಾರದರ್ಶಕತೆಯೊಂದಿಗೆ ಮತ್ತು ಅತ್ಯಂತ ತ್ವರಿತವಾಗಿ ಆಧಾರ್ ಜೋಡಣೆಯಾದ ರೈತರ ಖಾತೆಗೆ ಪರಿಹಾರ ನೀಡುತ್ತಿದೆ ಎಂದು ತಿಳಿಸಿದರು. ಅತಿವೃಷ್ಟಿ ಮತ್ತು ಪ್ರವಾಹ ಪೀಡಿತ ರೈತರ ಪರಿಹಾರಕ್ಕಾಗಿ ಒಟ್ಟಾರೆಯಾಗಿ ಸುಮಾರು ರೂ. 2000 ಕೋಟಿ ಪಾವತಿ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದ್ದು, ಮುಂದಿನ 30 ದಿನಗಳಲ್ಲಿ ಇದು ಪೂರ್ಣಗೊಳ್ಳುವ ನಿರೀಕ್ಷೆಯಿದೆ.

No comments:
Post a Comment